ನಾಡಿಗೆ ನಮಸ್ಕಾರ ಗ್ರಂಥಮಾಲೆಯ 12 ಕೃತಿ ಲೋಕಾರ್ಪಣೆ
ಕಾಂತಾವರ: ಯಾವುದೇ ವಿಶ್ವವಿದ್ಯಾನಿಲಯಗಳಲ್ಲೂ ಆಗದಂತಹ ಕಾರ್ಯ ಕಾಂತಾವರ ಕನ್ನಡ ಸಂಘದಿಂದ ಆಗುತ್ತಿದೆ. ವ್ಯಾವಹಾರಿಕ ದೃಷ್ಟಿಕೋನವನ್ನಿಟ್ಟುಕೊಳ್ಳದೆ ಕನ್ನಡ ಉಳಿಸಿ ಬೆಳೆಸುವ ಕಾಳಜಿಯಿಂದ ನಡೆಸಲ್ಪಡುವ ಇಲ್ಲಿನ ಕಾರ್ಯಗಳು ಇತರ ಕನ್ನಡಪರ ಸಂಘ ಸಂಸ್ಥೆಗಳಿಗೂ ಮಾದರಿ ಎಂದು ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಕೆ.ಎಂ. ಉಡುಪ ಅಭಿಪ್ರಾಯಪಟ್ಟರು.
ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ ಗ್ರಂಥಮಾಲೆಯ 8ನೇ ಕಂತಿನ ಹನ್ನೆರಡು ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಸಭಾಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಬಸವನಗುಡಿ ನ್ಯಾಶನಲ್ ಕಾಲೇಜಿನ ಕನ್ನಡ ಸ್ನಾತಕೋತ್ತರ ಕೇಂದ್ರದ ಅತಿಥಿ ಪ್ರಾಧ್ಯಾಪಕ ಡಾ.ಎಚ್.ಎಸ್. ಮಾಧವರಾವ್ ಸಮಾರಂಭದಲ್ಲಿ ಕೃತಿಕಾರರನ್ನು, ಪ್ರಕಟಣೆಯ ಪ್ರಾಯೋಜಕತ್ವ ವಹಿಸಿ ನೆರವಾದವರನ್ನು ಮತ್ತು ಯಕ್ಷಗಾನ ಕಲಾವಿದ ಕೋಳ್ಯೂರು ರಾಮಚಂದ್ರ ಅವರನ್ನು ಸನ್ಮಾನಿಸಿದರು. ಬಳಿಕ ಮಾತನಾಡಿದ ಅವರ ಕರಾವಳಿಯ ವಿಶಿಷ್ಟ ಸಂಸ್ಕೃತಿಯ ಸೊಬಗನ್ನು ತಮ್ಮ ಕೃತಿಗಳಲ್ಲಿ ಕಟ್ಟಿಕೊಡುತ್ತಿರುವ ಮೊಗಸಾಲೆಯವರ ಕನಸಿನಂತೆ ಹೆಗ್ಗೋಡು, ಸಾಣೇಹಳ್ಳಿ ಮತ್ತು ಮಲ್ಲಾಡಿಹಳ್ಳಿಯಂತೆಯೇ ಕಾಂತಾವರವು ಕೂಡಾ ಕರ್ನಾಟಕದಲ್ಲಿ ಸಾಂಸ್ಕೃತಿಕವಾಗಿ ಬೆಳೆದು ಗುರುತಿಸಲ್ಪಡುತ್ತಿರುವ ಗ್ರಾಮವಾಗಿದೆ. ನಾಡಿನ ಎಲ್ಲ ಜಿಲ್ಲೆಗಳಲ್ಲೂ ಇಂಥ ಕಾರ್ಯಗಳು ನಡೆಯಲಿ ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ಸ್ಥಳೀಯ ಪ್ರತಿಭೆಗಳಾದ ರಾಷ್ಟ್ರಪ್ರಶಸ್ತಿ ಪುರಸ್ಕಣತ ಶಿಕ್ಷಕಿ ಕಾಂತಾವರ ಸರೋಜಿನಿ ವಿ.ನಾಗಪ್ಪಯ್ಯ ಮತ್ತು ಸುಗಮ ಸಂಗೀತದ ನಿರ್ದೇಶಕ ಮತ್ತು ಗಾಯಕ ಕಾಂತಾವರ ಪ್ರಮೋದ್ ಸಪ್ರೆ ಅವರನ್ನೂ ಕಾಂತಾವರ ಬಾರಾಡಿಯ ಪ್ರಗತಿಪರ ಕೃಷಿಕ ಶ್ರೀ ವೆಂಕಟೇಶ ಮಯ್ಯ ಹಾಗೂ ಪಣಂಬೂರು ಎಂಸಿಎಫ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕಾಂತಾವರ ಪ್ರಭಾಕರ ರಾವ್ ಸನ್ಮಾನಿಸಿದರು.
ಕನ್ನಡಸಂಘದ ನಿರಂತರ ಪ್ರಾಯೋಜಕರಾಗಿರುವ ಸಿ.ಕೆ ಪಡಿವಾಳ್ ಉಪಸ್ಥಿತರಿದ್ದರು. ಪ್ರಮೋದ್ ವಾಣಿಶ್ರೀ ಸಪ್ರೆ ದಂಪತಿ ಮತ್ತು ತಂಡದಿಂದ ಸುಗಮ ಸಂಗೀತ ಕಛೇರಿ ನಡೆಯಿತು. ಡಾ.ನಾ. ಮೊಗಸಾಲೆ ಸ್ವಾಗತಿಸಿದರು. ಸದಾನಂದ ನಾರಾವಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

