ದಕ್ಷಿಣ ಕನ್ನಡ

ಕೇರಳ ಗಡಿಯಲ್ಲಿ ರಾಜ್ಯ ಟೂರಿಸ್ಟ್ ವಾಹನಗಳ ಸುಲಿಗೆ

Published On :

ಮಂಗಳೂರು: ಮಂಗಳೂರಿಂದ ಕೇರಳಕ್ಕೆ ತೆರಳುವ ತಲಪಾಡಿ ಚೆಕ್‌ಪೋಸ್ಟ್ ಟೂರಿಸ್ಟ್ ವಾಹನ ಪಾಲಿಗೆ ಸುಲಿಗೆ ಕೇಂದ್ರ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಮಾಮೂಲು ಚಾಲಕನಾದರೆ ರು. 20, ಹೊಸಬರಾದರೆ 120, ಲೆಕ್ಕಕ್ಕಿಂತ ಹೆಚ್ಚು ಪ್ರಯಾಣಿಕರಿದ್ದರೆ ಸುಲಿಗೆ 1,000 ದಾಟುತ್ತದೆ! ಅದರಲ್ಲಿ ಬೆಳಗ್ಗಿನ ಜಾವ ಮತ್ತು ರಾತ್ರಿಯಲ್ಲಿ ಸುಲಿಗೆ ಪ್ರಮಾಣ ಅತಿ ಹೆಚ್ಚು.
ತಲಪಾಡಿ ಚೆಕ್‌ಪೋಸ್ಟ್ ನೌಕರರು ಮಾಡುವ ಸುಲಿಗೆ ದೃಶ್ಯವನ್ನು ಕನ್ನಡಪ್ರಭ ಸೆರೆ ಹಿಡಿದಿದೆ.
ಭಾನುವಾರ ರಾತ್ರಿ ಮ್ಯಾಕ್ಸಿಕ್ಯಾಬ್ (12೤1)ನಲ್ಲಿ ಅಖಿಲಭಾರತ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಸುದತ್‌ಜೈನ್ ಸಹಿತ 15 ಮಂದಿ ಕಾಸರಗೋಡಿಗೆ ತೆರಳಿದ್ದರು. ಇದರಲ್ಲಿ ಇಬ್ಬರು ಮಕ್ಕಳು. ತಲಪಾಡಿ ಗೇಟ್‌ನಲ್ಲಿ ತೆರಿಗೆ ಪಾವತಿಸಲು ತೆರಳಿದಾಗ ನೌಕರ 2,200 ನೀಡುವಂತೆ ಹೇಳಿದ್ದಾನೆ. ತೆರಿಗೆ 630, ಹೆಚ್ಚು ಹಣ ಏಕೆ ಎಂದು ಪ್ರಶ್ನಿಸಿದಾಗ 'ಇಬ್ಬರು ಹೆಚ್ಚಿಗೆ ಇದ್ದಾರೆ ಅದಕ್ಕೆ ದಂಡ ವಿಧಿಸುತ್ತಿರುವುದಾಗಿ ನೌಕರ ಸ್ಪಷ್ಟನೆ ನೀಡಿದ್ದಾನೆ. ಇಬ್ಬರು ಮಕ್ಕಳು ಎಂದರೂ ಕೇಳಲಿಲ್ಲ.
 ಕೊನೆಗೆ ಕಾರ್ಮಿಕ ಸಂಘದ ಗುರುತು ಚೀಟಿ ತೋರಿಸಿದಾಗ ಚೌಕಾಶಿ ಮಾಡಿ 1,300ಕ್ಕೆ ಒಪ್ಪಿಕೊಂಡ. ಆದರೆ ಆತ ರಶೀದಿ ನೀಡಿದ್ದು ಕೇವಲ 630ಕ್ಕೆ ಮಾತ್ರ! ಉಳಿದದಕ್ಕೆ ಎಲ್ಲಿ ರಶೀದಿ ಎಂದರೆ ಉಢಾಪೆ ಮಾತು. ಕಾಸರಗೋಡಲ್ಲಿ ಕನ್ನಡಿಗರೇ ಅತಿ ಹೆಚ್ಚು ಸಂಖ್ಯೆಯಲ್ಲಿ ಇದ್ದರೂ ಈ ನೌಕರರು ತಪ್ಪಿಯೂ ಕನ್ನಡದಲ್ಲಿ ಮಾತನಾಡುವುದಿಲ್ಲ.
 ಕಾಸರಗೋಡಲ್ಲಿ ಕಯ್ಯಾರ ಕಿಞಣ್ಣ ರೈ ಅವರ ವರದಿಗೆ ಶನಿವಾರ ಬೆಳಗ್ಗೆ ತೆರಳಿದ್ದ ವರದಿಗಾರರ ತಂಡವಿದ್ದ ಕಾರಿಗೆ 280 ತೆರಿಗೆ ವಿಧಿಸಿದ ಗೇಟ್ ನೌಕರ ಎಲ್ಲರ ಎದುರೇ 20 ಲಂಚ ಪಡೆದ!
 'ಚೆಕ್‌ಪೋಸ್ಟ್‌ನಲ್ಲಿ ನೌಕರರು ಚಾಲಕನ ಬಳಿ ಮಾತ್ರ ಮಾತನಾಡುತ್ತಾರೆ, ಅವರು ನಿತ್ಯ ಸಂಚರಿಸಬೇಕಾಗುವುದರಿಂದ ಅವರು ಹೆದರಿ ಲಂಚ ನೀಡುತ್ತಾರೆ. ಲಂಚದ ಹಣವನ್ನು ಪ್ರಯಾಣಿಕರ ಮೇಲೆ ಹೊರಿಸುತ್ತಾರೆ. ಹೆಚ್ಚು ಪ್ರಯಾಣಿಕರಿದ್ದರೆ ದಂಡ ವಿಧಿಸಲಿ ಆದರೆ ಅದಕ್ಕೆ ರಶೀದಿ ನೀಡಬೇಕು, ರಶೀದಿ ನೀಡದೆ ದಂಡದ ಹೆಸರಲ್ಲಿ ಸುಲಿಗೆ ಮಾಡುತ್ತಾರೆ' ಎನ್ನುತ್ತಾರೆ ಕಾರ್ಮಿಕ ಸಂಘ ಪ್ರಧಾನ ಕಾರ್ಯದರ್ಶಿ ಸುದತ್ ಜೈನ್.
'ಇನ್ನೊವಾ ವಾಹನಕ್ಕೆ280 ತೆರಿಗೆ, ಆದರೆ 300 ಪಡೆಯುತ್ತಾರೆ. ಮ್ಯಾಕ್ಸಿಕ್ಯಾಬ್‌ಗಳಿಗೆ  380, ಆದರೆ ರು. 400 ಪಡೆಯುತ್ತಾರೆ. ಕೆಲವೊಮ್ಮೆ 500 ಪಡೆಯುತ್ತಾರೆ. ನಾವು ಪಾರ್ಟಿ ಬಳಿ 500 ಹೇಳಿರುತ್ತೇವೆ, 400 ಪಡೆದರೆ 100 ವಾಪಸ್ ನೀಡುತ್ತೇವೆ' ಎಂದು ಟೂರಿಸ್ಟ್ ವಾಹನ ಚಾಲಕ ಡೆನಿಸ್ ಸಮಸ್ಯೆ ಹೇಳಿಕೊಳ್ಳುತ್ತಾರೆ.
 ದಕ್ಷಿಣ ಕನ್ನಡ ಜಿಲ್ಲಾ ಟ್ಯಾಕ್ಸಿಮೆನ್ ಅಸೋಸಿಯೇಶನ್ ಸಂಘ ಪ್ರಧಾನ ಕಾರ್ಯದರ್ಶಿ ಆನಂದ ಕೆ. ಸುಲಿಗೆ ಅನುಭವ ಹೇಳುವುದು ಹೀಗೆ: ಚೆಕ್‌ಪೋಸ್ಟ್‌ನಲ್ಲಿ ಹಲವು ವರ್ಷಗಳಿಂದ ಲೂಟಿ ನಡೆಯುತ್ತಿದೆ. ಹಿಂದೊಮ್ಮೆ ಬಾಡಿಗೆಗೆಂದು ಇಂಡಿಕಾ ವಾಹನದಲ್ಲಿ ಕೇರಳಕ್ಕೆ ಹೋದಾಗ ಒಂದು ವಾರದ ಬದಲು ಬಲವಂತವಾಗಿ 3 ತಿಂಗಳು ತೆರಿಗೆ ಬಿಲ್ ಮಾಡಿದರು. ತಕ್ಷಣ ಕೇರಳ ಕಾಸರಗೋಡು ಆರ್‌ಟಿಒ ಕಚೇರಿಗೆ ತೆರಳಿ ದೂರು ನೀಡಿದ್ದೆ. ಬಳಿಕ 6 ತಿಂಗಳು ಅಲ್ಲಿ ಸುಲಿಗೆ ನಿಂತಿತ್ತು. ಈ ಸುಲಿಗೆ ಕರ್ನಾಟಕ ಗೇಟ್‌ನಲ್ಲಿಯೂ ಇದೆ. ಇಂಡಿಕಾ ವಾಹನಕ್ಕೆ ತಮಿಳ್ನಾಡಿನಲ್ಲಿ 50, ಆಂಧ್ರದಲ್ಲಿ ಕಾರಿಗೆ 2,850 ಬಿಲ್ ಮಾಡಿ, 3000 ಪಡೆಯುತ್ತಾರೆ. ಮಹಾರಾಷ್ಟ್ರದಲ್ಲಿ 4,500 ಬಿಲ್ ನೀಡಿ, 5 ಸಾವಿರ ಪಡೆಯುತ್ತಾರೆ.
ತಮಿಳುನಾಡಿನಲ್ಲಿ 220 ರಶೀದಿ ನೀಡಿ, 300 ಪಡೆಯುತ್ತಾರೆ. ಗೋವಾದಲ್ಲಿ ಒಂದೊಂದು ರೀತಿ, ಆದರೆ  ಕನಿಷ್ಠ 200 ಸುಲಿಗೆ ಮಾಡುತ್ತಾರೆ. ನಾವು ಅನಿವಾರ್ಯವಾಗಿ ಈ ಸುಲಿಗೆ ಹೊರೆ ಪ್ರಯಾಣಿಕರಿಗೆ ಹಾಕಬೇಕಾಗುತ್ತದೆ. ಕಾರಲ್ಲಿ ಡೀಸಿ, ಎಸ್‌ಪಿ ಇದ್ದಾರೆ ಎಂದರೂ ಮಾಮೂಲು 20 ಪಡೆಯುವುದು ಬಿಡುವುದಿಲ್ಲ!
ಶಬರಿಮಲೆ ಯಾತ್ರೆ ಹಬ್ಬ
ಶಬರಿಮಲೆ ಯಾತ್ರೆ ಸಂದರ್ಭದಲ್ಲಂತೂ ಹಬ್ಬವೊ ಹಬ್ಬ.  ದಿನಕ್ಕೆ ಸಾವಿರಾರು ವಾಹನ ತೆರಳುತ್ತವೆ. ದಿನಕ್ಕೆ ಲಕ್ಷಗಟ್ಟಲೆ ನುಂಗುತ್ತಾರೆ. ತೆರಿಗೆ ದುಪ್ಪಟ್ಟು ಸುಲಿಗೆ ಮಾಡುತ್ತಾರೆ. 'ಅಯ್ಯಪ್ಪ ವೃತಧಾರಿಗಳಲ್ಲಿ ಕಾರ್ಮಿಕರೇ ಹೆಚ್ಚು.
   ತಲೆ ಲೆಕ್ಕ ಹಾಕಿ ಹಣ ಸುಲಿಗೆ ಮಾಡಿದರೂ  ರಶೀದಿ ನೀಡುವುದಿಲ್ಲ. ಹಜ್‌ಗೆ ತೆರಳಲು ಸಬ್ಸಿಡಿ ನೀಡುತ್ತಾರೆ, ಪಕ್ಕದ ಶಬರಿಮಲೆಗೆ ಹೋಗಬೇಕಾದರೆ ತಲೆಗಂದಾಯ ಕಟ್ಟಬೇಕು' ಎಂದು ಜನಹಿತರಕ್ಷಣೆ ಸಮಿತಿ ಅಧ್ಯಕ್ಷ ಕುಮಾರ್ ಮಾಲೇಮಾರ್ ಆರೋಪಿಸುತ್ತಾರೆ.

-ಜಿತೇಂದ್ರ ಕುಂದೇಶ್ವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.