ಮಳೆ ಬರಿಸಿದ ಬಲ್ಲಾಳರಾಯನ ಮೂರ್ತಿ!
ಸುಬ್ರಹ್ಮಣ್ಯ: ರಾಜ್ಯದೆಲ್ಲೆಡೆ ಉತ್ತಮ ಮಳೆಯಾಗಿ ಉತ್ತಮ ಬೆಳೆಯಾಗಲು ಕಾರಣಿಕ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಡಳಿತ ಮಂಡಳಿಯ ಮುಂದಾಳುತ್ವದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಕೇಶವ ಜೋಗಿತ್ತಾಯರ ನೇತೃತ್ವದಲ್ಲಿ ಶನಿವಾರ ಮಧ್ಯಾಹ್ನ ಕುಕ್ಕೆ ಸುಬ್ರಹ್ಮಣ್ಯನಲ್ಲಿ ವಿಶೇಷ ಪ್ರಾರ್ಥನೆ ನಡೆಸಿ, ಪ್ರಾಚೀನ ನಂಬಿಕೆಯಂತೆ ಬಲ್ಲಾಳರಾಯನ ವಿಗ್ರಹಕ್ಕೆ ದೇವಸ್ಥಾನದ ಸಾರು, ಸಾಂಬಾರು, ಚಟ್ನಿಗಳನ್ನು ಲೇಪಿಸಲಾಯಿತು.
ಸಪ್ತಮಿ ದಿವಸ ಮಧ್ಯಾಹ್ನ ಶ್ರೀ ದೇವರ ಸಮ್ಮುಖದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಕೇಶವ ಜೋಗಿತ್ತಾಯರು ರಾಜ್ಯದಲ್ಲಿ ಕಾಲಕಾಲಕ್ಕೆ ಉತ್ತಮ ಮಳೆಯಾಗಿ ಸುಭೀಕ್ಷೆ ನೆಲೆಸಲಿ ಎಂದು ಶ್ರೀ ದೇವರಲ್ಲಿ ಪ್ರಾರ್ಥನೆ ಮಾಡಿದರು. ಅಲ್ಲದೆ ಪರ್ಜನ್ಯ ಸೂಕ್ತ ಜಪವನ್ನು 12 ಬಾರಿ ಜಪಿಸಿದರು. ಅದೇ ರೀತಿ ಉತ್ತಮ ಮಳೆಯಾದರೆ ದೇವರಿಗೆ 108 ಕೊಡ ಜಲಾಭಿಷೇಕ ಮಾಡುವುದಾಗಿ ಸಂಕಲ್ಪ ಮಾಡಿದರು. ಇದೀಗ ಪ್ರಾರ್ಥನೆ ಫಲಿಸಿದ್ದು, ಕ್ಷೇತ್ರದಲ್ಲಿ ಶನಿವಾರ ರಾತ್ರಿ ಉತ್ತಮ ಮಳೆಯಾಗಿದೆ.
ಈ ಸಂದರ್ಭದಲ್ಲಿ ಶ್ರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ, ಸದಸ್ಯರಾದ ಸುಬ್ರಹ್ಮಣ್ಯ ಭಟ್, ಮೋನಪ್ಪ ಮಾನಾಡು ಹಾಗೂ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಂ. ಕಾಳಿ, ದೇವಸ್ಥಾನದ ಹೆಬ್ಬಾರ್ ಷಣ್ಮುಖ ಉಪರ್ಣ ಮೊದಲಾದವರು ಇದ್ದರು.
ಮಳೆ ಬರಿಸುವ ಬಲ್ಲಾಳ ರಾಯ: ಹಿಂದೆ ಮಳೆ ಬಾರದಿದ್ದಾಗ ಸುಬ್ರಹ್ಮಣ್ಯ ದೇವಳ ಎದುರು ಹರಿಯುವ ದರ್ಪಣ ತೀರ್ಥ ನದಿಯಲ್ಲಿರುವ ಬಲ್ಲಾಳ ರಾಯನ ವಿಗ್ರಹವನ್ನು ಹೊರಗೆ ತೆಗೆದು ಅದಕ್ಕೆ ದೇವಸ್ಥಾನದ ಸಾರು, ಸಾಂಬಾರು, ಚಟ್ನಿಗಳನ್ನು ಲೇಪಿಸುವ ಐತಿಹ್ಯ ಇತ್ತು. ಇದರಿಂದ ಮಳೆಯಾಗುತ್ತದೆ ಎಂಬ ನಂಬಿಕೆ. ಈ ರೀತಿ ಮಾಡಿದಾಗ ಮಳೆಯಾದ ಅನೇಕ ನಿದರ್ಶನಗಳೂ ನಡೆದಿವೆ. ಅಲ್ಲದೆ ಅತಿ ಮಳೆಯಾಗಿ ಅನಾವೃಷ್ಟಿ ಉಂಟಾದಾಗ ಈ ವಿಗ್ರಹವನ್ನು ನೀರಿನಲ್ಲಿ ತೇಲಿಸಿ ಬಿಡಲಾಗುತ್ತಿತ್ತು. ಇದರಿಂದ ಪ್ರವಾಹ ಕಡಿಮೆಯಾದ ನಿದರ್ಶನಗಳು ನಡೆದಿವೆ. ಆದರೆ ಇದೀಗ ಈ ವಿಗ್ರಹ ಸುಮಾರು 20 ವರ್ಷಗಳಿಂದ ನೀರಿನೊಳಗೆ ಇತ್ತು.
ಈ ಬಗ್ಗೆ ಪ್ರಶ್ನೆ ಇರಿಸಿ ವಿಗ್ರಹ ಹುದುಗಿರುವ ಪ್ರದೇಶ ಶೋಧಿಸಿ ವಿಗ್ರಹವನ್ನು ದರ್ಪಣ ತೀರ್ಥದ ಕಿನಾರೆಯಲ್ಲಿ ಇರಿಸಲಾಯಿತು. ಆ ಬಳಿಕ ವಿಗ್ರಹಕ್ಕೆ ದೇವಳದ ಸಾರು, ಸಾಂಬಾರು, ಚಟ್ನಿ ಇತ್ಯಾದಿಗಳನ್ನು ಲೇಪಿಸಲಾಯಿತು. ಈ ರೀತಿಯಾಗಿ ಹಿಂದಿನ ಐತಿಹ್ಯದಂತೆ ನಡೆದುಕೊಳ್ಳಲಾಯಿತು. ಇದರ ಫಲಶ್ರುತಿ ಎಂಬಂತೆ ಶನಿವಾರ ಸುಬ್ರಹ್ಮಣ್ಯದಲ್ಲಿ ಧಾರಾಕಾರ ಮಳೆಯಾಗಿದೆ ಎಂದು ಆಸ್ತಿಕರು ನಂಬಿಕೆ ಇರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

