ದಕ್ಷಿಣ ಕನ್ನಡ

ಗ್ರಾಹಕನ ಸೋಗಿನಲ್ಲಿ ದಂತ ಚೋರನ ಬಂಧಿಸಿದ ಪೊಲೀಸರು

Published On :

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ದೇವಚಳ್ಳ ಎಂಬಲ್ಲಿ ಮನೆಯಲ್ಲಿ ದಾಸ್ತಾನು ಇಟ್ಟಿದ್ದ 66 ಲಕ್ಷ ಮೌಲ್ಯದ ಬೆಲೆಬಾಳುವ 19 ಕೆ.ಜಿ ಆನೆ ದಂತ ಹಾಗೂ ವಾಹನಗಳನ್ನು ಪೊಲೀಸರು ಮಂಗಳವಾರ ವಶಪಡಿಸಿಕೊಂಡಿದ್ದಾರೆ.
 ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಬಂಧಿಸಿ, ದಂತ ಸಾಗಾಟಕ್ಕೆ ಬಳಸಿದ 1 ಜೀಪು, 2 ಬೈಕು ಹಾಗೂ ಮಾರುತಿ ಕಾರುಗಳನ್ನೂ ವಶಪಡಿಸಿಲಾಗಿದೆ.
2 ಆನೆ ದಂತ ಸಂಗ್ರಹವಿರುವ ಬಗ್ಗೆ ಸುಳ್ಯ ವೃತ್ತ ನಿರೀಕ್ಷಕ ಸುದರ್ಶನ್‌ಗೆ ಮಧ್ಯಾಹ್ನದ ವೇಳೆಗೆ ಖಚಿತ ಮಾಹಿತಿ ಲಭಿಸಿತ್ತು. ಸಂಜೆ 6 ಮಂದಿ ದಂತ ಚೋರರು ಮಡಪ್ಪಾಡಿ ಎಂಬಲ್ಲಿ ಖಾಸಗಿ ವಾಹನಕ್ಕಾಗಿ ಕಾಯುತ್ತಿದ್ದರು. ಅವರನ್ನು ವೃತ್ತ ನಿರೀಕ್ಷಕ ಮೊಬೈಲ್‌ನಲ್ಲಿ ಸಂಪರ್ಕಿಸಿ, 'ನಾನು ದಂತ ಖರೀದಿಸುವ ವ್ಯಾಪಾರಿಯೆಂದೂ, ಎಲ್ಲಿಗೆ ಬರಬೇಕು?' ಎಂದು ವಿಚಾರಿಸಿ ಖಾಸಗಿ ವಾಹನದಲ್ಲಿ ಸುಬ್ರಹ್ಮಣ್ಯ ಪರಿಸರದ ಹತ್ತಾರು ಹುಡುಗರನ್ನು ಕರೆದುಕೊಂಡು ಮಡಪ್ಪಾಡಿಯ ದೇವಚಳ್ಳ ಗ್ರಾಮದ ಕೇರ್ಪು ಎಂಬಲ್ಲಿಗೆ ತೆರಳಿದ್ದರು.
 ಅಲ್ಲಿಯ ಒಂದು ಜಾಗದಲ್ಲಿ ವ್ಯಕ್ತಿಯೊಬ್ಬ ಕಾದು ಕುಳಿತಿದ್ದ. ಸುತ್ತಲೂ ದಟ್ಟವಾದ ಮೀಸಲು ಅರಣ್ಯವಿದ್ದು, ಅರಣ್ಯದೊಳಗೆ 1 ಕಿ.ಮೀ. ದೂರ ನಡೆದುಕೊಂಡು ವ್ಯಕ್ತಿಯೊಂದಿಗೆ ಹೋದರು. ಮುಂದಿನ ಜಾಗದಲ್ಲಿ 5 ಮಂದಿ ಇದ್ದರು. ದಂತ ಖರೀದಿ ಬಗ್ಗೆ ಮಾತುಕತೆ ನಡೆದಾಗ ಸಂಶಯಗೊಂಡ ದಂತಚೋರರಲ್ಲಿ ಐವರು ತಪ್ಪಿಸಿಕೊಂಡಿದ್ದಾರೆ.
ಗುಂಡಿನ ಎಚ್ಚರಿಕೆ: ಆ ಸಂದರ್ಭ ವೃತ್ತ ನಿರೀಕ್ಷಕ, ಓಡಿದರೆ ಗುಂಡು ಹಾರಿಸುವುದಾಗಿ ಪಿಸ್ತೂಲ್ ತೋರಿಸಿದಾಗ ಒಬ್ಬ ಸಿಕ್ಕಿಬಿದ್ದಿದ್ದಾನೆ. ಸ್ವಲ್ಪ ದೂರದಲ್ಲಿ ಮರದಲ್ಲಿ ನೇತಾಡುತ್ತಿದ್ದ ಗೋಣಿ ಚೀಲದಲ್ಲಿ 13 ಕೆ.ಜಿ ತೂಕದ 50 ಮೀ. ಉದ್ದ ಹಾಗೂ 33 ಮೀ. ಉದ್ದದ 6 ಕೆ.ಜಿ ತೂಕದ ದಂತಗಳು ಪತ್ತೆಯಾಗಿವೆ.
 ಕಾಡಿನ ಹೊರಗೆ ಸುಬ್ರಹ್ಮಣ್ಯ ಠಾಣಾಧಿಕಾರಿ ನೇತೃತ್ವದ ತಂಡ ಕಾದು ನಿಂತಿತ್ತು. ಮಾರು ವೇಷದಲ್ಲಿ ಹೋಗಿ ಈ ಘಟನೆಯನ್ನು ಭೇದಿಸಿದ ಪೊಲೀಸರ ಕಾರ್ಯಾಚರಣೆಯನ್ನು ಸಾರ್ವಜನಿಕರು ಪ್ರಶಂಸಿಸಿದ್ದಾರೆ.
ಬುಧವಾರ ಸುಬ್ರಹ್ಮಣ್ಯ ಪೋಲೀಸ್ ಠಾಣೆಗೆ ಭೇಟಿ ನೀಡಿದ ಡಿವೈಎಸ್‌ಪಿ ಎಚ್.ಡಿ ಮೆಂಡೋನ್ಸ ಕ್ಷಿಪ್ರ ಕಾರ್ಯಾಚರಣೆ ಮೂಲಕ ಆರೋಪಿಗಳನ್ನು ಬಂಧಿಸಿರುವ ವೃತ್ತ ನಿರೀಕ್ಷಕ ಸುದರ್ಶನ್ ಹಾಗೂ ತಂಡದ ಕಾರ್ಯವನ್ನು ಶ್ಲಾಘಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.