ದಕ್ಷಿಣ ಕನ್ನಡ

235 ಮತಗಟ್ಟೆಗಳ ಕಡೆಗೆ ಸಿಬ್ಬಂದಿ ಪಯಣ

Published On :

ಬಂಟ್ವಾಳ: ವಿಧಾನಸಭಾ ಚುನಾವಣೆಗೆ ಒಂದು ದಿನ ಬಾಕಿ ಉಳಿದಿರುವಂತೆ ಶನಿವಾರ ಚುನಾವಣಾ ಸಿದ್ಧತಾ ಪ್ರಕ್ರಿಯೆ  ಮೊಡಂಕಾಪುವಿನ ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬಿರುಸಿನಿಂದ ನಡೆಯಿತು. ಬೆಳಗಿನಿಂದಲೇ ಮತಗಟ್ಟೆಗೆ ತೆರಳುವ ಅಧಿಕಾರಿಗಳಿಗೆ ತರಬೇತಿ ಸೇರಿದಂತೆ ವಿವಿಧ ಮಾಹಿತಿಗಳನ್ನು ನೀಡಿ ಮತಯಂತ್ರಗಳೊಂದಿಗೆ ಬಿಗಿ ಭದ್ರತೆಯಲ್ಲಿ ಮತಗಟ್ಟೆಗಳಿಗೆ ಬೀಳ್ಕೊಡಲಾಯಿತು.
ಪ್ರತೀ ಮತಗಟ್ಟೆಗೆ ಚುನಾವಣಾ ಆಯೋಗದಿಂದ ನೇಮಿಸಲಾಗಿರುವ ಐವರು ವಿವಿಧ ದರ್ಜೆಯ ಸಿಬ್ಬಂದಿಯನ್ನು ಪೊಲೀಸ್ ಹಾಗೂ ಬಿಎಸ್‌ಎಫ್ ಯೋಧರ ಭದ್ರತಾ ಪಡೆಯೊಂದಿಗೆ ಕ್ಷೇತ್ರ ವ್ಯಾಪ್ತಿಯ 235 ಮತಗಟ್ಟೆಗಳಿಗೆ ಕಳುಹಿಸಿಕೊಡಲಾಯಿತು.
ಊಟ, ಬಸ್ ಗೊಂದಲ: ಅಪರಾಹ್ನ 2 ಗಂಟೆಗೆ ಮತಗಟ್ಟೆಗೆ ತಲುಪಬೇಕಾಗಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಭೋಜನ ವಿತರಣೆಯ ಅವ್ಯವಸ್ಥೆಯಿಂದಾಗಿ ಸುಮಾರು 2 ಗಂಟೆ ತಡವಾಗಿ ಮತಗಟ್ಟೆಗೆ ತಲುಪಬೇಕಾಯಿತು. ಕಂದಾಯ ಇಲಾಖೆ ಮತಗಟ್ಟೆಗಳಿಗೆ ನಿಯೋಜಿಲ್ಪಟ್ಟಿದ್ದ 1200ಕ್ಕೂ ಅಧಿಕ ಸಿಬ್ಬಂದಿಗೆ ಊಟದ ಸಿದ್ಧತೆ ಮಾಡಲಾಗಿತ್ತು. ಆದರೆ ಭೋಜನದ ವೇಳೆ ಪೊಲೀಸ್ ಹಾಗೂ ಭದ್ರತಾ ಪಡೆಯ ಸಿಬ್ಬಂದಿ ಪಾಲ್ಗೊಂಡಿದ್ದ ಹಿನ್ನಲೆಯಲ್ಲಿ ನೂರಾರು ಮಂದಿಗೆ ಮಧ್ಯಾಹ್ನದ ಊಟ ಸಿಗದೆ ಗೊಂದಲ ಉಂಟಾಯಿತು. ಮತಗಟ್ಟೆಗೆ ತೆರಳಲೆಂದು ವಿವಿಧೆಡೆಗಳಿಂದ ಮೊಡಂಕಾಪುವಿಗೆ ಬಂದಿದ್ದ ಅಧಿಕಾರಿಗಳಿಗೆ ಬಸ್ ವ್ಯವಸ್ಥೆ ಸಮಯಕ್ಕೆ ಸರಿಯಾಗಿ ಒದಗದ ಕಾರಣ ಸಂಜೆವರೆಗೆ ಬಸ್‌ಗಾಗಿ ಕಾಯಬೇಕಾಯಿತು. ಮತಗಟ್ಟೆಗಳಿಗೆ ತೆರಳಲು ಕಾದುಕುಳಿತ ಅಧಿಕಾರಿಗಳು ಹಿಡಿಶಾಪ ಹಾಕುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡು ಬಂತು.
235 ಮತಗಟ್ಟೆ: ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1,96,966 ಮತದಾರರಿದ್ದು 98,671 ಪುರುಷ ಹಾಗೂ 98295 ಮಹಿಳಾ ಮತದಾರರಿದ್ದಾರೆ. 227 ಮತಗಟ್ಟೆಗಳಿದ್ದು 1200ಕ್ಕೂ ಅಧಿಕ ಮತದಾರರಿರುವ 116, 43, 174, 109, 207, 56, 135, 222 ಮತಗಟ್ಟೆಗಳನ್ನು ತಲಾ ಎರಡು ಮತಗಟ್ಟೆಗಳಾಗಿ ವಿಭಾಗಿಸಿ 8 ಹೆಚ್ಚುವರಿ ಮತಗಟ್ಟೆಗಳು ಸೇರಿದಂತೆ ಒಟ್ಟು 235 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. 235 ಮತಗಟ್ಟೆಗಳ ಪೈಕಿ 49 ಸೂಕ್ಷ್ಮ, 24 ಅತಿಸೂಕ್ಷ್ಮ ಹಾಗೂ 162 ಮತಗಟ್ಟೆಗಳನ್ನು ಸಾಮಾನ್ಯ ಮತಗಟ್ಟೆಗಳೆಂದು ವರ್ಗೀಕರಿಸಲಾಗಿದೆ. ಬಂಟ್ವಾಳ ಕ್ಷೇತ್ರವ್ಯಾಪ್ತಿಯ ಚುನಾವಣಾ ಕಾರ್ಯಗಳಿಗಾಗಿ 31 ಬಸ್ಸು, 40 ಜೀಪು ಹಾಗೂ 3 ಮ್ಯಾಕ್ಸಿಕ್ಯಾಬ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಸಹಾಯಕ ಚುನಾವಣಾಧಿಕಾರಿ ಕಿಶೋರ್ ಕುಮಾರ್ ತಿಳಿಸಿದ್ದಾರೆ.
ಪ್ರತಿ ಮತಗಟ್ಟೆಗೆ ಒಬ್ಬ ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ, ಪ್ರಥಮ ಹಾಗೂ ದ್ವಿತೀಯ ಮೇಲ್ವಿಚಾರಕರು ಹಾಗೂ ಡಿ ಗ್ರೂಪ್ ನೌಕರರನ್ನು ನೇಮಿಸಲಾಗಿದೆ.
ಪ್ರತಿ ಬೂತ್‌ಗೂ ಶಸ್ತ್ರ ಸಜ್ಜಿತ ಭದ್ರತಾ ಪಡೆಯ ಯೋಧರನ್ನು ನೇಮಿಸಲಾಗಿದೆ. ಒಬ್ಬ ಕಾನ್ಸ್‌ಟೇಬಲ್ ಹಾಗೂ ಒಬ್ಬ ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚುವರಿ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಅನಿಲ್ ಎಸ್.ಕುಲಕರ್ಣಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.