ದಕ್ಷಿಣ ಕನ್ನಡ

ಪ್ರಚಾರಸಭೆ ಕಡಿತ, ಸುದ್ದಿಗೋಷ್ಠಿ, ಮನೆ ಭೇಟಿಗೆ ಸೀಮಿತ

Published On :

ಮಂಗಳೂರು: ಬಹಿರಂಗ ಪ್ರಚಾರ ಸಭೆಗಳ ಅಬ್ಬರ ಇಲ್ಲ, ಪ್ಲೆಕ್ಸ್ ಬ್ಯಾನರ್ಗಳ ವೈಭವ ಇಲ್ಲ. ಏನಿದ್ದರೂ ಸುದ್ದಿಗೋಷ್ಠಿ ಮತ್ತು ಮನೆ, ಮನೆ ಭೇಟಿ. ಬೆಂಬಲಿಗರಿಗೆ, ಕಾರ್ಯಕರ್ತರಿಗೆ ಗುಪ್ತ, ಗುಪ್ತ ಧನಸಹಾಯ...
 ಹಿಂದೆಲ್ಲ ಚುನಾವಣೆ ಎಂದರೆ ಅಲ್ಲಲ್ಲಿ ಬಹಿರಂಗ ಪ್ರಚಾರ ಸಭೆಗಳು, ರ್ಯಾಲಿಗಳು ಯಥೇಚ್ಛವಾಗಿತ್ತು. ಈ ಬಾರಿ ಮಂಗಳೂರಲ್ಲಿ ಕೇವಲ ಎರಡು ಬಹಿರಂಗ ಬೃಹತ್ ಪ್ರಚಾರ ಸಭೆ ನಡೆದಿದೆ. ರಾಷ್ಟ್ರೀಯ ಕಾಂಗ್ರೆಸ್  ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಬಿಜೆಪಿ ವರ್ಚಸ್ವಿ ನಾಯಕ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನೆಹರು ಮೈದಾನದಲ್ಲಿ ಬಹಿರಂಗ ಪ್ರಚಾರ ನಡೆಸಿ ಹೋಗಿದ್ದಾರೆ. ಬಿಜೆಪಿ ಮುಖಂಡ, ರಾಜ್ಯಸಭೆ ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಬಂದಿದ್ದರೂ ಸುದ್ದಿಗೋಷ್ಠಿಗೆ ಸೀಮಿತಗೊಳಿಸಿದರು. ಚುನಾವಣೆ ವೆಚ್ಚ ತಗ್ಗಿಸಲು ಜೇಟ್ಲಿ ಖಾಸಗಿ ಸಮಾರಂಭದಲ್ಲಿ ಮಾತನಾಡಿದರು.
 ಪ್ರಚಾರ ನಡೆಸಲು, ರ್ಯಾಲಿಗೆ ಚುನಾವಣಾಧಿಕಾರಿ ಅನುಮತಿ ಕಡ್ಡಾಯವಾಗಿರುವುದು ಮತ್ತೆ ಪ್ರಚಾರ ಸಭೆಯ ವೆಚ್ಚವನ್ನು ಅಭ್ಯರ್ಥಿ ಮೇಲೆ ಚುನಾವಣೆ ವೀಕ್ಷಕರು ಶ್ಯಾಡೋ ರೇಟ್ ಆಧಾರದಲ್ಲಿ ಹಾಕುತ್ತಿರುವ ಹಿನ್ನೆಲೆಯಲ್ಲಿ ಬಹಿರಂಗ ಪ್ರಚಾರ ಸಭೆಗಳಲ್ಲಿ ಭಾರಿ ಕುಸಿತ ಕಂಡಿದೆ.
ಲೋಬೋ ಹೆಸರೇ ಇಲ್ಲ: ಸೋನಿಯಾ ಗಾಂಧಿ ನಡೆಸಿದ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೋ ವೇದಿಕೆಯಲ್ಲಿ ಕುಳಿತುಕೊಳ್ಳಲು ಅವಕಾಶ ಲಭಿಸುವುದು ಬಿಡಿ, ಹೆಸರೇ ಇರಲಿಲ್ಲ. ಹೆಸರೆತ್ತಿದರೆ ಎಲ್ಲಿ ಚುನಾವಣೆ ವೀಕ್ಷರು ಸಭೆಯ ವೆಚ್ಚ ಹಾಕುತ್ತಾರೊ ಎಂಬ ಬೆದರಿಕೆ ಇದಕ್ಕೆ ಕಾರಣ. 50 ಲಕ್ಷ ವೆಚ್ಚ ಅಭ್ಯರ್ಥಿ ಮೇಲೆ ಭರಿಸಿದರೆ ಗೆದ್ದರೂ ಶಾಸಕ ಸ್ಥಾನ ಕಳೆದುಕೊಳ್ಳಬೇಕಾಗಬಹುದು ಎಂಬ ಭೀತಿ ಇತ್ತು. ಬಹಿರಂಗ ಪ್ರಚಾರ ಅಂತ್ಯದ ದಿನ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೊ ಉರ್ವ ಮಾರ್ಕೆಟ್ ಬಳಿ ಸಭೆ ನಡೆಸಿದ್ದಾರೆ.
 ಮೋದಿ ಕಾರ್ಯಕ್ರಮ ಸರಳವಾಗಿತ್ತು. ಅಲ್ಲದೆ ಎಲ್ಲ ಅಭ್ಯರ್ಥಿಗಳನ್ನು ವೇದಿಕೆಗೆ ಕರೆಸುವ ಮೂಲಕ ಸಭೆಯ ಖರ್ಚು ಎಲ್ಲ ಅಭ್ಯರ್ಥಿಗಳಿಗೆ ಹಂಚಿಹೋಗಿದೆ.
ಸುದ್ದಿಗೋಷ್ಠಿ ಏರಿಕೆ: ಪತ್ರಿಕಾಗೋಷ್ಠಿಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡಿದೆ. ಒಂದೇ ಪಕ್ಷದವರು ದಿನಕ್ಕೆ 3,4 ಬಾರಿ ಸುದ್ದಿಗೋಷ್ಠಿ ಕರೆದದ್ದೂ ಇದೆ. ಆದರೆ ಅಭ್ಯರ್ಥಿಗಳು ಸುದ್ದಿಗೋಷ್ಠಿ ಕರೆದಿರುವುದು ವಿರಳ. ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿ ಒಂದೇ ದಿನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸುದ್ದಿಗೋಷ್ಠಿ ನಡೆಸಿ ದಾಖಲೆ ಮಾಡಿದ್ದಾರೆ.
 ಮೋದಿ ಬರುವ ಮುಂಚೆ ಪೂಜಾರಿ ಸುದ್ದಿಗೋಷ್ಠಿ ಮಾಡಿದರು. ಮೋದಿ ಕಾರ್ಯಕ್ರಮ ಮರುದಿನ ಪೂಜಾರಿ ಸುದ್ದಿಗೋಷ್ಠಿ ಕರೆಯುತ್ತಾರೆ ಎಂದು ಜನ ಆಡಿಕೊಂಡರು ಅಚ್ಚರಿ ಎಂದರೆ ಮೋದಿ ಭಾಷಣ ಮುಗಿದ ತಕ್ಷಣ ಪೂಜಾರಿ ಸುದ್ದಿಗೋಷ್ಠಿ ಕರೆದಿದ್ದರು! ಇವರಿಗೆ ಸ್ಪರ್ಧೆ ನೀಡುವಂತೆ ಬಿಜೆಪಿಯ ಕ್ಯಾ.ಗಣೇಶ್ ಕಾರ್ನಿಕ್ ಬಿಜೆಪಿ ಸಾಧನೆಗಳ ಬಗ್ಗೆ ಸುದ್ದಿಗೋಷ್ಠಿಗಳನ್ನು ಓತಪ್ರೋತವಾಗಿ ಕರೆಯುತ್ತಿದ್ದರು.

ಪ್ರಚಾರ ನಿಮಿತ್ತಂ ಬಹುಕೃತ ವೇಷಂ
ಜನರನ್ನು ಮುಟ್ಟಲು ಅಭ್ಯರ್ಥಿಗಳು ನಾನಾ ಕಸರತ್ತು ನಡೆಸಿದರು. ಮಂಗಳೂರು ಉತ್ತರ ಕೆಜೆಪಿ ಅಭ್ಯರ್ಥಿ ರಾಮಚಂದ್ರ ಬೈಕಂಪಾಡಿ ಕುದುರೆ ಸಾರೋಟ್ನಲ್ಲಿ ಪ್ರಚಾರ ನಡೆಸಿದರು. ಇಂಧನ ಉಳಿತಾಯ, ಪರಿಸರ ಪ್ರೇಮಿ ಪ್ರಚಾರ ಎಂದು ಬೈಕಂಪಾಡಿ ಹೇಳಿಕೊಂಡರು.
 ಇದೇ ವೇಳೆ ಜೆಡಿಎಸ್ ಅಭ್ಯರ್ಥಿ ಎಸ್.ಪಿ.ಚೆಂಗಪ್ಪ ಅಭಿಮಾನಿಗಳು ಬೆನ್ನಲ್ಲಿ ಪ್ಲೆಕ್ಸ್ ಹಾಕಿಕೊಂಡು ಬೀದಿ ಸುತ್ತಿ ಮತ ಯಾಚಿಸಿದರು. ಕೆಲವೆಡೆ ಮಕ್ಕಳನ್ನು ಪ್ರಚಾರಕ್ಕೆ ಬಳಸಿಕೊಂಡರೂ ನೀತಿ ಸಂಹಿತೆ ಭೀತಿಯಿಂದ ಪ್ರಕರಣ ಕಡಿಮೆಯಾಯಿತು.
 ಎಲ್ಲ ಅಭ್ಯರ್ಥಿಗಳು ಗೃಹಪ್ರವೇಶ, ಅಂತ್ಯಸಂಸ್ಕಾರ, ಮದುವೆ, ಹುಟ್ಟುಹಬ್ಬ, ಉಪನಯನ, ಸುನ್ನತ್, ನಾಗಮಂಡಲ, ದೇವಸ್ಥಾನ, ಚರ್ಚ್, ಮಸೀದಿಗಳಿಗೆ ಭೇಟಿ ಕೊಡುತ್ತಾರೆ. ಆದರೆ ಮಂಗಳೂರು ಕ್ಷೇತ್ರದ ಯು.ಟಿ. ಖಾದರ್ ಇದರಲ್ಲಿ ದಾಖಲೆ ಮಾಡಿದ್ದಾರೆ. ಮಧ್ಯರಾತ್ರಿಯಾದರೂ ಕಾರ್ಯಕ್ರಮಕ್ಕೆ ಭೇಟಿ ನೀಡುವುದನ್ನು ತಪ್ಪಿಸುತ್ತಿರಲಿಲ್ಲ. ಇದು ಕೇವಲ ಚುನಾವಣೆಗೆ ಸೀಮಿತವಾಗಿರಲಿಲ್ಲ. ಕಳೆದ 5 ವರ್ಷದಲ್ಲಿ ಸದನದಲ್ಲಿ ಅತಿ ಹೆಚ್ಚು ಪ್ರಶ್ನೆ ಕೇಳಿದ ಖಾದರ್, ತನ್ನ ಕ್ಷೇತ್ರದಲ್ಲಿ ಮನೆ ಕಾರ್ಯಕ್ರಮಗಳ ಭೇಟಿ ನೀಡಿದ್ದು ಅತಿ ಹೆಚ್ಚು.
 ಮಂಗಳೂರಲ್ಲಿ ಪ್ರಚಾರಕ್ಕೆ ಕೋಟಿಗಟ್ಟಲೆ ಖರ್ಚು ಮಾಡಿದ್ದರೂ ಯಾರೂ ಸಿಕ್ಕಿ ಬೀಳದೆ ಜಾಣ್ಮೆ ಪ್ರದರ್ಶಿಸಿದ್ದಾರೆ. ಸಿಕ್ಕಿದ್ದ 63 ಲಕ್ಷ ರಾಜಕಾರಣಿಗಳ ಬಳಕೆಗೆ ಎಂದು ಇದುವರೆಗೆ ಸಾಬೀತಾಗಿಲ್ಲ.

ಬಹಿರಂಗ ಪ್ರಚಾರ ಅಂತ್ಯ
ಮಂಗಳೂರು: ಶುಕ್ರವಾರ ಸಂಜೆ 5 ಗಂಟೆಗೆ ಎಲ್ಲ ಪಕ್ಷಗಳ, ಪಕ್ಷೇತರರ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳ 71 ಅಭ್ಯರ್ಥಿಗಳು ಬಹಿರಂಗ ಪ್ರಚಾರ ಕೈಬಿಟ್ಟು  ಮತದಾರರನ್ನು ಮುಟ್ಟಲು ಅಂತಿಮ ರಣತಂತ್ರ ರೂಪಿಸತೊಡಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.