ಉಡುತಡಿ ಉಡಿಗೆ ಸಹ್ಯಾದ್ರಿ ಪ್ರಾಧಿಕಾರ!
ಹೊನ್ನಾಳಿ ಚಂದ್ರಶೇಖರ್
ಶಿವಮೊಗ್ಗ: ಪ್ರತಿಪಕ್ಷಗಳ ವಿರೋಧದ ನಡುವೆ ಅಂಗೀಕಾರವಾಗಿರುವ ಸಹ್ಯಾದ್ರಿ ಪರಂಪರೆ ಅಭಿವೃದ್ಧಿ ಪ್ರಾಧಿಕಾರ ವಿಧೇಯಕಕ್ಕೆ ಕೆಲವು ತಿದ್ದುಪಡಿ ಮಾಡುವಂತೆ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಶಿಫಾರಸು ಮಾಡಿದ್ದಾರೆ. ಶಿವಮೊಗ್ಗ ಬದಲು ಶಿಕಾರಿಪುರ ತಾಲೂಕಿನ ಉಡುತಡಿಯನ್ನು ಪ್ರಾಧಿಕಾರದ ಕೇಂದ್ರವಾಗಿಸುವಂತೆ ಸೂಚಿಸಿದ್ದಾರೆ.
ಸಹ್ಯಾದ್ರಿ ಪರಂಪರೆ ಅಭಿವೃದ್ಧಿ ಪ್ರಾಧಿಕಾರ ರಚಿಸುವುದಾಗಿ ಅಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಘೋಷಣೆ ಮಾಡಿ ಮೂರು ವರ್ಷವಾಗಿದೆ. ನಂತರ 2011ರ ಡಿಸೆಂಬರ್ನಲ್ಲಿ ಕರಡು ಸಿದ್ಧವಾಗಿದ್ದು, ಆಗ ಮುಖ್ಯಮಂತ್ರಿಯಾಗಿದ್ದ ಡಿ.ವಿ. ಸದಾನಂದಗೌಡ ನೇತೃತ್ವದಲ್ಲಿ 2012ರ ವರ್ಷಾರಂಭದಲ್ಲಿ ನಡೆದ 11ನೇ ವಿಧಾನಸಭೆ ಅಧಿವೇಶನದಲ್ಲಿ ಈ ಕರಡು ಮಸೂದೆಯನ್ನು ಮಂಡಿಸಿ ಒಪ್ಪಿಗೆಯನ್ನೂ ಪಡೆಯಲಾಯಿತು. ಇದೇ ವರ್ಷ ಏಪ್ರಿಲ್ 26ರಂದು ರಾಜ್ಯಪಾಲರ ಅಂಕಿತವೂ ದೊರೆತು ಅಧಿಸೂಚನೆ ಹೊರಡಿಸಲಾಯಿತು. ಅಲ್ಲಿಂದ ಮುಂದೆ ಪ್ರಾಧಿಕಾರ ರಚನೆಗೆ ಚಾಲನೆ ದೊರೆಯಲೇ ಇಲ್ಲ.
ಈಗ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಈ ಬಗ್ಗೆ ಆಸಕ್ತಿ ತೋರಿದ್ದಾರೆ. ಕುತೂಹಲದ ವಿಷಯವೆಂದರೆ ಸದ್ಯ ಅವರ ರಾಜಕೀಯ ಎದುರಾಳಿಯಾಗಿರುವ ಬಿ.ಎಸ್. ಯಡಿಯೂರಪ್ಪ ಅವರ ಕ್ಷೇತ್ರವಾದ ಶಿಕಾರಿಪುರ ತಾಲೂಕಿನ ಉಡುತಡಿಯಲ್ಲಿ ಸ್ಥಾಪಿಸಲು ಶಿಫಾರಸು ಮಾಡಿದ್ದಾರೆ. ಇದಕ್ಕೆ ಕಾರಣವಾಗಿದ್ದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಎ.ಎಸ್. ಪದ್ಮನಾಭ ಭಟ್.
ಕಾರಣಗಳೇನು?: ಶಿಕಾರಿಪುರ ತಾಲೂಕು ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿದ ಪ್ರದೇಶ. ಅಕ್ಕಮಹಾದೇವಿ, ಅಲ್ಲಮಪ್ರಭು, ಸತ್ಯಕ್ಕ ಸೇರಿದಂತೆ ಏಳು ಶಿವಶರಣರು ಇಲ್ಲಿಯೇ ಜನಿಸಿದ್ದಾರೆ. ಜತೆಗೆ ನಾಟ್ಯರಾಣಿ ಶಾಂತಲೆಯ ಜನ್ಮಸ್ಥಳವಾದ ಬಳ್ಳಿಗಾವಿಯ ಸುತ್ತಮುತ್ತ 70ಕ್ಕೂ ಅಧಿಕ ದೇವಾಲಯಗಳು ಅನಾಥವಾಗಿವೆ. ಮುಖ್ಯರಸ್ತೆಯ ಬದಿಯಲ್ಲಿರುವ ದೇವಾಲಯ ಹೊರತುಪಡಿಸಿ ಉಳಿದ ದೇವಾಲಯಗಳನ್ನು ಕೇಳುವವರಿಲ್ಲ.
ಉತ್ತರ ಕರ್ನಾಟಕದ ಬಸವಕಲ್ಯಾಣದಲ್ಲಿ ಬಸವಣ್ಣ ಐಕ್ಯರಾದರೆಂಬ ಕಾರಣಕ್ಕೆ ಅಲ್ಲಿ ಪ್ರಾಧಿಕಾರ ಸ್ಥಾಪಿಸಿ ಅಭಿವೃದ್ಧಿ ಮಾಡಲಾಗಿದೆ. ಆದರೆ ಕಲ್ಯಾಣದ ಅನುಭವ ಮಂಟಪದಲ್ಲಿದ್ದ ಪ್ರಮುಖ ಶರಣರು ಹುಟ್ಟಿದ ಸ್ಥಳವಾದ ಶಿಕಾರಿಪುರ ಅಭಿವೃದ್ಧಿಗೆ ಏನೂ ಕ್ರಮವಿಲ್ಲ. ಆದ್ದರಿಂದ ಶಿಕಾರಿಪುರ ತಾಲೂಕಿನ, ಅಕ್ಕಮಹಾದೇವಿ ಜನ್ಮಸ್ಥಳ ಬಳ್ಳಿಗಾವಿಯನ್ನೇ ಸಹ್ಯಾದ್ರಿ ಪರಂಪರೆ ಅಭಿವೃದ್ಧಿ ಪ್ರಾಧಿಕಾರದ ಕೇಂದ್ರ ಸ್ಥಳವಾಗಿ ಮಾಡಬೇಕು ಎಂಬುದು ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಶಿಫಾರಸಿನ ಸಾರ.
ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಈ ಕುರಿತ ಟಿಪ್ಪಣಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಕಳುಹಿಸಿದ್ದಾರೆ.
ಶಿಕಾರಿಪುರದಲ್ಲೇ ಏಕೆ?
- ಕಲ್ಯಾಣದ ಶೂನ್ಯ ಸಿಂಹಾಸನದ ಅಧ್ಯಕ್ಷರಾಗಿದ್ದು ಅಲ್ಲಮಪ್ರಭು. ಇವರು ವಿದ್ಯಾಭ್ಯಾಸ ಮಾಡಿದ್ದು ಬಳ್ಳಿಗಾವಿಯಲ್ಲಿ. ಹೊಯ್ಸಳ ರಾಣಿ ಪಟ್ಟಮಹಿಷಿ ಶಾಂತಲಾದೇವಿ ಹುಟ್ಟೂರು ಬಳ್ಳಿಗಾವಿ. ಶಾತವಾಹನರ ಕಾಲದಿಂದ ಮೈಸೂರು ಅರಸರ ವರೆಗೆ ಬಳ್ಳಿಗಾವಿಯು ಸಾಂಸ್ಕೃತಿಕ ರಾಜಧಾನಿಯಾಗಿತ್ತು. ಇನ್ನೂ ಇಲ್ಲಿ ಉತ್ಖನನ ನಡೆದಿಲ್ಲ.
- ಬಂದಳಿಕೆ (ಹಿಂದಿನ ನಾಗರಖಂಡದ ರಾಜಧಾನಿ ಬಾಂಧವಪುರ) ಹಾಗೂ ಸುತ್ತಮುತ್ತಲಿನ 30 ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಕುಪ್ಪಗಡ್ಡೆ, ಉದ್ರಿ, ಕುಬಟೂರು ಪ್ರದೇಶದಲ್ಲಿ ಹಾಲಿ ಉಳಿದಿರುವ ಪ್ರಾಚೀನ ದೇವಾಲಯಗಳ ಸಂಖ್ಯೆ 30. ಶಾಸನಗಲ್ಲಿ ಸಾವಿರಕ್ಕೂ ಹೆಚ್ಚು ದೇವಾಲಯಗಳಿದ್ದವು ಎಂಬ ಉಲ್ಲೇಖವಿದೆ. ಬಂದಳಿಕೆಯು ಕರ್ನಾಟಕವನ್ನಾಳಿದ ಕದಂಬರ ಮೂಲ ನೆಲೆ. ಹಂಪಿಯಲ್ಲಾದಂತೆ ಇಲ್ಲಿಯೂ ಉತ್ಖನನ ಆಗಬೇಕಾದ ತುರ್ತು ಅಗತ್ಯವಿದೆ.
- ಉಡುತಡಿ ಅಕ್ಕನ ಜನ್ಮಸ್ಥಳ. ಅಕ್ಕಮಹಾದೇವಿ ಕೋಟೆ ಹಾಳುಬಿದ್ದಿದೆ. ಇಲ್ಲಿ ಅಭಿವೃದ್ಧಿಗೆ ಸಾಕಷ್ಟು ಅವಕಾಶವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

