ದಕ್ಷಿಣ ಕನ್ನಡ

ತ್ಯಾಜ್ಯ ಗುಂಡಿಗೆ ಬಿದ್ದು ಬಾಲಕಿ ಸಾವು

Published On :

ಪುತ್ತೂರು:  ನಿರ್ಮಾಣ ಹಂತದಲ್ಲಿದ್ದ ತ್ಯಾಜ್ಯ ನೀರು ಸಂಗ್ರಹ ಗುಂಡಿಗೆ 6 ವರ್ಷದ ಪ್ರಾಯದ ಹೆಣ್ಣು ಮಗು ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಭಾನುವಾರ ಸಂಜೆ ಆರ್ಲಪದವು ಎಂಬಲ್ಲಿರುವ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ನಡೆದಿದೆ.
ಆರ್ಲಪದವು ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯಲ್ಲಿನ ನಿವಾಸಿ, ಕೂಲಿ ಕಾರ್ಮಿಕ ಇಬ್ರಾಹಿಂ-ತಸ್ಲಿಮಾ ದಂಪತಿ ಪುತ್ರಿ ಪಾಣಾಜೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 1ನೇ ತರಗತಿ ವಿದ್ಯಾರ್ಥಿನಿ ಸಫಾ(6) ಮೃತಳು.
ಘಟನೆ ವಿವರ: ಆರ್ಲಪದವು ಪ್ರಾಥಮಿಕ ಆರೋಗ್ಯ ಕೇಂದ್ರದ ಹೆಚ್ಚುವರಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ತ್ಯಾಜ್ಯ ವಿಲೇವಾರಿಗೆಂದು ಸುಮಾರು 10 ಅಡಿ ಆಳದ ಗುಂಡಿ ನಿರ್ಮಿಸಲಾಗಿತ್ತು. ಕಾಮಗಾರಿ ಪ್ರಗತಿಯ ಹಂತದಲ್ಲಿರುವ ಕಾರಣ ತ್ಯಾಜ್ಯ ಗುಂಡಿ ಮುಚ್ಚದೆ ತಾತ್ಕಾಲಿಕವಾಗಿ ಬಿದಿರಿನ ತುಂಡುಗಳನ್ನು ಅಡ್ಡವಿರಿಸಲಾಗಿತ್ತು.
ಈ ನಡುವೆ ಮಳೆಯಿಂದಾಗಿ ಗುಂಡಿಯಲ್ಲಿ ನೀರು ತುಂಬಿತ್ತು. ಇಬ್ರಾಹಿಂ ಅವರ ಮನೆ ಪ್ರಾಥಮಿಕ ಆರೋಗ್ಯ ಕೇಂದ್ರದ ಜಾಗದ ಬಳಿಯೇ ಇದ್ದು ಮನೆಯ ಮುಂಭಾಗದಲ್ಲಿರುವ ಸಂಜೆ ವೇಳೆಗೆ ಆಟವಾಡುತ್ತಿದ್ದ ಸಫಾ ಆಯತಪ್ಪಿ ಪಕ್ಕದಲ್ಲಿರುವ ನೀರು ತುಂಬಿರುವ ಗುಂಡಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸಫಾ ನೀರಿಗೆ ಬಿದ್ದು ಮೃತಪಟ್ಟಿರುವ ಬಗ್ಗೆ ಆರಂಭದಲ್ಲಿ ಮನೆ ಮಂದಿಯ ಅರಿವಿಗೆ ಬಂದಿರಲಿಲ್ಲ. ಮನೆ ಮಂದಿ ಹಾಗೂ ಸ್ಥಳೀಯರು ಮಗುವಿಗಾಗಿ ಅಲ್ಲಿ ಇಲ್ಲಿ ಹುಡುಕಾಟ ನಡೆಸಿದ್ದರು. ಮುಸ್ಸಂಜೆ ವೇಳೆಯಲ್ಲಿ ಸ್ಥಳೀಯರಾದ ಅಲ್ತಾಫ್ ಎಂಬವರು ನೀರು ತುಂಬಿದ ಗುಂಡಿಗೆ ಇಳಿದು ಪರಿಶೋಧನೆ ನಡೆಸಿದಾಗ ಸಫಾ ದೇಹ ನೀರಿನ ಆಡಿಯಲ್ಲಿ  ಪತ್ತೆಯಾಯಿತು. ತಕ್ಷಣ ಆಕೆಯನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಿದದೂ,  ಆ ವೇಳೆಗಾಗಲೇ ಮಗು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಘಟನೆಯ ಕುರಿತು ತನಿಖೆ: ಘಟನೆಯ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದ್ದು, ಮಗು ಮೃತಪಟ್ಟಿರುವ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಸುರೇಶ್ ಕುಮಾರ್ ತಿಳಿಸಿದ್ದಾರೆ.
ತುರ್ತು ಪರಿಹಾರ: ವಿದ್ಯಾರ್ಥಿನಿಯಾಗಿರುವ ಸಫಾ ಮೃತಪಟ್ಟ ಮಾಹಿತಿ ತಿಳಿಯುತ್ತಿದ್ದಂತೆ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್. ಮತ್ತು ತಾಲೂಕು ಶಿಕ್ಷಣ ಸಂಯೋಜಕ ಧರ್ಮಪಾಲ ಕೆ.ಕೆ. ಆಸ್ಪತ್ರೆಗೆ ಭೇಟಿ ನೀಡಿದರು. ಘಟನೆಗೆ ಸಂಬಂಧಿಸಿ ಸರ್ವ ಶಿಕ್ಷಣ ಯೋಜನೆಯ ವಿದ್ಯಾರ್ಥಿ ಪ್ರತಿಷ್ಠಾನದ ನಿಧಿಯಿಂದ ರು. 30 ಸಾವಿರ ತುರ್ತು ಪರಿಹಾರ ನೀಡುವುದಾಗಿ ಶಿಕ್ಷಣಾಧಿಕಾರಿಗಳು ತಿಳಿಸಿದ್ದು ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಮಳೆಗಾಲ ಸಂದರ್ಭ ಹೆತ್ತವರು ತಮ್ಮ ಮಕ್ಕಳ ಬಗ್ಗೆ ನಿಗಾ ವಹಿಸುವಂತೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.