ದಕ್ಷಿಣ ಕನ್ನಡ

ಕೊಲ್ಲೂರಿಗೆ ಅಂಬಾನಿ ಪತ್ನಿ ಭೇಟಿ

Published On :

ಕೊಲ್ಲೂರು: ಜಗತ್ತಿನ ಶ್ರೀಮಂತರಲ್ಲಿ ಒಬ್ಬರಾಗಿದ್ದ ಉದ್ಯಮಿ ದಿ.ಧೀರೂಬಾಯಿ ಅಂಬಾನಿ ಅವರ ಪತ್ನಿ (ಅನಿಲ್ ಅಂಬಾನಿ ಮತ್ತು ಮುಖೇಶ್ ಅಂಬಾನಿ ಅವರ ತಾಯಿ) ಕೋಕಿಲಾ ಬೆಹನ್ ಅವರು ಶನಿವಾರ ಕುಂದಾಪುರ ತಾಲೂಕಿನ ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
 ಅವರೊಂದಿಗೆ ರಿಲಾಯನ್ಸ್ ಕಂಪೆನಿಯ ಉಪಾಧ್ಯಕ್ಷ ವಿಶ್ವಾಸ್ ಅತ್ತಾವರ್ ಹಾಗೂ ಹಿಂದಿ ಚಲನಚಿತ್ರ ನಿರ್ಮಾಪಕ ರಾಜೇಶ್ ಭಟ್ ಮತ್ತುಸಂಬಂಧಿಕರು ಜತೆಗಿದ್ದರು.
 ಶನಿವಾರ ಮಧ್ಯಾಹ್ನದ ಸುಮಾರಿಗೆ ಬೈಂದೂರಿನ ಅರೆಶಿರೂರಿಗೆ ಹೆಲಿಕಾಪ್ಟರ್ ಮೂಲಕ ಬಂದು, ಅಲ್ಲಿಂದ ನೇರವಾಗಿ ದೇವಸ್ಥಾನಕ್ಕೆ ಆಗಮಿಸಿದರು. ದೇವಸ್ಥಾನ ವತಿಯಿಂದ ಅವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರ ಮಾಡಿಕೊಳ್ಳಲಾಯಿತು. ನಂತರ ದೇವಸ್ಥಾನದಲ್ಲಿ ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಿದ ಕೋಕಿಲಾ ಬೆಹನ್, ಶಂಕರಾಚಾರ್ಯ ಪೀಠ, ದೇವಿಯ ಅಭರಣಗಳ ವೀಕ್ಷಣೆ ಮಾಡಿದರು. ಅಲ್ಲದೆ, ದೇವಿಗೆ ಬೆಳ್ಳಿ ಹರಿವಾಣ, ಬೆಳ್ಳಿಯ ಕೊಡೆ, ಹಾಗೂ ಬಂಗಾರದ ಸರವೊಂದನ್ನು ಕೊಡುಗೆಯಾಗಿ ನೀಡಿದರು. ನಂತರ ಅವರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು.
 ಈ ಸಂದರ್ಭ ದೇವಸ್ಥಾನದ ಆಡಳಿತ ಧರ್ಮದರ್ಶಿ ಕೃಷ್ಣಪ್ರಸಾದ್ ಅಡ್ಯಂತಾಯ, ಕಾರ್ಯ ನಿರ್ವಹಣಾಧಿಕಾರಿ ಎಲ್.ಎಸ್. ಮಾರುತಿ, ಆಡಳಿತ ಮಂಡಳಿ ಸದಸ್ಯರಾದ ಜಯಾನಂದ ಹೋಬಳಿದಾರ್, ಕಲ್ಪನಾ ಭಾಸ್ಕರ್, ಸವಿತಾ ದೇವಾಡಿಗ, ಅತುಲ್ ಕುಮಾರ್ ಶೆಟ್ಟಿ ಮೊದಲಾದವರು ಇದ್ದರು.
ಕೋಕಿಲಾ ಬೆಹನ್ ಅವರು ಮಾಧ್ಯಮದವರೊಂದಿಗೆ ಮಾತನಾಡಲು ನಿರಾಕರಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ರಿಲಾಯನ್ಸ್ ಕಂಪೆನಿಯ ಉಪಾಧ್ಯಕ್ಷ ವಿಶ್ವಾಸ್ ಅತ್ತಾವರ್, ಕೋಕಿಲಾ ಬೆಹನ್ ಇದೇ ಮೊದಲ ಬಾರಿ ಕೊಲ್ಲೂರಿಗೆ ಭೇಟಿ ನೀಡಿದ್ದು, ಯಾವುದೇ ಹರಕೆ ಅಥವಾ ಸೇವೆ ಸಲ್ಲಿಸುವ ಉದ್ದೇಶದಿಂದ ಭೇಟಿ ನೀಡಿಲ್ಲ, ಬದಲಾಗಿ ದೇವರ ದರ್ಶನ ಪಡೆಯುವುದಕ್ಕೆ ಭೇಟಿ ನೀಡಿರುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.