ಅರ್ಧ ಶತಮಾನ ಕಳೆದರೂ ಕಳಚದ ಮೀಸಲು ಕ್ಷೇತ್ರ ಪಟ್ಟ
ದುರ್ಗಾಕುಮಾರ್ ನಾಯರ್ಕೆರೆ
ಸುಳ್ಯ: ಸುಳ್ಯ ತಾಲೂಕು ರಚನೆಯಾಗಿ ಸುವರ್ಣ ಮಹೋತ್ಸವ ಆಚರಿಸಿಕೊಳ್ಳಲು ಎರಡು ವರ್ಷ ಬಾಕಿಯಿದೆ. ಸುಳ್ಯ ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದು ಅರ್ಧ ಶತಮಾನ ಕಳೆದಿದೆ. ವಿಶೇಷವೆಂದರೆ ಇಷ್ಟು ವರ್ಷ ಸಂದರೂ ಇನ್ನೂ ಸುಳ್ಯ ಮೀಸಲು ಕ್ಷೇತ್ರವಾಗಿಯೇ ಉಳಿದಿರುವುದು.
1957ರಲ್ಲಿ ಕರ್ನಾಟಕ ಸರ್ಕಾರ ಅಸ್ತಿತ್ವಕ್ಕೆ ಬರಲು ವಿಧಾನಸಭಾ ಚುನಾವಣೆಗಳು ನಡೆದಾಗ ಸುಳ್ಯ ವಿಧಾನಸಭಾ ಕ್ಷೇತ್ರ ರಚನೆಗೊಂಡಿರಲಿಲ್ಲ. ಸುಳ್ಯ ತಾಲೂಕು ಕೂಡ ಆಗ ಅಸ್ತಿತ್ವದಲ್ಲಿರಲಿಲ್ಲ. ಸುಳ್ಯವು ಪುತ್ತೂರು ವಿಧಾನಸಭಾ ಕ್ಷೇತ್ರದೊಂದಿಗೇ ಇತ್ತು.
ಮೊದಲ ಚುನಾವಣೆಯಲ್ಲಿ ಸುಳ್ಯದವರೇ ಜಯಭೇರಿ: ಆ ಸಮಯದಲ್ಲಿ ಪುತ್ತೂರು ದ್ವಿಸದಸ್ಯ ಕ್ಷೇತ್ರವಾಗಿದ್ದು, ಇದರಲ್ಲಿ 1 ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು. ವಿಶೇಷವೆಂದರೆ ಪ್ರಥಮ ಬಾರಿಗೆ ಚುನಾವಣೆ ನಡೆದಾಗ ಸುಳ್ಯ ಪರಿಸರದವರೇ ಇಬ್ಬರು ಶಾಸಕರಾಗಿ ಆಯ್ಕೆಗೊಂಡಿದ್ದರು. ಬಾಳುಗೋಡು ಗ್ರಾಮದವರಾಗಿದ್ದು ಆಗ ಪುತ್ತೂರಿನಲ್ಲಿ ನ್ಯಾಯವಾದಿಯಾಗಿದ್ದ ಕೂಜುಗೋಡು ವೆಂಕಟ್ರಮಣ ಗೌಡ ಮತ್ತು ಸುಳ್ಯದಲ್ಲಿ ಶಿಕ್ಷಕರಾಗಿದ್ದ ಎಸ್. ಸುಬ್ಬಯ್ಯ ನಾಯ್ಕ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದರು. ಅವರಿಬ್ಬರೂ ಕಾಂಗ್ರೆಸ್ ಪ್ರತಿನಿಧಿಸಿದ್ದರು. ಅವರೆದುರು ಜನಸಂಘದ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಉರಿಮಜಲು ರಾಮಭಟ್, ಗಬ್ಬಲ್ಕಜೆ ಐತ್ತಪ್ಪ ನಾಯ್ಕ್ ಹಾಗೂ ಸಿಪಿಐನ ಸಂಜೀವ ರೈ ಪರಾಭವಗೊಂಡಿದ್ದರು.
1962ರಲ್ಲಿ ದ್ವಿಸದಸ್ಯ ಪದ್ಧತಿ ರದ್ದುಗೊಂಡು ಒಂದು ಕ್ಷೇತ್ರದಿಂದ ಒಬ್ಬರನ್ನೇ ಶಾಸಕರನ್ನಾಗಿ ಆರಿಸುವ ಪದ್ಧತಿ ಜಾರಿಗೆ ಬಂತು. ಹೀಗಾಗಿ ಸುಳ್ಯ ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಯಿತು.
ಪರಿಶಿಷ್ಟ ಪಂಗಡ: 1962ರಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾಗಿತ್ತು. ಎಸ್. ಸುಬ್ಬಯ್ಯ ನಾಯ್ಕ ಶಾಸಕರಾಗಿ ಮರು ಆಯ್ಕೆಗೊಂಡರು. ಸ್ವತಂತ್ರ ಪಕ್ಷದ ಅಭ್ಯರ್ಥಿಯನ್ನು ಅವರು ಸೋಲಿಸಿದ್ದರು. 1967ರ ಚುನಾವಣೆಯ ವೇಳೆಗೆ ಈ ಕ್ಷೇತ್ರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಯಿತು. ಪರಿಶಿಷ್ಟ ಜಾತಿ ಜನ ವರ್ಗ ಹೆಚ್ಚಾಗಿ ಇರುವ ಕ್ಷೇತ್ರ ಇದಾದುದರಿಂದ ಡಿ ಲಿಮಿಟೇಶನ್ ಕಮಿಟಿಯ ಶಿಫಾರಸಿನಂತೆ ರಾಜ್ಯದ 36 ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳಲ್ಲಿ ಇದೂ ಒಂದಾಯಿತು.
ಅಂದಿನಿಂದ ಇಂದಿನವರೆಗೂ ಈ ಕ್ಷೇತ್ರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿಯೇ ಉಳಿದಿದೆ. 1967ರಲ್ಲಿ ಸ್ವತಂತ್ರ ಪಾರ್ಟಿಯ ಎ. ರಾಮಚಂದ್ರ, 1972ರಲ್ಲಿ ಕಾಂಗ್ರೆಸ್ನ ಪಿ.ಡಿ. ಬಂಗೇರ, 1978ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಎ. ರಾಮಚಂದ್ರ, 1983ರಲ್ಲಿ ಬಿಜೆಪಿಯ ಬಾಕಿಲ ಉಕ್ರಪ್ಪ, 1985 ಮತ್ತು 1989ರಲ್ಲಿ ಕಾಂಗ್ರೆಸಿನ ಕೆ. ಕುಶಲ ಇಲ್ಲಿ ಶಾಸಕರಾಗಿದ್ದಾರೆ. 1994ರಿಂದ ಬಿಜೆಪಿಯ ಎಸ್. ಅಂಗಾರರೇ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಬದಲಾವಣೆಯ ಕೂಗು: ಹೀಗೆ ಸುಮಾರು ಅರ್ಧ ಶತಮಾನಕ್ಕಿಂತಲೂ ಜಾಸ್ತಿ ಈ ಕ್ಷೇತ್ರ ಮೀಸಲು ಕ್ಷೇತ್ರವಾಗಿಯೇ ಉಳಿದಿದ್ದರೂ ಬದಲಾವಣೆಯ ಕೂಗು ಅಲ್ಲೊಂದು ಇಲ್ಲೊಂದು ಕೇಳಿ ಬಂದದ್ದು ಬಿಟ್ಟರೆ ಪ್ರಬಲ ಜನಾಂದೋಲನವಾಗಿ ರೂಪುಗೊಂಡಿರಲಿಲ್ಲ. ಕೆಲವರು ಈ ಕುರಿತು ನ್ಯಾಯಾಲಯ ಮೆಟ್ಟಿಲೇರುವ ಪ್ರಯತ್ನವನ್ನೂ ಮಾಡಿದ್ದರು. ಆದರೂ ಸುಳ್ಯ ಮೀಸಲು ಕ್ಷೇತ್ರವಾಗಿಯೇ ಮುಂದುವರಿದಿದೆ.
ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಜಾರಿಗೆ ಬಂದ ಈ ಮೀಸಲು ವ್ಯವಸ್ಥೆಯಿಂದ ತಮ್ಮ ಸಮುದಾಯದವರೇ ಈ ಕ್ಷೇತ್ರವನ್ನು ಪ್ರತಿನಿಧಿಸಿ ನಮ್ಮ ಉದ್ಧಾರ ಮಾಡುತ್ತಾರೆ ಎಂಬ ಮಾತು ಒಂದೆಡೆ ಹುಸಿಯಾಗಿದ್ದರೆ, ಮತ್ತೊಂದೆಡೆ ಮೀಸಲು ಕ್ಷೇತ್ರ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಕಾರಣಕ್ಕೆ ಈ ಕ್ಷೇತ್ರ ಸರ್ಕಾರಿ ಮಟ್ಟದಲ್ಲಿ ಅವಗಣನೆಗೆ ಒಳಗಾಗುತ್ತಿದೆ ಎಂಬುದು ಹಲವು ದಶಕಗಳ ಆಡಳಿತ ಕಲಿಸಿದ ಪಾಠ.
ಈ ಸಿಹಿ- ಕಹಿ ನೆನಪುಗಳ ಮಧ್ಯೆಯೇ ಸುಳ್ಯ ಮೀಸಲು ಕ್ಷೇತ್ರ ಮತ್ತೊಂದು ಚುನಾವಣೆಗೆ ಸಜ್ಜಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

