ಹಲವೆಡೆ ಗುಡುಗು ಸಹಿತ ಭಾರಿ ಮಳೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾದ್ಯಂತ ತೀವ್ರ ಸೆಕೆ ಹಾಗೂ ಮೋಡ ಕವಿದ ವಾತಾವರಣ ಗುರುವಾರವೂ ಮುಂದುವರಿದಿದ್ದು ಪುತ್ತೂರು ಹಾಗೂ ಬೆಳ್ತಂಗಡಿ ತಾಲೂಕಿನಲ್ಲಿ ಸಂಜೆ ವೇಳೆಗೆ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆಯಾಗಿದೆ.
ಪುತ್ತೂರು ಪೇಟೆ ಹಾಗೂ ಸುತ್ತಮುತ್ತಲು ಸಂಜೆ 7ರ ವೇಳೆಗೆ ಧಾರಾಕಾರ ಮಳೆ ಸುರಿದರೆ, ನೆಲ್ಯಾಡಿ, ಕಡಬ, ಉಪ್ಪಿನಂಗಡಿ, ಕೊಕ್ಕಡ ಪರಿಸರದಲ್ಲೆಡೆ ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಪ್ರಾರಂಭವಾದ ಮಳೆ ರಾತ್ರಿವರೆಗೆ ಸುರಿದು ವಾತಾವರಣ ತಂಪುಗೊಳ್ಳಲು ಕಾರಣವಾಯಿತು. ಭಾರಿ ಸಿಡಿಲು- ಮಿಂಚುಗಳ ನಡುವೆ ಸುರಿದ ಮಳೆ ಪ್ರಾರಂಭದಲ್ಲಿ ಮಂದಗತಿಯಲ್ಲಿದ್ದರೆ, ಬಳಿಕ ಜೋರಾಗಿ ಸುರಿಯಲಾರಂಭಿಸಿತ್ತು. ಸಿಡಿಲು ಮಿಂಚುಗಳ ಆರ್ಭಟ ಭಾರಿ ಇತ್ತಾದರೂ ಯಾವುದೇ ಹಾನಿಯುಂಟಾದ ಬಗ್ಗೆ ಮಾಹಿತಿ ಲಭಿಸಿಲ್ಲ. ಹಲವೆಡೆ ವಿದ್ಯುತ್, ದೂರವಾಣಿ ಸಂಪರ್ಕ ವ್ಯತ್ಯಯಗೊಂಡಿದೆ.
ಅಪರಾಹ್ನವೇ ಮಳೆ: ಸುಳ್ಯ ಹಾಗೂ ಸುತ್ತಮುತ್ತಲು ಅಪರಾಹ್ನ 2.30ರ ವೇಳೆಗೆ ಕೆಲ ಕಾಲ ತುಂತುರು ಮಳೆಯಾಯಿತು. ತಾಲೂಕಿನ ಸುಬ್ರಹ್ಮಣ್ಯ ಹಾಗೂ ಬಂಟ್ವಾಳ ತಾಲೂಕಿನ ವಿಟ್ಲ ಮತ್ತಿತರ ಕಡೆ ತೀವ್ರ ಗುಡುಗು ಸಿಡಿಲು ಆರ್ಭಟ ಸಂಜೆ ವೇಳೆಗೆ ಕಂಡುಬಂತು. ಸುಬ್ರಹ್ಮಣ್ಯ, ಗುತ್ತಿಗಾರು, ಹರಿಹರ ಪಲ್ಲತ್ತಡ್ಕ ಮತ್ತಿತರ ಕಡೆ ಬುಧವಾರ ರಾತ್ರಿ ಸಾಧಾರಣ ಮಳೆಯಾಗಿತ್ತು.
ಬೆಳ್ತಂಗಡಿ ಹಾಗೂ ಸುತ್ತಮುತ್ತಲು ಮತ್ತು ಬಂಟ್ವಾಳ ಪರಿಸರದಲ್ಲೂ ಸಂಜೆ 7ರ ವೇಳೆಗೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ರಾ.ಹೆ.75ರ ಫರಂಗಿಪೇಟೆ, ಬಿ.ಸಿ.ರೋಡ್ ಭಾಗದಲ್ಲಿ ತಡರಾತ್ರಿ ವರೆಗೂ ಮಳೆ ಮುಂದುವರಿಯಿತು. ಧರ್ಮಸ್ಥಳ, ಉಜಿರೆ, ಬೆಳ್ತಂಗಡಿ ಪರಿಸರದಲ್ಲಿ ಸಂಜೆ ಸುಮಾರು 2 ತಾಸುಗಳ ಕಾಲ ಗುಡುಗು, ಸಿಡಿಲು, ಗಾಳಿ ಸಹಿತ ಬಿರುಸಿನ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲಾದ್ಯಂತ ಬುಧವಾರ ಬೆಳಗ್ಗಿನಿಂದಲೇ ದಟ್ಟ ಮೋಡ ಹಾಗೂ ಭಾರಿ ಸೆಕೆ ವಾತಾವರಣವಿದ್ದು, ಯಾವುದೇ ಕ್ಷಣದಲ್ಲಿ ಮಳೆಯಾಗುವ ಪರಿಸರ ನಿರ್ಮಾಣವಾಗಿತ್ತು. ಬುಧವಾರ ತಡರಾತ್ರಿ ಮಂಗಳೂರು ಸಹಿತ ಜಿಲ್ಲೆಯ ಹಲವೆಡೆ ಸಾಧಾರಣ ಮಳೆಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

