ತ್ಯಾಜ್ಯ ವ್ಯಾಜ್ಯದ್ದೇ ದೊಡ್ಡ ಸವಾಲು
ಬಿಜೆಪಿ ಆಡಳಿತದಲ್ಲಿ ಆರಂಭಿಸಿದ ತ್ಯಾಜ್ಯ ಸಂಸ್ಕರಣಾ ಘಟಕ ಯೋಜನೆಗೆ ಕಾಂಗ್ರೆಸ್ ವಿರೋಧವಿತ್ತು
ಬಂಟ್ವಾಳ: ಕಳೆದು ಹೋದ 60 ತಿಂಗಳ ಅವಧಿಯಲ್ಲಿ ಬಂಟ್ವಾಳ ಪುರಸಭಾ ಆಡಳಿತವನ್ನು ಕಾಡಿದ ತ್ಯಾಜ್ಯ ವಿಲೇವಾರಿ ಸಮಸ್ಯೆ, ಇದೀಗ ಮತ್ತೆ ಮುಂದುವರಿದಿದೆ.
ಐದು ವರ್ಷವೂ ತ್ಯಾಜ್ಯ ವ್ಯಾಜ್ಯಕ್ಕೆ ಇತಿಶ್ರೀ ಹಾಡಬೇಕು ಎಂದು ಕಳೆದ ಪುರಸಭಾ ಆಡಳಿತ ಯೋಚನೆ ನಡೆಸಿತ್ತಾದರೂ, ಲಕ್ಷಾಂತರ ರುಪಾಯಿ ಹಣ ಖರ್ಚಾದರೂ, ಆಡಳಿತದ ಅವಧಿ ಮುಗಿದರೂ ತ್ಯಾಜ್ಯ ವಿಲೇವಾರಿಗೆ ಶಾಶ್ವತ ಮುಕ್ತಿ ದೊರಕಿಸಲಾಗಲಿಲ್ಲ. ಆದರೆ, ಈ ಹಂತದಲ್ಲಿ ಪುರಸಭಾ ಆಡಳಿತದಲ್ಲಿ ವಿಪಕ್ಷ ಸ್ಥಾನದಲ್ಲಿ ಕುಳಿತು ಚಂದ ನೋಡುತ್ತಿದ್ದವರು ಇನ್ನು ಮುಂದೆ ಈ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ.
ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲೂ ಸಮಸ್ಯೆಗಳು ಸಾಕಷ್ಟಿವೆ. ಇದರ ನಿರ್ವಹಣೆ ಸುಲಭ ಸಾಧ್ಯವೂ ಅಲ್ಲ. ರಾಜಕೀಯ ಪಕ್ಷಗಳ ಕಸರತ್ತುಗಳ ನಡುವೆ ಹಲವೆಡೆಗಳಲ್ಲಿ ಜನತೆಗೆ ಅಗತ್ಯವಿರುವುದು ತಲುಪದೇ ಇದ್ದರೆ, ಇನ್ನೂ ಕೆಲವೆಡೆಗಳಲ್ಲಿ ಅಗತ್ಯವಿಲ್ಲದ ಯೋಜನೆಗಳು ಜಾರಿಯಾಗುತ್ತಿದೆ. ತ್ಯಾಜ್ಯ ವಿಲೇವಾರಿ ಸಮಸ್ಯೆ ಬಂಟ್ವಾಳ ಪುರಸಭೆಯ ಎಲ್ಲ ಸಾಮಾನ್ಯ ಸಭೆಯ ಮುಖ್ಯ ಚರ್ಚಾ ವಿಷಯವಾಗಿತ್ತಾದರೂ ಈ ಚರ್ಚೆಗೆ ಇನ್ನೂ ಅಂಕಿತಬಿದ್ದಿಲ್ಲ.
ಇದು ಬಂಟ್ವಾಳ ಕಸ ಪುರಾಣ: ಬಂಟ್ವಾಳ ಪುರಸಭೆಯ ತ್ಯಾಜ್ಯ ವಿಲೇವಾರಿ ಸಮಸ್ಯೆ ಕಳೆದ ಮೂರ್ನಾಲ್ಕು ವರ್ಷಗಳಿಂದ ತಾರಕಕ್ಕೇರಿದೆ. ವಾರ್ಡ್ ವಾರ್ಡ್ಗಳಲ್ಲಿ ಚದುರಿ ಬೀಳುತ್ತಿರುವ ಕಸದ ರಾಶಿಗಳನ್ನು ವಿಲೇವಾರಿ ಮಾಡುವ ಭರದಲ್ಲಿ ಪುರಸಭೆ ತ್ಯಾಜ್ಯಗಳನ್ನೆಲ್ಲಾ ಮೊದಮೊದಲು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿಲೇವಾರಿ ಮಾಡುತ್ತಿತ್ತು. ಇದಕ್ಕೆ ಮನಪಾ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತ್ಯಾಜ್ಯ ಬಂಟ್ವಾಳದಲ್ಲೇ ಬಾಕಿಯಾಯಿತು.
ಬಿ.ಸಿ. ರೋಡ್ನ ಮುಖ್ಯವೃತ್ತದ ಬಳಿ ತ್ಯಾಜ್ಯವನ್ನು ರಾಶಿ ಹಾಕುತ್ತಿದ್ದ ಪುರಸಭೆಯ ಬಗ್ಗೆಯೂ ಜನತೆ ಆಕ್ರೋಶ ವ್ಯಕ್ತಪಡಿಸಿತ್ತು. ಈ ಕಾರಣಕ್ಕೆ ಹತ್ತಿರದ ರೇಲ್ವೆ ಟ್ರ್ಯಾಕ್ ಪಕ್ಕಕ್ಕೆ ಕಸಗಳನ್ನು ಸಾಗಿಸಿ ಪುರಸಭೆ ನಾಗರಿಕರ ಹಿಡಿ ಶಾಪದಿಂದ ತಪ್ಪಿಸಿಕೊಂಡಿತು. ಆದರೆ, ಆ ಬಳಿಕ ನಡೆದದ್ದೇ ಬೇರೆ.
ರೇಲ್ವೆ ಜಮೀನಿನಲ್ಲಿ ತ್ಯಾಜ್ಯ ರಾಶಿ ಹಾಕಿದ್ದಕ್ಕೆ ರೇಲ್ವೆ ಇಲಾಖೆ ಆಕ್ರೋಶ ವ್ಯಕ್ತಪಡಿಸಿ, ರೇಲ್ವೆ ಪೊಲೀಸರ ನೆರವಿನೊಂದಿಗೆ ಪುರಸಭಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಅವರಿಂದಲೇ ತ್ಯಾಜ್ಯ ಕ್ಲೀನ್ ಮಾಡಿಸಿದರು. ಕಸ ರಾಶಿ ಹಾಕುತಿದ್ದ ಪುರಸಭೆಯ ಟ್ರ್ಯಾಕ್ಟರ್ ಅನ್ನು ವಶಕ್ಕೆ ತೆಗೆದುಕೊಂಡರು. ಈ ಹಂತದಲ್ಲಿ ಪುರಸಭೆ ತನ್ನ ನಡವಳಿಕೆಯಿಂದ ತಲೆತಗ್ಗಿಸುವಂತಾಗಿತ್ತು.
ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಯೋಜನೆ: ಈ ಎಲ್ಲದರ ನಡುವೆ ಪುರಸಭಾ ಆಡಳಿತ ವೈಜ್ಞಾನಿಕ ಮಾದರಿಯ ತ್ಯಾಜ್ಯ ಸಂಸ್ಕರಣಾ ಘಟಕವನ್ನು ನಿರ್ಮಿಸುವ ನಿಟ್ಟಿನಲ್ಲಿ ಮುಂದಡಿಯಿಟ್ಟಿತು. ಮೊದಲು ಈ ಘಟಕ ಸ್ಥಾಪನೆಗೆ ಕೈಕುಂಜೆಯನ್ನು ಆಯ್ಕೆ ಮಾಡಿತ್ತಾದರೂ, ಸ್ಥಳೀಯರ ವಿರೋಧ ಬಂದ ಹಿನ್ನೆಲೆಯಲ್ಲಿ ಸಜಿಪನಡು ಗ್ರಾಮದ ಕಂಚಿನಡ್ಕ ಪದವನ್ನು ಆಯ್ಕೆ ಮಾಡಿತು.
ಆರಂಭದಲ್ಲಿ ಸ್ಥಳೀಯರ ವಿರೋಧವಿತ್ತಾದರೂ, ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಮಾಡಬೇಕು ಎನ್ನುವ ಸುಪ್ರೀಂ ಕೋರ್ಟ್ ಆದೇಶವನ್ನು ಮುಂದಿಟ್ಟುಕೊಂಡು ಪುರಸಭಾ ಆಡಳಿತ ತನ್ನ ಕಾರ್ಯಮುಂದುವರಿಸಿತ್ತು.
ಕಾಂಗ್ರೆಸ್ ವಿರೋಧ: ಘಟಕದ ಆವರಣ ಗೋಡೆ ನಿರ್ಮಾಣವಾಗುತ್ತಲೇ, ಘಟಕ ಸ್ಥಾಪನೆ ವಿಚಾರದಲ್ಲಿ ರಾಜಕೀಯ ಜೋರಾಯಿತು. ಸ್ಥಳೀಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಬೆಂಬಲಿತರು ಘಟಕ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದರೆ, ಸುಪ್ರೀಂ ಕೋರ್ಟ್ ಆದೇಶವನ್ನು ಮುಂದಿಟ್ಟುಕೊಂಡು ಕಾಮಗಾರಿ ಬಿರುಸಿನಿಂದ ಸಾಗಿತ್ತು. ಈ ನಡುವೆ ರಾಜ್ಯ ಉಚ್ಚ ನ್ಯಾಯಾಲಯ ಈ ಘಟಕ ನಿರ್ಮಾಣ ಕಾರ್ಯಕ್ಕೆ ಕೆಲ ತಿಂಗಳ ಕಾಲ ತಡೆಯಾಜ್ಞೆ ನೀಡಿತ್ತು. ಆ ಬಳಿಕ ಸುಪ್ರೀಂ ಕೋರ್ಟ್ ಆದೇಶವನ್ನು ಎತ್ತಿ ಹಿಡಿದ ಹೈಕೋರ್ಟ್ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ಅನುಮತಿ ಕೊಟ್ಟಿತ್ತು. ಆದರೂ, ಕಾಂಗ್ರೆಸ್ ಬೆಂಬಲಿತರು ಘಟಕ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸುತ್ತಲೇ ಇದ್ದರು.
ಮಂಗಳೂರು ಶಾಸಕ ಯು.ಟಿ. ಖಾದರ್, ಜಿ.ಪಂ. ಸದಸ್ಯೆ ಮಮತಾ ಗಟ್ಟಿ, ಸ್ಥಳೀಯ ಗ್ರಾ.ಪಂ. ಅಧ್ಯಕ್ಷರು ಈ ಘಟಕ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದರೆ, ಬಂಟ್ವಾಳ ಪುರಸಭಾ ಅಧ್ಯಕ್ಷ ದಿನೇಶ ಭಂಡಾರಿ ನೇತೃತ್ವದ ಬಿಜೆಪಿ ಆಡಳಿತ ಇದರ ನಿರ್ಮಾಣಕ್ಕೆ ಪಟ್ಟು ಹಿಡಿದಿತ್ತು. ಮಾತ್ರವಲ್ಲದೆ ಅಧಿಕಾರಿಗಳ ಬಲದೊಂದಿಗೆ ತನ್ನ ಕಾರ್ಯ ನಡೆಸಿದೆ. ಕಾಮಗಾರಿ ಭರದಿಂದ ಸಾಗಿದ್ದು, ಭಾಗಶಃ ಪೂರ್ತಿಗೊಂಡಿದೆ.
ಕಾಂಗ್ರೆಸ್ನ ಮುಂದಿನ ನಡೆ...?: ಪುರಸಭಾ ಆಡಳಿತ ಕಾಂಗ್ರೆಸ್ ವಶವಾಗುತ್ತಲೇ ಬಂಟ್ವಾಳ ಶಾಸಕ ರಮಾನಾಥ ರೈ, ಬಂಟ್ವಾಳ ಪುರಸಭೆಯನ್ನು ಸ್ವಚ್ಛ, ಸುಂದರ ನಗರವನ್ನಾಗಿಸುವುದಾಗಿ ತಿಳಿಸಿದ್ದು, ಕಂಚಿನಡ್ಕ ಪದವು ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ವಿರೋಧವಿಲ್ಲ ಎಂದು ಹೇಳಿಕೆ ಕೊಟ್ಟಿದ್ದು, ಒಳ್ಳೆ ಕೆಲಸಕ್ಕೆ ವಿರೋಧ ಮಾಡುವುದಿಲ್ಲ ಎಂದಿದ್ದಾರೆ. ಆದರೆ, ಸ್ಥಳೀಯ ನಿವಾಸಿಗಳಿಗೆ ನ್ಯಾಯ ಒದಗಿಸದೆ ಇದ್ದಲ್ಲಿ ಹೋರಾಟ ಮುಂದುವರಿಸುತ್ತೇವೆ, ನೂತನ ಆಡಳಿತ ಅಧಿಕಾರಕ್ಕೆ ಬಂದ ಬಳಿಕ ಈ ಬಗ್ಗೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ಮಂಗಳೂರು ಶಾಸಕ ಯು.ಟಿ. ಖಾದರ್ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಆದರೆ, ಬಂಟ್ವಾಳ ಜನತೆ ಒತ್ತಾಸೆ ಬೇರೆಯೇ ಇದೆ. ರಾಜಕೀಯ ಕಸರತ್ತುಗಳನ್ನೆಲ್ಲಾ ದೂರವಿಡಿ, ಬಂಟ್ವಾಳ ಪುರಸಭೆಯನ್ನು ಸ್ವಚ್ಛ ನಗರವಾಗಿಸಿ ಎನ್ನುವ ಆಶಯಗಳು ಯಾವಾಗ ನಿಜವಾಗುತ್ತದೆಯೋ ಕಾದು ನೋಡಬೇಕು.
- ಮೌನೇಶ್ ವಿಶ್ವಕರ್ಮ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

