ದಕ್ಷಿಣ ಕನ್ನಡ

ತಿದ್ದುಪಡಿಗೇ ತಿದ್ದುಪಡಿ!

Published On :

ಮಂಗಳೂರು: ನಿವೃತ್ತ ಅಧಿಕಾರಿಗಳಿಗೆ ಹುದ್ದೆ ತಪ್ಪಿಸಲು ಪಿಲಿಕುಳ ನಿಸರ್ಗಧಾಮದ ಬೈ-ಲಾಕ್ಕೆ ಜಿಲ್ಲಾಧಿಕಾರಿ ತಿದ್ದುಪಡಿ ತಂದಿದ್ದರು. ಆದರೆ ಹುದ್ದೆ ಆಕಾಂಕ್ಷಿಗಳ ಮುಖ್ಯಮಂತ್ರಿಗಳ ಶಿಫಾರಸು ತಂದು ತಿದ್ದುಪಡಿಯನ್ನೇ ಬದಲಿಸಿದರು! ಇತ್ತ ತಿದ್ದುಪಡಿ ಮಾಡಿದ ಜಿಲ್ಲಾಧಿಕಾರಿ ವರ್ಗವಾದರು!
 ಪ್ರವಾಸಿ ತಾಣ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಆಡಳಿತ ನಡೆಸುವ ಪಿಲಿಕುಳ ಸೊಸೈಟಿಯ ಒಳ ಪುರಾಣವಿದು.
 ಸೊಸೈಟಿ ಪೂರ್ಣ ಸರ್ಕಾರಿ ಸ್ವಾಮ್ಯಕ್ಕೆ ಸೇರಿದೆ. 18 ವರ್ಷಗಳಿಂದ ಕಾರ್ಯಕಾರಿ ನಿರ್ದೇಶಕರಾಗಿ ಹೆಚ್ಚುವರಿ ಕೆಲಸ ಮಾಡುತ್ತಿದ್ದ ಜೆ.ಆರ್. ಲೋಬೊ 4 ತಿಂಗಳ ಹಿಂದೆ ಸ್ವಯಂ ನಿವೃತ್ತಿ ಪಡೆಯುವ ವಿಚಾರ ಹೊರ ಬಿದ್ದಾಗ ಈ ಸ್ಥಾನಕ್ಕೆ ನಿವೃತ್ತ ಐಎಫ್‌ಎಸ್ ಅಧಿಕಾರಿ ಯು.ಟಿ. ಆಳ್ವ ಕಾರ್ಯಕಾರಿ ನಿರ್ದೇಶಕರಾಗಿ ಬರಲು ಯತ್ನಿಸಿದರು. ಆದರೆ ಅಂದಿನ ಡಿಸಿ ಡಾ. ಚೆನ್ನಪ್ಪಗೌಡರು ಇದಕ್ಕೆ ಸಮ್ಮತಿಸಲಿಲ್ಲ. ಆಳ್ವರು ಪ್ರಯತ್ನ ಮುಂದುವರಿಸಿದಾಗ '70 ವರ್ಷ ಮೇಲ್ಪಟ್ಟವರು ಕಾರ್ಯಕಾರಿ ನಿರ್ದೇಶಕರಾಗಬಾರದು ಎಂದು ಡಿಸಿ ಅಧ್ಯಕ್ಷತೆಯ ಕಾರ್ಯಕಾರಿ ಮಂಡಳಿ ತೀರ್ಮಾನ ಕೈಗೊಳ್ಳಲಾಗಿತ್ತು. ಚೆನ್ನಪ್ಪಗೌಡರ ವರ್ಗಾವಣೆಗೆ ಇದು ಒಂದು ಕಾರಣವಾಗಿತ್ತು.
 ಲೋಬೊ ನಿವೃತ್ತರಾದಾಗ ಮೂಡಾ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ಅವರನ್ನು ಕಾರ್ಯಕಾರಿ ನಿರ್ದೇಶಕರಾಗಿ ಮಂಡಳಿ ಆಯ್ಕೆ ಮಾಡಿತು. ಆದರೆ ಆಳ್ವರು ಸುಮ್ಮನೆ ಕೂರಲಿಲ್ಲ, ಸ್ಥಳೀಯ ಬಿಜೆಪಿ ಮುಖಂಡರ ಬೆಂಬಲ ಪಡೆದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಶಿಫಾರಸು ಪತ್ರವನ್ನೇ ತಂದರು.
'ಯು.ಟಿ.ಆಳ್ವರನ್ನು ನಿಯಮಾನುಸಾರ ನಿರ್ದೇಶಕರನ್ನಾಗಿಸಲು ಮುಖ್ಯಮಂತ್ರಿಗಳಿಂದ ನಿರ್ದೇಶಿತರಾಗಿದ್ದೇನೆ' ಎಂದು ಮುಖ್ಯಮಂತ್ರಿ ಕಾರ್ಯದರ್ಶಿ ಬರೆದ ಪತ್ರ ಜಿಲ್ಲಾಧಿಕಾರಿ ಕಚೇರಿಗೆ ಜನವರಿ ಅಂತ್ಯದಲ್ಲಿ ಬಂತು. ಆಗ ಅಲ್ಲಿಗೆ ಡಿಸಿಯಾಗಿ ಪ್ರಕಾಶ್ ಆಗಮಿಸಿದ್ದರು.
ಮುಖ್ಯಮಂತ್ರಿ ಶಿಫಾರಸು ಮಾಡಿದರೂ ಕಾರ್ಯಕಾರಿ ಮಂಡಳಿಯೇ ಅದಕ್ಕೆ ತಿದ್ದುಪಡಿ ಮಾಡಬೇಕು. ಇದುವರೆಗೆ ಸರ್ಕಾರಿ ನೌಕರರು ಹೆಚ್ಚುವರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ವೇತನ ತೆಗೆದುಕೊಳ್ಳುವುದಿಲ್ಲ ಎಂಬ ಆಳ್ವರ ಹೇಳಿಕೆ ಪರಿಗಣಿಸಿ 70 ವರ್ಷ ಮೇಲ್ಪಟ್ಟರೂ ಆಯ್ಕೆ ಮಾಡೋಣ ಎಂದು ಕಾರ್ಯಕಾರಿ ಮಂಡಳಿಯಲ್ಲಿ ತಿದ್ದುಪಡಿ ಮಾಡಲಾಯಿತು. ಈಗ ಯು.ಟಿ. ಆಳ್ವ ಕಾರ್ಯಕಾರಿ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಹೀಗಿದೆ ಆಡಳಿತ: 1995ರಲ್ಲಿ ಪಿಲಿಕುಳ ನಿಸರ್ಗಧಾಮ ಆರಂಭವಾಯಿತು. ಸೊಸೈಟಿ ರಚಿಸಿ ಮೊದಲ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕೇಂದ್ರ ಸ್ಥಾನೀಯ ಸಹಾಯಕ ಜೆ.ಆರ್.ಲೋಬೊ ಆಯ್ಕೆಯಾದರು.
 ಗವರ್ನಿಂಗ್ ಕೌನ್ಸಿಲ್ (ಕಾರ್ಯಕಾರಿ ಮಂಡಳಿ)ಗೆ ಜಿಲ್ಲಾಧಿಕಾರಿ ಅಧ್ಯಕ್ಷರು. ಇದರ ಅಡಿ ಆಡಳಿತ ಸಮಿತಿ ಇದ್ದು, ಏಳು ಮಂದಿ ಸದಸ್ಯರು. ಮೂವರು ಕಾರ್ಯಕಾರಿ ಮಂಡಳಿ ನಾಮನಿರ್ದೇಶಿತ ಸದಸ್ಯರು. ಮೃಗಾಲಯ ನಿರ್ದೇಶಕರು, ಸಸ್ಯಕ್ಷೇತ್ರ ನಿರ್ದೇಶಕರು, ಸಂಸ್ಕೃತಿ ಗ್ರಾಮದ ಅಧ್ಯಕ್ಷರು, ಸೊಸೈಟಿ ಕಾರ್ಯಕಾರಿ ನಿರ್ದೇಶಕರು, ಪಾಲಿಕೆ ಆಯುಕ್ತರು ಇದರ ಸದಸ್ಯರು. ಇವರೆಲ್ಲ ಸೇರಿ ಆಡಳಿತ ಸಮಿತಿಗೆ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ.
 ಕೇಂದ್ರ, ರಾಜ್ಯದಿಂದ ಯೋಜನೆ ತಯಾರಿಸಿ ಸರ್ಕಾರದಿಂದ ಅನುದಾನ ಮಂಜೂರು ಪಡೆದು ನಿಸರ್ಗಧಾಮ ಅಭಿವೃದ್ಧಿಪಡಿಸಲಾಗುತ್ತದೆ. 18 ವರ್ಷದಲ್ಲಿ 60 ಕೋಟಿ ವಿನಿಯೋಗಿಸಲಾಗಿದೆ ಎನ್ನುತ್ತಾರೆ ನಿವೃತ್ತ ಕಾರ್ಯಕಾರಿ ನಿರ್ದೇಶಕ ಜೆ.ಆರ್.ಲೋಬೊ.

ಅನರ್ಹರು ರಾಜಕೀಯ ಒತ್ತಡ ತಂದು ಸೇರಿಕೊಳ್ಳಬಾರದು ಎಂಬ ದೃಷ್ಟಿಯಲ್ಲಿ ತಿದ್ದುಪಡಿ ಮಾಡಲಾಗಿತ್ತು. ಅರಣ್ಯ ಇಲಾಖೆಯಲ್ಲಿ ರಾಜ್ಯಕ್ಕೆ ಸೀನಿಯರ್ ಗ್ರೇಡ್ ಅಧಿಕಾರಿ ಆಗಿದ್ದವರು. ಅನುಭವಿಗಳು, ಸದೃಢವಾಗಿದ್ದಾರೆ. ಸಂಬಳವಿಲ್ಲದೆ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ. ಸದುದ್ದೇಶದಿಂದ ಅವರಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದೇವೆ.
- ಪ್ರಕಾಶ್, ಜಿಲ್ಲಾಧಿಕಾರಿ

- ಜಿತೇಂದ್ರ ಕುಂದೇಶ್ವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.