ದಕ್ಷಿಣ ಕನ್ನಡ

ನಕ್ಸಲ್ ದಮನಕ್ಕೆ ಬಿಜೆಪಿ ಆಗ್ರಹ

Published On :

ಮಂಗಳೂರು: ಕುತ್ಲೂರಿನ ಸಾಮಾಜಿಕ ಕಾರ್ಯಕರ್ತ ರಾಮಚಂದ್ರ ಭಟ್ ಮನೆಗೆ ಶುಕ್ರವಾರ ರಾತ್ರಿ ನಡೆದ ನಕ್ಸಲ್ ಭೇಟಿ ಕೃತ್ಯದಿಂದ ತಾಲೂಕಿನ ಜನತೆ ಬೆಚ್ಚಿಬಿದ್ದಿದ್ದು, ಈ ಕೃತ್ಯವನ್ನು ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸಿದೆ. ನಕ್ಸಲರನ್ನು ನಿಗ್ರಹಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿದ್ದು, ಸಾರ್ವಜನಿಕರ ಜೀವ, ಸೊತ್ತುಗಳಿಗೆ ರಕ್ಷಣೆ ಇಲ್ಲವಾಗಿದೆ. ಸರ್ಕಾರಗಳು ಆಡಳಿತಾತ್ಮಕ ಇಚ್ಛಾಶಕ್ತಿ ತೋರ್ಪಡಿಸದಿರುವುದೇ ಇದಕ್ಕೆ ಕಾರಣ. ನಕ್ಸಲ್ ದಮನಕ್ಕೆ ಸೂಕ್ತ ದೃಢ ನಿರ್ಧಾರ ಕೈಗೊಂಡು ಕಾರ್ಯಗತಗೊಳಿಸದಿದ್ದರೆ ನಕ್ಸಲರೇ ಪರ್ಯಾಯ ಸರ್ಕಾರ ರಚಿಸುವ ಸ್ಥಿತಿ ತಲುಪಿದೆ. ಇದರಿಂದ ಪ್ರಜಾಪ್ರಭುತ್ವಕ್ಕೆ, ಜನತೆಗೆ ಸಂಕಷ್ಟ ದಿನ ಎದುರಾಗಲಿದೆ. ಜಿಲ್ಲೆಯ ಪಶ್ಟಿಮ ಘಟ್ಟ ತಪ್ಪಲಲ್ಲಿ ನಕ್ಸಲ್ ಚಟುವಟಿಕೆ ದಿನೇ ದಿನೇ ತೀವ್ರಗೊಳ್ಳುತ್ತಿದ್ದು, ರಾಜ್ಯ, ಕೇಂದ್ರ ಸರ್ಕಾರದ ಮೃದು ಧೋರಣೆಯನ್ನು ವಿರೋಧಿಸುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್‌ಸಿಂಹ ನಾಯಕ್ ಹೇಳಿದ್ದಾರೆ. ರಾಮಚಂದ್ರ ಭಟ್ಟರಿಗೆ ರಾಜ್ಯ ಸರ್ಕಾರ ಸೂಕ್ತ ರಕ್ಷಣೆ ಹಾಗೂ ಪರಿಹಾರ ನೀಡಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ನಕ್ಸಲ್ ದಮನಕ್ಕೆ ಬಿಜೆಪಿ ಆಗ್ರಹ
ಮಂಗಳೂರು: ಕುತ್ಲೂರಿನ ಸಾಮಾಜಿಕ ಕಾರ್ಯಕರ್ತ ರಾಮಚಂದ್ರ ಭಟ್ ಮನೆಗೆ ಶುಕ್ರವಾರ ರಾತ್ರಿ ನಡೆದ ನಕ್ಸಲ್ ಭೇಟಿ ಕೃತ್ಯದಿಂದ ತಾಲೂಕಿನ ಜನತೆ ಬೆಚ್ಚಿಬಿದ್ದಿದ್ದು, ಈ ಕೃತ್ಯವನ್ನು ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸಿದೆ. ನಕ್ಸಲರನ್ನು ನಿಗ್ರಹಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿದ್ದು, ಸಾರ್ವಜನಿಕರ ಜೀವ, ಸೊತ್ತುಗಳಿಗೆ ರಕ್ಷಣೆ ಇಲ್ಲವಾಗಿದೆ. ಸರ್ಕಾರಗಳು ಆಡಳಿತಾತ್ಮಕ ಇಚ್ಛಾಶಕ್ತಿ ತೋರ್ಪಡಿಸದಿರುವುದೇ ಇದಕ್ಕೆ ಕಾರಣ. ನಕ್ಸಲ್ ದಮನಕ್ಕೆ ಸೂಕ್ತ ದೃಢ ನಿರ್ಧಾರ ಕೈಗೊಂಡು ಕಾರ್ಯಗತಗೊಳಿಸದಿದ್ದರೆ ನಕ್ಸಲರೇ ಪರ್ಯಾಯ ಸರ್ಕಾರ ರಚಿಸುವ ಸ್ಥಿತಿ ತಲುಪಿದೆ. ಇದರಿಂದ ಪ್ರಜಾಪ್ರಭುತ್ವಕ್ಕೆ, ಜನತೆಗೆ ಸಂಕಷ್ಟ ದಿನ ಎದುರಾಗಲಿದೆ. ಜಿಲ್ಲೆಯ ಪಶ್ಟಿಮ ಘಟ್ಟ ತಪ್ಪಲಲ್ಲಿ ನಕ್ಸಲ್ ಚಟುವಟಿಕೆ ದಿನೇ ದಿನೇ ತೀವ್ರಗೊಳ್ಳುತ್ತಿದ್ದು, ರಾಜ್ಯ, ಕೇಂದ್ರ ಸರ್ಕಾರದ ಮೃದು ಧೋರಣೆಯನ್ನು ವಿರೋಧಿಸುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್‌ಸಿಂಹ ನಾಯಕ್ ಹೇಳಿದ್ದಾರೆ. ರಾಮಚಂದ್ರ ಭಟ್ಟರಿಗೆ ರಾಜ್ಯ ಸರ್ಕಾರ ಸೂಕ್ತ ರಕ್ಷಣೆ ಹಾಗೂ ಪರಿಹಾರ ನೀಡಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಶ್ವಾನ ಸ್ಪರ್ಧೆ: ಬಾಂಡ್‌ಗೆ 8ನೇ ಸ್ಥಾನ
ಉಡುಪಿ: ಇತ್ತೀಚೆಗೆ ಗೋವಾದ ಪಣಜಿಯಲ್ಲಿ ನಡೆದ 'ಡಾಬರ್‌ಮನ್ ಸ್ಪೆಷಾಲಿಟಿ ಶೋ' ಎಂಬ ರಾಷ್ಟ್ರೀಯ ಮಟ್ಟದ ಶ್ವಾನ ಪ್ರದರ್ಶನದಲ್ಲಿ ಉಡುಪಿಯ ವಿಶ್ವನಾಥ ಕಾಮತ್ ಅವರ ಬಾಂಡ್ ಹೆಸರಿನ ನಾಯಿ 8ನೇ ಸ್ಥಾನ ಪಡೆದುಕೊಂಡಿದೆ. ಇದು ಕರ್ನಾಟಕದಿಂದ ಭಾಗವಹಿಸಿದ್ದ ಡಾಬರ್ ಮನ್ ತಳಿಯ ಏಕೈಕ ನಾಯಿಯಾಗಿತ್ತು.  ಸ್ಪರ್ಧೆಯಲ್ಲಿ ದೇಶಾದ್ಯಂತದಿಂದ ಒಟ್ಟು 70 ಡಾಬರ್‌ಮನ್ ನಾಯಿಗಳು ಭಾಗವಹಿಸಿದ್ದವು. ಅಂತಾರಾಷ್ಟ್ರೀಯ ಶ್ವಾನ ಸ್ಪರ್ಧೆಗಳ ತೀರ್ಪುಗಾರರಾಗಿ ಸಿ.ವಿ. ಸುದರ್ಶನ್ ಹಾಗೂ ರುಕ್ಮಣಿ ಸುದರ್ಶನ್, ಸ್ಟೀವ್ ಅಲ್ಮೇಡಾ, ಗಿರೀಶ್ ಕೇಳ್ಕರ್ ಪಾಲ್ಗೊಂಡಿದ್ದರು.
ಮರದ ದಿಮ್ಮಿ ಅಕ್ರಮ ಸಾಗಾಟ
ವಿಟ್ಲ: ಮಿನಿ ಲಾರಿಯೊಂದರಲ್ಲಿ ಮರದ ದಿಮ್ಮಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದವರನ್ನು ಅರಣ್ಯ ಇಲಾಖೆಯವರು ಖಚಿತ ಮಾಹಿತಿ ಮೇರೆಗೆ ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ ಘಟನೆ ನೆತ್ತರಕೆರೆಯಲ್ಲಿ ಶುಕ್ರವಾರ ನಡೆದಿದೆ. ವಿಟ್ಲ ಶಾಖಾ ಉಪವಲಯ ಅರಣ್ಯಾಧಿಕಾರಿ ಎಸ್.ಡಿ. ಲೋಕನಾಥ ನೇತೃತ್ವದದಲ್ಲಿ ಹಾಗೂ ಕಾಳಭೈರವ ಗಸ್ತಿನ ತಂಡ ಜಂಟಿಯಾಗಿ ವಿಟ್ಲ ಕಸಬಾ ಗ್ರಾಮದ ಸಾಲೆತ್ತೂರು ಮಾರ್ಗದ ನೆತ್ತರಕೆರೆ ಎಂಬಲ್ಲಿ ಲಾರಿ ಸಹಿತ ಸುಮಾರು ಉತ್ತಮ ಜಾತಿಯ 19 ಮರದ ದಿಮ್ಮಿಗಳನ್ನು ಸುಮಾರು ರು. 50 ಸಾವಿರ ಮೌಲ್ಯದ ಮರ ಮತ್ತು ಸಾಗಾಟ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಸಾಗಾಟ ಮಾಡುತ್ತಿದ್ದ ಆರೋಪಿಗಳು ಪರಾರಿಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಅರಣ್ಯ ರಕ್ಷಕರಾದ ರಾಜೇಂದ್ರ ಕುಮಾರ್, ಮಂಜುನಾಥ ಜಿ. ನಾಯ್ಕ, ರಾಜುಚಂದ್ರ, ಕಿರಣ್ ಕುಮಾರ್, ವೈ. ನಾರಾಯಣ, ಪೈಲೆಟ್‌ಗಳಾಗಿ ತೇಜಕುಮಾರ್, ಅಶೋಕ್ ಭಾಗವಹಿಸಿದ್ದರು.
ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ
ಮಂಗಳೂರು: ಕರ್ನಾಟದ ದರ್ಜಿ ಉದ್ದಿಮೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಣ ವೇತನವನ್ನು ಪರಿಷ್ಕರಿಸಲು ಸರ್ಕಾರ ಉದ್ದೇಶಿಸಿದ್ದು, ಈ ಪ್ರಯುಕ್ತ ಶಿಫಾರಸು ಮಾಡಲು ಉಪಸಮಿತಿಯನ್ನು ರಚಿಸಲಾಗಿದೆ. ರಾಜ್ಯಾದ್ಯಂತ ಇರುವ ದರ್ಜಿ ಉದ್ದಿಮೆಯಲ್ಲಿನ ಕಾರ್ಮಿಕರಿಗೆ ಕನಿಷ್ಠ ವೇತನ ದರಗಳ ಪರಿಷ್ಕರಣೆ ಮಾಡುವ ಕುರಿತು ಸಾರ್ವಜನಿಕರು ಲಿಖಿತ ಹಾಗೂ ಮೌಖಿಕ ಸಲಹೆ, ಅಭಿಪ್ರಾಯಗಳನ್ನು ತಿಳಿಸಬಹುದು ಎಂದು ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಕ್ಷುಲ್ಲಕ ಕಾರಣಕ್ಕೆ ಹೊಡೆದಾಟ
ಮೂಲ್ಕಿ: ಇಲ್ಲಿನ ಕಾರ್ನಾಡು ಜಂಕ್ಷನ್ ಬಳಿ ಕ್ಷುಲ್ಲಕ ಕಾರಣಕ್ಕೆ ಹೊಡೆದಾಟ ನಡೆದು, ಮೂವರು ಆಸ್ಪತ್ರೆಗೆ ದಾಖಲಾದ ಘಟನೆ ಶನಿವಾರ ನಡೆದಿದೆ. ಸ್ಥಳೀಯ ಮಟನ್ ಸ್ಟಾಲ್‌ವೊಂದರ ಮಾಲೀಕ ಹಮೀದ್ ಎಂಬವರು ತಮ್ಮ ಆಡು ಕಳವು ಮಾಡಿದ್ದಾರೆಂದು ಹತ್ತಿರದ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಇಮ್ತಿಯಾಜ್ ಮತ್ತು ಹುಸೇನ್ ಮೇಲೆ ಆರೋಪ ಹೊರಿಸಿದ್ದರು. ಇದರಿಂದ ಕೋಪಗೊಂಡ ಇಮ್ತಿಯಾಜ್ ಮತ್ತು ಹುಸೇನ್, ಮಧ್ಯಾಹ್ನ ಮಟನ್ ಸ್ಟಾಲ್‌ಗೆ ಆಗಮಿಸಿ ಹಮೀದ್ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದರು. ರಸ್ತೆಯಲ್ಲಿ ಹೊಡೆದಾಟ ನಡೆಯುತ್ತಿದ್ದಾಗ ಜನರು ರಸ್ತೆಯಲ್ಲಿ ನಿಂತು ಆಸಕ್ತಿಯಿಂದ ನೋಡುತ್ತಿದ್ದರು. ಇದರಿಂದ ಮೂಲ್ಕಿ- ಕಿನ್ನಿಗೋಳಿ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.  ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು. ಪೊಲೀಸರನ್ನು ಕಂಡು ಇಮ್ತಿಯಾಜ್ ಮತ್ತು ಹುಸೇನ್ ಪರಾರಿಯಾಗಿ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಾದರೆ, ತೀವ್ರ ಗಾಯಗೊಂಡ ಹಮೀದ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿ ನಾಪತ್ತೆ
ಬೆಳ್ತಂಗಡಿ: ಯುವತಿಯೊಬ್ಬಳು ಕಾಣೆಯಾಗಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಚಾರ್ಮಾಡಿ ಗ್ರಾಮದ ಗಾಂಧಿನಗರ ಮನೆ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರಿ ಫೌಝಿಯಾ(20) ಕಾಣೆಯಾದ ಯುವತಿ. ಈಕೆ ನ.8 ರಂದು ಮಧ್ಯಾಹ್ನ 2 ಗಂಟೆಗೆ ಮನೆಯಿಂದ ಹೊರಗೆ ಹೋದವಳು ವಾಪಸ್ ಬಾರದೆ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಲಾಗಿದೆ. ಯುವತಿ ಬಿಳಿ ಮೈ ಬಣ್ಣ, 5.2 ಅಡಿ ಎತ್ತರದ ಸಪೂರ ಶರೀರ ಹೊಂದಿದ್ದು ಗುಲಾಬಿ ಬಣ್ಣದ ಚೂಡಿದಾರ ಹಾಗೂ ಬುರ್ಖಾ ಧರಿಸಿದ್ದಾಳೆ, ಕನ್ನಡ, ತುಳು, ಮಲಯಾಳಂ, ಹಿಂದಿ ಬಲ್ಲವಳಾಗಿದ್ದಾಳೆ. ಯುವತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬೆಳ್ತಂಗಡಿ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.
ನಂಬಿಕೆಗೆ ಕೊಡಲಿ ಏಟು: ಬಜರಂಗದಳ
ಮಂಗಳೂರು: ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ಕಾಯ್ದೆ ಕರಡು ಪ್ರತಿ ಒಂದು ವೇಳೆ ಜಾರಿಯಾದರೆ ಹಿಂದುಗಳ ದೈವ, ದೇವರ ನಂಬಿಕೆಗೆ ಕೊಡಲಿ ಏಟು ಬೀಳಲಿದೆ. ಇದು ಹಿಂದೂಗಳ ಮೇಲಿನ ದಬ್ಬಾಳಿಕೆ ಕಾಯಿದೆ ಎಂದು ಬಜರಂಗದಳ ವಿಭಾಗ ಸಂಚಾಲಕ ಶರಣ್ ಪಂಪ್‌ವೆಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಜವಾದ ಮೂಢ ನಂಬಿಕೆಗಳ ನಿವಾರಣೆ ಮಾಡಬೇಕು. ಆದರೆ ಹಿಂದುಗಳ ಧರ್ಮದ ನಂಬಿಕೆಗೆ ಕೊಡಲಿ ಏಟು ಹಾಕಬಾರದು. ಈ ಕಾಯಿದೆ ಜಾರಿಯಾದರೆ ಕರಾವಳಿಯ ಪ್ರಸಿದ್ಧ ದೈವ ದರ್ಶನ, ನಾಗಮಂಡಲ, ನಾಗದರ್ಶನ, ದರ್ಶನ ಸೇವೆ ಮಾಡಿದರೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಇದನ್ನು ಸಮಸ್ತ ಹಿಂದುಗಳು ಪ್ರತಿಭಟಿಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.