ಯುವಕನಿಂದ ವಂಚನೆ
ಬಂಟ್ವಾಳ: ಯುವತಿಯೋರ್ವಳನ್ನು ಮದುವೆಯಾಗುವುದಾಗಿ ನಂಬಿಸಿ ಗರ್ಭವತಿಯನ್ನಾಗಿಸಿದ ಆರೋಪದಲ್ಲಿ ವಿಟ್ಲ ನಿವಾಸಿ ಯುವಕನೋರ್ವನ ವಿರುದ್ಧ ವಿಟ್ಲ ಠಾಣೆಗೆ ದೂರು ನೀಡಲಾಗಿದೆ. ಆರೋಪಿಯನ್ನು ವಿಟ್ಲ ಕಸ್ಬಾ ಗ್ರಾಮದ ನಿವಾಸಿ ಶ್ರೀನಿವಾಸ ಎಂದು ಹೆಸರಿಸಲಾಗಿದ್ದು, ಈತ ಅಳಿಕೆ ಗ್ರಾಮದ ಎರುಂಬು ನಿವಾಸಿಯ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಪುಸಲಾಯಿಸಿ ದೈಹಿಕ ಸಂಪರ್ಕ ಬೆಳೆಸಿದ್ದು, ಯುವತಿ ಈಗ ಎಂಟು ತಿಂಗಳ ಗರ್ಭಿಣಿಯಾಗಿದ್ದಾಳೆ. ಆದರೆ, ಯುವಕ ಈಗ ತನ್ನ ಮಗಳನ್ನು ಮದುವೆಯಾಗಲು ನಿರಾಕರಿಸುತ್ತಿದ್ದು, ಮೊಬೈಲ್ ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಂಡಿದ್ದಾನೆ ಎಂದು ಯುವತಿಯ ತಂದೆ ವಿಟ್ಲ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಉಚಿತ ಶಿಕ್ಷಣ: ಪ್ರತಿಭಾನ್ವಿತರಿಂದ ಅರ್ಜಿ ಆಹ್ವಾನ
ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ 2013- 14ನೇ ಸಾಲಿನಲ್ಲಿ ಉಚಿತ ಶಿಕ್ಷಣ ಪಡೆಯಲಿಚ್ಚಿಸುವವರಿಂದ ಅರ್ಜಿ ಆಹ್ವಾನಿಸಲಾಗಿದೆ.
2012- 13ನೇ ಸಾಲಿನಲ್ಲಿ ಶೈಕ್ಷಣಿಕ ರಂಗದಲ್ಲಿ ಉತ್ಕೃಷ್ಟ ಸಾಧನೆ ಮಾಡಿದವರು, ಕ್ರೀಡೆ (ಅಥ್ಲೆಟಿಕ್ಸ್), ಸಾಂಸ್ಕೃತಿಕ ರಂಗ (ಶಾಸ್ತ್ರೀಯ ಸಂಗೀತ, ನೃತ್ಯ, ಪಕ್ಕ ವಾದ್ಯ ಅಲ್ಲದೆ ಇತರ ಪ್ರಕಾರಗಳಲ್ಲಿ) ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಪ್ರತಿಭಾನ್ವಿತರಿಗೆ 6, 7, 8 ಮತ್ತು 9ನೇ ತರಗತಿಗಳಿಗೆ ಉಚಿತ ಶಿಕ್ಷಣದ ಅವಕಾಶವಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುವುದು.
ಅರ್ಹ ಅಭ್ಯರ್ಥಿಗಳು 2013ರ ಮಾ. 25ರೊಳಗೆ ಸಾಧನೆಯ ಪ್ರಮಾಣ ಪತ್ರದ ಪ್ರತಿಗಳೊಂದಿಗೆ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು.
ದಾಖಲಾತಿಗಾಗಿ ಅರ್ಜಿ ಆಹ್ವಾನ: 2013- 14ನೇ ಸಾಲಿನಲ್ಲಿ 6, 7, 8 ಮತ್ತು 9ನೇ ತರಗತಿಗಳಿಗೆ ದಾಖಲಾತಿ ಬಯಸುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು 2013ರ ಮಾ. 25ರೊಳಗೆ ಹಿಂದಿನ ವರ್ಷದ ಪ್ರಗತಿ ಪತ್ರದ ಪ್ರತಿಯೊಂದಿಗೆ ಬಿಳಿಹಾಳೆಯಲ್ಲಿ ಅರ್ಜಿ ಬರೆದು ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ, ದ.ಕ. ಜಿಲ್ಲೆ - 574227 ಈ ವಿಳಾಸಕ್ಕೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಮೊ. 9448625883, 9449616123 ಅನ್ನು ಸಂಪರ್ಕಿಸಬಹುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ತಿಳಿಸಿದ್ದಾರೆ.
ಇಂದು ವೀರಮಂಗಲ ದೇವಸ್ಥಾನದಲ್ಲಿ ವಿಶೇಷ ಪೂಜೆ
ಪುತ್ತೂರು: ನಗರದ ಮಹಾತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಅಂಗವಾಗಿ ದೈವಜ್ಞರ ನಿರ್ದೇಶನದ ಪ್ರಕಾರ ಪುತ್ತೂರು ಕ್ಷೇತ್ರದಿಂದ 9ರಂದು ಹೆಚ್ಚಿನ ಭಕ್ತಾದಿಗಳು ವೀರಮಂಗಲ ವಿಷ್ಣುಮೂರ್ತಿದೇವಸ್ಥಾನಕ್ಕೆ ತೆರಳಿ ಶ್ರೀ ದೇವರಿಗೆ ವಿಶೇಷ ಫಲಪುಷ್ಪ ಕಾಣಿಕೆ, ದ್ರವ್ಯ ಸಹಿತ ಭದ್ರದೀಪವನ್ನು ಸಮರ್ಪಿಸಲಾಗುವುದು ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ಆನಂದ ಕುಲಾಲ್ ಮಿತ್ತಪರಾರಿ ರಾಜಿನಾಮೆ
ಬಂಟ್ವಾಳ: ಇಲ್ಲಿನ ಪುರಸಭೆಯ ಚುನಾವಣೆ ಮುಕ್ತಾಯವಾಗುತ್ತಿದ್ದಂತೆ ಅನೀರಿಕ್ಷಿತ ಬೆಳವಣಿಗೆಯೊಂದರಲ್ಲಿ ಬಂಟ್ವಾಳ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಆನಂದ ಕುಲಾಲ್ ಮಿತ್ತಪರಾರಿ ತನ್ನ ಹುದ್ದೆಗೆ ಗುರುವಾರ ಸಂಜೆ ರಾಜಿನಾಮೆ ನೀಡಿದ್ದಾರೆ.
ಕಳೆದ 15 ವರ್ಷದಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದು, ವಿವಿಧ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿ, ಗುರುವಾರ ನಡೆದ ಪುರಸಭಾ ಚುನಾವಣಾ ಪ್ರಚಾರದಲ್ಲೂ ತನ್ನನ್ನು ತಾನು ಸಂಪೂರ್ಣ ತೊಡಗಿಸಿಕೊಂಡಿದ್ದ ಆನಂದ ಕುಲಾಲ್ ಪಕ್ಷದ ವರಿಷ್ಠರ ನಿರ್ಧಾರದಿಂದ ಬೇಸತ್ತು ಈ ನಿರ್ಧಾರ ಕೈಗೊಂಡಿದ್ದಾರೆ.
ಕುಲಾಲ- ಕುಂಬಾರ ಯುವವೇದಿಕೆ ಬಂಟ್ವಾಳ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಆನಂದ ಕುಲಾಲ್ 11ನೇ ವಾರ್ಡ್ನಿಂದ ಬಿಜೆಪಿ ಅಭ್ಯರ್ಥಿ ಆಕಾಂಕ್ಷಿಯಾಗಿದ್ದರು. ಈ ಬಗ್ಗೆ ಆರಂಭದಲ್ಲಿ ಪಕ್ಷದ ಪ್ರಮುಖರು ಹಸಿರು ನಿಶಾನೆ ತೋರಿದ್ದರು ಎನ್ನಲಾಗಿದೆ. ಆದರೆ, ಕೊನೆಗಳಿಗೆಯಲ್ಲಿ ಆದ ಬೆಳವಣಿಗೆಯಲ್ಲಿ ಟಿಕೆಟ್ ಆನಂದ್ ಕುಲಾಲ್ರ ಕೈತಪ್ಪಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ್ಗೆ ದೊರೆಯಿತು. ತನ್ನ ಗಮನಕ್ಕೆ ತಾರದೆ ಏಕಪಕ್ಷೀಯ ನಿರ್ಧಾರ ಕೈಗೊಂಡ ಪಕ್ಷ ಪ್ರಮುಖರ ನಿರ್ಧಾರ ಕುಲಾಲ್ಗೆ ಆಘಾತ ನೀಡಿದೆ. ಆದರೂ, ಪಕ್ಷದ ಮೇಲಿನ ಅಭಿಮಾನದಿಂದ ಪುರಸಭಾ ಚುನಾವಣೆಯಲ್ಲಿ ಪಕ್ಷದ ಪರವಾಗಿ ಪ್ರಚಾರ ಕಾರ್ಯದಲ್ಲಿ ತನ್ನನ್ನು ಸಂಪೂರ್ಣ ತೊಡಗಿಸಿಕೊಂಡು ಚುನಾವಣೆ ಮುಗಿಯುತ್ತಿದ್ದಂತೆ ರಾಜಿನಾಮೆ ಸಲ್ಲಿಸಿದ್ದಾರೆ.
ಇಂದು ಸಾರ್ವಜನಿಕ ಸತ್ಯನಾರಾಯಣ ಪೂಜೆ
ಮೂಲ್ಕಿ: ಕೊಳಚಿಕಂಬಳ ಶ್ರೀ ಜಾರಂದಾಯ ಧೂಮಾವತಿ ಯೂತ್ ಕ್ಲಬ್ನ ನಾಲ್ಕನೇ ವಾರ್ಷಿಕೋತ್ಸವ ಹಾಗೂ ಮಹಾಶಿವರಾತ್ರಿ ಅಂಗವಾಗಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಶನಿವಾರ ಕೊಳಚಿಕಂಬಳ ಶ್ರೀ ಜಾರಂದಾಯ ದೈವಸ್ತಾನದ ವಠಾರದಲ್ಲಿ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಮರ ಅಕ್ರಮ ಸಾಗಾಟ: ಸೊತ್ತು ವಶ
ಪುತ್ತೂರು: ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಪತ್ತೆ ಹಚ್ಚಿದ ಅರಣ್ಯ ಇಲಾಖೆ ಅಧಿಕಾರಿಗಳು, ಪಿಕಪ್ ವಾಹನ ಸಹಿತ ಸುಮಾರು ರು. 3 ಲಕ್ಷ ಮೌಲ್ಯದ ವಸ್ತುಗಳನ್ನು ಬುಧವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ.ಕೇರಳಕ್ಕೆ ಅಕ್ರಮವಾಗಿ ಪಿಕಪ್ ವಾಹನದಲ್ಲಿ ಮರ ಸಾಗಾಟ ನಡೆಸುತ್ತಿದ್ದ ಪ್ರಕರಣವನ್ನು ಪುತ್ತೂರು ವಲಯ ಅರಣ್ಯಾಧಿಕಾರಿಗಳು ಬುಧವಾರ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಆನೆಕಲ್ಲು ಎಂಬಲ್ಲಿ ಪತ್ತೆ ಹಚ್ಚಿ ವಾಹನವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಪಿಕಪ್ ವಾಹನದಲ್ಲಿ ಸಾಗಿಸಲಾಗುತ್ತಿದ್ದ 12 ದಿಮ್ಮಿಗಳು, 13 ಪೋಲ್ಸ್ ಮತ್ತು 1000 ಘ.ಮೀ. ಕಟ್ಟಿಗೆಯನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ವೇಳೆ ಆರೋಪಿ ಚಾಲಕ ಪರಾರಿಯಾಗಿದ್ದಾನೆ. ಉಪ ವಲಯ ಅರಣ್ಯಾಧಿಕಾರಿ ಪಿ.ಎಂ. ಕರಿಯಪ್ಪ, ಅರಣ್ಯ ರಕ್ಷಕರಾದ ರಾಜುಚಂದ್ರ ಎ.ಪಿ, ಮಂಜುನಾಥ ಜಿ. ನಾಯ್ಕ, ವಾಹನ ಚಾಲಕ ಜಗದೀಶ್ ಭಾಗವಹಿಸಿದ್ದರು. ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪದ್ಮನಾಭ ಗೌಡ ಕೆ. ನಿರ್ದೇಶನದಂತೆ ಪುತ್ತೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಬ್ಬಾಸ್ ಎ.ಎಸ್. ಮಾರ್ಗದರ್ಶನದಲ್ಲಿ ಪುತ್ತೂರು ವಲಯ ಅರಣ್ಯಾಧಿಕಾರಿ ಪಿ.ಶ್ರೀಧರ್ ಅವರು ಮುಂದಿನ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಇಂದಿನಿಂದ ಕುತ್ತಾರಿನಲ್ಲಿ ಗ್ರಾಮೀಣ ನಾಟಕೋತ್ಸವ
ಕಾಸರಗೋಡು: ಕುತ್ತಾರಿನ ಶ್ರೀ ರಾಜರಾಜೇಶ್ವರಿ ಕಲಾ ವೇದಿಕೆಯಲ್ಲಿ 9 ಹಾಗೂ 10ರಂದು ಗ್ರಾಮೀಣ ನಾಟಕೋತ್ಸವ ಏರ್ಪಡಿಸಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು, ಶ್ರೀ ರಾಜರಾಜೇಶ್ವರಿ ಸೇವಾ ಟ್ರಸ್ಟ್, ಪಥ ಮಂಗಳೂರು, ಶೃತಿ ಲಯ ಕಲಾ ಕೇಂದ್ರದ ಸಹಯೋಗದಲ್ಲಿ ನಡೆಲಿರುವ ಈ ಕಾರ್ಯಕ್ರಮವನ್ನು ಹಿರಿಯ ರಂಗತಜ್ಞ ಗಿರೀಶ್ ಪಿಲಾರ್ ಉದ್ಘಾಟಿಸಲಿರುವರು. ಕುತ್ತಾರು ರಾಜರಾಜೇಶ್ವರಿ ಸೇವಾ ಟ್ರಸ್ಟ್ನ ಅಧ್ಯಕ್ಷ ಚಂದ್ರಹಾಸ ಕೊಟ್ಟಾರಿ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ಜೆ.ಸಿ. ಹರೀಶ್ ಕುಮಾರ್, ಬಾಸುಮ ಕೊಡಗು, ನರೇಶ್ ಬಬ್ಬುಕಟ್ಟೆ, ದಿನೇಶ್ ಕುಮಾರ್ ಬಿ, ತ್ಯಾಗಂ ಭಾಗವಹಿಸುವರು.
9ರಂದು ಉಡುಪಿ ಸುಮನಸಾ ತಂಡದಿಂದ ಬಾಸುಮ ಕೊಡಗು ನಿರ್ದೇಶನದ ಭೀಷ್ಮನ ಕೊನೆಯ ದಿನಗಳು ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. 10ರಂದು ಭಾಗಮಂಡಲ ಕಲಾವಿದರಿಂದ ನಿನಾಸಂ ಪದವೀಧರ ಮುರಹರಿ ಪಿ. ಕಾಸರಗೋಡು ನಿರ್ದೇಶಿಸಿದ ದಾಮಿನಿ ಕಥ, ಪಥ ಮಂಗಳೂರು(ಶಾರದಾ ವಿದ್ಯಾಲಯ ವಿದ್ಯಾರ್ಥಿಗಳು)ಸಂಸ್ಥೆಯ ಆದಿಯ ಕೊನೆಯ ಅರಸ ನಾಟಕಗಳು ಪ್ರದರ್ಶಿನಗೊಳ್ಳಲಿವೆ.
ಇಂದಿನಿಂದ ಬಜ್ಪೆಯಲ್ಲಿ ಸುನ್ನೀ ಮಹಾಸಂಗಮ
ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ಎಸ್ಎಸ್ಎಫ್ ಬಜ್ಪೆ ಶಾಖೆಯ ಆಶ್ರಯದಲ್ಲಿ ಮಾ.9ರಿಂದ 12ರ ವರೆಗೆ ಬಜ್ಪೆ ಕೇಂದ್ರ ಮಸೀದಿ ಬಳಿಯ ಬಣಕಲ್ ಬಾವ ಕಂಪೌಂಡ್ನಲ್ಲಿ ಸುನ್ನೀ ಮಹಾನಂಗಮ ಜರುಗಲಿದೆ ಎಂದು ಎಸ್ಎಸ್ಎಫ್ ಶಾಖಾ ಪ್ರಕಟಣೆ ತಿಳಿಸಿದೆ.
ಮಂಗಳೂರು: 25ರ ವರೆಗೆ ಉಚಿತ ಕಣ್ಣು ತಪಾಸಣೆ
ಮಂಗಳೂರು: ವಾಸನ್ ಐ ಕೇರ್ ಆಸ್ಪತ್ರೆ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಾ.8 ರಿಂದ 25ರವರೆಗೆ ಉಚಿತ ಕಣ್ಣಿನ ತಪಾಸಣಾ ಶಿಬಿರ ಏರ್ಪಡಿಸಿದೆ. ಈ ಶಿಬಿರ ಮಂಗಳೂರಿನ ವಾಸನ್ ಐ ಕೇರ್ ಆಸ್ಪತ್ರೆಯಲ್ಲಿ ನಡೆಯಲಿದ್ದು, ವಿವರಕ್ಕೆ ರೊನಾಲ್ಡ್ ಫೆರ್ನಾಂಡಿಸ್ 9538233319ನ್ನು ಸಂಪರ್ಕಿಸಿ.
ಇಂದು ಅಳೇಕಲ ಉರೂಸ್
ಮಂಗಳೂರು: ಉಳ್ಳಾಲ ಅಳೇಕಲ ಅಲ್ ಅಮೀನ್ ಜುಮಾ ಮಸೀದಿಯ ಉರೂಸ್ ನೇರ್ಚೆ ಹಾಗೂ ಮುಹಿಯುದ್ದೀನ್ ರಾತೀಬ್ ಮಾ.9 ಮತ್ತು 10ರಂದು ಶೈಖುನಾ ತಾಜುಲ್ ಉಲಮಾ ಸಯ್ಯದ್ ಅಬ್ದುಲ್ರಹಮಾನ್ ಅಲ್ಬುಖಾರಿ ಉಳ್ಳಾಲ ತಂಞಳ್ ನೇತೃತ್ವದಲ್ಲಿ ನಡೆಯಲಿದೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಸೀದಿ ಸದಸ್ಯ ಮುನೀರ್ ಸಖಾಫಿ, 7ರಂದು ದ್ಸಿಕ್ರ್ ಮಜ್ಲಿಸ್, 9ರಂದು ಉರೂಸ್ ಹಾಗೂ 10ರಂದು ಮಹಿಯ್ಯುದ್ದೀನ್ ರಾತೀಬ್ ನಡೆಯಲಿದೆ. ಇದರ ಪ್ರಯುಕ್ತ 3ರಿಂದ ಮತಪ್ರಭಾಷಣ ನಡೆಯಲಿದೆ ಎಂದರು.
ಯುವಕ ಆತ್ಮಹತ್ಯೆ
ಸುಳ್ಯ: ಆಲೆಟ್ಟಿ ಗ್ರಾಮದ ಕೂರ್ನಡ್ಕ- ಎತ್ತಿನಡ್ಕ ಹೊನ್ನಪ್ಪ ಗೌಡರ ಮಗ ನಿತ್ಯಾನಂದ (32) ತನ್ನ ಮನೆ ಸಮೀಪ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ.
ಪೋಳ್ಯ ನಾರಾಯಣ ಭಟ್
ಪುತ್ತೂರು: ಕೊಡಿಪ್ಪಾಡಿ ನಿವಾಸಿ ಪೋಳ್ಯ ನಾರಾಯಣ ಭಟ್ (82) ಅಲ್ಪಕಾಲದ ಅಸೌಖ್ಯದಿಂದಾಗಿ ಗುರುವಾರ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಪುತ್ತೂರಿನ ಪೋಳ್ಯ ಮನೆತನದ ರಾಮಚಂದ್ರ ಭಟ್ ಪ್ರಗತಿಪರ ಕೃಷಿಕರಾಗಿದ್ದು ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದರು. ಪೋಳ್ಯ ಲಕ್ಷ್ಮೀವೆಂಕಟ್ರಮಣ ಮಠ ಜೀರ್ಣೋದ್ಧಾರ, ಕಲ್ಯಾಣ ಮಂಟಪ ನಿರ್ಮಾಣ, ಆಡಳಿತ ಮೊಕ್ತೇಸರರಾಗಿ 25 ವರ್ಷಕ್ಕಿಂತಲೂ ಹೆಚ್ಚಿನ ಸೇವೆ ಸಲ್ಲಿಸಿದವರು.
1980ರ ದಶಕದಲ್ಲಿ ಕೊಡಿಪ್ಪಾಡಿ ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶದ ಜವಾಬ್ದಾರಿ ವಹಿಸಿದ್ದರು. 80ರ ದಶಕದಲ್ಲಿ ಮಂಜಲ್ಪಡ್ಪು-ಕೊಡಿಪ್ಪಾಡಿ-ಅರ್ಕ ರಸ್ತೆ ರಚನೆಯ ಕಾರ್ಯದಲ್ಲಿ ಮುಂಚೂಣಿಯ ಪಾತ್ರ ವಹಿಸಿ ಸಾಮಾಜಿಕವಾಗಿ ಗುರುತಿಸಿಕೊಂಡಿದ್ದರು.
ಅವರು ಪತ್ನಿ ಪಾರ್ವತಿ, ಪುತ್ರರಾದ ರಾಮಚಂದ್ರ ಭಟ್, ಸುಕುಮಾರ ಭಟ್, ಪುತ್ರಿಯರಾದ ಸುಮಂಗಲ ಬಿ. ಎನ್. ಭಟ್ ಮತ್ತು ಸುಲೋಚನಾ ಶ್ಯಾಮ ಭಟ್ರನ್ನು ಅಗಲಿದ್ದಾರೆ.
ಆಲೆಟ್ಟಿ- ಬಡ್ಡಡ್ಕ ರಸ್ತೆಯಲ್ಲಿ ಸಂಚಾರ ಸ್ಥಗಿತ
ಸುಳ್ಯ: ಸುಳ್ಯ- ಆಲೆಟ್ಟಿ- ಬಡ್ಡಡ್ಕ- ಪಾಣತ್ತೂರು ಅಂತಾರಾಜ್ಯ ರಸ್ತೆಯಲ್ಲಿ ಒಂದು ಚಿಕ್ಕ ಮಳೆ ಬಂದಾಗಲೇ ಸಂಚಾರ ಸ್ಥಗಿತಗೊಂಡಿದೆ.
ನಿರಂತರ ಎರಡನೇ ದಿನವೂ ರಸ್ತೆಯಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಆಲೆಟ್ಟಿ- ಬಡ್ಡಡ್ಕ ರಸ್ತೆ ಸಂಪೂರ್ಣ ಹೊಂಡ ಗುಂಡಿಯಿಂದ ಕೂಡಿದ್ದು ಯಾವುದೇ ವಾಹನಗಳೂ ಸರಿಯಾಗಿ ಓಡಾಟ ನಡೆಸಲು ಸಾಧ್ಯವಿಲ್ಲದ ಸ್ಥಿತಿ. ಹಾಗಿದ್ದರೂ ಕೆಲವು ಖಾಸಗಿ ಬಸ್ಗಳು ಈ ರಸ್ತೆಯಲ್ಲಿ ಸಂಚಾರ ನಡೆಸುತ್ತವೆ.
ಬುಧವಾರ ಸಂಜೆಯಿಂದ ರಸ್ತೆಯಲ್ಲಿ ಬಸ್ಗಳ ಓಡಾಟ ಸ್ಥಗಿತಗೊಂಡಿದೆ. ಬುಧವಾರ ಸಂಜೆ ಮಳೆ ಬಂದ ಕಾರಣ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ ಮತ್ತು ಹೊಂಡಗಳಲ್ಲಿ ಕೆಸರು ನೀರು ತುಂಬಿದೆ. ಇದರಿಂದ ಸುಳ್ಯ- ಬಡ್ಡಡ್ಕ ಮಧ್ಯೆ ಸಂಚರಿಸುವ ಖಾಸಗಿ ಬಸ್ಸೊಂದು ರಸ್ತೆಯ ಗುಂಡ್ಯ ಎಂಬಲ್ಲಿ ಬುಧವಾರ ರಾತ್ರಿ ಕೆಸರಲ್ಲಿ ಮುಳುಗಿತು. ಇದರಿಂದಾಗಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಪಿಕ್ಅಪ್ ವ್ಯಾನ್ಗೆ ಬಸ್ಸನ್ನು ಕಟ್ಟಿ ಮೇಲೆತ್ತಲಾಯಿತು.
ರೈಲು ನಿಲ್ದಾಣದಲ್ಲಿ ಅಪರಿಚಿತ ಶವ
ಮಂಗಳೂರು: ಸೆಂಟ್ರಲ್ ರೈಲು ನಿಲ್ದಾಣ ಯಾರ್ಡ್ನಲ್ಲಿ ಭಿಕ್ಷುಕನಂತೆ ಕಾಣುವ ವ್ಯಕ್ತಿಯ ಶವ ಪತ್ತೆಯಾಗಿದೆ. 50 ವರ್ಷ, ನೀಲಿ ಬಣ್ಣದ ಪ್ಯಾಂಟ್, ಶರ್ಟ್, ಬಿಳಿ ಮಿಶ್ರಿತ ಕಪ್ಪು ಕೂದಲು, ಗೋಧಿ ಮೈಬಣ್ಣ 5 ಅಡಿ ಎತ್ತರ. ಪರಿಚಯ ಇದ್ದವರು ರೈಲ್ ಪೊಲೀಸ್ ಠಾಣೆ (2220559) ಸಂಪರ್ಕಿಸಬಹುದು.
ಕಾರು ಡಿಕ್ಕಿ: ಪಾದಚಾರಿಗೆ ಗಾಯ
ಬಂಟ್ವಾಳ: ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೋರ್ವರು ಗಾಯಗೊಂಡ ಘಟನೆ ಬುಧವಾರ ಬಿ.ಸಿ. ರೋಡು ಸಮೀಪ ನಡೆದಿದ್ದು, ಶುಕ್ರವಾರ ಠಾಣೆಗೆ ದೂರು ನೀಡಲಾಗಿದೆ. ಮಾ. 6 ರಂದು ಬಿ. ಮೂಡ ನಿವಾಸಿ ಶಕೀರ್ ರೆಹಮಾನ್ (20) ಕೈಕಂಬ ಸಮೀಪದ ಪೊನ್ನೋಡಿ ಬಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬಿ.ಸಿ. ರೋಡು ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದ್ದು, ಶಕೀರ್ಗೆ ತೀವ್ರ ಗಾಯಗಳಾಗಿದೆ. ಗಾಯಾಳುವನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೊಯ್ದಿನ್ ಎಂಬವರು ಬಂಟ್ವಾಳ ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ರೈಲಲ್ಲಿ 8 ಲಕ್ಷ ಚಿನ್ನಾಭರಣ ಕಳವು
ಮಂಗಳೂರು: ಮುಂಬೈಯಿಂದ ಮಂಗಳೂರಿಗೆ ಬರುತ್ತಿರುವ ಮತ್ಸ್ಯಗಂಧ ರೈಲಲ್ಲಿ ಹೊನ್ನಾವರ ಬಳಿ ದಂಪತಿ ಬಳಿ ಬ್ಯಾಗ್ನಲ್ಲಿದ್ದ ಚಿನ್ನಾಭರಣ, ನಗದು ಸಹಿತ 8 ಲಕ್ಷ ಸೊತ್ತು ಕಳವಾಗಿದೆ. ಮುಂಬೈ ಥಾಣೆ ನಿವಾಸಿ ಗೋಪಾಲ ನಾರಾಯಣ ನಾಯ್ಕ್ ಮತ್ತು ಪ್ರೇಮಾ ದಂಪತಿ ಮಂಗಳೂರಿನ ಸಂಬಂಧಿಕರ ಮನೆಗೆ ಆಗಮಿಸುತ್ತಿದ್ದರು. ಶುಕ್ರವಾರ ಹೊನ್ನಾವರ ನಿಲ್ದಾಣದಲ್ಲಿ ರೈಲು ಚಲಿಸುತ್ತಿರುವ ವೇಳೆ ಅಪರಿಚಿತನೊಬ್ಬ ಇವರ ಬಳಿ ಇದ್ದ ಚಿನ್ನಾಭರಣ ತುಂಬಿದ ವ್ಯಾನಿಟಿ ಬ್ಯಾಗನ್ನು ಕಳವು ಮಾಡಿದ್ದಾನೆ. ತಕ್ಷಣ ರೈಲು ಟಿಕೆಟ್ ಕಲೆಕ್ಟರ್ ಬಳಿ ದೂರು ನೀಡಿದರು. ಆದರೆ ರೈಲು ಮಧ್ಯೆ ನಿಲ್ಲದೆ ಮಂಗಳೂರು ತಲುಪಿದ್ದರಿಂದ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಚಿನ್ನ ಕಳವು ಮಾಡಿದ ಬಗ್ಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಬಳಿಕ ಹೊನ್ನಾವರ ಠಾಣೆಗೆ ವರ್ಗಾಯಿಸಲಾಗಿದೆ.
ಕಡಲಲ್ಲಿ ಕೊಚ್ಚಿ ಹೋದ ಯುವಕ
ಮಂಗಳೂರು: ಮುಕ್ಕ ಲೈಟ್ ಹೌಸ್ ಬೀಚ್ ಬಳಿ ಈಜಲು ಹೋದ ಯುವಕ ಕಡಲಲ್ಲಿ ಕೊಚ್ಚಿ ಹೋಗಿದ್ದಾನೆ. ಶುಕ್ರವಾರ ಮಧ್ಯಾಹ್ನ 8 ಮಂದಿ ಯುವಕರು ಕಡಲಿಗೆ ಈಜಲು ತೆರಳಿದ್ದರು. ಅವರಲ್ಲಿ ಕೃಷ್ಣಾಪುರ ಕಾಟಿಪಳ್ಳ ನಿವಾಸಿ ಹಫೀಜ್ (17) ಈಜಲು ಹೋದವ ವಾಪಸ್ ಬಂದಿಲ್ಲ. ಮೃತದೇಹವೂ ಪತ್ತೆಯಾಗಿಲ್ಲ.
ಮಹಿಳೆಯನ್ನು ಮುಟ್ಟಿದ್ದಕ್ಕೆ ಜೈಲು
ಮಂಗಳೂರು: ಮಹಿಳೆಯ ಹಿಂಬದಿ ಮುಟ್ಟಿ ಓಡಿ ಹೋಗಿದ್ದ ಇರಾ ಬಾಳೆಪುಣಿ ಅಹಮ್ಮದ್ ಕುಂಞ (40)ಯನ್ನು ಕೊಣಾಜೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಮುಡಿಪು ಕುಕ್ಕುದಕಟ್ಟೆ ಇಂದಿರಾ ಗುರುವಾರ ಮಧ್ಯಾಹ್ನ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿರುವಾಗ ಹಿಂದಿನಿಂದ ಬಂದ ಅಹಮ್ಮದ್ ಮಹಿಳೆಯ ಹಿಂಭಾಗ ಮುಟ್ಟಿ ಓಡಿದ್ದಾನೆ. ಮಹಿಳೆ ಬೊಬ್ಬೆ ಹೊಡೆದಿದ್ದು, ಸ್ಥಳೀಯರು ಒಟ್ಟಾಗಿ ಹುಡುಕಾಡಿದರೂ ಆರೋಪಿ ಸಿಕ್ಕಿರಲಿಲ್ಲ. ಬಳಿಕ ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಶುಕ್ರವಾರ ಬಂಧಿಸಿದರು. ಆರೋಪಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪಾನ್ವಾಲ ಸಾವು
ಮಂಗಳೂರು: ಹಳೆ ಬಸ್ನಿಲ್ದಾಣ ಬಳಿ ಪಾನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಾರ್ಖಂಡೆ (52) ವಿಪರೀತ ಸಾರಾಯಿ ಕುಡಿತದಿಂದ ಮೃತಪಟ್ಟಿದ್ದಾರೆ. ಬುಧವಾರ ಬಸ್ ನಿಲ್ದಾಣ ಬಳಿ ಟೈಟಾನ್ ವಾಚ್ ಶೋರೂಮ್ ಕಳೆಗೆ ಪಾನಮತ್ತರಾಗಿ ಬಿದ್ದಿದ್ದರು. ಅವರನ್ನು ಸುರಕ್ಷಾ ಆ್ಯಂಬುಲೆನ್ಸ್ನಲ್ಲಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ರಾತ್ರಿ ಮೃತಪಟ್ಟರು.
ನವೀನ್ ಸೂರಿಂಜೆ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ಬೆಂಗಳೂರು: ಮಂಗಳೂರಿನ ಹೋಂಸ್ಟೇ ಮೇಲಿನ ದಾಳಿ ಪ್ರಕರಣದಲ್ಲಿ ಬಂಧಿತನಾಗಿರುವ ಪತ್ರಕರ್ತ ನವೀನ್ ಸೂರಿಂಜೆ ಜಾಮೀನು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ. ಈ ಹಿಂದೊಮ್ಮೆ ಜಾಮೀನು ಅರ್ಜಿ ವಜಾಗೊಂಡಿದ್ದರೂ, ಹೊಸದಾಗಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಕೆ.ಶ್ರೀಧರ್ರಾವ್ ಅವರಿದ್ದ ಏಕಸದಸ್ಯ ಪೀಠ, ಘಟನೆ ಕುರಿತು ಪೂರ್ವ ಮಾಹಿತಿಯಿದ್ದರೂ ಪೊಲೀಸರಿಗೇಕೆ ಮಾಹಿತಿ ನೀಡಲಿಲ್ಲ ಎಂದು ಪ್ರಶ್ನಿಸಿತು. ಇದಕ್ಕೆ ಸಮರ್ಥನೆ ನೀಡಿದ ಸೂರಿಂಜೆ ಪರ ವಕೀಲರು, ಘಟನೆ ನಡೆದ ಸ್ಥಳದಲ್ಲೇ ಪೊಲೀಸರು ಹಾಜರಿದ್ದರು. ಆದ್ದರಿಂದ ಮಾಹಿತಿ ನೀಡುವ ಅಗತ್ಯ ಬರಲಿಲ್ಲ ಎಂದು ವಾದಿಸಿದರು. ಈ ಹೇಳಿಕೆ ಪಡೆದ ನ್ಯಾಯಪೀಠ, ಘಟನೆ ಸಂದರ್ಭದಲ್ಲಿ ಪೊಲೀಸರು ಹಾಜರಿದ್ದರು ಎಂಬುದಕ್ಕೆ ಸಾಕ್ಷಿ ಹಾಗೂ ದೃಶ್ಯಾವಳಿಗಳನ್ನು ಹಾಜರು ಪಡಿಸುವಂತೆ ಆದೇಶಿಸಿ ವಿಚಾರಣೆಯನ್ನು ಮುಂದೂಡಿದೆ.
ಹೋಮ್ಸ್ಟೇ ದಾಳಿ: ಬಾಲ ಆರೋಪಿಗೆ ಜೈಲಲ್ಲಿ ಟ್ಯೂಷನ್
ಮಂಗಳೂರು: ಹೋಮ್ಸ್ಟೇ ದಾಳಿಯಲ್ಲಿ ಬಂಧಿತನಾದ ಬಾಲ ಆರೋಪಿಗೆ ಜಿಲ್ಲಾ ಕಾರಾಗೃಹದಲ್ಲಿ ಶುಕ್ರವಾರದಿಂದ ಟ್ಯೂಷನ್ ಆರಂಭವಾಗಿದೆ! ಹುಟ್ಟು ಹಬ್ಬ ಆಚರಿಸುತ್ತಿದ್ದ ಯುವಕ, ಯುವತಿಯರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತನಾದ ಈತ ಪಿಯುಸಿ ಕಲಿಯುತ್ತಿದ್ದ. ಜೈಲು ಸೇರಿ 6 ತಿಂಗಳಾಗಿವೆ. ಮಾ.13ರಿಂದ 28ರವರೆಗೆ ನಡೆಯುವ ಪರೀಕ್ಷೆ ಬರೆಯಲು ಈತನಿಗೆ ಜೆಎಂಎಫ್ಸಿ ಕೋರ್ಟ್ ಅವಕಾಶ ಕಲ್ಪಿಸಿದೆ. 'ಆರೋಪಿ ಸಹೋದರ ಪ್ರತಿ ದಿನ ಬೆಳಗ್ಗೆ ಬಂದು ವಿಷಯಗಳ ಬಗ್ಗೆ ಟ್ಯೂಷನ್ ನೀಡುತ್ತಿದ್ದಾರೆ. ಓದಿಗೆ ಪುಸ್ತಕಗಳನ್ನು ತರಿಸಿಕೊಂಡಿದ್ದಾರೆ. ಪ್ರತಿದಿನ ನಿಗದಿತ ಸಮಯದಲ್ಲಿ ಕೋರ್ಟ್ ಆದೇಶದಂತೆ ಈತನ ಅಧ್ಯಯನಕ್ಕೆ ಪ್ರತ್ಯೇಕ ಅವಕಾಶ ಮಾಡಿಕೊಡಲಾಗಿದೆ' ಎಂದು ಜೈಲು ಅಧೀಕ್ಷಕ ದೊಡ್ಡಕಾಮಯ್ಯ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

