ಸುದ್ದಿ ಸಂಕ್ಷೇಪ
ಅಪರಿಚಿತ ಶವಗಳ ವಿಲೇಗೆ ಸೂಚನೆ
ಮಂಗಳೂರು: ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಶವಾಗಾರದ ಶೀತಲೀಕರಣದಲ್ಲಿ ಅಪರಿಚಿತ ಮೃತ ಶರೀರ ವಿಲೇವಾರಿಯಾಗದೆ ಉಳಿದಿದ್ದು, 3 ದಿನದೊಳಗೆ ಶವವನ್ನು ಪತ್ತೆಹಚ್ಚಿ ತೆಗೆದುಕೊಳ್ಳುವಂತೆ ವಾರ್ತಾ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಮೂಡುಬಿದಿರೆ ಕುದ್ರಿಪದವು ಪಾದೆ ನಿವಾಸಿ ದ್ಯಾಮಣ್ಣ ಅವರ ಪುತ್ರ ಮಂಜುನಾಥ್(45) ಏ. 29ರಂದು ದಾಖಲಾಗಿದ್ದು, ಮೇ 22ಕ್ಕೆ ಮರಣ ಹೊಂದಿದ್ದಾರೆ. ಮೇ 22 ರಂದು ಬಂಟ್ವಾಳದಿಂದ ಆಂಬ್ಯುಲೆನ್ಸ್ ಮೂಲಕ ಕರೆದುಕೊಂಡು ಬಂದು ದಾಖಲಾದ ಅಪರಿಚಿತ(75) ಜೂ. 1ಕ್ಕೆ ನಿಧನ ಹೊಂದಿದ್ದಾರೆ. ಅತ್ತಾವರದಿಂದ ಅಂಬ್ಯುಲೆನ್ಸ್ ಮೂಲಕ ಕರೆ ತರಲಾದ ಪ್ರಭಾಕರ್(55) ವ್ಯಕ್ತಿಯು ಜೂ. 1ರಂದು ದಾಖಲಾಗಿದ್ದು, 3 ರಂದು ಮೃತಪಟ್ಟಿದ್ದಾರೆ.
ಮಗುವಿಗೆ ಬರೆ;
ಸಹಾಯಕಿ ವಿರುದ್ಧ ದೂರು
ಕಾರ್ಕಳ: ಅಂಗನವಾಡಿ ಮಗುವಿನ ಕೈಗೆ ಬರೆ ಎಳೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ನಗರ ಠಾಣೆಯಲ್ಲಿ ಅಂಗನವಾಡಿ ಅಡುಗೆ ಸಹಾಯಕಿ ವಿರುದ್ಧ ಪ್ರಕರಣ ದಾಖಲಾಗಿದೆ. ಕುಕ್ಕುಂದೂರು ಅಯ್ಯಪ್ಪನಗರ ನಿವಾಸಿ ರಾಧಾ ದೂರು ನೀಡಿದ್ದಾರೆ. ಕುಕ್ಕುಂದೂರು ಗ್ರಾಮದ ಹಾಜಡ್ಡು ಅಂಗನವಾಡಿಯ ಅಡುಗೆ ಸಹಾಯಕಿ ಭಾಗ್ಯ ಎಂಬಾಕೆ ಮೂರು ವರ್ಷದ ಮಗು ಹರ್ಷಿತ್ನ ಮುಖ ಹಾಗೂ ಕೈಗೆ ಬರೆ ಎಳೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹರ್ಷಿತ್ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.
ಬಿಸಿಲೆ ಗಲಭೆ; ಬಿರುಸಿನ ಶೋಧ
ಸುಬ್ರಹ್ಮಣ್ಯ: ಬಿಸಿಲೆ ಗಡಿಯಲ್ಲಿ ಮಂಗಳವಾರ ನಡೆದ ಕೊಲೆ ಹಾಗೂ ಹೊಡೆದಾಟ ಘಟನೆಗೆ ಸಂಬಂಧಿಸಿದಂತೆ ಸಕಲೇಶಪುರದ ವೃತ್ತ ನಿರೀಕ್ಷಕ ದಿನೇಶ್ ಪಾಟೀಲ್, ಹೆಸಳೂರು ಠಾಣಾಧಿಕಾರಿ ಶಿವರುದ್ರಪ್ಪ ಸುಬ್ರಹ್ಮಣ್ಯದಲ್ಲಿ ಠಿಕಾಣಿ ಹೂಡಿದ್ದು ಪ್ರಕರಣದ ಕುರಿತು ಬಿರುಸಿನ ತನಿಖೆ ನಡೆಸುತ್ತಿದ್ದು ಆರೋಪಿಗಳ ಪತ್ತೆಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
ಯುವತಿ ನಾಪತ್ತೆ: ದೂರು
ವಿಟ್ಲ: ಕೊಳ್ನಾಡು ಗ್ರಾಮದ ಪಂಜರಕೋಡಿ ನಿವಾಸಿ ಅಬ್ದುಲ್ಲಕುಂಞ ಅವರ ಪುತ್ರಿ ಫಾತಿಮತ್ ಅನಿಶಾ (19) ಮನೆಯಿಂದ ನಾಪತ್ತೆಯಾದ ಕುರಿತು ದೂರಲಾಗಿದೆ. ಜೂ.1ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೆರೆಮನೆಯವರಲ್ಲಿ ಅಜ್ಜಿಮನೆಗೆ ಹೋಗಿಬರುತ್ತೇನೆಂದು ತೆರಳಿದ್ದು ವಾಪಸಾಗಿಲ್ಲ ಎಂದು ಆಕೆಯ ಅಣ್ಣ ವಿಟ್ಲ ಠಾಣೆಗೆ ದೂರು ನೀಡಿದ್ದಾರೆ. ಆಕೆ ಬಿಳಿ ಬಟ್ಟೆಯಲ್ಲಿ ಹಸಿರು ಹೂಗಳಿರುವ ಚೂಡಿದಾರ ಮತ್ತು ಬುರ್ಖಾ ಧರಿಸಿದ್ದಳು. ಈಕೆ ಕನ್ನಡ, ತುಳು, ಮಲಯಾಳಂ ಅರಿತಿದ್ದಾಳೆ ಎಂದು ತಿಳಿಸಲಾಗಿದೆ.
ಮಟ್ಕಾ ಜುಗಾರಿ: ಇಬ್ಬರ ಸೆರೆ
ಕುಂದಾಪುರ: ಮಟ್ಕಾ ಜುಗಾರಿ ಆಟ ಆಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ ಘಟನೆ ಇಲ್ಲಿನ ನೇಂಪು ಶಾಲೆಯ ಗೂಡಾಂಗಡಿಯ ಬಳಿ ಬುಧವಾರ ನಡೆದಿದೆ. ಆರೋಪಿಗಳಾದ ವಿಜೇಂದ್ರ ಹಾಗೂ ಶಂಕರ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿ ಸ್ವೀಕರಿಸಿಕೊಂಡು ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದರೆಂಬ ಖಚಿತ ಮಾಹಿತಿ ಪಡೆದ ಕುಂದಾಪುರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಆಟಕ್ಕೆ ಬಳಸಿದ ರು. 1030 ನಗದು ಹಾಗೂ ಇತರೆ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಳಿಕೆ: ಮತ್ತೆ ಸರಣಿ ಕಳವು
ವಿಟ್ಲ: ಅಳಿಕೆ ಗ್ರಾಮದ ಶಾರದಾ ವಿಹಾರದ ಬಳಿಯ ಮೂರು ಮನೆಗೆ ಬುಧವಾರ ರಾತ್ರಿ ಕಳ್ಳರು ನುಗ್ಗಿ ರೋಲ್ಡ್ಗೋಲ್ಡ್ ಆಭರಣ ಮತ್ತು ನಗದು ಕದ್ದಿದ್ದಾರೆ. ನಿವೃತ್ತ ಅಂಚೆ ಅಕಾರಿ ಭಾಸ್ಕರ ರಾವ್ ಮನೆಯವರು ಬೆಂಗಳೂರಿಗೆ ಹೋಗಿದ್ದು ಯಾರೂ ಇಲ್ಲದ್ದನ್ನು ಖಚಿತ ಪಡಿಸಿಕೊಂಡು ಮುಂಬಾಗಿಲನ್ನು ಒಡೆದು ಒಳನುಗ್ಗಿ ಕಪಾಟು ಮತ್ತಿತರ ವಸ್ತುಗಳನ್ನು ತಡಕಾಡಿದ್ದಾರೆ. ಆದರೆ ಬೆಲೆಬಾಳುವಂಥ ಯಾವುದೇ ವಸ್ತುಗಳು ಸಿಗಲಿಲ್ಲವೆನ್ನಲಾಗಿದೆ. ಪಕ್ಕದಲ್ಲೇ ಇದ್ದ ನಿವೃತ್ತ ಶಿಕ್ಷಕ ಪಕಳಕುಂಜ ಶ್ಯಾಮ ಭಟ್ ಮನೆಯ ಹಿಂದಿನ ವೆಂಟಿಲೇಟರ್ ಸರಳನ್ನು ಬಗ್ಗಿಸಿ ಕಳ್ಳರು ಒಳಗೆ ನುಗ್ಗಿದ್ದಾರೆ. ಮನೆಯೊಳಗೆ ಎಲ್ಲರೂ ಮಲಗಿದ್ದ ಹಾಗೇ ಕಳ್ಳರು ಕಪಾಟನ್ನು ಒಡೆದು, ಭಾರಿ ಶೋಧ ನಡೆಸಿ ರು. 1500 ನಗದು, ಬೆಳ್ಳಿಯ ಕಾಲ್ಗೆಜ್ಜೆ, 3 ರೋಲ್ಡ್ಗೋಲ್ಡ್ ಸರಗಳನ್ನು ಕದ್ದಿದ್ದಾರೆ. ಬಳಿಕ ಪಕ್ಕದ ಇಬ್ರಾಹಿಂ ಉಸ್ತಾದ್ ಅವರ ಮನೆಗೆ ನುಗ್ಗಿದ್ದಾರೆ. ಕಳ್ಳರು ಕರೆಂಟಿಲ್ಲ ಎಂದು ಪರಸ್ಪರ ಮಾತನಾಡುತ್ತಿದ್ದುದು ಆಕಸ್ಮಿಕವಾಗಿ ಎಚ್ಚರಗೊಂಡ ಮಹಿಳೆಗೆ ಕೇಳಿ, ಕೂಗಿದಾಗ ಕಳ್ಳರು ಪರಾರಿಯಾಗಿದ್ದಾರೆನ್ನಲಾಗಿದೆ. ಪೊಲೀಸರು ಸ್ಥಳಕ್ಕೆ ತೆರಳಿದ್ದು ಪ್ರಕರಣ ದಾಖಲಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

