ಸಮುದ್ರದಲ್ಲೂ ಪಾರ್ಕಿಂಗ್ ಸಮಸ್ಯೆ!
ಮಲ್ಪೆ: ಪಾರ್ಕಿಂಗ್ ಸಮಸ್ಯೆ ನೆಲದ ಮೇಲೆ ಮಾತ್ರವಲ್ಲ, ಸಮುದ್ರಕ್ಕೂ ಹಬ್ಬಿದೆ. ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಬೋಟುಗಳನ್ನು ಪಾರ್ಕ್ ಮಾಡುವ ಅರ್ಥಾತ್ ಲಂಗರು ಹಾಕಲು ಭಾರಿ ಸಮಸ್ಯೆಯೊಂದು ಎದುರಾಗಿದೆ.
ಮಲ್ಪೆ ಮೀನುಗಾರಿಕಾ ಬೋಟುಗಳಿಂದ ಗಿಜಿಗುಡುತ್ತಿದೆ, ಇಲ್ಲಿ ಬೋಟುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಅವುಗಳನ್ನು ಲಂಗರು ಹಾಕುವುದಕ್ಕೆ ಬಂದರು ಚಿಕ್ಕದಾಗಿದೆ. ಬಂದರಿನೊಳಗೆ ಸ್ಥಳಾವಕಾಶ ಇಲ್ಲದೇ ಈ ಬಾರಿ 1000ಕ್ಕೂ ಅಧಿಕ ಬೋಟುಗಳನ್ನು ಬಂದರಿನ ಹೊರಗೆ ಸಮುದ್ರದಲ್ಲಿಯೇ ಬೋಟುಗಳಿಗೆ ಲಂಗರು ಹಾಕಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಇದರಿಂದ ಮೀನುಗಾರರು ಆತಂಕಕ್ಕೊಳಗಾಗಿದ್ದಾರೆ.
ಮಲ್ಪೆ ಬಂದರು 'ಸರ್ವಋತು ಮೀನುಗಾರಿಕಾ ಬಂದರು' ವರ್ಷದ 12 ತಿಂಗಳೂ ಉಪ್ಪು ನೀರಿನ (ಕಡಲ) ಮೀನಿಗೆ ಬೇಡಿಕೆ ಇರುವುದರಿಂದ ವರ್ಷದುದ್ದಕ್ಕೂ ಇಲ್ಲಿ ಮೀನುಗಾರಿಕೆ ನಡೆಯುತ್ತದೆ. ಆದರೆ, ಪ್ರತಿವರ್ಷ ಮಳೆಗಾಲದಲ್ಲಿ 2 ತಿಂಗಳು ಕಾಲ ಮೀನುಗಾರಿಕೆ ನಿಷೇಧಿಸಲಾಗುತ್ತದೆ. ಮಳೆಗಾಲವಾದ್ದರಿಂದ ಸಮುದ್ರ ಪ್ರಕ್ಷುಬ್ಧವಾಗಿರುತ್ತದೆ. ಮೀನುಗಾರರಿಗೆ ಮತ್ತು ಬೋಟುಗಳಿಗೆ ಅಪಾಯ ಸಂಭವಿಸುವ ಸಾಧ್ಯತೆ ಇರುತ್ತದೆ ಮತ್ತು ಇದು ಮೀನುಗಳು ಮೊಟ್ಟೆ ಇಡುವ ಋತುವಾದ್ದರಿಂದ ಜೂ. 15ರಿಂದ ಆ. 10ರವರೆಗೆ 57 ದಿನಗಳ ಕಾಲ ಆಳಸಮುದ್ರ ಮೀನುಗಾರಿಕೆಯನ್ನು ಸರ್ಕಾರ ನಿಷೇಧಿಸಿದೆ.
ಆದ್ದರಿಂದ ಮೀನುಗಾರರು ಈ 2 ತಿಂಗಳು ಮಳೆ ಗಾಳಿಯಿಂದ ತಮ್ಮ ರು. 25ರಿಂದ 75 ಲಕ್ಷವರೆಗೆ ಬೆಲೆಬಾಳುವ ಬೋಟುಗಳನ್ನು ಜಾಗೃತೆಯಿಂದ ಸಂರಕ್ಷಿಸಿಡಬೇಕಾಗುತ್ತದೆ. ಬೋಟಿಗೆ ಸ್ವಲ್ಪ ಹೆಚ್ಚು ಕಡಿಮೆಯಾದರೂ ಮಾಲೀಕರಿಗೆ ಲಕ್ಷಲಕ್ಷ ರುಪಾಯಿ ಕೈ ಬಿಡುತ್ತದೆ.
ಸ್ಥಳಾವಕಾಶವೇ ಇಲ್ಲ: ಆದರೆ, ರಾಜ್ಯದ ಅತೀ ದೊಡ್ಡ ಮೀನುಗಾರಿಕಾ ಬಂದರು ಮಲ್ಪೆಯ ಸರ್ವಋತು ಬಂದರಿನಲ್ಲಿ ಬೋಟುಗಳನ್ನು ಲಂಗರು ಹಾಕುವುದಕ್ಕೆ ಬೇಕಾದಷ್ಟು ಸ್ಥಳಾವಕಾಶವೇ ಇಲ್ಲ.
ಮಲ್ಪೆ ಬಂದರಿನಲ್ಲಿ ಮೀನುಗಾರಿಕಾ ಇಲಾಖೆಯಲ್ಲಿ ನೋಂದಣಿಯಾದ ದೊಡ್ಡ ಯಾಂತ್ರೀಕೃತ (10 ಎಚ್ಪಿಗಿಂದ ಹೆಚ್ಚು ಸಾಮಾರ್ಥ್ಯದ ಎಂಜಿನ್ ಇರುವ) 970 ಬೋಟುಗಳಿವೆ. ಸಣ್ಣ ಯಾಂತ್ರೀಕೃತ (10 ಎಚ್ಪಿಗಿಂತ ಕಡಿಮೆ ಸಾಮರ್ಥ್ಯದ ಎಂಜಿನ್ ಇರುವ) ಬೋಟುಗಳು 1666 ಮತ್ತು ಮಾನವ ಚಾಲಿತ 535 ಬೋಟುಗಳಿವೆ. ಪ್ರಸ್ತುತ ಮಲ್ಪೆಯಲ್ಲಿ 1ನೇ ಹಂತ ಮತ್ತು 2ನೇ ಹಂತದ ಬಂದರಿನಲ್ಲಿ ಸುಮಾರು 1600 ಯಾಂತ್ರೀಕೃತ ಬೋಟುಗಳನ್ನು ಲಂಗರು ಹಾಕಬಹುದು. ಆದರೆ, ಉಳಿದ 600 ಬೋಟುಗಳಿಗೆ ಬಂದರಿನೊಳಗೆ ಸ್ಥಳವಕಾಶ ಇಲ್ಲ. ಅವುಗಳನ್ನು ಬಂದರಿನ ಹೊರಗೆ ಸಮುದ್ರದಲ್ಲಿಯೇ ಲಂಗರು ಹಾಕಬೇಕಾದ ಪರಿಸ್ಥಿತಿ ಇದೆ. ಈ ಬೋಟುಗಳಿಗೆ ಮಳೆ ಗಾಳಿಯಿಂದ ಯಾವುದೇ ರಕ್ಷಣೆ ಇಲ್ಲ. ಆದ್ದರಿಂದ ಪ್ರತಿವರ್ಷ ಸಮುದ್ರದಲ್ಲಿ ಲಂಗರು ಹಾಕಿರುವ ಒಂದಷ್ಟು ಬೋಟುಗಳು ಗಾಳಿ ಒಂದಕ್ಕೊಂದು ಬಡಿದು ಲಕ್ಷಾಂತರ ರುಪಾಯಿ ನಷ್ಟ ಸಂಭವಿಸುತ್ತಿದೆ.
ಇದೇ ಕಾರಣಕ್ಕೆ ಇನ್ನೂ ಮೀನುಗಾರಿಕೆ ನಿಷೇಧ (ಜೂ. 10ರಿಂದ) ಜಾರಿಗೆ ಬರುವುದಕ್ಕೆ ದಿನ ಇದ್ದರೂ ಮೀನುಗಾರರು ನಾಮುಂದು ತಾಮುಂದು ಎಂದು ತಮ್ಮ ಬೋಟುಗಳನ್ನು ಸುರಕ್ಷಿತವಾಗಿ ಬಂದರಿನಲ್ಲಿ ಲಂಗರು ಹಾಕುವುದಕ್ಕೆ ಆರಂಭಿಸಿದ್ದಾರೆ. ನಿಷೇಧ ಜಾರಿಗೆ ಬರುವುದಕ್ಕೆ ಮೊದಲೇ ಬಂದರು ಬೋಟುಗಳಿಂದ ತುಂಬಿಬಿಟ್ಟಿದೆ.
ಮುಗಿಯದ ಕಾಮಗಾರಿ: ಹತ್ತಾರು ವರ್ಷಗಳಿಂದ ಈ ಸಮಸ್ಯೆ ಇದೆ. ಮೀನುಗಾರರ ಒತ್ತಾಯಕ್ಕೆ ಮಣಿದು ಸರ್ಕಾರ 3ನೇ ಹಂತದ ಬಂದರು ನಿರ್ಮಾಣ ಆರಂಭಿಸಿದೆ. ಕಳೆದ ವರ್ಷದಿಂದ ಕಾಮಗಾರಿಯೇನೋ ನಡೆಯುತ್ತಿದೆ. ಆದರೆ, ಆಮೆಗತಿಯಲ್ಲಿ ಸಾಗುತ್ತಿರುವ ಈ ಕಾಮಗಾರಿ ವರ್ಷ ಕಳೆದರೂ ಮುಗಿದಿಲ್ಲ. ಜುಲೈ ತಿಂಗಳಲ್ಲಿ ಬಂದರಿನ ಕಾಮಗಾರಿ ಪೂರ್ಣಗೊಳ್ಳಬಹುದು ಎನ್ನುತ್ತಾರೆ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು. ಆದ್ದರಿಂದ ಈ ಬಾರಿಯೂ ಸುಮಾರು 1000ಕ್ಕೂ ಅಧಿಕ ಬೋಟುಗಳನ್ನು ಮೀನುಗಾರರು ಬಂದರಿನ ಹೊರಗೆ ಲಂಗರು ಹಾಕುವ ಕಷ್ಟವಂತೂ ತಪ್ಪುವುದಿಲ್ಲ. ಮುಂದಿನ ವರ್ಷವಾದರೂ ಈ ಸಮಸ್ಯೆ ಬಗೆಹರಿದೀತೇ ಕಾದು ನೋಡಬೇಕು.
ಸುಭಾಶ್ಚಂದ್ರ ಎಸ್. ವಾಗ್ಳೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

