ದಕ್ಷಿಣ ಕನ್ನಡ

ಮತಗಳಿಕೆ: ದ.ಕ.ದಲ್ಲಿ ಕಾಂಗ್ರೆಸ್ 89 ಸಾವಿರ ಮುನ್ನಡೆ

Published On :

ಮಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ದ.ಕ. ಜಿಲ್ಲೆಯಲ್ಲಿ ಬಿಜೆಪಿ ವಿರುದ್ಧ ಭರ್ಜರಿ ಬೇಟೆ ನಡೆಸಿದ ಕಾಂಗ್ರೆಸ್ ತನ್ನ ಸಾಮರ್ಥ್ಯ ಪ್ರದರ್ಶಿಸಿದ್ದು, ಮತ ಗಳಿಕೆಯಲ್ಲಿ ಬಿಜೆಪಿಗಿಂತ 89 ಸಾವಿರ ಮತಗಳ ಮುನ್ನಡೆ ಕಾಯ್ದುಕೊಂಡಿದೆ.
 2008 ಅವಧಿಯಲ್ಲಿ ಬಿಜೆಪಿ ಮತಗಳಿಕೆಯಲ್ಲಿ 39,369 ಮತಗಳ ಮುನ್ನಡೆ ಹೊಂದಿತ್ತು. ಅಂದರೆ 49,716 ಅಂತರವನ್ನು ನಿವಾರಿಸುವಲ್ಲಿ 5 ವರ್ಷಗಳಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಈ ಸಲ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಒಟ್ಟು 5,47,952 ಮತ್ತು ಬಿಜೆಪಿ 4,58,867 ಮತ ಗಳಿಸಿದೆ. ಈ ಬೃಹತ್ ಅಂತರವನ್ನು ನೀಗಿಸುವುದು ಬಿಜೆಪಿಗೆ ಸುಲಭ ಮಾತಲ್ಲ. ಕಳೆದ ಅವಧಿಯಲ್ಲಿ ಕಾಂಗ್ರೆಸ್ 3,80,812 ಮತ್ತು ಬಿಜೆಪಿ 4,20,181 ಮತ ಗಳಿಸಿ ಮುಂಚೂಣಿಯಲ್ಲಿತ್ತು.
ಕುಸಿದ ಜೆಡಿಎಸ್ ಗಳಿಕೆ: ಕಳೆದ ಅವಧಿಯಲ್ಲಿ ಜೆಡಿಎಸ್ 7 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿತ್ತು. ಪುತ್ತೂರಿನಲ್ಲಿ ಕುಮಾರಸ್ವಾಮಿ ಸೂಚನೆ ಮೇರೆಗೆ ಬಿಜೆಪಿ ಬಂಡಾಯ ಪಕ್ಷೇತರ ಅಭ್ಯರ್ಥಿ ಶಕುಂತಳಾ ಶೆಟ್ಟಿಗೆ ಬೆಂಬಲ ವ್ಯಕ್ತಪಡಿಸಿತ್ತು. ಆಗ ಜಿಲ್ಲೆಯಲ್ಲಿ ಒಟ್ಟು ಮತಗಳಿಸಿದ್ದು 57,897. ಈ ಬಾರಿ ಎಲ್ಲ 8 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳಿದ್ದರು, ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮೂರ್ನಾಲ್ಕು ಬಾರಿ ಬಂದುಹೋಗಿದ್ದರು. ಎರಡ್ಮೂರು ತಾಲೂಕುಗಳಲ್ಲಿ ಸಮಾವೇಶ ನಡೆಸಿದ್ದರು. ಆದರೂ ಜೆಡಿಎಸ್ ಮತಗಳಿಕೆ ವೃದ್ಧಿಸದೆ ಕಡಿಮೆಯಾಗಿದೆ. ಕೇವಲ 45,861 ಮತ ಪ್ರಾಪ್ತವಾಗಿದೆ, ಅಂದರೆ 12,036 ಮತ ಕುಸಿತ ಕಂಡಿದೆ.
ಎಸ್‌ಡಿಪಿಐ ಪ್ರವೇಶ: ವಿಧಾನಸೌಧದತ್ತ ದೃಷ್ಟಿ ನೆಟ್ಟಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಈ ಚುನಾವಣೆಯಲ್ಲಿ ಬೆಳ್ತಂಗಡಿ ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಬೆಳ್ತಂಗಡಿಯಲ್ಲಿ ಸಿಪಿಎಂ ಜತೆ ಮೈತ್ರಿ ಮಾಡಿಕೊಂಡಿತ್ತು. 7 ಕ್ಷೇತ್ರಗಳಲ್ಲಿ ಮತ ಗಳಿಕೆ 26,446. ಸುಳ್ಯದಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಪಡೆದ 2,569 ಮತ ಕಾಂಗ್ರೆಸ್ ಸೋಲಿಗೆ ಕಾರಣವಾಗಿದೆ.
ಅಸ್ತಿತ್ವ ಕಾಣದ ಸಿಪಿಎಂ: ಸಿಪಿಎಂ ಜಿಲ್ಲೆಯಲ್ಲಿ ಅನೇಕ ಹೋರಾಟ ನಡೆಸಿದರೂ ಮತಗಳಿಕೆಯಲ್ಲಿ ವೃದ್ಧಿಯಾಗಿಲ್ಲ. ಕಳೆದ ಅವಧಿಯಲ್ಲಿ ಉಳ್ಳಾಲ ಮತ್ತು ಮಂಗಳೂರು ದಕ್ಷಿಣದಲ್ಲಿ ಸ್ಪರ್ಧಿಸಿದ ಸಿಪಿಎಂ 8,154 ಹಾಗೂ ಬಂಟ್ವಾಳದಲ್ಲಿ ಸ್ಪರ್ಧಿಸಿದ ಸಿಪಿಐ 3,127 ಮತ ಪಡೆದಿತ್ತು. ಎರಡು ಸೇರಿಸಿದರೆ ಒಟ್ಟು ಮತ 11,311. ಈ ಬಾರಿ ಸಿಪಿಐ ಸ್ಪರ್ಧೆ ಇಲ್ಲ. ಸಿಪಿಎಂ ಬೆಳ್ತಂಗಡಿ, ಮಂಗಳೂರು ದಕ್ಷಿಣ ಮತ್ತು ಮಂಗಳೂರು ಕ್ಷೇತ್ರದಲ್ಲಿ ಸ್ಪರ್ಧಿಸಿ ಒಟ್ಟು 11,345 ಮತ ಪಡೆದಿದೆ.
ಕೆಜೆಪಿ, ಬಿಎಸ್‌ಪಿ, ಇತರೆ ಲೆಕ್ಕಕ್ಕೆ ಮಾತ್ರ: ಈ ಬಾರಿ ಕೆಜೆಪಿ ಸ್ಪರ್ಧೆ ಹೊಸ ಸೇರ್ಪಡೆ. 8 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೂ ನಿರ್ಣಾಯಕ ಪಾತ್ರ ವಹಿಸಲಿಲ್ಲ. ಒಟ್ಟು 11,150 ಮತ ಪಡೆಯಲು ಶಕ್ತವಾಗಿದೆ. ಬಿಎಸ್‌ಪಿ ಕಳೆದ ಅವಧಿಯಲ್ಲಿ 12,088 ಮತ ಪಡೆದರೆ, ಈ ಬಾರಿ 1,747 ಮತಕ್ಕೆ ತೃಪ್ತಿಪಟ್ಟುಕೊಂಡಿದೆ. ಕಳೆದ ಸಲ ಮಂಗಳೂರು ದಕ್ಷಿಣ, ಉತ್ತರದಲ್ಲಿ ಸ್ಪರ್ಧಿಸಿದ್ದ ಜೆಡಿಯು 1,259 ಮತ ಪಡೆದಿದ್ದು, ಈ ಸಲ ಬೆಳ್ತಂಗಡಿಯಲ್ಲಿ ಮಾತ್ರ ಸ್ಪರ್ಧಿಸಿ 1,536 ಮತ ಪಡೆದಿದೆ. ಈ ಬಾರಿ ತಲಾ ಒಂದು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ ಎನ್‌ಸಿಪಿ 1,136 ಮತ, ಪಿರಮಿಡ್ ಪಾರ್ಟಿ 377, ರಿಪಬ್ಲಿಕನ್ ಪಾರ್ಟಿ 1,510 ಮತ ಲೆಕ್ಕಕ್ಕೆ ತೆಗೆದುಕೊಂಡಿವೆ.
ಪಕ್ಷೇತರರ ಮತಗಳಿಕೆ ಕಡಿಮೆ: ಕಳೆದ ಸಲಕ್ಕೆ ಹೋಲಿಸಿದರೆ ಈ ಬಾರಿ ಪಕ್ಷೇತರರು ಮತ ಬಾಚಿದ ಪ್ರಮಾಣ ಕಡಿಮೆ. ಕಳೆದ ಬಾರಿ ಸುಳ್ಯ ಹೊರತುಪಡಿಸಿ ಇತರೆಡೆಗಳಲ್ಲಿ 14 ಮಂದಿ ಪಕ್ಷೇತರರು ಸ್ಪರ್ಧಿಸಿದ್ದು, 47,906 ಮತ ಪಡೆದಿದ್ದರು. ಇದಕ್ಕೆ ಕಾರಣ ಪುತ್ತೂರಲ್ಲಿ ಪಕ್ಷೇತರ ಅಭ್ಯರ್ಥಿ ಶಕುಂತಳಾ ಶೆಟ್ಟಿ ಸ್ಪರ್ಧಿಸಿ 25,171 ಮತ ಪಡೆದದ್ದು. ಇದು ಕಾಂಗ್ರೆಸ್ ಸೋಲಿಗೆ ಕಾರಣವಾಗಿತ್ತು. ಈ ಬಾರಿ ಕಣದಲ್ಲಿ 22 ಮಂದಿ ಪಕ್ಷೇತರರಿದ್ದರೂ ಪಡೆದ ಮತ 14,932. ಬೆಳ್ತಂಗಡಿ, ಬಂಟ್ವಾಳ ಕ್ಷೇತ್ರಗಳಲ್ಲಿ ಪಕ್ಷೇತರ ಸ್ಪರ್ಧೆ ಇರಲಿಲ್ಲ. ಆದರೂ ಪುತ್ತೂರು, ಸುಳ್ಯ, ಮಂಗಳೂರು ಉತ್ತರ, ಮೂಡುಬಿದಿರೆಗಳಲ್ಲಿ ಪಕ್ಷೇತರರು ತಲಾ ಒಂದು ಸಾವಿರಕ್ಕಿಂತ ಜಾಸ್ತಿ ಮತ ಪಡೆದಿದ್ದಾರೆ.

-ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.