ಉಪ್ಪಿನಂಗಡಿ: ಮತ್ತೆ ಸರಣಿ ಕಳ್ಳತನ
ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯ 34ನೇ ನೆಕ್ಕಿಲಾಡಿ, ಇಳಂತಿಲ, ಉಪ್ಪಿನಂಗಡಿಯ ಹಲವೆಡೆ ಶನಿವಾರ ರಾತ್ರಿ ಕಳ್ಳತನದ ಕೃತ್ಯಗಳು ನಡೆದಿವೆ.
25 ಪವನ್ ಚಿನ್ನಾಭರಣ ಕಳವು: 34ನೇ ನೆಕ್ಕಿಲಾಡಿಯ ಇಸಾಕ್ ಮೆದರಬೆಟ್ಟು ಎಂಬವರ ಮನೆಗೆ ನುಗ್ಗಿದ ಕಳ್ಳರು, ಮನೆಯ ಕಪಾಟಿನಲ್ಲಿದ್ದ ಸುಮಾರು 25 ಪವನ್ ತೂಕದ ಚಿನ್ನಾಭರಣಗಳನ್ನು ಕಳವುಗೈದಿರುವ ಬಗ್ಗೆ ಅಂದಾಜಿಸಲಾಗಿದೆ.
ಮನೆ ಮಂದಿ ವಿದೇಶ ಪ್ರವಾಸದಲ್ಲಿದ್ದ ಬಗ್ಗೆ ಮಾಹಿತಿ ಪಡೆದಿರುವ ಕಳ್ಳರು, ಮನೆಯ ಬಾಗಿಲು ಮುರಿದು ಒಳ ನುಗ್ಗಿ, ಮನೆಯ ಕೋಣೆಯಲ್ಲಿದ್ದ ಕಪಾಟುಗಳನ್ನೆಲ್ಲ ಚೆಲ್ಲಾಪಿಲ್ಲಿಯಾಗಿಸಿ, ಬೆಲೆ ಬಾಳುವ ಆಭರಣಗಳನ್ನು ದೋಚಿದ್ದಾರೆ. ಇಸಾಕ್ ಅವರ ಸಹೋದರ ಮನೆಯ ಗೇಟ್ ದೀಪದ ಸ್ವಿಚ್ ತೆಗೆಯಲು ಬಂದಾಗ ಕಳ್ಳತನದ ಕೃತ್ಯ ಗಮನಕ್ಕೆ ಬಂದಿತ್ತು.
ವೈನ್ ಶಾಪ್ಗೆ ನುಗ್ಗಿದ ಕಳ್ಳರು: ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಅನತಿ ದೂರದಲ್ಲಿರುವ ಸ್ವಸ್ತಿಕ್ ವೈನ್ ಶಾಪ್ನ ಬೀಗ ಮುರಿದು ಒಳ ನುಗ್ಗಿದ ಕಳ್ಳರು, ಒಳಗೆಲ್ಲ ಜಾಲಾಡಿಸಿ ಹಣ ಶೋಧಿಸಿದ ಬಗ್ಗೆ ತಿಳಿದು ಬಂದಿದೆ. ವೈನ್ ಶಾಪ್ನೊಳಗಿದ್ದ ಮದ್ಯ ಪೇಯಗಳನ್ನು ಮುಟ್ಟದಿರುವುದು ಕಳ್ಳರು ಮದ್ಯಪ್ರಿಯರಾಗಿಲ್ಲ ಎನ್ನುವುದನ್ನು ಅಂದಾಜಿಸುವಂತಾಗಿದೆ.
ಕಲ್ಕುಡ ದೈವಸ್ಥಾನದಲ್ಲಿ ಕಳವು: ಇಳಂತಿಲ ಗ್ರಾಮದ ಕಡವಿನ ಬಾಗಿಲು ಎಂಬಲ್ಲಿನ ಇತಿಹಾಸ ಪ್ರಸಿದ್ಧ ಕಲ್ಕುಡ ದೈವಸ್ಥಾನದ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ದೈವಸ್ಥಾನದಲ್ಲಿದ ಕಾಣಿಕೆ ಡಬ್ಬಿಯನ್ನು ಕದ್ದೊಯ್ದಿದ್ದಾರೆ.
ಮಲಗಿದ್ದ ಮಕ್ಕಳ ಚಿನ್ನಾಭರಣ ಕಸಿಯಲು ಯತ್ನ: 34ನೇ ನೆಕ್ಕಿಲಾಡಿ ಗ್ರಾಮದ ನಿವಾಸಿ ಇಬ್ರಾಹಿಂ ಎಂಬವರ ಮನೆಯೊಳಗೆ ನುಗ್ಗಿದ ಕಳ್ಳರು, ಮನೆಯೊಳಗೆ ನಿದ್ರಿಸುತ್ತಿದ್ದ ಇಬ್ರಾಹಿಂ ಅವರ ಹೆಣ್ಣು ಮಕ್ಕಳ ಕುತ್ತಿಗೆಯಲ್ಲಿದ್ದ ಚಿನ್ನಾಭರಣ ಕಸಿಯಲು ಯತ್ನಿಸುತ್ತಿದ್ದಂತೆ ಎಚ್ಚರಗೊಂಡ ಇಗ್ರಾಹಿಂ, ಕಳ್ಳರನ್ನು ಹಿಡಿಯಲು ಮುಂದಾದರು. ಈ ಸಂದರ್ಭ ಕಳ್ಳರು ಮನೆಯಂಗಳದಲ್ಲಿ ಒಣಗಲು ಹಾಕಲಾಗಿದ್ದ ಬಟ್ಟೆಬರೆಗಳಿಗೆ ಬೆಂಕಿ ಹಚ್ಚಿ, ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಆಡು ಕಳವು: 34ನೇ ನೆಕ್ಕಿಲಾಡಿ ಗ್ರಾಮದ ಕೊಳಕ್ಕೆ ಎಂಬಲ್ಲಿನ ರಾಮಚಂದ್ರ ಗೌಡ ಎಂಬವರು ಸಾಕಿದ್ದ ಆಡುಗಳನ್ನು ಕಳವುಗೈಯಲು ಯತ್ನಿಸಲಾಗಿದೆ.
ಈ ಪೈಕಿ ಒಂದು ಆಡು ಕಳ್ಳರ ಪಾಲಾಗಿದ್ದು, ಉಳಿದ ಆಡುಗಳು ಓಡಿ ತಪ್ಪಿಸಿಕೊಂಡಿವೆ. ಆಡು ಕಳವುಗೀಡಾದ ಸಮಯದಲ್ಲಿ ಪರಿಸರದಲ್ಲಿ ಕೆಎ 12 1131 ಸಂಖ್ಯೆಯ ಕಪ್ಪು ಬಣ್ಣದ ಅಲ್ಟೋ ಕಾರು ಸಂಶಯಾಸ್ಪದವಾಗಿ ಸಂಚರಿಸುತ್ತಿದ್ದು, ಈ ಕಾರಿನಲ್ಲಿಯೇ ಬಂದು ಆಡು ಕಳವು ನಡೆಸಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆಯೂ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.
ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

