ದಕ್ಷಿಣ ಕನ್ನಡ

ಅನ್ಯಭಾಷಿಕರು ಕನ್ನಡಾಭಿಮಾನ ಮೆರೆಯಲಿ

Published On :

ಕ.ಪ್ರ.ವಾರ್ತೆ   ಬೆಂಗಳೂರು   ನ. 6
'ಸರ್ಕಾರ ಮಾಡದ ಕೆಲಸಗಳನ್ನು ಸಂಘ-ಸಂಸ್ಥೆಗಳು ಮಾಡಬೇಕು. ಕನ್ನಡ ಉಳಿಸಿ ಬೆಳೆಸುವ ಪ್ರಯತ್ನ ಪ್ರತಿ ಕನ್ನಡಿಗನಿಂದಲೂ ಆಗಬೇಕಿದೆ' ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ಕಿವಿಮಾತು ಹೇಳಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆಯರೇಲ್ವೆ ನೌಕರರ ಕನ್ನಡ ಸಂಘ ಘಟಕ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡದ ವಿಚಾರವಾಗಿ ಇತಿಹಾಸದಿಂದಲೂ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಕನ್ನಡ ರಾಜ್ಯ ರಚನೆ, ಏಕೀಕರಣ ಹೀಗೆ ಹಲವು ಕಾರಣಕ್ಕಾಗಿ ಹಲವಾರು ಹೋರಾಟ ಮಾಡಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದಲ್ಲಿ ನಮ್ಮ ರಾಜ್ಯದಲ್ಲಿ ಹೆಚ್ಚಿನ ಭಾಷೆಗಳು ಚಾಲ್ತಿಯಲ್ಲಿವೆ. ಆದರೆ ಪ್ರಥಮ ಸ್ಥಾನ ಕನ್ನಡಕ್ಕೆ ನೀಡುವ ಮೂಲಕ ಅನ್ಯಭಾಷಿಕರು ಕನ್ನಡ ಭಾಷಾಭಿಮಾನ ಮೆರೆಯಬೇಕಿದೆ ಎಂದು ತಿಳಿಸಿದರು.
ಕನ್ನಡ ಶಾಲೆಗಳಿಗಿಲ್ಲ ಕುತ್ತು: ಕನ್ನಡ ಶಾಲೆಗಳನ್ನು ಮುಚ್ಚುವ ಕೆಲಸವಾಗುತ್ತಿದೆ ಎಂದು ಎಲ್ಲೆಡೆ ಆರೋಪಗಳು ಕೇಳಿಬರುತ್ತಿವೆ. ಸರ್ಕಾರ ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಆದರೆ, ಕನ್ನಡ ಶಾಲೆಗಳನ್ನು ಮುಚ್ಚಲು ಮೂಲ ಕಾರಣವೇ ಗ್ರಾಮೀಣ ಭಾಗದ ಜನರು. ಅವರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳುಹಿಸುವುದನ್ನು ಬಿಟ್ಟು ಖಾಸಗಿ ಶಾಲೆಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ದಾಖಲಿನಲ್ಲೂ ಗಣನೀಯ ಇಳಿಕೆ ಕಂಡಿದೆ. ಇದು ಹೆಚ್ಚಾದರೆ ಮಾತ್ರ ಕನ್ನಡ ಶಾಲೆಗಳ ಉಳಿವು, ಅಭಿವೃದ್ಧಿ ಸಾಧ್ಯ. ಸರ್ಕಾರ ಏನೇ ಯೋಜನೆಗಳನ್ನು ಜಾರಿಗೆ ತಂದರೂ ಅದನ್ನು ಅನುಸರಿಸುವಂತೆ ಒತ್ತಡ ಹೇರಲಾಗುವುದಿಲ್ಲ. ಇದನ್ನು ಅನುಸರಿಸುವ ಕೆಲಸ ಸಾರ್ವಜನಿಕರಿಂದಲೂ ಆಗಬೇಕಿದೆ. ಈ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು ಸಕ್ರಿಯ ಪಾಲ್ಗೊಳ್ಳುವಿಕೆ ಕನ್ನಡ ಉಳಿವಿಗೆ ಸಹಕಾರಿ. ಇದಕ್ಕೆ ಸರ್ಕಾರದ ಬೆಂಬಲವೂ ಇದೆ ಎಂದು ತಿಳಿಸಿದರು. ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಮಾತನಾಡಿ, ರಾಜ್ಯದಲ್ಲಿ ತ್ರಿಭಾಷ ಸೂತ್ರ ಜಾರಿಯಲ್ಲಿದೆ. ಆದರೆ ಇದು ಅಗತ್ಯವಿಲ್ಲ. ಯಾವುದೇ ಭಾಷೆ ಆಡಿದರೂ ಕನ್ನಡಕ್ಕೆ ಪ್ರಥಮ ಸ್ಥಾನವಿರಬೇಕು. ಪ್ರತಿಯೊಬ್ಬ ಕನ್ನಡಿಗನೂ ಕನ್ನಡಕ್ಕೆ ಒಂದು ಕೊಡುಗೆಯನ್ನು ನೀಡಬೇಕು. ಇನ್ನೇನೂ ಆಗಬೇಕಿರುವ ರೇಲ್ವೆ ನೌಕರರ ಡಿ ದರ್ಜೆ ಹುದ್ದೆಗೆ ಕನ್ನಡಿಗರನ್ನು ನೇಮಕ ಮಾಡುವ ಮೂಲಕ ಕರ್ನಾಟಕಕ್ಕೆ, ಕನ್ನಡಕ್ಕೆ ಖರ್ಗೆಯವರು ನ್ಯಾಯ ಸಲ್ಲಿಸಬೇಕಿದೆ ಎಂದು ತಿಳಿಸಿದರು.
ಇದೇ ವೇಳೆ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಪತ್ರಕರ್ತ ಇ.ವಿ.ಸತ್ಯನಾರಾಯಣ ಅವರನ್ನು ಸನ್ಮಾನಿಸಲಾಯಿತು.  ಆದಿಚುಂಚನಗಿರಿ ಶಾಖಾ ಮಠದ ಸೌಮ್ಯನಾಥಸ್ವಾಮಿ , ಇಮಾಮ್ ಸುನ್ನಿ ಜಾಮಿಯಾ ಮಸ್ಜೀದ್ನ ಮೌಲಾನಾ ಅಲ್ಹಜ್ ಅಹಮ್ಮದುಲ್ಲಾಖಾನ್ ಸಾಹೇಬ್, ಕ್ರೈಸ್ತ ಧರ್ಮಪೀಠದ ಧರ್ಮಾಧ್ಯಕ್ಷ ಡಾ.ಬರ್ನಾಡ್ ಮೊರಾಸ್, ಕವಯತ್ರಿ ಡಾ.ಲತಾ ರಾಜಶೇಖರ್, ಸಂಸ್ಥೆ ಅಧ್ಯಕ್ಷ ಮುದ್ದಮಲ್ಲೇಗೌಡ, ಮತ್ತಿರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.