ದಕ್ಷಿಣ ಕನ್ನಡ

ಅರೆಭಾಷೆ ಅಕಾಡೆಮಿಯಲ್ಲಿ ಭಿನ್ನಮತ: ಅಧ್ಯಕ್ಷರ ಬದಲಾವಣೆಗೆ ಸದಸ್ಯರ ಒತ್ತಾಯ

Published On :

ಕ.ಪ್ರ. ವಾರ್ತೆ ಮಂಗಳೂರು ಮಾ, 18-
ಇತ್ತೀಚೆಗಷ್ಟೆ ಅಸ್ತಿತ್ವಕ್ಕೆ ಬಂದಿರುವ ರಾಜ್ಯ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಅಧ್ಯಕ್ಷರು ಮತ್ತು ಸದಸ್ಯರ ನಡುವೆ ಭಿನ್ನಮತ ಉಂಟಾಗಿದ್ದು, ಅಧ್ಯಕ್ಷ ಎನ್.ಎಸ್. ದೇವಿಪ್ರಸಾದ್ ಅವರನ್ನು ಬದಲಾಯಿಸಬೇಕೆಂದು ಕೆಲವು ಸದಸ್ಯರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
 ಅರೆಭಾಷೆ ಅಕಾಡೆಮಿಯಿಂದ ಸಾಧಕರಿಗೆ ಗೌರವ ಪ್ರಶಸ್ತಿ, ಪುರಸ್ಕಾರಗಳನ್ನು ಪ್ರದಾನ ಮಾಡುವ ಸಮಾರಂಭವನ್ನು ಫೆ.10ರಂದು ಮಡಿಕೇರಿಯಲ್ಲಿ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿತ್ತು. ಈ ಕಾರ್ಯಕ್ರಮವನ್ನು ಅಧ್ಯಕ್ಷರು ಮುಂದೂಡಿದ್ದರು. ಸದಸ್ಯರ ಅಭಿಪ್ರಾಯ ತೆಗೆದುಕೊಳ್ಳದೇ ಅಧ್ಯಕ್ಷರು ಏಕಪಕ್ಷೀಯವಾಗಿ ಕಾರ್ಯಕ್ರಮವನ್ನು ಮುಂದೂಡಿದ್ದಾರೆ ಎಂದು ಕೆಲವರು ಅಸಮಾಧಾನಗೊಂಡಿದ್ದರು. ಪರಿಣಾಮವಾಗಿ ಅಕಾಡೆಮಿ ಸದಸ್ಯರಾದ ತುಂತಜೆ ಗಣೇಶ್, ಚೆರಿಯಮನೆ ಚಂದ್ರಶೇಖರ್, ತಳೂರು ಕಿಶೋರ್ ಕುಮಾರ್, ಅಮೆ ಫಾಲಾಕ್ಷ, ಕುಂಞಟ್ಟಿ ಶಿವರಾಮ ಗೌಡ ಮೊದಲಾದವರು ಅಧ್ಯಕ್ಷ ಎನ್.ಎಸ್. ದೇವಿಪ್ರಸಾದ್ ಸಂಪಾಜೆ ವಿರುದ್ಧ ಕನ್ನಡ ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದು, ಅಧ್ಯಕ್ಷರನ್ನು ಬದಲಾಯಿಸುವಂತೆ ಒತ್ತಾಯಿಸಿದ್ದಾರೆ.
 ಅಕಾಡೆಮಿ ಸದಸ್ಯರ ಅಸಮಾಧಾನದ ಹಿನ್ನೆಲೆಯಲ್ಲಿ ಸಂಪಾಜೆಯಲ್ಲಿ ನಡೆದ ಅರೆಭಾಷೆ ಸಮ್ಮೇಳನ ಕುರಿತ ಸಭೆಯು ಯಾವೊಂದು ತೀರ್ಮಾನಗಳೂ ಇಲ್ಲದೆ ಮುಂದೂಡಲ್ಪಟ್ಟಿತ್ತು. ಈ ಎಲ್ಲ ಘಟನೆಗಳು ನಡೆದು ತಿಂಗಳಾಗುತ್ತಾ ಬಂದಿದ್ದರೂ ಅಧ್ಯಕ್ಷರು ಮತ್ತು ಸದಸ್ಯರ ನಡುವೆ ಸೌಹಾರ್ದ ಮಾತುಕತೆ ನಡೆದಿಲ್ಲ ಎನ್ನಲಾಗುತ್ತಿದೆ.
ಸಚಿವರು, ಮಾಜಿ ಸಿಎಂ ಹೇಳಿದ್ದರು: ಫೆ.10ರ ಕಾರ್ಯಕ್ರಮವನ್ನು ನಾನು ಏಕಪಕ್ಷೀಯವಾಗಿ ಮುಂದೂಡಿದ್ದಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಅಪ್ಪಚ್ಚು ರಂಜನ್ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರ ಸಲಹೆ ಮೇರೆಗೆ ಮುಂದೂಡಿದ್ದೆ. ನಾನೇ ಮುಂದೂಡಿದ್ದೆಂಬ ತಪ್ಪು ತಿಳವಳಿಕೆಯಿಂದ ನಾಲ್ವರು ಸದಸ್ಯರು ಸರ್ಕಾರಕ್ಕೆ ನನ್ನ ವಿರುದ್ಧ ಪತ್ರ ಬರೆದಿದ್ದರು. ಉಸ್ತುವಾರಿ ಸಚಿವರು, ಸ್ಪೀಕರ್ ಮತ್ತು ಮಾಜಿ ಮುಖ್ಯಮಂತ್ರಿಯನ್ನು ಕಂಡು ಮಾತನಾಡಿದ್ದೇನೆ, ಅಸಮಾಧಾನ ದೂರವಾಗಿದೆ. ಏ.23ರಂದು ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ಮಡಿಕೇರಿಯಲ್ಲಿ ನಡೆಸಲು ನಿರ್ಧರಿಸಿದ್ದೇವೆ ಎನ್ನುತ್ತಾರೆ ಅಧ್ಯಕ್ಷರು.

ವಿದೇಶಿ ಲಂಚಕ್ಕೆ ಕಡಿವಾಣ ಹಾಕುವ ಮಸೂದೆಗೆ ಒಪ್ಪಿಗೆ
ನವದೆಹಲಿ: ವಿದೇಶಿ ವ್ಯಕ್ತಿಗಳಿಂದ ಲಂಚ ಪಡೆಯುವ ಅಥವಾ ನೀಡುವುದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಅದರಂತೆ ವಿದೇಶಿ ಸರ್ಕಾರಿ ಅಧಿಕಾರಿಗಳಿಂದ ಲಂಚ ಪಡೆಯುವುದು ಅಥವಾ ನೀಡುವುದನ್ನು ಕ್ರಿಮಿನಲ್ ಅಪರಾಧವನ್ನಾಗಿ ಪರಿಗಣಿಸುವ ಮತ್ತು 7 ವರ್ಷದವರೆಗೆ ಜೈಲುಶಿಕ್ಷೆ ವಿಧಿಸಲು ಅವಕಾಶ ಮಾಡಿಕೊಡುವ ಕಾನೂನು ತಿದ್ದುಪಡಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ವಿದೇಶಿ ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರ ನಿಗ್ರಹ ಮತ್ತು ಅಂತಾರಾಷ್ಟ್ರೀಯ ಅಧಿಕಾರಿಗಳ  ಸಂಘಟನೆಗಳ ಮಸೂದೆ- 2011ರ ತಿದ್ದುಪಡಿಗೆ ಸೋಮವಾರ ಸಚಿವ ಸಂಪುಟದ ಅನುಮೋದನೆ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಈ ಕಾನೂನಿಗೆ ಸಂಸತ್ತಿನ ಅನುಮೋದನೆ ಸಿಕ್ಕರೆ ವಿದೇಶಿ ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸಲಿದೆ. ಈ ಮಸೂದೆಯನ್ನು ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ.
ಎಲೆಕ್ಟ್ರಾನಿಕ್ ಮಸೂದೆ: ಅಗತ್ಯ ಸೇವೆಗಳನ್ನು ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಒದಗಿಸುವ ಮಸೂದೆಗೂ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಅದರಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಾಸ್‌ಪೋರ್ಟ್, ಡ್ರೈವಿಂಗ್ ಲೈಸನ್ಸ್, ರೇಷನ್‌ಕಾರ್ಡ್‌ನಂಥ ಸೇವೆಗಳನ್ನು ಎಂಟು ವರ್ಷದೊಳಗೆ ಎಲೆಕ್ಟ್ರಾನಿಕ್ ಮೂಲಕ ಒದಗಿಸಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.