ಕುದ್ರೋಳಿ ಕ್ಷೇತ್ರ ಬೆಳಗಿದ ಸಾಲುಸಾಲು ಗೂಡುದೀಪ
ಮಂಗಳೂರು: ದೀಪ ದೀಪಗಳ ಹಬ್ಬಕ್ಕೆ ಗೂಡು ದೀಪಗಳ ಸಮಾಗಮ. ಎಲ್ಲಿ ನೋಡಿದರೂ ಗೂಡುದೀಪಗಳ ಸರಮಾಲೆ, ದೊಡ್ಡ, ಸಾಧಾರಣ, ಪುಟ್ಟ ಗೂಡುದೀಪಗಳು, ಅದರ ಅಂದ ಹೆಚ್ಚಿಸುತ್ತಿರುವ ಬಣ್ಣಬಣ್ಣದ ಕಾಗದಗಳು...
ಇದು ಯಾವುದೋ ಅಂಗಡಿ ಮುಂದೆ ಹಾಕಿರುವ ಗೂಡುದೀಪಗಳ ಸರಮಾಲೆಯಲ್ಲ. 'ನಮ್ಮ ಕುಡ್ಲ' ಚಾನೆಲ್ ವತಿಯಿಂದ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ನಡೆದ ಗೂಡುದೀಪ ಸ್ಪರ್ಧೆಯಲ್ಲಿ ಕಂಡು ಬಂದ ದೃಶ್ಯ.
ತುಳಸಿಕಟ್ಟೆ ಆಕೃತಿಯ ಗೂಡುದೀಪ, ಭವ್ಯ ರಂಗಮಂದಿರ ಮಧ್ಯದಲ್ಲಿ ಪುಟ್ಟ ಗೂಡುದೀಪ, ಬಣ್ಣ ಬಣ್ಣದ ಮಣಿಸರಮಾಲೆಯ ಗೂಡುದೀಪ, ವೃತ್ತಾಕಾರದ ಕನ್ನಡಿಗಳನ್ನು ಅಂಟಿಸಿದ ಗೂಡುದೀಪ, ಸ್ಟ್ರಾ, ಬೇಳೆಕಾಳು, ಅನ್ನ ಬಸಿಯುವ ಸಾಧನ, ಬತ್ತದ ಪೈರು, ಅದರ ಬೈಹುಲ್ಲು, ಬತ್ತದ ಕಾಳು, ಸೊಯಾಬಿನ್ ಮತ್ತು ಕಡಲೆ, ತೆಂಗಿನ ಚಿಪ್ಪು ಮತ್ತು ಚೆಂಡಾಳೆ, ಮರಳಿನಲ್ಲಿ ಸಿಗುವ ಬಣ್ಣಬಣ್ಣದ ಕಲ್ಲಿನ ತುಣುಕು ಅಂಟಿಸಿದ ಗೂಡುದೀಪ, ಮಕ್ಕಳಾಡುವ ಗೋಲಿಯನ್ನು ಅಂಟಿಸಿದ ಗೂಡುದೀಪ, ಚಾಪೆಯಲ್ಲಿ ಅಂಟಿಸಿ ಅದರಲ್ಲಿ ಯಕ್ಷಗಾನ ಮುಖವಾಡದ ಚಿತ್ರ ಬಿಡಿಸಿದ ಗೂಡುದೀಪ ಇದೆಲ್ಲಾ ಇಲ್ಲಿ ಸ್ಪರ್ಧೆಯಲ್ಲಿದ್ದ ಗೂಡುದೀಪಗಳ ವೈಖರಿ.
ಗೂಡುದೀಪಗಳ ತಯಾರಿಕೆಯಲ್ಲಿ ಹೆಚ್ಚು ಮಂದಿ ಮಕ್ಕಳೇ ಇಲ್ಲಿ ಕಾಣುತ್ತಿದ್ದು ವಿಶೇಷ. ದೊಡ್ಡವರು ಸ್ಪರ್ಧೆಗಾಗಿ ಕಲಾತ್ಮಕವಾಗಿ, ವಿವಿಧ ಬಗೆಯ ವಿನ್ಯಾಸಗಳಿಂದ, ಎತ್ತರದ ಗೂಡುದೀಪಗಳನ್ನು ತಯಾರಿಸಿದ್ದರೆ, ಮಕ್ಕಳು ಸಣ್ಣ ಕೋಲಿನ ಚೌಕಕಾರದಲ್ಲಿ ಮಾಡಿದ ಮಾದರಿಗೆ ಬಣ್ಣಬಣ್ಣದ ಕಾಗದ, ಥರ್ಮಕೋಲು ಇವುಗಳನ್ನು ಅಂಟಿಸಿ ಸೈ ಎನಿಸಿದ್ದರು. ತಾನು ತನ್ನ ಫ್ರೆಂಡ್ ಸಹಾಯದಿಂದ ಗೂಡುದೀಪಕ್ಕೆ ಮತ್ತಷ್ಟು ಮೆರುಗು ಮಾಡುತ್ತಾ, ಅದನ್ನು ಕಟ್ಟಲು ಸ್ಥಳ ಹುಡುಕುತ್ತಾ, ಬೇರೆಯವರು ತಂದ ಗೂಡುದೀಪವನ್ನು ಗಮನಿಸುತ್ತಾ, ಹಣೆಯಿಂದ ನೆಲಕ್ಕುದುರುತ್ತಿದ್ದ ಬೆವರಿನ ಮಧ್ಯೆ ಎತ್ತರದ ಹಗ್ಗದ ಮೇಲೆ ತನ್ನ ಗೂಡುದೀಪ ಕಟ್ಟಿಸುವ ಜವಾಬ್ದಾರಿ. ಇದು ಪುಟ್ಟ ಹುಡುಗರ ಮಾಡುತ್ತಿದ್ದ ಕೆಲಸ ಕಾರ್ಯಗಳು.
ಪಡುವಣದಲ್ಲಿ ಸೂರ್ಯ ತನ್ನ ದಿನಚರಿಯನ್ನು ಮುಗಿಸುತ್ತಿದ್ದಂತೆ ದೇವಸ್ಥಾನ ಆವರಣದಲ್ಲಿ ಗೂಡುದೀಪಗಳ ಸಾಲುಗಳ ಸಂಖ್ಯೆ ಹೆಚ್ಚಾಗುತ್ತಿತ್ತು.
ಇತ್ತೀಚೆಗೆ ಎಲ್ಲರ ಮನಸ್ಸಿನಲ್ಲಿ ಅಚ್ಚಾಗಿ ಉಳಿದಿದ್ದ ಈಗ ಚಲನಚಿತ್ರದ ನೊಣದ ಆಕೃತಿಯ ಗೂಡುದೀಪ ಕೂಡ ವಿಶೇಷ ಆಕರ್ಷಣೆಯಾಗಿತ್ತು. ಈ ಬಾರಿ ಹೆಚ್ಚು ತುಳಸಿ ಕಟ್ಟೆ ಆಕಾರದ ದೊಡ್ಡ ದೊಡ್ಡ ಗೂಡುದೀಪಗಳು ಕಂಡುಬಂದವು. 13 ಅಡಿ ಎತ್ತರದ ರಥವನ್ನು ಹೋಲುವ ಗೂಡುದೀಪ, ಜೈ ಹನುಮಾನ್ ಮಂದಿರ ಇವೆಲ್ಲಾ ಸ್ಪರ್ಧೆಯಲ್ಲಿದ್ದ ಗೂಡುದೀಪದ ಆಕೃತಿಗಳು.
ಗೂಡುದೀಪಗಳಲ್ಲದೆ ಇಲ್ಲಿ ವಿವಿಧ ಕಲಾಕೃತಿಗಳನ್ನು ಮಾಡಲಾಗಿತ್ತು. ಇದರಲ್ಲಿ ದೇವಸ್ಥಾನಗಳ ಮಾದರಿ ಹೆಚ್ಚಾಗಿತ್ತು. ಉಡುಪಿ ದೇವಸ್ಥಾನ ಮಾದರಿ, ಗೋಕರ್ಣ ಕ್ಷೇತ್ರ, ಸಾಯಿ ಮಂದಿರ ಆಕರ್ಷಣೀಯವಾಗಿತ್ತು.
ತೆಂಗಿನ ಚಿಪ್ಪು ಗೂಡುದೀಪ: ಕುಲಶೇಖರ ಕೈಕಂಬದ ಮಾಸ್ಟರ್ ಗೈಸ್ ನಿರ್ಮಿಸಿದ ತೆಂಗಿನ ಚಿಪ್ಪಿನ ಗೂಡುದೀಪ ಪ್ರಮುಖ ಆಕರ್ಷಣೆಯಾಗಿತ್ತು. ಇದರಲ್ಲಿ 1,806 ತೆಂಗಿನ ಚಿಪ್ಪನ್ನು ಅಂಟಿಸಲಾಗಿತ್ತು. ಅಲ್ಲದೆ ಇದಕ್ಕೆ ಮರದ ಹುಡಿಯಿಂದ ಲೇಪನ ಮಾಡಲಾಗಿತ್ತು. '14 ವರ್ಷದಿಂದ ಸ್ನೇಹಿತರೆಲ್ಲಾ ಒಟ್ಟಾಗಿ ಗೂಡುದೀಪ ತಯಾರಿಸುತ್ತಿದ್ದು, ಚಿಪ್ಪಿನ ಗೂಡುದೀಪವನ್ನು ಒಂದುವಾರದಿಂದ ತಯಾರಿಸಲಾಗಿದೆ. ಕುದ್ರೋಳಿಯಲ್ಲಿ ಇದು 3ನೇ ಬಾರಿ ಪಾಲ್ಗೊಳ್ಳುತ್ತಿದ್ದೇವೆ. ಒಂದು ಬಾರಿ ಪ್ರಥಮ ಬಹುಮಾನ ಪಡೆದಿದ್ದೆವು' ಎನ್ನುತ್ತಾರೆ ಮಾಸ್ಟರ್ ಗೈಸ್ನ ಅಮೃತ್ ಕಿಣಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

