ನದಿ ಕಿನಾರೆಗಳಲ್ಲಿ ತಡೆಗೋಡೆ ರಚನೆ
ಮಂಗಳೂರು: ಪ್ರತಿ ವರ್ಷ ಮಳೆಗಾಲದಲ್ಲಿ ಕರಾವಳಿ ನದಿಗಳು ಉಕ್ಕಿಹರಿದು ನಾಗರಿಕರ ಬದುಕನ್ನು ಮೂರಾಬಟ್ಟೆ ಮಾಡುವುದು ಸಾಮಾನ್ಯ. ನೆರೆ ನೀರಿನಿಂದ ಸಂತ್ರಸ್ತಗೊಳ್ಳುವ ಮಂದಿ ಸತತ ಬೇಡಿಕೆ ಮಂಡಿಸಿದರೂ ಶಾಶ್ವತ ಪರಿಹಾರ ಇದುವರೆಗೆ ಸಾಧ್ಯವಾಗಿಲ್ಲ. ಜನಪ್ರತಿನಿಧಿಗಳು ಭೇಟಿ ನೀಡಿದರೂ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈಗ ತಡವಾಗಿಯಾದರೂ ಎಲ್ಲೆಲ್ಲಿ ನದಿಗಳು ಉಕ್ಕಿಹರಿದು ನಾಗರಿಕರ ಜೀವನಕ್ಕೆ ಅಡ್ಡಿಯುಂಟು ಮಾಡುತ್ತದೊ ಅಲ್ಲಲ್ಲಿ ತಡೆಗೋಡೆ ನಿರ್ಮಿಸಲು ಸಣ್ಣ ನೀರಾವರಿ ಇಲಾಖೆ ಮಾಸ್ಟರ್ ಪ್ಲಾನ್ನ್ನು ಸಿದ್ಧಪಡಿಸಿದೆ.
ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳಲ್ಲಿ ನದಿಪಾತ್ರದಲ್ಲಿ ನಡೆಸಿದ ಸರ್ವೇ ಆಧಾರದಲ್ಲಿ ಈ ಪ್ರಸ್ತಾವನೆ ಸಿದ್ಧಪಡಿಸಿದ್ದು, ಕೇಂದ್ರ ಜಲ ಆಯೋಗಕ್ಕೆ ಸಲ್ಲಿಕೆಗೆ ಬಾಕಿ ಇದೆ. ಅದಕ್ಕೂ ಮೊದಲು ರಾಜ್ಯದ ತಾಂತ್ರಿಕ ಮೌಲ್ಯ ನಿರ್ಣಯ ಸಮಿತಿ ವರದಿಯನ್ನು ಅಧ್ಯಯನ ನಡೆಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು.
59 ಕಾಮಗಾರಿ ಪಟ್ಟಿ ಸಿದ್ಧ: ಕರಾವಳಿಯಲ್ಲಿ ಸಮುದ್ರ ಕೊರೆತದಂತೆ ನದಿ ನೀರು ಹರಿದು ಕೆರೆ, ತೋಟ, ಕಾಲುದಾರಿ ಹಾನಿಗೀಡಾಗುವ ಪ್ರದೇಶಗಳನ್ನು ಗುರುತಿಸಿರುವ ಸಣ್ಣ ನೀರಾವರಿ ಇಲಾಖೆ, ಇಂಥ 59 ಕಡೆ ತಡೆಗೋಡೆ ಕಾಮಗಾರಿ ಅಗತ್ಯತೆಯ ಪಟ್ಟಿ ತಯಾರಿಸಿದೆ.
ಮುಖ್ಯವಾಗಿ ಜಿಲ್ಲೆಯ ಪಯಸ್ವಿನಿ, ಕೊಳ್ತಿಗೆ, ಕುಮಾರಧಾರಾ, ನೇತ್ರಾವತಿ ನದಿ, ಕೊಡುಂಗಾಯಿ, ಸೀರೆ, ನಂದಿನಿ, ಗುರುಪುರ, ಉಡುಪಿಯ ಸ್ವರ್ಣಾ, ಶಾಂಭವಿ, ಉದ್ಯಾವರ, ಬನ್ನಾಡಿ ಸಂಕಾಡಿ, ಸಂಕದಗುಂಡಿ, ಕಾಮಿನಿ, ಕಾರ್ಕಳದ ಮಡಿಸಾಲು, ಕುಂದಾಪುರದ ಬೈಂದೂರು ನದಿ, ಕೊಲ್ಲೂರು ನದಿ, ಚಕ್ರಾ ನದಿ, ಸೀತಾ ನದಿ, ವರಾಹಿ, ಕೊಡಗಿನ ಕಾವೇರಿ, ಲಕ್ಷ್ಮಣ ತೀರ್ಥ ನದಿ ಕಿನಾರೆಯಲ್ಲಿ ತಡೆಗೋಡೆ ಪ್ರಸ್ತಾಪ ಮಾಡಲಾಗಿದೆ.
ಮಳೆಗಾಲದಲ್ಲಿ ಭಾರೀ ತೊಂದರೆ ಉಂಟುಮಾಡುವ ನದಿ ಪಾತ್ರದಲ್ಲಿ ಮೊದಲ ಹಂತದಲ್ಲಿ ತಡೆಗೋಡೆ ರಚನೆ, ನಂತರ ಉಳಿದ ಪ್ರದೇಶಗಳಲ್ಲಿ ಹಂತ ಹಂತವಾಗಿ ತಡೆಗೋಡೆಗೆ ಆದ್ಯತೆ ನೀಡಲು ತೀರ್ಮಾನಿಸಿದೆ.
20 ಕೋಟಿ ಪ್ರಸ್ತಾವನೆ: ಗುರುಪುರ ನದಿಯ ಆಯ್ದ ಪ್ರದೇಶಗಳಲ್ಲಿ ತಡೆಗೋಡೆ ನಿರ್ಮಾಣಕ್ಕೆ ರು. 20 ಕೋಟಿ ಪ್ರಸ್ತಾವನೆಯನ್ನು ಸಣ್ಣ ನೀರಾವರಿ ಇಲಾಖೆ ಸಿದ್ಧಪಡಿಸಿದೆ. ಈ ಪ್ರದೇಶದಲ್ಲಿ ಸರ್ವೇ ಕಾರ್ಯ ನಡೆಸಿದ್ದು, ಅಂದಾಜುಪಟ್ಟಿ ತಯಾರಿಸಿದೆ. ಇದಕ್ಕೆ ಕೇಂದ್ರ ಅನುಮೋದನೆ ಬಾಕಿ ಇದೆ. ಗುರುಪುರದಿಂದ ಬೆಂಗ್ರೆ, ಸುಲ್ತಾನ್ಬತ್ತೇರಿ ವರೆಗೆ ತಡೆಗೋಡೆ ರಚನೆ ಒಳಗೊಂಡಿದೆ.
ಸಿಆರ್ಝಡ್ ಅನುಮತಿ: ನದಿ ಕಿನಾರೆಯಲ್ಲಿ ತಡೆಗೋಡೆ ರಚನೆ ಅಥವಾ ಕಿಂಡಿ ಅಣೆಕಟ್ಟೆ ನಿರ್ಮಿಸಬೇಕಾದರೆ ಕರಾವಳಿ ವಲಯ ನಿಯಂತ್ರಣ (ಸಿಆರ್ಝಡ್) ಇಲಾಖೆ ಅನುಮತಿ ಕಡ್ಡಾಯ. ಮೀನಿನ ಸಂತಾನೋತ್ಪತ್ತಿ ತಾಣಗಳಲ್ಲಿ ಯಾವುದೇ ರಚನೆಗೆ ಸಿಆರ್ಝಡ್ ಅನುಮತಿ ನೀಡುವುದಿಲ್ಲ. ಮುಖ್ಯವಾಗಿ ಕಾಂಡ್ಲಾ ಕಾಡುಗಳುಳ್ಳ ನದಿ ಪ್ರದೇಶದಲ್ಲಿ ತಡೆಗೋಡೆ ಯಾ ಕಿಂಡಿ ಅಣೆಕಟ್ಟೆ ನಿರ್ಮಿಸುವಂತಿಲ್ಲ. ಪ್ರವಾಹ, ನೆರೆಯಿಂದ ಜನಜೀವನಕ್ಕೆ ಹಾನಿಯಾಗುವುದನ್ನು ತಪ್ಪಿಸಲು ನದಿ ಪ್ರದೇಶಗಳಲ್ಲಿ ತಡೆಗೋಡೆ ರಚನೆಗೆ ಅನುಮತಿ ನೀಡಬಹುದು. ಸದ್ಯ ಯಾವುದೇ ಅರ್ಜಿ ಇಲಾಖೆ ಮುಂದೆ ಬಂದಿಲ್ಲ ಎನ್ನುತ್ತಾರೆ ಸಿಆರ್ಝಡ್ ಅಧಿಕಾರಿ ಮಹೇಶ್.
ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

