ಯುವತಿಯ ನಗ್ನಚಿತ್ರ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ ಯುವಕ ಸೆರೆ
ಸುಬ್ರಹ್ಮಣ್ಯ: ಪಂಜದ ಬಳಿ ಸರ್ಕಾರಿ ಉದ್ಯೋಗದಲ್ಲಿರುವ ಯುವತಿ ಮೇಲೆ ಯುವಕನೊಬ್ಬ ಅತ್ಯಾಚಾರವೆಸಗಿ, ನಗ್ನ ಚಿತ್ರ ಸೆರೆ ಹಿಡಿದು ಬ್ಲ್ಯಾಕ್‌ಮೇಲ್ ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಆಲೆಟ್ಟಿ ಗ್ರಾಮದ ಮೊರಂಗಲ್ಲಿನ ನಿವಾಸಿ ಕುಸುಮಾಧರ ಎಂಬ ಯುವಕ 2012ರ ನ.20ರಂದು ಪಂಜದ ತನ್ನ ಬಾಡಿಗೆ ಮನೆಯಲ್ಲಿ ಬಲಾತ್ಕಾರವೆಸಗಿದ್ದಾನೆಂದು ಆಕೆ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಘಟನೆ ವಿವರ: ಮೂಲತಃ ಅರಂತೋಡಿನ ಬಿಳಿಯಾರಿನವರಾದ ಯುವತಿ ಅರಣ್ಯ ಇಲಾಖೆಯಲ್ಲಿ ಉದ್ಯೋಗಿ. ಕೆಲವು ವರ್ಷಗಳ ಹಿಂದೆ ಆಕೆಯನ್ನು ಪರಿಚಯ ಮಾಡಿಕೊಂಡು ಮೊಬೈಲ್ ಸಂಖ್ಯೆ ಪಡೆದು ಫೋನ್‌ನಲ್ಲಿ ತನ್ನನ್ನು ಮದುವೆಯಾಗಲು ಒತ್ತಾಯಿಸುತ್ತಿದ್ದ ಎಂದು ಯುವತಿ ಹೇಳಿದ್ದಾಳೆ. ಆಕೆ ಒಪ್ಪದಿದ್ದಾಗ ಪಂಜಕ್ಕೆ ಹೋದ ಆತ ಆಕೆಯ ಬಾಡಿಗೆ ಮನೆಗೆ ಹೋಗಿ ಬಲಾತ್ಕಾರ ನಡೆಸಿ ಆಕೆಯ ನಗ್ನ ಚಿತ್ರಗಳನ್ನು ಚಿತ್ರೀಕರಿಸಿ ಬಳಿಕ ಆ ಚಿತ್ರಗಳನ್ನು ಬಹಿರಂಗಗೊಳಿಸುವುದಾಗಿ ಬೆದರಿಕೆ ಹಾಕಿದನೆಂದು ಹೇಳಿದ್ದಾಳೆ.
ಫೇಸ್‌ಬುಕ್‌ನಲ್ಲೂ ಪ್ರಚಾರ: ಕೆಲವು ಸಮಯಗಳ ಬಳಿಕ ಆತ ಆ ಅಶ್ಲೀಲ ಚಿತ್ರಗಳನ್ನು ತನ್ನ ಫೇಸ್‌ಬುಕ್ ಪುಟದಲ್ಲಿ ಪ್ರಕಟಿಸಿದ್ದ. ಅವಮಾನಕ್ಕೊಳಗಾದ ಯುವತಿ ತನ್ನ ಮನೆಯವರಿಗೆ ವಿಷಯ ತಿಳಿಸಿ ಅವರ ಸಲಹೆಯಂತೆ ಜೂ.19ರಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಆರೋಪಿ ಸೆರೆ: ಸುಳ್ಯ ಸರ್ಕಲ್ ಇನ್ಸ್‌ಪೆಕ್ಟರ್ ಸುದರ್ಶನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಸುಬ್ರಹ್ಮಣ್ಯ ಪೊಲೀಸರು ಗುರುವಾರ ಆರೋಪಿ ಕುಸುಮಾಧರನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಈ ಯುವಕ ಹಾಗೂ ಯುವತಿ ಪರಸ್ಪರ ಪ್ರೀತಿಸುತ್ತಿದ್ದು, ಕಾಲ ಕ್ರಮೇಣ ಅವರೊಳಗೆ ವೈಮನಸ್ಸು ಉಂಟಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತೆಂದು ಅವರ ನಿಕಟವರ್ತಿಗಳು ಹೇಳುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

