12 ಮಂದಿ ರಿಕ್ಷಾ ಚಾಲಕರಿಗೆ ಸನ್ಮಾನ
ಮೂಲ್ಕಿ: ಸಮಾಜದಲ್ಲಿ ಅಹೋರಾತ್ರಿ ದುಡಿಯುವಂತಹ ಶ್ರಮಿಕರನ್ನು ಗುರುತಿಸಿ ಗೌರವಿಸುವ ಮೂಲಕ ಅವರಲ್ಲಿನ ಪ್ರಾಮಾಣಿಕ ಸೇವೆಗೆ ಉತ್ತೇಜನ ನೀಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಚಂದ್ರಶೇಖರ ಸ್ವಾಮೀಜಿ ಟ್ರಸ್ಟ್ ಮೂಲಕ ಪ್ರತಿವರ್ಷ ಮೂಲ್ಕಿ ಆಸುಪಾಸಿನ ರಿಕ್ಷಾ- ಕಾರು ಚಾಲಕರನ್ನು ಗುರುತಿಸುವ ಕಾರ್ಯ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯವಾಗುವ ನಿಟ್ಟಿನಲ್ಲಿ ಜಾತಿ ಬೇಧವಿಲ್ಲದೇ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ಬೆಂಗಳೂರಿನ ಆರ್.ಟಿ. ನಗರದ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಮೂಲ್ಕಿಯ ಗೇರುಕಟ್ಟೆಯ ಸ್ವಾಮೀಜಿಯವರ ಆಶ್ರಮದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಜರುಗಿದ ಕಾರ್ಯಕ್ರಮದಲ್ಲಿ ಕಳೆದ 25 ವರ್ಷಗಳಿಂದ ರಿಕ್ಷಾ ಹಾಗೂ ಕಾರು ಚಾಲಕರಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ 12 ಮಂದಿ ಚಾಲಕರನ್ನು ನಗದು ಸಹಿತ ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಸುಮಾರು ಐನೂರಕ್ಕೂ ಹೆಚ್ಚು ಚಾಲಕರು ಸೇರಿದಂತೆ ಸಾವಿರ ಮಂದಿಗೆ ತಲಾ ಹತ್ತು ಕೆ.ಜಿ. ಅಕ್ಕಿ, ಬಟ್ಟೆ ಬರೆ ಹಾಗೂ ಸಿಹಿ ತಿಂಡಿ ವಿತರಿಸಲಾಯಿತು.
ವಾಕಿಂಗ್ ತೆರಳಿದ ವೃದ್ಧ ನಾಪತ್ತೆ
ಮಂಗಳೂರು: ಸುರತ್ಕಲ್ ನಿವಾಸಿ ಎಲ್ಲಪ್ಪ ಸಾಲ್ಯಾನ್ (80) ವಾಕಿಂಗ್ಗೆ ತೆರಳಿದವರು ನಾಪತ್ತೆಯಾಗಿದ್ದಾರೆ. ನ.1ರಂದು ಬೆಳಗ್ಗೆ 9 ಗಂಟೆಗೆ ವಾಕಿಂಗ್ ಹೋದವರು ವಾಪಸ್ ಬಂದಿಲ್ಲ. 5.5 ಅಡಿ ಎತ್ತರ, ಬಿಳಿ ತಲೆಕೂದಲು, ಸಪೂರ ಶರೀರ, ಬಳಿ ಅಂಗಿ, ಬಿಳಿ ಪಂಚೆ ಧರಿಸಿದ್ದಾರೆ.
ಉದ್ಯಮಿಗೆ ಭೂಗತ ಪಾತಕಿ ಕರೆ; ದೂರು
ಮಂಗಳೂರು: ಉದ್ಯಮಿಗೆ ದುಡ್ಡಿಗೆ ಬೇಡಿಕೆ ಇರಿಸಿ ಭೂಗತ ಲೋಕದಿಂದ ಮೊಬೈಲ್ ಕರೆ ಬಂದ ಪ್ರಕರಣ ಬರ್ಕೆ ಠಾಣೆಯಲ್ಲಿ ಸೋಮವಾರ ದಾಖಲಾಗಿದೆ. ರವಿ ಪೂಜಾರಿ ಹೆಸರಿನಲ್ಲಿ ಮಂಗಳೂರಿನ ಪನಾಮಾ ಗ್ರೂಪ್ ಮಾಲೀಕ ವಿವೇಕ್ ರಾಜ್ ಮೊಬೈಲಿಗೆ ಭಾನುವಾರ ರಾತ್ರಿ ಕರೆ ಬಂದಿದ್ದು ರು. 5 ಕೋಟಿಗೆ ಬೇಡಿಕೆ ಇರಿಸಲಾಗಿದೆ. ಈ ಕುರಿತು ಬರ್ಕೆ ಠಾಣೆಗೆ ದೂರು ನೀಡಲಾಗಿದೆ.
ಆತ್ಮಹತ್ಯೆಗೆ ಯತ್ನಿಸಿದ ಯುವಕನ ಜೀವರಕ್ಷಣೆ
ಮಂಗಳೂರು: ಉಳ್ಳಾಲ ಸೋಮೇಶ್ವರ ಬೀಚ್ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಜೀವರಕ್ಷಕ ದಳ ಸಿಬ್ಬಂದಿ ಸೋಮವಾರ ರಕ್ಷಿಸಿದ್ದಾರೆ. ಯುವಕನನ್ನು ಬಂಟ್ವಾಳ ತಾಲೂಕು ಚೇಳೂರು ಕೊದಂಟಿ ಮನೆಯ ಸಿರಿಲ್ ಡಿ'ಸೋಜರ ಪುತ್ರ ಅನಿಲ್ ಡಿ'ಸೋಜ (24) ಎಂದು ಗುರುತಿಸಲಾಗಿದೆ.
ಶವ ಗುರುತು ಪತ್ತೆ
ಉಪ್ಪಿನಂಗಡಿ: ಕಳೆದ ಶನಿವಾರ ಉಪ್ಪಿನಂಗಡಿಯಲ್ಲಿ ಶವವಾಗಿ ಪತ್ತೆಯಾದ ಅಪರಿಚಿತ ವ್ಯಕ್ತಿಯ ಗುರುತು ಪತ್ತೆಯಾಗಿದ್ದು, ಆತ ತಮಿಳುನಾಡಿನ ಮದರ್ ಷಾ ಎಂಬವರ ಮಗ ಬಾಬು (37) ಎಂದು ತಿಳಿಯಲಾಗಿದೆ. ವಿವಾಹಿತನಾಗಿದ್ದು, ಮಕ್ಕಳ ತಂದೆಯಾಗಿರುವ ಬಾಬು, ವಿಪರಿತ ಕುಡಿತದ ಚಟ ಹೊಂದಿದ್ದು, ಉಪ್ಪಿನಂಗಡಿಯಲ್ಲಿ ಈತ ವಿಪರೀತ ಮದ್ಯ ಸೇವಿಸಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ವಿಚಾರ ತಿಳಿದ ಆತನ ಪೋಷಕರು ಮಂಗಳೂರಿಗೆ ಆಗಮಿಸಿ ಮೃತದೇಹವನ್ನು ಕೊಂಡೊಯ್ದಿದ್ದಾರೆ.
ಮರಳು ಲಾರಿ ವಶಕ್ಕೆ
ಉಪ್ಪಿನಂಗಡಿ: ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದ ಪ್ರಕರಣವನ್ನು ಉಪ್ಪಿನಂಗಡಿ ಪೊಲೀಸರು ಪತ್ತೆ ಹಚ್ಚಿ ಒಂದು ಲಾರಿ ಮರಳನ್ನು ಮುಟ್ಟುಗೋಲು ಹಾಕಿದ್ದಾರೆ. ಮಂಗಳೂರಿನ ಸಂಸ್ಥೆಯೊಂದರಲಾರಿಯಲ್ಲಿ ಮರಳನ್ನು ಯಾವುದೇ ದಾಖಲೆಗಳಿಲ್ಲದೆ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಪೊಲೀಸರು, ಲಾರಿ ಸಹಿತ ಮರಳನ್ನು ವಶಪಡಿಸಿಕೊಂಡಿದ್ದಾರೆ.
ಹುಲಿ ಚರ್ಮ ಸಾಗಾಟ: ಆರೋಪಿಗಳು ದೋಷಮುಕ್ತ
ವಿಟ್ಲ: ವನ್ಯಸಂರಕ್ಷಣಾ ಕಾಯ್ದೆಯಡಿಯಲ್ಲಿ 2008ನೇ ಸಾಲಿನ ಜು. 2ರಂದು ಹುಲಿ ಚರ್ಮ ಸಾಗಾಟ ಮಾಡಿದ್ದ ಆರೋಪಿಗಳೆಂದು ಬಂಧನಕ್ಕೊಳಗಾಗಿದ್ದವರು ದೋಷಮುಕ್ತರಾಗಿದ್ದಾರೆ. ಪುತ್ತೂರು ಉಪವಿಭಾಗ ಸಹಾಯಕ ಪೊಲೀಸ್ ಅಧೀಕ್ಷಕ ಅಭಿಷೇಕ್ ಗೋಯಲ್ ಅವರು ಖಚಿತ ಮಾಹಿತಿ ಮೇರೆಗೆ ಪತ್ತೆದಳದ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ, ವೀರಕಂಬ ಗ್ರಾಮದ ಪಾತ್ರತೋಟ ಅಬ್ದುಲ್ ಹಕೀಂ (39) ಕಾರಿನಲ್ಲಿ ಹುಲಿ ಚರ್ಮವನ್ನು ಸಾಗಾಟ ಮಾಡುತ್ತಿದ್ದಾಗ ಪತ್ತೆ ಹಚ್ಚಿ ಬಂಧಿಸಿದ್ದರು. ಆರೋಪಿ ತನಗೆ ಕಲ್ಲಡ್ಕದ ಮಹಮ್ಮದ್ ಕಬೀರ್ (26) ಹುಲಿಚರ್ಮವನ್ನು ತಂದುಕೊಟ್ಟಿದ್ದಾನೆ ಎಂದಿದ್ದ. ಅಲ್ಲದೇ ಮಹಮ್ಮದ್ ಕಬೀರ್ ಈ ಕಾರನ್ನು ಬೈಕ್ನಲ್ಲಿ ಹಿಂಬಾಲಿಸುತ್ತಿದ್ದ. ಪೊಲೀಸರು ಕಾರನ್ನು ನಿಲ್ಲಿಸಿದ ತಕ್ಷಣ ಕಬೀರ್ ಬೈಕ್ ಬಿಟ್ಟು ಕಾಡಿನಲ್ಲಿ ಓಡಿ, ಪರಾರಿಯಾಗಿದ್ದ. ಇವರಿಬ್ಬರನ್ನೂ ಆರೋಪಿಗಳೆಂದು ಪರಿಗಣಿಸಲಾಗಿತ್ತು. ಇದೀಗ ನ್ಯಾಯಾಲಯದಲ್ಲಿ ಅಭಿಷೇಕ್ ಗೋಯಲ್ ಮತ್ತು 10 ಮಂದಿ ಸಾಕ್ಷಿದಾರರನ್ನು ವಿಚಾರಣೆ ನಡೆಸಿದ್ದು, ಆರೋಪಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಶನ್ ವಿಫಲವಾಗಿದೆ. ನ್ಯಾಯಾಲಯವು ಆರೋಪಿಗಳನ್ನು ದೋಷಮುಕ್ತಿಗೊಳಿಸಿ, 2013ನೇ ಸಾಲಿನ ಸೆ. 19ರಂದು ತೀರ್ಪು ನೀಡಿದೆ.
ಆರೋಪಿಗಳ ಪರವಾಗಿ ಬಿ.ಸಿ. ರೋಡ್ನ ನ್ಯಾಯವಾದಿ ಪಿ. ಜಯರಾಮ ರೈ, ಸೆಕೀನಾ, ನರೇಂದ್ರನಾಥ ಭಂಡಾರಿ, ಪುಷ್ಪಲತಾ, ಚಂದ್ರಶೇಖರ ಶೆಟ್ಟಿ ವಾದಿಸಿದ್ದಾರೆ.
ಮೂಲ್ಕಿ: ಬಚ್ಚಲು ಮನೆಗೆ ಬೆಂಕಿ
ಮೂಲ್ಕಿ: ಮೂಲ್ಕಿಯ ಕೆನರಾ ಬ್ಯಾಂಕ್ ಎದುರುಗಡೆಯಿರುವ ನಿವೃತ್ತ ಬ್ಯಾಂಕ್ ಅಧಿಕಾರಿ ರಾಜೇಂದ್ರ ಕಾಮತ್ ಮನೆಯ ಬಚ್ಚಲು ಮನೆಯಲ್ಲಿ ಸೋಮವಾರ ರಾತ್ರಿ ಆಕಸ್ಮಿಕ ಬೆಂಕಿ ತಗಲಿ ಅಪಾರ ನಷ್ಟ ಸಂಭವಿಸಿದ್ದು ಸ್ಥಳೀಯರು ಕೂಡಲೇ ಸ್ಥಳಕ್ಕೆ ಆಗಮಿಸಿ ನೀರು ಹಾಕಿ ಬೆಂಕಿ ನಂದಿಸಿ ಹೆಚ್ಚಿನ ಹಾನಿಯಾಗುವುದನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಿನ್ನಿಗೋಳಿ, ಮೆನ್ನಬೆಟ್ಟು ನಪಂ ಆಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ: ಜೈನ್
ಮೂಲ್ಕಿ: ಕಿನ್ನಿಗೋಳಿ ಮತ್ತು ಮೆನ್ನಬೆಟ್ಟು ಗ್ರಾಮ ಪಂಚಾಯಿತಿಗಳನ್ನು ಸೇರಿಸಿ ನಗರ ಪಂಚಾಯಿತಿ ಆಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ರಾಜ್ಯ ಮೀನುಗಾರಿಕೆ ಮತ್ತು ಯುವಜನ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದ್ದಾರೆ. ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಡೆಮೂಲ ಗ್ರಾಮದಲ್ಲಿ ರು. 51.5 ಲಕ್ಷ ವೆಚ್ಚದಲ್ಲಿ ಅನುಷ್ಠಾನಗೊಳ್ಳಲಿರುವ ಸುವರ್ಣ ಗ್ರಾಮೋದಯ ಯೋಜನೆಯ ವಿವಿಧ ಕಾಮಗಾರಿಗಳ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಮಿತ್ತಬೈಲು ರಸ್ತೆಗೆ ರು. 10 ಲಕ್ಷ, ಅಜಾರು ಧೂಮಾವತಿ ದೈವಸ್ಥಾನ ರಸ್ತೆಗೆ 2 ಲಕ್ಷ, ಕಟೀಲು ಚರ್ಚ್ ರಸ್ತೆಗೆ ರು. 2 ಲಕ್ಷ ಹಾಗೂ ಜುಮಾದಿ ಗುಡ್ಡೆ ರಸ್ತೆಗೆ ರು. 1 ಲಕ್ಷ ಒದಗಿಸಲಾಗುವುದು ಎಂದು ತಿಳಿಸಿದರು. ಮೆನ್ನಬೆಟ್ಟು ಪಂಚಾಯಿತಿ ಅಧ್ಯಕ್ಷ ಜನಾರ್ದನ ಕಿಲೆಂಜೂರು, ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲು, ತಾಲೂಕು ಪಂಚಾಯಿತಿ ಸದಸ್ಯೆ ಬೇಬಿ ಸುಂದರ ಕೋಟ್ಯಾನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

