ನೀರುಪಾಲಾಗಿದ್ದ ಯುವಕನ ಶವ ಪತ್ತೆ
ಉಪ್ಪಿನಂಗಡಿ: ಕಳೆದ ಬುಧವಾರ ಗೆಳೆಯನ ಹುಟ್ಟು ಹಬ್ಬದ ಸಂಭ್ರಮಾಚರಣೆಗೆಂದು ಉಪ್ಪಿನಂಗಡಿಯ ನೇತ್ರಾವತಿ ನದಿಗೆ ಬಂದು ಸ್ನಾನಕ್ಕೆ ಇಳಿದಿದ್ದ ವೇಳೆ ನೀರುಪಾಲಾಗಿದ್ದ ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ನವೀನ್ ಬಿ.ಟಿ. (19) ಅವರ ಶವವು ಗುರುವಾರ ಮುಂಜಾನೆ ಘಟನಾ ಸ್ಥಳದ ಸಮೀಪದಲ್ಲೇ ಪತ್ತೆಯಾಗಿದೆ. ಪುತ್ತೂರು ನೆಹರೂ ನಗರ ನಿವಾಸಿಯಾಗಿರುವ ದ್ವಿತೀಯ ಬಿಕಾಂ ವಿದ್ಯಾರ್ಥಿ ನವೀನ್ ತನ್ನ ಗೆಳೆಯ ಪ್ರಜ್ವಲ್ನ ಹುಟ್ಟುಹಬ್ಬದ ಸಲುವಾಗಿ ಇನ್ನಿಬ್ಬರು ಗೆಳೆಯರಾದ ಪ್ರೀತಂ ಮತ್ತು ಸುಜಿತ್ ಎಂಬವರೊಡಗೂಡಿ ಪುತ್ತೂರಿನ ಹೊಟೇಲೊಂದರಲ್ಲಿ ಮಧ್ಯಾಹ್ನದ ಭೋಜನವನ್ನು ಪೂರೈಸಿ, ಮೋಜಿಗಾಗಿ ಉಪ್ಪಿನಂಗಡಿಗೆ ಬಂದಿದ್ದರು.
ಉಪ್ಪಿನಂಗಡಿಯಲ್ಲಿ ಬಸ್ ನಿಲ್ದಾಣದಲ್ಲಿ ಇಳಿದ ಇವರು ಅಟೋ ರಿಕ್ಷಾವೊಂದರಲ್ಲಿ ಜನ ಸಂಚಾರ ಕಡಿಮೆ ಇರುವ ಉಪ್ಪಿನಂಗಡಿಯ ಕಂಚಿಕಲ್ಲು ಬಳಿ ನೇತ್ರಾವತಿ ನದಿಗೆ ಸ್ನಾನಕ್ಕೆಂದು ಬಂದಿದ್ದರು.
ಸ್ನಾನ ಮಾಡಿ ಇನ್ನೇನು ದಡವನ್ನೇರಬೇಕು ಎನ್ನುವಷ್ಟರಲ್ಲಿ ನದಿಯ ಮೇಲ್ಭಾಗದಲ್ಲಿರುವ ನೀರಕಟ್ಟೆ ಅಣೆಕಟ್ಟಿನಿಂದ ವಿದ್ಯುತ್ ಉತ್ಪಾದನೆ ಮಾಡಿ, ಬಿಟ್ಟ ನೀರಿನಿಂದಾಗಿ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಯಿತು. ಈ ಸಂದರ್ಭದಲ್ಲಿ ನೀರಿನ ಪ್ರವಾಹಕ್ಕೆ ಸಿಲುಕಿದ ನವೀನ್ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದಾನೆ ಎಂದು ಆತನೊಂದಿಗಿದ್ದ ಸಹ ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಸಾಯಂಕಾಲ 6.30 ರ ಸುಮಾರಿಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಅಗ್ನಿಶಾಮಕ ದಳದವರ ನೆರವಿನಿಂದ ಹುಡುಕಾಟ ನಡೆಸಿದರಾದರೂ ಪತ್ತೆಯಾಗಿರಲಿಲ್ಲ.
ಗುರುವಾರ ಮುಂಜಾನೆ ಸ್ಥಳೀಯ ಮಹಮ್ಮದ್ ಎಂಬವರು ನದಿಗೆ ಸ್ನಾನಕ್ಕೆಂದು ಹೋಗಿದ್ದ ಸಂದರ್ಭದಲ್ಲಿ ನದಿಯಲ್ಲಿ ಶವವೊಂದು ತೇಲುತ್ತಿರುವುದನ್ನು ಕಂಡು ಅದನ್ನು ನದಿಯಿಂದ ದಡಕ್ಕೆ ತಂದಿರಿಸಿದ್ದರು.
ನವೀನ್ ಕುಟುಂಬಸ್ಥರು ಶವದ ಗುರುತು ಪತ್ತೆ ಹಚ್ಚಿದ ಹಿನ್ನೆಲೆಯಲ್ಲಿ ಶವವನ್ನು ಮುಂದಿನ ಕ್ರಮಕ್ಕೆ ಒಳಪಡಿಸಲಾಯಿತು. ಶವ ಪತ್ತೆಯಾದಾಗ ನವೀನ್ ಗೆಳೆಯರು ಸ್ಥಳಕ್ಕೆ ಬರಬೇಕು ಎಂದು ನವೀನ್ ಕುಟುಂಬಸ್ಥರು ಅಗ್ರಹಿಸಿದ ಹಿನ್ನೆಲೆಯಲ್ಲಿ ನವೀನೊಂದಿಗೆ ಬಂದಿದ್ದ ಉಳಿದ ಮೂವರು ಗೆಳೆಯರನ್ನು ಸ್ಥಳಕ್ಕೆ ಕರೆಸಿ, ದುರ್ಘಟನೆ ಸಂಭವಿಸಿದ ಬಗೆಯನ್ನು ಅವರಿಂದಲೇ ವಿವರಿಸಿ ಕೇಳಿಸಲಾಯಿತು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸೋಮನಾಥ ಸ್ಥಳಕ್ಕೆ ಆಗಮಿಸಿ, ಉದ್ರಿಕ್ತ ನವೀನ್ ಬಂಧುಗಳನ್ನು ಸಮಾಧಾನಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

