ವೆಬ್ಕಾಸ್ಟಿಂಗ್ ಪ್ರಯೋಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಶಸ್ವಿ
ಕನ್ನಡಪ್ರಭ ವಾರ್ತೆ ಮಂಗಳೂರು ಮೇ 5-
ರಾಜ್ಯದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದ ವೆಬ್ಕಾಸ್ಟಿಂಗ್ (ಮತದಾನದ ಆನ್ಲೈನ್) ಆರಂಭದಲ್ಲಿ ಕೆಲವು ತಾಂತ್ರಿಕ ತೊಂದರೆ ಹೊರತುಪಡಿಸಿ ಜಿಲ್ಲೆಯಲ್ಲಿ ಬಹುತೇಕ ಯಶಸ್ವಿಯಾಗಿದೆ.
ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಹರ್ಷಗುಪ್ತ ಈ ಹೊಸ ಕಲ್ಪನೆಯನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳನ್ನು ಬಳಸಿಕೊಂಡು ಮಂಗಳೂರು ದಕ್ಷಿಣದ ಎಲ್ಲ ಮತಗಟ್ಟೆ ಹಾಗೂ ಇತರೆ ಕ್ಷೇತ್ರಗಳ ಆಯ್ದ ಮತಗಟ್ಟೆಗಳಲ್ಲಿ ವೆಬ್ಕಾಸ್ಟಿಂಗ್ ಅಳವಡಿಸಲಾಗಿತ್ತು. 8 ವಿಧಾನಸಭಾ ಕ್ಷೇತ್ರಗಳ 402 ಕೇಂದ್ರಗಳಲ್ಲಿ ವೆಬ್ಕಾಸ್ಟಿಂಗ್ ಕಾರ್ಯನಿರ್ವಹಿಸಿದ್ದು, ಇದನ್ನು ದೇಶದಲ್ಲಿ ನಡೆಯುವ ಮುಂದಿನ ಚುನಾವಣೆಗಳಲ್ಲಿ ಭಾರತೀಯ ಚುನಾವಣಾ ಆಯೋಗ ಅನುಷ್ಠಾನಕ್ಕೆ ತರುವ ಸಾಧ್ಯತೆ ಇದೆ.
ವಿದ್ಯುತ್ ಕೊರತೆ: ಸುಳ್ಯ ಕ್ಷೇತ್ರದಲ್ಲಿ ವಿದ್ಯುತ್ ವ್ಯತ್ಯಯದಿಂದ ವೆಬ್ಕಾಸ್ಟಿಂಗ್ ಸಮರ್ಪಕವಾಗಿ ಕಾರ್ಯನಿರ್ವಹಿಸಿಲ್ಲ. ಕೆಲವು ಕಡೆಗಳಲ್ಲಿ ಪ್ರಾರಂಭಿಕ ತಾಂತ್ರಿಕ ತೊಂದರೆಯಿಂದ ವಿಳಂಬವಾಗಿ ಕಾರ್ಯನಿರ್ವಹಿಸಿವೆ. ಮಂಗಳೂರಿನ ಕೆನರಾ ಕಾಲೇಜಿನಲ್ಲಿ ನಿಯಂತ್ರಣಾ ಕೇಂದ್ರ ವ್ಯವಸ್ಥೆಗೊಳಿಸಲಾಗಿತ್ತು. ಜಿಲ್ಲಾಧಿಕಾರಿ ಕಚೇರಿಯ ಕಂಟ್ರೋಲ್ ರೂಂನಲ್ಲಿಯೂ ವೆಬ್ಕಾಸ್ಟಿಂಗ್ ಮೇಲೆ ಸತತ ನಿಗಾ ಇರಿಸಲಾಗಿತ್ತು.
ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ 130 ಕಡೆ ವೆಬ್ಕಾಸ್ಟಿಂಗ್ ಯಶಸ್ವಿಯಾಗಿದ್ದು, ಜಿಲ್ಲೆಯ 260 ಕಡೆ ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ. ಜಿಲ್ಲೆಯ ಎಂಜಿನೀಯರಿಂಗ್ ವಿದ್ಯಾರ್ಥಿಗಳನ್ನು ಬಳಸಿಕೊಂಡು ಈ ಪ್ರಯೋಗ ಯಶಸ್ವಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಬಿಎಸ್ಎನ್ಎಲ್ ಕನೆಕ್ಷನ್ ಮತ್ತು ವಿದ್ಯುತ್ ಸಮಸ್ಯೆಯಿಂದಾಗಿ ಕೆಲವೆಡೆ ಸಮಸ್ಯೆಯಾಗಿತ್ತು. ಮುಂದಿನ ಬಾರಿ ಇದನ್ನೂ ಸರಿಪಡಿಸಿ ಸಂಪೂರ್ಣ ಯಶಸ್ಸುಗೊಳಿಸಲಾಗುವುದು ಎಂದು ಮಂಗಳೂರು ದಕ್ಷಿಣ ಕ್ಷೇತ್ರ ಚುನಾವಣಾಧಿಕಾರಿ ಶ್ರೀಕಾಂತ್ ರಾವ್ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ವೈರ್ಲೆಸ್ ಟಾಕ್: ಜಿಲ್ಲಾ ಕಂಟ್ರೋಲ್ ರೂಂನಲ್ಲಿ ಮಧ್ಯಾಹ್ನ 12.15ಕ್ಕೆ ಎಲ್ಲ ಮತಗಟ್ಟೆ ವ್ಯಾಪ್ತಿಯ ಸೆಕ್ಟರ್ ಅಧಿಕಾರಿಗಳ ಜತೆ ಚುನಾವಣಾಧಿಕಾರಿ ಹರ್ಷಗುಪ್ತ ವೈರ್ಲೆಸ್ನಲ್ಲಿ ಮತದಾನದ ವಿವರ ಪಡೆದು, ಅಗತ್ಯ ಮಾರ್ಗದರ್ಶ ಮಾಡಿದರು.
ಮತಗಟ್ಟೆ ಅಧಿಕಾರಿಗಳಿಗೆ 39 ವಾಕಿ ಟಾಕಿ, ಸೆಕ್ಟರ್ ಅಧಿಕಾರಿಗಳಿಗೆ ಹಾಗೂ ಅವರ ವಾಹನಗಳಿಗೆ ವೈರ್ಲೆಸ್ ನೀಡಲಾಗಿತ್ತು. ಪೊಲೀಸ್ ಅಲ್ಲದೆ ಚೆಕ್ಪೋಸ್ಟ್ಗಳಲ್ಲೂ ಚುನಾವಣೆಗೆ ಸಂಬಂಧಿಸಿದ ಸಂವಹನವೆಲ್ಲವೂ ಇದರಲ್ಲೇ ನಡೆಯಿತು.
ಸ್ಮಾರ್ಟ್ಫೋನ್ ಹೊಂದಿರುವ ಮತಗಟ್ಟೆ ಅಧಿಕಾರಿಗಳು ಸಂದೇಶ ಕಳುಹಿಸಲು ಹಲವು ಬಾರಿ ಪರದಾಡಬೇಕಾಯಿತು. ಜಿಲ್ಲಾ ಚುನಾವಣಾಧಿಕಾರಿ ಎಸ್ಎಂಎಸ್ ಮಾಡಿದರೂ, ಅವರಿಗೆ ಅಲ್ಲಿಂದ ಪ್ರತ್ಯುತ್ತರ ಬರುತ್ತಿರಲಿಲ್ಲ. ಹಾಗಾಗಿ ಎಸ್ಎಂಎಸ್ ರವಾನೆಯಾದ ಬಗ್ಗೆ ಖಚಿತತೆ ಸಿಗುತ್ತಿರಲಿಲ್ಲ. ಈ ವಿಚಾರವನ್ನು ಚುನಾವಣಾಧಿಕಾರಿ ಹರ್ಷಗುಪ್ತ ವೈರ್ಲೆಸ್ನಲ್ಲಿ ತಿಳಿಸಿದರಲ್ಲದೆ, ವೃಥಾ ವಿಳಂಬಿಸದೆ ಮೊಬೈಲ್ ಮೂಲಕವೂ ಕಾಲಕಾಲಕ್ಕೆ ಮಾಹಿತಿ ಒದಗಿಸುವಂತೆ ಮತಗಟ್ಟೆ ಅಧಿಕಾರಿಗಳಿಗೆ ಸೂಚಿಸಿದರು.
ಮಸ್ಟರಿಂಗ್ ವೇಳೆ ಸಂಜೆ ಮತಗಟ್ಟೆ ತಲುಪಿದ ಬಗ್ಗೆ ಆಯಾ ಮತಗಟ್ಟೆ ಅಧಿಕಾರಿಗಳಲ್ಲಿ ಶೇ.70 ಮಂದಿ ಮಾಹಿತಿ ನೀಡಿದರು. ಕೆಲವು ಕಡೆ ನೆಟ್ವರ್ಕ್ ಇಲ್ಲದೆ ತೊಂದರೆಗೀಡಾಗಬೇಕಾಯಿತು. ನೆಟ್ವರ್ಕ್ ಇರುವಲ್ಲಿ ಬಂದು ಸಂದೇಶ ಕಳುಹಿಸಲು ಸಮಯ ಬೇಕಾಗುತ್ತಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

