ಮತದಾರರ ಕೈಗೆ ಚೀಟಿ; ಕೆಲವೆಡೆ ಫಜೀತಿ
ಕ.ಪ್ರ. ವಾರ್ತೆ ಮಂಗಳೂರು ಮೇ 3-
ಮತದಾರರ ಕೈಗೆ ನೇರವಾಗಿ ಮತದಾನ ಚೀಟಿ ತಲುಪಿಸಬೇಕು ಎನ್ನುವುದು ಭಾರತೀಯ ಚುನಾವಣಾ ಆಯೋಗದ ಸೂಚನೆ. ಇದನ್ನು ಚಾಚೂ ತಪ್ಪದೆ ಪಾಲಿಸುವಂತೆ ಆಯೋಗ ಸೂಚನೆ ನೀಡಿದ್ದರೂ, ದ.ಕ. ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ಸಿಬ್ಬಂದಿ ಚೀಟಿ ದಾಟಿಸುವ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಮತದಾರರು ಪರದಾಡುವಂತಾಗಿದೆ.
ಏ. 30 ರಿಂದ ಮೇ 3ರೊಳಗೆ ಮತದಾನಕ್ಕೆ ಚೀಟಿ ಹಂಚಿಕೆ ಪೂರ್ಣಗೊಳಿಸುವ ವಿಶ್ವಾಸವನ್ನು ಆಯೋಗ ಹೊಂದಿದೆ. ಆದರೆ ಇದು ಮೊದಲ ಪ್ರಯೋಗವಾದ್ದರಿಂದ ಚೀಟಿ ಹಂಚಿಕೆಯಲ್ಲಿ ಕೆಳಹಂತದ ಸಿಬ್ಬಂದಿ ಬೇಕಾಬಿಟ್ಟಿ ಹಂಚಿಕೆ ಮಾಡುತ್ತಿದ್ದಾರೆ ಎಂಬ ಆರೋಪ ವ್ಯಕ್ತಗೊಂಡಿದೆ.
ಆಯೋಗ ನಿರ್ದೇಶನದ ಪ್ರಕಾರ ಚೀಟಿ ಹಂಚಿಕೆಯ ಪೂರ್ತಿ ಜವಾಬ್ದಾರಿ ಬಿಎಲ್ಒ(ಬೂತ್ ಮಟ್ಟದ ಅಧಿಕಾರಿ) ಅವರದ್ದು. ಈ ಅಧಿಕಾರಿಗಳ ಕೈಕೆಳಗಿನ ಸಿಬ್ಬಂದಿ ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಕರಣಿಕರು, ಬಿಲ್ ಕಲೆಕ್ಟರ್ಗಳು ಮನೆ ಮನೆಗೆ ತೆರಳಿ ಮತದಾರನಿಗೆ ಚೀಟಿ ತಲುಪಿಸುವ ಕೆಲಸ ಮಾಡಬೇಕು. ನಾಲ್ಕು ದಿನದಲ್ಲಿ ಎಲ್ಲ ಮನೆಗಳನ್ನು ತಲುಪುವುದು ಸುಲಭವಲ್ಲವಾದರೂ ಚುನಾವಣಾ ಜರೂರುತ್ತು ಎಂದು ಮಾಡಲೇ ಬೇಕು ಎಂದು ಆಯೋಗ ಸೂಚನೆ ಹೊರಡಿಸಿದೆ.
ಇವರ ಚೀಟಿ ಪಕ್ಕದ್ಮನೆಯಲ್ಲಿ: ಒಂದು ಮತಗಟ್ಟೆಯಲ್ಲಿ ಸರಿಸುಮಾರು 1,200 ಮತದಾರರಿದ್ದಾರೆ ಎಂಬುದು ಆಯೋಗದ ಲೆಕ್ಕಾಚಾರ. ಅಂದರೆ ಸುಮಾರು 400 ಕುಟುಂಬ ಇರಬಹುದು. ಎಷ್ಟೇ ಹಳ್ಳಿಗಾಡು ಇರಲಿ, ಒಬ್ಬ ಸಿಬ್ಬಂದಿಗೆ ಈ ಮನೆಗಳಿಗೆ ನಾಲ್ಕು ದಿನದಲ್ಲಿ ತಲುಪಲು ಸಾಧ್ಯ. ಆದರೆ ಮತದಾರರು ಮನೆಯಲ್ಲಿ ಇಲ್ಲದಿದ್ದರೆ ಚೀಟಿ ಬೇರೆಡೆ ಕೊಡುವಂತಿಲ್ಲ. ಈಗ ಆಗಿರುವ ಎಡವಟ್ಟು ಇದೇ.
ಸಿಬ್ಬಂದಿ ಹೋದಾಗ ಮನೆಯಲ್ಲಿ ಯಾರೂ ಇಲ್ಲದಿದ್ದರೆ ಚೀಟಿಯನ್ನು ಪಕ್ಕದ ಮನೆಯಲ್ಲಿ ಕೊಟ್ಟು ಹೋದ ಉದಾಹರಣೆಗಳಿವೆ. ಚೀಟಿಯನ್ನು ನೇರವಾಗಿ ಕೈಗೆ ನೀಡದ ಕಾರಣಕ್ಕೆ ಬಂಟ್ವಾಳ ನಿವಾಸಿಯೊಬ್ಬರು ಆಯೋಗಕ್ಕೆ ದೂರು ನೀಡಿದ್ದಾರೆ. ಮಂಗಳೂರಿನ ಬಿಕರ್ನಕಟ್ಟೆ, ಬೈಕಂಪಾಡಿಗಳಲ್ಲಿ ಇದೇ ರೀತಿ ಆಗಿದ್ದು, ಆಯೋಗಕ್ಕೆ ದೂರು ನೀಡುವುದಾಗಿ ಮನೆ ಮಂದಿ ತಿಳಿಸಿದಾಗ ಸಿಬ್ಬಂದಿ ಮನೆಗೆ ಧಾವಿಸಿ ಚೀಟಿ ನೀಡಿದ್ದಾರೆ.
ಮತದಾರರ ಪಟ್ಟಿಯಲ್ಲೂ ದೋಷ ಕಂಡುಬಂದಿದೆ. ಹಲವು ಮಂದಿಯ ಹೆಸರು ಹಾಗೂ ಭಾವಚಿತ್ರ ಬದಲಾವಣೆಯಾಗಿದ್ದು, ಇದು ತಾಳೆಯಾಗದಿದ್ದರೆ ಅಥವಾ ಸೂಕ್ತ ದಾಖಲೆ ಒದಗಿಸದಿದ್ದರೆ ಮತದಾನಕ್ಕೆ ಅವಕಾಶ ನಿರಾಕರಿಸಲ್ಪಡುವ ಸಾಧ್ಯತೆ ಇದೆ. ಮತದಾರರ ಪಟ್ಟಿಯಲ್ಲಿ ತಪ್ಪಾಗಿದ್ದರೆ ಗುರುತಿನ ಚೀಟಿಯಲ್ಲೂ ಅದೇ ತಪ್ಪು ನಮೂದಾಗಿರುತ್ತದೆ. ಇದು ಕೂಡ ಮತದಾರರನ್ನು ಆತಂಕಕ್ಕೆ ತಳ್ಳಿದೆ.
ನಾವೇ ಕೊಡುತ್ತಿದ್ದೆವು: ಈ ಹಿಂದೆ ಮತದಾನಕ್ಕೆ ರಾಜಕೀಯ ಪಕ್ಷಗಳೇ ಚೀಟಿ ಕೊಡುತ್ತಿದ್ದವು. ಈ ಬಾರಿ ಆಯೋಗವೇ ನೀಡುವುದಾಗಿ ಹೇಳಿರುವುದರಿಂದ ಎಲ್ಲೆಲ್ಲೂ ಗೊಂದಲ ಉಂಟಾಗಿದೆ. ಹೆಚ್ಚಿನ ಕಡೆಗಳಲ್ಲಿ ಸಿಬ್ಬಂದಿ ಪ್ರತಿ ಮನೆಗೆ ಹೋಗುತ್ತಿಲ್ಲ, ಹೋಗುವಾಗ ಮನೆ ಮಂದಿ ಇಲ್ಲದಿದ್ದರೆ ಮತ್ತೆ ಹೋಗಬೇಕು. ಈ ಎಲ್ಲ ವಿಚಾರವನ್ನು ಜಿಲ್ಲಾ ಚುನಾವಣಾಧಿಕಾರಿ ಗಮನಕ್ಕೆ ತರಲಾಗಿದೆ ಎನ್ನುತ್ತಾರೆ ಪಕ್ಷದ ಮುಖಂಡರೊಬ್ಬರು.
ಮತಗಟ್ಟೆ ಹೊರಗೆ ಸಹಾಯ ಕೇಂದ್ರ
ಸಿಬ್ಬಂದಿ ಮನೆ ಭೇಟಿ ವೇಳೆ ಮತದಾರನ ಭಾವಚಿತ್ರ ಇರುವ ಚೀಟಿ ನೀಡುತ್ತಾರೆ. ರಾಜಕೀಯ ಪಕ್ಷಗಳೂ ಚೀಟಿ ನೀಡಬಹುದು. ಆದರೆ ಅದರಲ್ಲಿ ಪಕ್ಷದ ಪ್ರಚಾರ ಇರಬಾರದು. ಹಾಗೇನಾದರೂ ಇದ್ದರೆ ಅದನ್ನು ಮತದಾನದ ವೇಳೆ ಅಧಿಕೃತ ಎಂದು ಪರಿಗಣಿಸಲು ಆಗುವುದಿಲ್ಲ. ಮತದಾನದಂದು ಮತಗಟ್ಟೆ ಹೊರಗೆ ಸಹಾಯ ಕೇಂದ್ರ ತೆರೆಯಲಾಗುವುದು. ಅಲ್ಲಿಯೂ ಚೀಟಿ ನೀಡಲಾಗುವುದು. ಮತದಾರರ ಪಟ್ಟಿಯಲ್ಲಿ ಏನೇ ತಪ್ಪುಗಳಿದ್ದರೆ ಬಿಲ್ಒಗಳಿಗೆ ಸೂಕ್ತ ದಾಖಲೆ ನೀಡಿ ಸರಿಪಡಿಸಬಹುದು ಎನ್ನುತ್ತಾರೆ ಅಪರ ಜಿಲ್ಲಾಧಿಕಾರಿ ದಯಾನಂದ್.
- ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

