ದಕ್ಷಿಣ ಕನ್ನಡ

ಯುವತಿಯ ಅಪಹರಿಸಿ ಮತಾಂತರ ಯತ್ನ: ವಕೀಲ ಸಹಿತ ಮೂವರ ಸೆರೆ

Published On :

ಪುತ್ತೂರು: ತಾಲೂಕಿನ ಪಾಲ್ತಾಡಿ ಗ್ರಾಮದ ಅಂಕತ್ತಡ್ಕ ಎಂಬಲ್ಲಿನ ಪರಿಶಿಷ್ಟ ಪಂಗಡದ ಯುವತಿಯನ್ನು ಅಪಹರಿಸಿ ಮತಾಂತರ ಮಾಡಲು ಯತ್ನಿಸುವ ಮೂಲಕ ಕೋಮು ಪ್ರಚೋದನಾಕಾರಿ ವಿದ್ಯಮಾನಕ್ಕೆ ಕಾರಣವಾದ ಆರೋಪದಲ್ಲಿ ಪುತ್ತೂರಿನಲ್ಲಿ ನೋಟರಿ ವಕೀಲನ ಸಹಿತ ಮೂವರನ್ನು ಸಂಪ್ಯ ಪೊಲೀಸರು ಬಂಧಿಸಿದ್ದಾರೆ.
 ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮತ್ತು ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ ಕಾರ್ಯದರ್ಶಿಯಾಗಿರುವ ಇಲ್ಲಿನ ಚಿಕ್ಕಮುಡ್ನೂರು ಗ್ರಾಮದ ಸಾಲ್ಮರ ನಿವಾಸಿ ಸಾಲ್ಮರ ನೂರುದ್ದೀನ್, ಮುಸ್ಲಿಂ ಸಂಘಟನೆ ಮುಖಂಡ- ಬೆಟ್ಟಂಪಾಡಿ ಗ್ರಾಮದ ಅಲ್ತಫ್ ಮತ್ತು ಪಾಲ್ತಾಡು ಗ್ರಾಮದ ಅಂಕತ್ತಡ್ಕ ನಿವಾಸಿ, ಕೋಳಿ ವ್ಯಾಪಾರಿ ಅಬ್ದುಲ್ ಅಜೀದ್ ಬಂಧಿತ ಆರೋಪಿಗಳು.
 ಪಾಲ್ತಾಡಿ ಗ್ರಾಮದ ಅಂಕತ್ತಡ್ಕದ ನಾರಾಯಣ ನಾಯ್ಕ ಎಂಬವರ ಪುತ್ರಿ ಜಯಂತಿ (19) ಕಳೆದ ಸೋಮವಾರ ಮನೆಯಿಂದ ಹೊರಟು ಹೋದವಳು ನಾಪತ್ತೆಯಾಗಿದ್ದಳು. ಈಕೆ ನಾಪತ್ತೆಯಾದ ಕುರಿತು ನಾರಾಯಣ ನಾಯ್ಕ ಸಂಪ್ಯ ಪೊಲೀಸರಿಗೆ ದೂರು ನೀಡಿದ್ದರು.
ಸುಳ್ಯ ತಾಲೂಕಿನ ಬೆಳ್ಳಾರೆಯ ಜವುಳಿ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಜಯಂತಿ ನಾಪತ್ತೆ ಪ್ರಕರಣ ಕುತೂಹಲ ಕೆರಳಿಸಿತ್ತು.
 ಅಂಕತ್ತಡ್ಕದಲ್ಲಿ ಕೋಳಿ ವ್ಯಾಪಾರ ನಡೆಸುತ್ತಿದ್ದ ಅಬ್ದುಲ್ ಅಜೀದ್ ಮತ್ತು ಜಯಂತಿ ನಡುವೆ ಈ ಹಿಂದೆ ಪ್ರೇಮ ಸಂಬಂಧವಿತ್ತು. ಆ ವಿಚಾರದಲ್ಲಿ ಮೂರು ತಿಂಗಳ ಹಿಂದೆಯಷ್ಟೇ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿತ್ತು. ಬಳಿಕ ಪ್ರಕರಣವನ್ನು ಎರಡೂ ಕಡೆಯವರು ಸೇರಿಕೊಂಡು ರಾಜಿ ಮಾತುಕತೆ ಮೂಲಕ ಇತ್ಯರ್ಥಪಡಿಸಿದ್ದರು. ಮಾತ್ರವಲ್ಲದೆ, ಆ ವೇಳೆ ಇನ್ನು ಮುಂದೆ ಯುವತಿಯ ವಿಚಾರಕ್ಕೆ ಹೋಗದಂತೆ ಅಜೀದ್‌ಗೆ ಸೂಚಿಸಲಾಗಿತ್ತು. ಈ ವಿದ್ಯಮಾನಗಳ ಹಿನ್ನೆಲೆಯಲ್ಲಿ 15 ದಿನಗಳ ಹಿಂದೆಯಷ್ಟೇ ಯುವತಿಯ ಮನೆಯವರು ಜಯಂತಿಗೆ ವಿವಾಹ ಸಂಬಂಧ ಹುಡುಕಿ ತನ್ನದೇ ಸಮುದಾಯಕ್ಕೆ ಸೇರಿದ ಯುವಕನೊಬ್ಬನ ಜೊತೆ ವಿವಾಹ ನಿಶ್ಚಿತಾರ್ಥ ನಡೆಸಿದ್ದರು ಎಂಬ ಮಾಹಿತಿ ಲಭಿಸಿದೆ.
 ಇತ್ತ ಯುವತಿ ನಾಪತ್ತೆಯಾದ ಬಳಿಕ ಪ್ರಕರಣ ದಾಖಲಿಸಿಕೊಂಡ ಸಂಪ್ಯ ಪೊಲೀಸರು, ಆರಂಭದಲ್ಲಿ ಊರಲ್ಲೇ ಇದ್ದ ಅಬ್ದುಲ್ ಅಜೀದ್‌ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದರು.
 ವಿಚಾರಣೆ ವೇಳೆ ದೊರೆತ ಮಾಹಿತಿಯಂತೆ ಪೊಲೀಸರು ಕೇರಳದ ಪೊನ್ನಾನಿಗೆ ತೆರಳಿ ಅಲ್ಲಿದ್ದ ಜಯಂತಿಯನ್ನು ವಶಕ್ಕೆ ತೆಗೆದುಕೊಂಡು, ಕರೆತಂದು ಆಕೆಯನ್ನು ವಿಚಾರಣೆಗೊಳಪಡಿಸಿದರು.
 ವಿಚಾರಣೆ ವೇಳೆ ದೊರೆತ ಮಾಹಿತಿಯಂತೆ ಪೊಲೀಸರು ಬೆಟ್ಟಂಪಾಡಿಯ ಅಲ್ತಫ್ ಮತ್ತು ವಕೀಲ ಸಾಲ್ಮರ ನೂರುದ್ದೀನ್ ಅವರನ್ನು ಶನಿವಾರ ಬಂಧಿಸಿದ್ದಾರೆ. ಯುವತಿಯನ್ನು ಅಪಹರಿಸಿ ಪೊನ್ನಾನಿಗೆ ಕರೆದೊಯ್ದು ಮತಾಂತರ ಮಾಡುವ ಅಬ್ದುಲ್ ಅಜೀದ್‌ನ ಯೋಜನೆಗೆ ಬೆಟ್ಟಂಪಾಡಿಯ ಲತೀಫ್ ಪ್ರಮುಖ ಸೂತ್ರಧಾರನಾಗಿದ್ದು, ಆತನಿಗೆ ಮೂರನೇ ಆರೋಪಿಯಾದ ವಕೀಲ ಸಾಲ್ಮರ ನೂರುದ್ದೀನ್ ಸಲಹೆ- ಸಹಕಾರ ನೀಡಿರುವ ಆರೋಪವಿದೆ. ಬಂಧಿತ ಮೂವರು ಆರೋಪಿಗಳನ್ನು ಸಂಪ್ಯ ಪೊಲೀಸರು ಶನಿವಾರ ಸಂಜೆ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗಳಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.