ದಕ್ಷಿಣ ಕನ್ನಡ

ಲತೀಫ್ ಕೊಲೆಗೆ ಹಳೆದೋಸ್ತಿಯಿಂದಲೇ ಸ್ಕೆಚ್!

Published On :

ಮಂಗಳೂರು: ಕೆ.ಎಸ್.ರಾವ್ ರಸ್ತೆಯಲ್ಲಿ ಬೊಡ್ಡ ಲತೀಫ್‌ನನ್ನು ತಳವಾರ್‌ಗಳಿಂದ ಕಡಿದ ಇಬ್ಬರು ಆರೋಪಿಗಳನ್ನು ಬಂದರು ಪೊಲೀಸರು ಬಂಧಿಸಿದ್ದಾರೆ. ಉಡುಪಿಯ ಶಿರ್ವ ಮೊಹಮ್ಮದ್ ಅಜರುದ್ದೀನ್ (31) ಮತ್ತು ಕುಂಜೂರು ಸುಧೀರ್ ದೇವಾಡಿಗ (25) ಬಂಧಿತರು.  ಇಬ್ಬರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬೊಡ್ಡ ಲತೀಫ್ ಕೊಲೆ ಮಾಡಲು ಸ್ಕೆಚ್ ಹಾಕಿದ್ದ ಹಳೆಯ ದೋಸ್ತಿ ಅಸ್ಗರ್ ಅಲಿ ! 2004ರಲ್ಲಿ ಬಿಜೆಪಿ ಮುಖಂಡ ಚಂದ್ರಶೇಖರ ಉಚ್ಚಿಲ್ ಹತ್ಯಾ ಯತ್ನದಲ್ಲಿ ಜತೆಯಾಗಿ ಸಿಕ್ಕಿ ಬಿದ್ದವರು. ಅನೇಕ ಪ್ರಕರಣಗಳಲ್ಲಿ ಜನರಿಗೆ ಕಂಟಕವಾಗಿದ್ದರು. ಇತ್ತೀಚಿಗೆ ಬೊಡ್ಡ ಲತೀಫ್ ತನ್ನ ಮನೆ ಹೆಣ್ಣುಮಕ್ಕಳಿಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಅಸ್ಗರ್ ಅಲಿ ಆತ್ಮೀಯರಲ್ಲಿ ದೂರಿಕೊಂಡಿದ್ದ. ತಕ್ಕ ಪಾಠ ಕಲಿಸುತ್ತೇನೆ ಎಂದು ಹೇಳಿಕೊಂಡಿದ್ದ. ಉಚ್ಚಿಲ ಕೊಲೆ ಯತ್ನ ಪ್ರಕರಣದಲ್ಲಿ ಕೋರ್ಟ್‌ಗೆ ಬರುವ ವಿಚಾರ ತಿಳಿದಿತ್ತು. ಅದಕ್ಕಾಗಿ 5 ಮಂದಿಗೆ ಸುಪಾರಿ ಕೂಡಾ ನೀಡಿದ್ದ. ಕೋರ್ಟ್‌ನಿಂದ ಬರುತ್ತದ್ದ ವೇಳೆ ಕತ್ತಿ ತಳವಾರ್‌ಗಳಿಂದ ದಾಳಿ ನಡೆಸಿದ ದುಷ್ಕರ್ಮಿಗಳು ಹಾಡ ಹಗಲೇ ರಸ್ತೆಯಲ್ಲಿ ತಳವಾರ್‌ಗಳಿಂದ ಕಾಲುಗಳಿಗೆ ಕಡಿದಿದ್ದರು.
ಇದೇ ವೇಳೆ ಮಾಡೂರು ಇಸುಬು ಕೂಡಾ ಬೊಡ್ಡ ಲತೀಫ್ ವಿರುದ್ಧ ಕತ್ತಿ ಮಸೆಯುತ್ತಿದ್ದ ಎಂಬ ಮಾಹಿತಿಯೂ ಪೊಲೀಸರಿಗೆ ಸಿಕ್ಕಿದೆ. ಆದರೆ ಅಸ್ಗರ್ ಅಲಿ ವರೆಗೆ ಮಾತ್ರ ಪೊಲೀಸರಿಗೆ ಸಾಕ್ಷ್ಯ ಲಭಿಸಿದೆ. ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ ಎಂಬ ಕಾರಣಕ್ಕೆ ಕೊಲೆಗೆ ಸ್ಕೆಚ್ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿಜವಾಗಿಯೂ ಕೊಲೆಗೆ ಕಾರಣಗಳೇನು ಎಂಬುದು ಮುಂದಿನ ವಿಚಾರಣೆಯಿಂದ ತಿಳಿದು ಬರಲಿದೆ. ಇನ್ನು ನಾಲ್ಕು ಮಂದಿ ಆರೋಪಿಗಳ ಬಂಧನವಾಗಬೇಕಿದು. ಬಂದರು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ವಿಷ ಸೇವಿಸಿ ವ್ಯಕ್ತಿ  ಆತ್ಮಹತ್ಯೆ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಬಂದಾರು ಗ್ರಾಮದ ಆಲಂಪಾಡಿ ಮನೆ ನಿವಾಸಿ  ರಾಮಣ್ಣ ಗೌಡ (39) ಎಂಬವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆಯಾಗಿ 8 ವರ್ಷಗಳಾದರೂ ಮಕ್ಕಳಾಗಲಿಲ್ಲ. ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಕೃತ್ಯ ನಡೆಸಿರಬಹುದು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಮೃತರ ಸಹೋದರ  ಹರೀಶ್ ಗೌಡ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಾರು-ಬಸ್ ಡಿಕ್ಕಿ: ಬಾಲಕಗೆ ಗಾಯ
ಮಣಿಪಾಲ: ಕಾರಿನ ಹಿಂಬದಿಗೆ ಬಸ್ ಡಿಕ್ಕಿಯಾಗಿ ಕಾರಿನಲ್ಲಿದ್ದ 8 ವರ್ಷದ ಬಾಲಕ ಗಾಯಗೊಂಡ ಘಟನೆ ಇಲ್ಲಿನ ಶಿವಳ್ಳಿ ಗ್ರಾಮದ ಲಕ್ಷ್ಮೀಂದ್ರ ನಗರದ ಬಳಿ ಗುರುವಾರ ನಡೆದಿದೆ. ಗಾಯಗೊಂಡವರನ್ನು ಆದಿತ್ಯ ಎಂದು ಗುರುತಿಸಲಾಗಿದೆ. ಉನ್ನಿಕೃಷ್ಣನ್ ಎಂಬವರು ಆದಿತ್ಯನೊಂದಿಗೆ ಕಾರಿನಲ್ಲಿ ಉಡುಪಿ ಕಡೆಗೆ ಹೋಗುತ್ತಿದ್ದಾಗ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆಯಿತು. ಪರಿಣಾಮ ಆದಿತ್ಯ ತಲೆಗೆ ಗಾಯವಾಗಿದೆ. ಕಾರು ಸಂಪೂರ್ಣ ಜಖಂ ಆಗಿದ್ದು, ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ ಡಿಕ್ಕಿ: ವ್ಯಕ್ತಿಗೆ ಗಾಯ
ಕಾಪು: ಪಾಂಗಾಳ ಬಸ್ ನಿಲ್ದಾಣ ಬಳಿ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಬಸ್ ಡಿಕ್ಕಿಯಾಗಿ ಗಾಯಗೊಂಡ ಘಟನೆ ಗುರುವಾರ ನಡೆದಿದೆ. ಗಾಯಗೊಂಡವರನ್ನು ರಘುರಾಮ ಶೆಟ್ಟಿಗಾರ ಎಂದು ಗುರುತಿಸಲಾಗಿದೆ. ಬಸ್ಸು ಚಾಲಕ ಬಸ್ಸನ್ನು ಅತಿ ವೇಗವಾಗಿ ಚಲಾಯಿಕೊಂಡು ಬಂದಿರುವುದೇ ಈ ಅವಘಡಕ್ಕೆ ಕಾರಣ ಎಂದು ಶಾಲಿನಿ ಎಂಬವರು ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಲಿಸುತ್ತಿದ್ದ ರೈಲಿಗೆ ಸಿಲುಕಿ ಸಾವು
ಗಂಗೊಳ್ಳಿ: ನಾಡ ಗ್ರಾಮದ ರಾಮನಗರ ರೈಲ್ವೆ ಬ್ಲಾಕ್ ಬಳಿ ಮುಂಬೈನಿಂದ ಮಂಗಳೂರಿಗೆ ಚಲಿಸುತ್ತಿರುವ ರೈಲಿಗೆ ಶಂಕರ ಎಂಬವರು ಅಕಸ್ಮಿಕವಾಗಿ ಸಿಲುಕಿ ಮೃತಪಟ್ಟಿದ್ದಾರೆ. ಈ ಬಗ್ಗೆ ಪ್ರಸನ್ನ ಆರ್. ಶೆಟ್ಟಿ ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಡಿಕ್ಕಿ: ಪಾದಚಾರಿ ಸಾವು
ಪಡುಬಿದ್ರಿ: ಇಲ್ಲಿನ ತೆಂಕ ಎರ್ಮಾಳ್ ಗ್ರಾಮದ ರಾಹೆ 66ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಪಾದಾಚಾರಿಯೊಬ್ಬರು ಮೃತಪಟ್ಟಿದ್ದಾರೆ. ಮೃತರು ಭುಜಂಗ ಆಚಾರ್ಯ (72), ಅವರು ಶುಕ್ರವಾರ ಸಂಜೆ ಸತ್ಕಾರ್ ಹೊಟೇಲ್ ಎದುರು ರಾಹೆ 66ರ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮಂಗಳೂರು ಕಡೆಯಿಂದ ಅತಿ ವೇಗದಲ್ಲಿ ಬಂದು ಕಾರು ಡಿಕ್ಕಿ ಹೊಡೆಯಿತು. ಆಚಾರ್ಯ ಅವರು ರಸ್ತೆಗೆ ಬಿದ್ದು ತಲೆಗೆ ಗಾಯವಾಗಿ ಚಿಕಿತ್ಸೆಗೆ ಮಣಿಪಾಲ ಕೆಎಂಸಿ ಆಸ್ವತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಗಣೇಶ್ ಆಚಾರ್ಯ ಎಂಬವರು ನೀಡಿದ ದೂರಿನಂತೆ ಕಾರು ಚಾಲಕ ಇಮ್ತಿಯಾಜ್ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲಗಿದಲ್ಲೇ ವ್ಯಕ್ತಿ ಸಾವು
ಮಲ್ಪೆ: ಮಲ್ಪೆ ಬಂದರಿನಲ್ಲಿ ಮೀನುಗಾರರೊಬ್ಬರು ಮದ್ಯಪಾನ ಮಾಡಿ ಹೃದಯಾಘಾತದಿಂದ ಬೋಟ್‌ನಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಮೃತರು ನಾಗೇಶ್ (50) ಅವರು ಮೀನುಗಾರಿಕೆಯಿಂದ ವಾಪಸ್ ಬಂದು ಬೋಟನ್ನು ಬಂದರಿನ ಧಕ್ಕೆಯಲ್ಲಿ ಕಟ್ಟಿ, ವಿಪರೀತ ಮದ್ಯಪಾನ ಮಾಡಿ ರಾತ್ರಿ 8 ಗಂಟೆಗೆ ಬೋಟಿನಲ್ಲಿಯೇ ಮಲಗಿದ್ದರು. ರಾತ್ರಿ 10 ಗಂಟೆಗೆ ಇತರ ಮೀನುಗಾರರು ಊಟಕ್ಕೆ ಕರೆದಾಗ ಏಳದೆ ಮೃತಪಟ್ಟಿದ್ದರು. ಅವರು ಹೃದಯಾಘಾತದಿಂದ ಮಲಗಿದಲ್ಲಿಯೇ ಮೃತಪಟ್ಟಿರಬೇಕು ಎಂದು ವೆಂಕಟೇಶ್ ನಾಯಕ್ ದೂರಿನಂತೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.