ದಕ್ಷಿಣ ಕನ್ನಡ

ಪುತ್ತೂರಲ್ಲಿ ಪ್ರಚಾರ ಕಸರತ್ತು

Published On :

ಪುತ್ತೂರು: ಪುರಸಭಾ ವ್ಯಾಪ್ತಿಯ 27 ವಾರ್ಡ್‌ಗಳಿಗೆ ಮಾ.7ರಂದು ನಡೆಯಲಿರುವ ಚುನಾವಣೆಯ ಪ್ರಚಾರದ ಭರಾಟೆ ಕೊನೆಯ ಕ್ಷಣದಲ್ಲಿ ವೇಗ ಪಡೆಯುತ್ತಿದ್ದು, ವಿವಿಧ ಪಕ್ಷಗಳ ಕಾರ್ಯಕರ್ತರು ತಮ್ಮ ಅಭ್ಯರ್ಥಿಯ ಪರ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿರುವುದರ ಜೊತೆಗೆ ರಾಜ್ಯ, ರಾಷ್ಟ್ರ ಮಟ್ಟದ ನಾಯಕರು ರೋಡ್ ಶೋ ನಡೆಸುತ್ತಾ ತಮ್ಮ ಪಕ್ಷದತ್ತ ಜನರ ಒಲವನ್ನು ಸೆಳೆಯುವ ಪ್ರಯತ್ನದಲ್ಲಿ ತೊಡಗಿದ್ದಾರೆ.
ಪುರಸಭೆಯ ಒಟ್ಟು 27 ವಾರ್ಡ್‌ಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ಎಸ್‌ಡಿಪಿಐ, ಜೆಡಿಎಸ್, ಸಿಪಿಐಎಂ ಮತ್ತು ಪಕ್ಷೇತರರು ಸೇರಿದಂತೆ ಒಟ್ಟು 88 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಈ ಪೈಕಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪ್ರಬಲ ಪೈಪೋಟಿಯಿದೆ.
 ಕಳೆದ ಬಾರಿಯ ಪುರಸಭಾ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿ ಅಧಿಕಾರ ಪಡೆದುಕೊಂಡಿತ್ತು. ಈ ಬಾರಿ ಅಧಿಕಾರ ಯಾರ ಪರವಾಗಿದೆ ಎಂಬುದನ್ನು ಮತದಾರರು ಇನ್ನೂ ಗೌಪ್ಯವಾಗಿಟ್ಟು ಕುತೂಹಲ ಕೆರಳಿಸಿದ್ದಾರೆ. ಪುತ್ತೂರಿನ ಪ್ರಮುಖ ಸಮಸ್ಯೆಯಾಗಿರುವ ಕುಡಿಯುವ ನೀರು ಮತ್ತು ತ್ಯಾಜ್ಯ ವಿಲೇವಾರಿ ವಿಚಾರಗಳನ್ನು ಮುಂದಿಟ್ಟು ಕಾಂಗ್ರೆಸ್ ಪ್ರಚಾರ ನಡೆಸುತ್ತಿದ್ದರೆ, ಅದೇ ವಿಚಾರದಲ್ಲಿ ಮುಂದಿನ ಅವಧಿಗೆ ಸಮರ್ಪಕ ವ್ಯವಸ್ಥೆ ಮಾಡುತ್ತೇವೆ ಎನ್ನುತ್ತಾ ಬಿಜೆಪಿ ಜನರತ್ತ ಧಾವಿಸಿದೆ. ಜೆಡಿಎಸ್ ಮತ್ತು ಎಸ್‌ಡಿಪಿಐ ಕಾಂಗ್ರೆಸ್ ಮತ್ತು ಬಿಜೆಪಿಯ ದೌರ್ಬಲ್ಯಗಳನ್ನು ಪ್ರಚಾರ ಮಾಡುತ್ತಾ ಜನರ ಮನವೊಲಿಸುವ ಕೆಲಸ ನಡೆಸುತ್ತಿದೆ. ಎಲ್ಲಾ 27 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಮತ್ತು ಬಿಜೆಪಿ  ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜೊತೆಗೆ ಹಿಂದಿನ ಬಾರಿ ಸದಸ್ಯರಾಗಿದ್ದವರಿಗೆ ಬಹುತೇಕ ಕಡೆಗಳಲ್ಲಿ ಮರು ಅವಕಾಶ ನೀಡಿದೆ. ಜೆಡಿಎಸ್ 15 ಕ್ಷೇತ್ರಗಳಲ್ಲಿ. ಎಸ್‌ಡಿಪಿಐ 10 ಕ್ಷೇತ್ರಗಳಲ್ಲಿ ಮತ್ತು ಪಕ್ಷೇತರರು 9 ಕ್ಷೇತ್ರಗಳಲ್ಲಿ ಮತ್ತು ಸಿಪಿಐಎಂ 1 ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ.
 ಕಳೆದ ಬಾರಿ ಪುರಸಭಾ ಬಿಜೆಪಿ ಅಧ್ಯಕ್ಷರಾಗಿದ್ದ ಕಮಲಾ ಆನಂದ್ ಮತ್ತು ಮಾಜಿ ಅಧ್ಯಕ್ಷೆ ಹಾಗೂ ನಿಕಟಪೂರ್ವ ಸದಸ್ಯೆ ಲತಾ ಗಣೇಶ್ ಕೊನೆಯ ಕ್ಷಣದಲ್ಲಿ ಬಿಜೆಪಿಯನ್ನು ತೊರೆದು ಕಾಂಗ್ರೆಸ್‌ನಿಂದ ಸ್ಪರ್ಧಾ ಕಣಕ್ಕೆ ಇಳಿದಿರುವುದು ಬಿಜೆಪಿಯ ಪಾಲಿಗೆ ಉಭಯ ಸಂಕಟದ ವಿಚಾರವಾದರೆ, ಕಾಂಗ್ರೆಸ್‌ಗೆ ಎಸ್‌ಡಿಪಿಐ ಮತ್ತು ಜೆಡಿಎಸ್ ಮಗ್ಗುಲ ಮುಳ್ಳಾಗಿ ಕಾಡುತ್ತಿದೆ.
ಕಾಂಗ್ರೆಸ್‌ನ ನಾಯಕ ಮಾಜಿ ಸಚಿವ ಜನಾರ್ದನ ಪೂಜಾರಿ, ಮಾಜಿ ಸಂಸದ ವಿನಯ ಕುಮಾರ್ ಸೊರಕೆ, ಬಿಜೆಪಿಯ ನಾಯಕ ಡಿ.ವಿ. ಸದಾನಂದ ಗೌಡ ಇವರೆಲ್ಲರಿಗೂ ಪುತ್ತೂರು ಪುರಸಭೆಯಲ್ಲಿನ ಗೆಲವು ಪ್ರತಿಷ್ಠೆಯ ವಿಚಾರವಾಗಿದ್ದು ಇದಕ್ಕಾಗಿ ನಿರಂತರ ಪತ್ರಿಕಾ ಹೇಳಿಕೆ ನೀಡುತ್ತಾ ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಾ, ರೋಡ್ ಶೋ ನಡೆಸುತ್ತಿದ್ದಾರೆ. ಇನ್ನೊಂದೆಡೆ ವಿವಿಧ ಪಕ್ಷಗಳ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಸದ್ದು ಗದ್ದಲವಿಲ್ಲದೆ ಮನೆ ಮನೆಗೆ ತೆರಳಿ ತಮ್ಮ ಪ್ರಣಾಳಿಕೆಯನ್ನು ತಿಳಿಸುತ್ತಾ ತಮಗೆ ಮತ ನೀಡುವಂತೆ ಮತದಾರರನ್ನು ಓಲೈಸುತ್ತಿದ್ದಾರೆ.

ಸುಳ್ಯ ನಗರ ಪಂಚಾಯ್ತಿಯಲ್ಲಿ  ಕರ-ಕಮಲ ಪೈಪೋಟಿ
ಸುಳ್ಯ: ಸುಳ್ಯ ನಗರ ಪಂಚಾಯಿತಿ ದುಗಲಡ್ಕದಿಂದ ಕೇರ್ಪಳವರೆಗೆ, ಪೆರಾಜೆ ಗಡಿಯಿಂದ ಪೈಚಾರುವರೆಗೆ ಚಾಚಿಕೊಂಡಿರುವ ಸುಳ್ಯ ಕಸಬಾ ಗ್ರಾಮ ವ್ಯಾಪ್ತಿ ಹೊಂದಿರುವ ಪ್ರದೇಶ.
18 ವಾರ್ಡ್‌ಗಳಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ 18 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದೆ. ಕಾಂಗ್ರೆಸ್ 17 ಕ್ಷೇತ್ರಗಳಲ್ಲಿ, ಜೆಡಿಎಸ್ 9 ಕ್ಷೇತ್ರಗಳಲ್ಲಿ, ಕೆಜೆಪಿ 4 ಕ್ಷೇತ್ರಗಳಲ್ಲಿ, ಎಸ್.ಡಿ.ಪಿ.ಐ. 3 ಕ್ಷೇತ್ರಗಳಲ್ಲಿ, ಸಿ.ಪಿ.ಎಂ. ಒಂದು ಕ್ಷೇತ್ರದಲ್ಲಿ ಹಾಗೂ ಪಕ್ಷೇತರರು 3 ಕ್ಷೇತ್ರಗಳಲ್ಲಿ ಕಣದಲ್ಲಿದ್ದಾರೆ.
ಕಳೆದ ಬಾರಿ ಸುಳ್ಯ ನಗರ ಪಂಚಾಯತಿನಲ್ಲಿ ಬಿಜೆಪಿ ಆಡಳಿತವಿತ್ತು. ಪ್ರತಿ ಸಭೆಗಳಲ್ಲೂ ಬಿಜೆಪಿ-ಕಾಂಗ್ರೆಸ್ ಸದಸ್ಯರ ನಡುವೆ ಚಕಮಕಿ ನಡೆದು ಅಭಿವೃದ್ಧಿ ಪರ ಚರ್ಚೆಗಳೇ ಗೌಣವಾಗಿತ್ತು. ಸುಳ್ಯ ನಗರವನ್ನು ಬಾಧಿಸುತ್ತಿರುವ ಒಳಚರಂಡಿ ಅಪೂರ್ಣತೆ, ಅಸಮರ್ಪಕ ತ್ಯಾಜ್ಯ ವಿಲೇವಾರಿ, ಅಪೂರ್ಣ ರಸ್ತೆ ಕಾಮಗಾರಿ, ಕುಡಿಯುವ ನೀರಿನ ಸಮಸ್ಯೆ ಈ ಚುನಾವಣೆಯಲ್ಲಿ ಪ್ರಮುಖ ಅಸ್ತ್ರವಾಗಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ಅಧಿಕಾರ ಹಿಡಿಯುವ ಪೈಪೋಟಿಯಲ್ಲಿ ತೊಡಗಿದ್ದರೆ ಉಳಿದ ಪಕ್ಷಗಳು ತಮ್ಮ ಶಕ್ತಿ ಪ್ರದರ್ಶನದ ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.