ವಿವಿಗೆ ಎನ್ಎಸ್ಎಸ್ ರಾಷ್ಟ್ರಪ್ರಶಸ್ತಿ
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯಕ್ಕೆ ಪ್ರತಿಷ್ಠಿತ ಇಂದಿರಾಗಾಂಧಿ ಎನ್ಎಸ್ಎಸ್ ರಾಷ್ಟ್ರ ಪ್ರಶಸ್ತಿ ಲಭಿಸಿದೆ. 19ರಂದು ದೆಹಲಿಯ ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ನಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಪ್ರಶಸ್ತಿ ಸ್ವೀಕರಿಸಲಾಗುವುದು ಎಂದು ವಿಶ್ವವಿದ್ಯಾಲಯ ಉಪಕುಲಪತಿ ಪ್ರೊ.ಶಿವಶಂಕರಮೂರ್ತಿ ತಿಳಿಸಿದ್ದಾರೆ.
ಭಾನುವಾರ ನಗರದ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ 500 ವಿ.ವಿ. ಮತ್ತು ನಿರ್ದೇಶನಾಲಯಗಳಲ್ಲಿ ಅಂತಿಮ ಸುತ್ತಿಗೆ 13 ವಿ.ವಿ. ಆಯ್ಕೆಯಾಗಿದ್ದು, ಅದರಲ್ಲಿ ಮಂಗಳೂರು ವಿ.ವಿ. ಮೊದಲ ಸ್ಥಾನ ಪಡೆದು ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿದೆ. ಕೇಂದ್ರ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಯುಜಿಸಿ ಕಾರ್ಯದರ್ಶಿ ಹಾಗೂ ಇನ್ನಿತರ ಪ್ರತಿಷ್ಠಿತರು ಸದಸ್ಯರಾಗಿರುವ ಆಯ್ಕೆ ಸಮಿತಿ ಆ ಆಯ್ಕೆ ನಡೆಸಿದೆ. ಪ್ರಶಸ್ತಿ ರು. 2 ಲಕ್ಷ ನಗದು, ಪಾರಿತೋಷಕ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಳ್ಳಲಿದೆ.
ಕಳೆದ 5 ವರ್ಷದಲ್ಲಿ ಎನ್ಎಸ್ಎಸ್ ಚಟುವಟಿಕೆಗಳನ್ನು ಕ್ರಮಬದ್ಧ ಅನುಷ್ಠಾನಕ್ಕೆ ಪ್ರಶಂಸೆ ಲಭಿಸಿದೆ. ಉಪಕುಲಪತಿ ಮಾರ್ಗದರ್ಶನದಲ್ಲಿ ಎನ್ಎಸ್ಎಸ್ನ್ನು ಪಠ್ಯದಲ್ಲಿ ಅಳವಡಿಸಿದ ಏಕೈಕ ವಿ.ವಿ. ಇದು. ಮನೆ ನಿರ್ಮಾಣ, ಕಾಲೇಜಿನ ಆವರಣ ಗೋಡೆ ನಿರ್ಮಾಣ ಇತ್ಯಾದಿ ಚಟುವಟಿಕೆಯೊಂದಿಗೆ ಕೋಟ್ಯಂತರ ಮಾನವ ಆಸ್ತಿ ನಿರ್ಮಿಸಲಾಗಿದೆ. ಪರಿಸರ ಸಂರಕ್ಷಣೆ, ರಕ್ತದಾನ, ಏಡ್ಸ್ ಅರಿವು, ಕಾನೂನು ಅರಿವುಗಳ ಅನೇಕ ಶಿಬಿರ ನಡೆಸಲಾಗಿದೆ. 65 ರೆಡ್ ರಿಬ್ಬನ್ ಕ್ಲಬ್ ಮತ್ತು 50ಕ್ಕೂ ಅಧಿಕ ಕಾನೂನು ಸಾಕ್ಷರತಾ ಕ್ಲಬ್ಗಳ ಮೂಲಕ ಕಾರ್ಯಕ್ರಮ ನಡೆಸಲಾಗಿದೆ. 17ನೇ ರಾಷ್ಟ್ರೀಯ ಯುವಜನೋತ್ಸವ ವೇಳೆ ಎನ್ಎಸ್ಎಸ್ ಸ್ವಯಂವೇವಕರು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು ಎಂದರು.
ವಿವಿ ವ್ಯಾಪ್ತಿಯ 110 ಕಾಲೇಜುಗಳಲ್ಲಿ 160 ಘಟಕಗಳಿದ್ದು, 16 ಸಾವಿರ ಸ್ವಯಂಸೇವಕರಿದ್ದಾರೆ. ಇದರಲ್ಲಿ ಹೆಚ್ಚಿನವರು ವಿದ್ಯಾರ್ಥಿನಿಯರು ಎಂದರು.
ಘಟಿಕೋತ್ಸವ: ಜನವರಿ ಕೊನೆ ಅಥವಾ ಫೆಬ್ರವರಿಯಲ್ಲಿ ಘಟಿಕೋತ್ಸವ ಆಚರಿಸಲಾಗುವುದು. 2010ರಿಂದ ವಿವಿಯಲ್ಲಿ ನಡೆದ ಚಟುವಟಿಕೆಗಳ ವರದಿಯನ್ನು ನ್ಯಾಕ್ಗೆ ಕಳುಹಿಸಲಾಗಿದೆ. ಇನ್ನು 6 ತಿಂಗಳೊಳಗೆ ನ್ಯಾಕ್ ಸಮಿತಿ ಭೇಟಿ ನೀಡಿ ಗ್ರೇಡ್ ಬಗ್ಗೆ ಪರಿಶೀಲನೆ ನಡೆಸಲಿದೆ. ಕೊಡಗಿನ ಚಿಕ್ಕ ಅಳುವಾರಿನಲ್ಲಿ ವಿವಿ ಸ್ನಾತಕೋತ್ತರ ಕೇಂದ್ರ ಜನವರಿಗೆ ಉದ್ಘಾಟನೆಯಾಗಲಿದೆ. ಉಡುಪಿ ಬೆಳಪಿನಲ್ಲಿ ಇನ್ನೊಂದು ಸ್ನಾತಕೋತ್ತರ ಕೇಂದ್ರಕ್ಕೆ ಡಿಸೆಂಬರ್ನಲ್ಲಿ ಶಿಲಾನ್ಯಾಸ ನೆರವೇರಿಸಲಾಗುವುದು. ಮಡಿಕೇರಿ ಫೀಲ್ಡ್ ಮಾರ್ಷಲ್ ಕಾಲೇಜಿನಲ್ಲಿರುವ ಸ್ನಾತಕೋತ್ತರ ಕೋರ್ಸ್ನ್ನು ಜನವರಿಗೆ ಚಿಕ್ಕ ಅಳುವಾರಿಗೆ ಸ್ಥಳಾಂತರಿಸಲಾಗುವುದು ಎಂದರು. ವಿ.ವಿ.ಯಲ್ಲಿ 76 ಮಂದಿಯ ಭಡ್ತಿ ಪ್ರಕ್ರಿಯೆ ಮುಗಿದಿದ್ದು, 15 ದಿನದಿಂದ ನೇರ ನೇಮಕ ನಡೆಯುತ್ತಿದೆ. 19 ಮಂದಿ ಆಯ್ಕೆಯಾಗಿದ್ದು, ಉಳಿದ ಖಾಲಿ ಹುದ್ದೆ ಶೀಘ್ರ ಭರ್ತಿಯಾಗಲಿದೆ ಎಂದರು.
ಮುಂದೆ ಎನ್ಎಸ್ಎಸ್ ಭವನ, ಪರೀಕ್ಷಾ ಭವನ ನಿರ್ಮಿಸುವ ಯೋಚನೆ ಇದೆ ಎಂದು ನುಡಿದರು. ರಿಜಿಸ್ಟ್ರಾರ್ ಪಿ.ಎಸ್.ಯಡಪಡಿತ್ತಾಯ, ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ.ವಿನಿತಾ ರೈ, ನಿಕಟಪೂರ್ವ ಸಂಯೋಜನಾಧಿಕಾರಿ ಡಾ.ಗಣನಾಥ ಎಕ್ಕಾರು, ವಿ.ವಿ. ಕಾಲೇಜು ಪ್ರಭಾರ ಪ್ರಾಂಶುಪಾಲೆ ಡಾ.ಪಾರ್ವತಿ ಅಪ್ಪಯ್ಯ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

