ದಕ್ಷಿಣ ಕನ್ನಡ

ಕಾಮವೇ ಬಂಡವಾಳ: ಸೀಡಿ ಮಾಡಿ ಬ್ಲ್ಯಾಕ್‌ಮೇಲ್ ಮಾಡುವ ದಂಧೆ

Published On :

ಮಂಗಳೂರು: ಗಂಡಸರನ್ನು ಕಾಮದ ಬಲೆಗೆ ಕೆಡವಿ ರಹಸ್ಯ ಚಿತ್ರೀಕರಣ ಮೂಲಕ ಬ್ಲಾಕ್ ಮೇಲ್ ಮಾಡುತ್ತಿದ್ದ ತಂಡ ಪೊಲೀಸರ ಬಲೆಗೆ ಬಿದ್ದಿದೆ.
ಉಳ್ಳಾಲ ನಿವಾಸಿ ಇಲ್ಯಾಸ್, ಮುಕ್ಕಚೇರಿ ಆಸೀಫ್, ಬೊಳಿಯಾರು ಶೌಕತ್ ಬಂಧಿತರು.
 ಪ್ರಕರಣದಲ್ಲಿ ಸಹಕರಿಸಿದ ಮುಬಾರಕ್, ಜಲಾಲ್, ಇಮ್ರಾನ್, ಅಲ್ತಾಫ್, ನವಾಝ್ ಬಂಧಿತರು. ಸೀಡಿ ನಿರ್ಮಾಣಕ್ಕೆ 'ಕಲಾವಿದರಾಗಿ' ಸಹಕರಿಸಿದ್ದ ವಾಮಂಜೂರಿನ ಇಬ್ಬರು ಯುವತಿಯರೂ ಪೊಲೀಸರ ಬಲೆಗೆ ಬಿದ್ದಿದ್ದಾರೆ.
25 ಮಂದಿಯ ತಂಡ ಮಂಗಳೂರಿಂದ ಕುಂದಾಪುರದವರೆಗೆ ಜಾಲ ಹರಡಿಕೊಂಡಿದೆ. ಸಿರಿವಂತರನ್ನೇ ಗುರಿಯಾಗಿಸಿ ಅವರ ಚಾಪಲ್ಯವನ್ನು ನಗದೀಕರಿಸುವುದನ್ನೇ ಖತರ್ನಾಕ್ ತಂಡ ಉದ್ಯೋಗ ಮಾಡಿಕೊಂಡಿತ್ತು.
ದೊಡ್ಡ ಉದ್ಯಮಿಗಳ ಪಟ್ಟಿ ರೆಡಿ ಮಾಡಲು ಒಂದು ತಂಡ, ಅವರ ಚಲನವಲನ ವೀಕ್ಷಣೆಗೆ, ಮಾಹಿತಿ ಕಲೆ ಹಾಕಲು ಇನ್ನೊಂದು ತಂಡ. ಬಳಿಕ ತಂಡದ ಯುವತಿಯೊಬ್ಬಳು ಉದ್ಯಮಿ ಜತೆ ಸಂಪರ್ಕ ಬೆಳೆಸಿ ಒಂದು ರಾತ್ರಿ ಕಳೆಯಲು ದಿನ ನಿಗದಿ ಮಾಡುತ್ತಾರೆ.
ಸಲ್ಲಾಪದ ನಡುವೆಯೇ ದುರುಳರ ತಂಡ ಎಂಟ್ರಿಯಾಗುತ್ತದೆ. ಇನ್ನು ಕೆಲವೊಮ್ಮೆ ದೃಶ್ಯ ಚಿತ್ರೀಕರಣದ ಬಳಿಕ ಬ್ಲ್ಯಾಕ್ ಮೇಲ್ ಮಾಡುವ ತಂತ್ರವೂ ಇದೆ.
ಕಾಮಕೇಳಿಗೆ ಒಪ್ಪದವರನ್ನು ಬಲವಂತವಾಗಿ ಯುವತಿಯರ ಜತೆ ಚುಂಬಿಸಿ ಫೋಟೋ, ವೀಡಿಯೋ ಕೂಡಾ ಮಾಡುತ್ತಾರೆ. ಇದನ್ನು ಟೀವಿ ಚಾನೆಲ್‌ಗೆ ನೀಡುವ ಬೆದರಿಕೆ ಒಡ್ಡುತ್ತಾರೆ. ಅಲ್ಲಿಂದ ಹಣದ ಚೌಕಾಸಿ ಆರಂಭವಾಗುತ್ತದೆ. ಮಾನ, ಮರ್ಯಾದೆಗೆ ಅಂಜಿ ಉದ್ಯಮಿ ಲಕ್ಷಾಂತರ ರುಪಾಯಿ ನೀಡುತ್ತಾನೆ.
ಸಲಿಂಗಿಗಳಿಗೂ ಬಲೆ: ಕೇರಳದಲ್ಲಿ ಇದೇ ಗುಂಪು ಸಲಿಂಗ ಕಾಮಿಗಳನ್ನು ಬಲೆಗೆ ಬೀಳಿಸಿ ಲಕ್ಷಾಂತರ ದೋಚಿದೆ ಎನ್ನಲಾಗಿದೆ. ಶಾಲೆ ಬಿಟ್ಟ ಪೋಲಿ ಹುಡುಗರು ತಂಡದಲ್ಲಿದ್ದು, ಸಲಿಂಗ ಕಾಮಿಗಳ ವೀಡಿಯೋ ಸೀನ್‌ಗಳಲ್ಲಿ 'ಕಲಾವಿದರಾಗಿ' ನಟಿಸುತ್ತಾರೆ. ಇದೇ ದೃಶ್ಯಗಳನ್ನು ತೋರಿಸಿ ಹಣ ಪೀಕುವ ದಂಧೆ ಯಥೇಚ್ಛವಾಗಿದೆ.
ಉಳ್ಳಾಲದ ಪ್ರಕರಣಗಳು: ಅಳೇಕಲ ಉದ್ಯಮಿ ಅಬ್ದುಲ್ಲ ಎಂಬವರು ಆಗಸ್ಟ್‌ನಲ್ಲಿ ಮಸೀದಿಯಿಂದ ಮನೆಗೆ ಹೋಗುತ್ತಿದ್ದಾಗ ಇಲಿಯಾಸ್ ತಂಡ ಯುವತಿಯನ್ನು ಅವರ ಬಳಿ ಕಳುಹಿಸಿತ್ತು.
 ಆಕೆ ಅಬ್ದುಲ್ಲರನ್ನು ಅಪ್ಪಿಕೊಂಡಾಗ ಅಲ್ಲೇ ಕಾದು ಕುಳಿತಿದ್ದ ಮುಬಾರಕ್ ಫೋಟೋ ತೆಗೆದಿದ್ದ. ಮಾಧ್ಯಮದವರಿಗೆ ಫೋಟೋ ನೀಡುವುದಾಗಿ ಹೇಳಿ 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. 1.5 ಲಕ್ಷ ನಗದು ನೀಡಿದ್ದ ಆಬ್ದುಲ್ಲ, 2 ಲಕ್ಷ ಚೆಕ್ ನೀಡಿ ಬಚಾವ್ ಆಗಿದ್ದರು.
 ಅದೇ ರೀತಿ ಬಾಡಿಗೆ ಮನೆ ಬೇಕು ಎಂದು ದಂಪತಿ ಸೋಗಿನಲ್ಲಿ ಬಂದಿದ್ದ ಮಹಿಳೆ ಮತ್ತು ಪುರುಷ ಅರೆಕೆರೆ ಫಾರೂಕ್ ಮನೆಗೆ ಬಂದು ಅಸಭ್ಯವಾಗಿ ವರ್ತಿಸುವ ವೇಳೆ ಫೋಟೊ ತೆಗೆದು ಬ್ಲ್ಯಾಕ್‌ಮೇಲ್ ಮಾಡಿದ್ದರು.
 ಕೆ.ಸಿ.ರೋಡ್ ಬದ್ರಿಯ ನಗರ ತಾಹಿರ್ ಎಂಬಾತನನ್ನು ಇದೇ ಇಲ್ಯಾಸ್ ತಂಡ ಅ.30ರಂದು ಅಪಹರಿಸಿ ಬಿ.ಸಿ.ರೋಡ್ ಮೇಲ್ಕಾರ್ ಶೌಕತ್ ಎಂಬಾತ ಮನೆಯಲ್ಲಿ ಬಚ್ಚಿಟ್ಟಿದ್ದರು. ಅಲ್ಲಿ ಯುವತಿ ಕೋಣೆಗೆ ಬಂದು ಅಸಭ್ಯ ವಾಗಿ ವರ್ತಿಸಿದ್ದು, ಅದರ ವೀಡಿಯೋ ಮಾಡಲಾಗಿತ್ತು.
ಇದನ್ನು ತೋರಿಸಿ 25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಉಳ್ಳಾಲಕ್ಕೆ ಹೋಗಿ ರು. 5 ಲಕ್ಷ ಭರವಸೆ ನೀಡಿದ ತಾಹಿರ್‌ನನ್ನು ವಾಪಸ್ ಕರೆದುಕೊಂಡು ಬಂದಿದ್ದರು. ತೊಕ್ಕೊಟ್ಟಿನಲ್ಲಿ ಟ್ರಾಫಿಕ್ ಜಾಮ್ ವೇಳೆ ತಾಹಿರ್ ಇಳಿದು ತಪ್ಪಿಸಿಕೊಂಡಿದ್ದರು. ಬಳಿಕ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದು, ಅಪಹರಣಕಾರರನ್ನು ಬಂಧಿಸಲಾಗಿತ್ತು.
 ದೊಡ್ಡ ಉದ್ಯಮಿಯೊಬ್ಬರನ್ನು ಇದೇ ರೀತಿ ಬಲೆಗೆ ಕೆಡವಿ 1 ಕೋಟಿಗೆ ಬೇಡಿಕೆ ಇಟ್ಟಿದ್ದರು.
ಯುವ ಕಾಂಗ್ರೆಸ್ ಮುಖಂಡರೊಬ್ಬರ ಮಧ್ಯಸ್ಥಿಕೆಯಿಂದ 30 ಲಕ್ಷಕ್ಕೆ ಇಳಿಸಿದ ಬಳಿಕ ಹಣ ನೀಡಲಾಗಿತ್ತು!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.