ಕುತ್ಲೂರು ಕಾಡಿನ ಸುತ್ತ ಕೂಂಬಿಂಗ್ ಮುಂದುವರಿಕೆ
ಬೆಳ್ತಂಗಡಿ/ಮಂಗಳೂರು: ಶುಕ್ರವಾರ ರಾತ್ರಿ ನಕ್ಸಲರಿಂದ ವಿಧ್ವಂಸಕ ಕೃತ್ಯ ನಡೆದ ಕುತ್ಲೂರಿನ ಕಾಡಿನ ಆಸುಪಾಸಿನಲ್ಲಿ ನಕ್ಸಲ್ ನಿಗ್ರಹ ಪಡೆಯ (ಎಎನ್ಎಫ್) ಪೊಲೀಸರು ಕೂಂಬಿಂಗ್ ನಡೆಸುತ್ತಿದ್ದು, ನಕ್ಸಲರ ಶೋಧ ಮುಂದುವರಿದಿದೆ.
ಡಿಐಜಿ, ಎಸ್ಪಿ ಮತ್ತಿತರ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕೂಂಬಿಂಗ್ ಮುಂದುವರಿದಿದೆ ಎಂದು ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಕುಕ್ಕಾಜೆ ಕ್ರಾಸ್ ಬಳಿಯ ನಾರಾವಿ ಗ್ರಾಪಂ ಮಾಜಿ ಸದಸ್ಯ ರಾಮಚಂದ್ರ ಭಟ್ಟರ ಮನೆಗೆ ತೆರಳಿದ ನಕ್ಸಲರ ತಂಡ ಭಟ್ಟರ ಕಾರನ್ನು ಸುಟ್ಟು ಹಾಕಿ ಅವರನ್ನು ಬೆದರಿಸಿ ತೆರಳಿತ್ತು.
ಸುಮಾರು 15-20 ಮಂದಿಯಿದ್ದ ತಂಡದಲ್ಲಿ ಸ್ಥಳೀಯರೇ ಹೆಚ್ಚಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಕಾಡಿನಲ್ಲಿ ಮಾತ್ರವಲ್ಲದೆ ನಾಡಿನಲ್ಲೂ ಶೋಧ ಮುಂದುವರಿದಿದೆ. ನಕ್ಸಲ್ ನಿಗ್ರಹ ಪಡೆಯ ಏಳೆಂಟು ಸಿಬ್ಬಂದಿ ಭಟ್ಟರ ಮನೆಯ ಸುತ್ತ ಪಹರೆ ನಡೆಸುತ್ತಿದ್ದಾರೆ. ಇನ್ನಷ್ಟು ಸಿಬ್ಬಂದಿ ಕೂಂಬಿಂಗ್ನಲ್ಲಿ ನಿರತರಾಗಿದ್ದಾರೆ.
ನಕ್ಸಲರು ಸಿಕ್ಕಿಲ್ಲ: ಮಾ. 10, 2012ರಂದು ಮಲವಂತಿಗೆ ಗ್ರಾಮದ ಪಶ್ಚಿಮಘಟ್ಟದ ಉರ್ದ್ಯಾರು ಜಲಪಾತದ ಬಳಿ ಗುಂಡಿನ ಚಕಮಕಿ ನಡೆದಿತ್ತು. ಆಗ ನಕ್ಸಲರ ಅಂತಾರಾಜ್ಯ ಸಮಾವೇಶದ ಕ್ಯಾಂಪ್ ಪತ್ತೆಯಾಗಿ ಶಸ್ತ್ರಾಸ್ತ್ರ, ಗ್ರೆನೇಡ್, ಸಾಹಿತ್ಯ ಇತ್ಯಾದಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಆದರೆ ಯಾರೊಬ್ಬರೂ ಪೊಲೀಸರಿಗೆ ಸಿಕ್ಕಿರಲಿಲ್ಲ. ಬಳಿಕ ಕುತ್ಲೂರಿನ ಕಾಡಿನಲ್ಲಿ ನಡೆದ ಕೂಂಬಿಂಗ್ ವೇಳೆ ಕೆಲವು ಸಾಹಿತ್ಯ ಸಲಕರಣೆಗಳು ಸಿಕ್ಕಿದ್ದವು. ಆದರೆ, ಯಾರೂ ಪತ್ತೆಯಾಗಿರಲಿಲ್ಲ.
ನಕ್ಸಲರ ಹೊಸ ತಂಡ ಸೇರ್ಪಡೆ?
ಕುತ್ಲೂರಿನಲ್ಲಿ ಕಾಣಿಸಿದ ನಕ್ಸಲರ ಹಿಂದೆ ಹೊಸ ಟೀಂ ಉದಯವಾಗಿದೆಯೇ? ಹೀಗೊಂದು ಸಂಶಯ ಪೊಲೀಸರನ್ನು ಕಾಡುತ್ತಿದೆ. ಶನಿವಾರ ನಸುಕಿನ ಜಾವ ಕುತ್ಲೂರಿನ ರಾಮಚಂದ್ರ ಭಟ್ಟರ ಮನೆ ಆವರಣಕ್ಕೆ ಬಂದು ವಿಧ್ವಂಸಕ ಕೃತ್ಯವೆಸಗಿದ ತಂಡ ಪರಾರಿಯಾಗಿದೆ. ಇದು ವಿಕ್ರಂ ಗೌಡ ನೇತೃತ್ವದ ತಂಡದ ಕೃತ್ಯ ಎನ್ನಲಾಗಿದ್ದರೂ ಆತನಲ್ಲದೆ 15 ನಕ್ಸಲರ ಹೊಸ ತಂಡ ಇರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಭಾನುವಾರ ನಡೆದ ಪೊಲೀಸ್ ಉನ್ನತಾಧಿಕಾರಿಗಳ ಸಭೆಯಲ್ಲೂ ಈ ವಿಷಯ ಪ್ರಸ್ತಾಪಕ್ಕೆ ಬಂದಿದೆ ಎನ್ನಲಾಗಿದೆ. ಕಳೆದೊಂದು ವರ್ಷದಿಂದ ವಿಕ್ರಂ ಗೌಡ ಕೊಡಗನ್ನು ಕಾರ್ಯಸ್ಥಾನ ಮಾಡಿಕೊಂಡಿದ್ದ. ಕೇರಳ ಜತೆ ನಕ್ಸಲ್ ಕಾರಿಡಾರ್ ವಿಸ್ತರಿಸಲು ಯತ್ನಿಸುತ್ತಿದ್ದ. ಇದೀಗ ಆತನೇ ಬಂದಿರುವುದಾದರೆ ಮರಳಿ ಇಲ್ಲಿಗೆ ಯಾಕೆ ಬಂದ ಎಂಬ ಪ್ರಶ್ನೆ ಪೊಲೀಸರನ್ನು ಕಾಡುತ್ತಿದೆ. ರಾಮಚಂದ್ರ ಭಟ್ಟರ ಮನೆಗೆ ಬಂದ ನಕ್ಸಲರಲ್ಲಿ ಶಸ್ತ್ರಾಸ್ತ್ರಗಳಿದ್ದವು. ಎಲ್ಲರಲ್ಲೂ ಶಸ್ತ್ರಾಸ್ತ್ರ ಹೇಗೆ ಬಂತು? ಛತ್ತೀಸ್ಗಡ ಸೇರಿದಂತೆ ಅನ್ಯ ರಾಜ್ಯಗಳಿಂದ ತರಿಸಿದರೇ? ತಂಡದಲ್ಲಿ ಯುವಕರೇ ಹೆಚ್ಚಿದ್ದರು ಎಂಬ ಸಂಗತಿಯೂ ಪೊಲೀಸರ ತಲೆನೋವಿಗೆ ಕಾರಣವಾಗಿದೆ. ಈ ಎಲ್ಲ ಅಂಶಗಳ ಬಗ್ಗೆ ರಾಜ್ಯ ಗುಪ್ತಚರ ಇಲಾಖೆಯಿಂದ ಮಾಹಿತಿ ಒದಗಿಸುವಂತೆ ಅಧಿಕಾರಿಗಳ ಸಭೆಯಲ್ಲಿ ತಿಳಿಸಲಾಗಿದೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

