ಮೂಲ್ಕಿ ತಾಲೂಕು ರಚನೆ ಮರೀಚಿಕೆ?
ಮೂಲ್ಕಿ: ಮೂಲ್ಕಿ ತಾಲೂಕು ರಚನೆ, ವಿಶೇಷ ತಹಸೀಲ್ದಾರ್ ನೇಮಕ ಪ್ರಕ್ರಿಯೆ ಸದ್ಯಕ್ಕೆ ಮರೀಚಿಕೆಯಾಗಿದೆ.
ಜಗದೀಶ್ ಶೆಟ್ಟರ್ ಮಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಿಜೆಪಿ ಸರ್ಕಾರ ಮೂಡುಬಿದಿರೆ ತಾಲೂಕು ಘೋಷಣೆ ಮಾಡಿದ ಸಂದರ್ಭ ಮೂಲ್ಕಿ ತಾಲೂಕು ರಚನೆಗೆ ಒತ್ತಾಯಿಸಿ ಮೂಲ್ಕಿ ತಾಲೂಕು ಮತ್ತು ನ್ಯಾಯಾಲಯ ಹೋರಾಟ ಸಮಿತಿ ನೇತೃತ್ವದಲ್ಲಿ ತೀವ್ರ ಹೋರಾಟ ನಡೆದಿತ್ತು. ಕೊನೆಗೆ ಶಾಸಕ ಕೆ. ಅಭಯಚಂದ್ರ ಜೈನ್ ಮೂಲ್ಕಿಯಲ್ಲಿ ವಿಶೇಷ ತಹಸೀಲ್ದಾರ್ ನೇಮಕಕ್ಕೆ ಒತ್ತಾಯಿಸುವುದಾಗಿ ತಿಳಿಸಿದ್ದರು.
ಈಡೇರದ ಭರವಸೆ: ಅಲ್ಲದೆ, ಅಂದು ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆದು ಮೂಲ್ಕಿ ತಾಲೂಕು ರಚಿಸುವಂತೆ ಶಾಸಕ ಕೆ. ಅಭಯಚಂದ್ರ ಜೈಜ್ ಒತ್ತಾಯಿಸಿದ್ದರು. ಬಳಿಕ ಚುನಾವಣೆ ನಡೆದು ಹೋರಾಟ ನೆನೆಗುದಿಗೆ ಬಿದ್ದಿತ್ತು. ಅಭಯಚಂದ್ರ ಜೈನ್ ಮತ್ತೆ ಶಾಸಕರಾಗಿ, ಸಚಿವರಾದಾಗ ಮುಂದಿನ ಆರು ತಿಂಗಳೊಳಗೆ ಮೂಲ್ಕಿಗೆ ವಿಶೇಷ ತಹಸೀಲ್ದಾರ್ ನೇಮಕ ಮಾಡುವುದಾಗಿ ಭರವಸೆ ನೀಡಿದ್ದರು. ಇದೀಗ ಆರು ತಿಂಗಳು ಮುಗಿಯುತ್ತ ಬಂದಿದ್ದರೂ ವಿಶೇಷ ತಹಸೀಲ್ದಾರ್ ನೇಮಕ ಮಾಡಲು ಸಾಧ್ಯವಾಗಿಲ್ಲ.
ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದಕ್ಕೆ ಸುಣ್ಣ!: ಈ ನಡುವೆ, ಮೂಡುಬಿದಿರೆ ಸೇರಿದಂತೆ ಘೋಷಿಸಿದ ನೂತನ 43 ತಾಲೂಕು ರಚನೆ ಆದೇಶವನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆದಿದ್ದು, ಸದ್ಯ ಯಾವುದೇ ನೂತನ ತಾಲೂಕು ರಚನೆಯಿಲ್ಲ ಎಂದು ಹೇಳಿದೆ. ಮೂಲ್ಕಿ ಮತ್ತು ಮೂಡುಬಿದಿರೆ ತನ್ನ ಎರಡು ಕಣ್ಣುಗಳಿದ್ದಂತೆ ಎಂದು ಹೇಳುತ್ತ ಬಂದಿರುವ ಸಚಿವರು, ಮೂಡುಬಿದಿರೆಯಲ್ಲಿ ತಾಲೂಕು ರಚನೆಗೆ ಪೂರಕವಾಗಿ ವಿಶೇಷ ತಹಸೀಲ್ದಾರ್, ಅಗ್ನಿಶಾಮಕದಳ ಕಚೇರಿ, ಅರಣ್ಯ ಇಲಾಖೆ ಕಚೇರಿ, ವಸತಿ ತಂಗುದಾಣ ಸೇರಿದಂತೆ ತಾಲೂಕು ಘೋಷಣೆಯಾದರೆ ತಾಲೂಕು ಕೇಂದ್ರಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿದ್ದಾರೆ.
ಮೂಲ್ಕಿ ತಾಲೂಕು ರಚನೆ ಹೋರಾಟ ಮಾಡುವವರು ತಾಲೂರು ರಚನೆಗೆ ಪೂರಕವಾದ ಮೂಲಭೂತ ಸೌಕರ್ಯಗಳ ಬಗ್ಗೆ ಗಮನ ಹರಿಸದಿರುವುದು ತಾಲೂಕು ರಚನೆಯಲ್ಲಿ ಹಿನ್ನಡೆಯಾಗಿದೆ.
ಮೂಲ್ಕಿ ತಾಲೂಕು ರಚನೆ ಕಷ್ಟ?: ಮೂಡುಬಿದಿರೆ ತಾಲೂಕು ರಚನೆಯಾದರೆ ಮೂಲ್ಕಿ-ಮೂಡುಬಿದಿರೆ ಕ್ಷೇತ್ರದ ಮೂಲ್ಕಿ ಹೋಬಳಿ ಬಿಟ್ಟು ಎಲ್ಲ ಪ್ರದೇಶಗಳು ಮೂಡುಬಿದಿರೆ ತಾಲೂಕಿಗೆ ಸೇರ್ಪಡೆಯಾಗಲಿವೆ. ಮೂಲ್ಕಿ ತಾಲೂಕಿಗೆ ಕೇವಲ ಮೂಲ್ಕಿ ಹೋಬಳಿಯಲ್ಲಿರುವ ಎಂಟು ಗ್ರಾಮ ಪಂಚಾಯಿತಿಗಳು, ಮೂಲ್ಕಿ ನಗರ ಪಂಚಾಯಿತಿ ಮಾತ್ರ ಉಳಿಯಲಿದೆ. ಜನಸಂಖ್ಯೆ ಕೇವಲ 60,000ದಷ್ಟಿದ್ದು, ಇದರಿಂದ ತಾಲೂಕು ರಚನೆ ಕಷ್ಟವಾಗಲಿದೆ.
ಎಂ.ಬಿ. ಪ್ರಕಾಶ್ ನೇತೃತ್ವದ ತಾಲೂಕು ರಚನೆ ಸಮಿತಿಯು ಮಂಗಳೂರು ತಾಲೂಕನ್ನು ವಿಭಜಿಸಿ ಮಂಗಳೂರು ಗ್ರಾಮಾಂತರ ತಾಲೂಕು ರಚನೆ ಮಾಡುವಂತೆ ವರದಿಯಲ್ಲಿ ತಿಳಿಸಿದ್ದು, ಅದರಂತೆ ಸುರತ್ಕಲ್ ಹೋಬಳಿಯ ಕೆಲವು ಪ್ರದೇಶಗಳನ್ನು ಸೇರಿಸಿದರೆ ಮಂಗಳೂರು ಗ್ರಾಮಾಂತರ ತಾಲೂಕನ್ನು ಮೂಲ್ಕಿ ತಾಲೂಕಾಗಿ ರಚಿಸಲು ಸಾಧ್ಯವಿದೆ.
ಮೂಲಸೌಕರ್ಯಕ್ಕೆ ಆದ್ಯತೆ ಅಗತ್ಯ: ಮೊದಲಿಗೆ ಮೂಲ್ಕಿಯಲ್ಲಿ ವಿಶೇಷ ತಹಸೀಲ್ದಾರ್ ನೇಮಕ ಅಗತ್ಯವಾಗಿದೆ. ಜೊತೆಗೆ ಮೂಲ್ಕಿಗೆ ಅಗ್ನಿ ಶಾಮಕದಳ ಕಚೇರಿ, ಸರ್ಕಾರಿ ಕಚೇರಿಗಳು ಮತ್ತಿತರ ಮೂಲಭೂತ ಸೌಕರ್ಯಗಳ ಬಗ್ಗೆ ಗಮನ ಹರಿಸಿದ ಬಳಿಕ ತಾಲೂಕು ರಚನೆ ಬಗ್ಗೆ ಒತ್ತಡ ಹಾಕಿದರೆ ಮುಂದಿನ ದಿನಗಳಲ್ಲಿ ಮೂಲ್ಕಿ ತಾಲೂಕು ರಚನೆ ಸಾಧ್ಯವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

