ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ಕಟ್ಟಿಕೊಟ್ಟ ಮುಗಳಿ
ಕಾಂತಾವರ: ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃತಿ ರಚನೆ ಮಾಡಿ ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆಯನ್ನು ಕಟ್ಟಿಕೊಟ್ಟು ಆಧುನಿಕ ಕನ್ನಡ ಸಾಹಿತ್ಯದ ವಿದ್ವಾಂಸರಾಗಿ ಮೆರೆದವರು ಡಾ.ರಂ.ಶ್ರೀ ಮುಗಳಿ. 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದ ಮುಗಳಿ ಅವರ ನಾಲ್ಕು ಕಾದಂಬರಿಗಳಲ್ಲಿ 'ಅನ್ನ' ಶ್ರೇಷ್ಠ ಕಾದಂಬರಿಯಾಗಿ ಮೂಡಿಬಂದಿದೆ ಎಂದು ಮಕ್ಕಳ ಸಾಹಿತಿ ಹಾಗೂ ವಿಮರ್ಶಕ ತಿಪಟೂರಿನ ಟಿ.ಎಸ್. ನಾಗರಾಜ ಶೆಟ್ಟಿ ಹೇಳಿದ್ದಾರೆ.
ಕಾಂತಾವರ ಕನ್ನಡ ಸಂಘದ 'ನಮ್ಮ ಕನ್ನಡ ನಮ್ಮದು' ತಿಂಗಳ ಸರಣಿ ಕಾರ್ಯಕ್ರಮದಲ್ಲಿ ಅವರು ಡಾ.ರಂ.ಶ್ರೀ ಮುಗಳಿ ಅವರ 'ಅನ್ನ' ಕಾದಂಬರಿ ಕುರಿತು ಅವರು ಮಾತನಾಡಿದರು.
ಬರಗಾಲದ ಅನುಭವಗಳನ್ನು ವಸ್ತುವನ್ನಾಗಿ ಹೊಂದಿರುವ ಕಾದಂಬರಿಗಳಲ್ಲಿ 'ಅನ್ನ' ಪ್ರಮುಖವಾದುದು. ಎರಡನೇ ಮಹಾಯುದ್ಧಕ್ಕೆ ನಿಕಟವಾಗಿಯೇ ರಚನೆಗೊಂಡ ಈ ಕಾದಂಬರಿಯಲ್ಲಿ ಆಧುನಿಕ ಭಾರತದ ಹತ್ತು ಹಲವು ಜ್ವಲಂತ ಸಮಸ್ಯೆಗಳನ್ನು ಮನ ಮುಟ್ಟುವಂತೆ ವಿವರಿಸಿ ಅದಕ್ಕೆ ಸೂಕ್ತ ಪರಿಹಾರಗಳನ್ನು ಒದಗಿಸುವುದಲ್ಲದೆ ಬಾಳಿಗೊಂದು ಆದರ್ಶವಿರಬೇಕು ಎನ್ನುವ ಸಂದೇಶವನ್ನೂ ಸಾರಿ ಹೇಳುತ್ತದೆ. ಆ ಕಾಲದ ಸ್ವಾರ್ಥ, ಶೋಷಣೆ, ಶೋಷಿತರ ಬವಣೆ, ಸಾವು ನೋವುಗಳನ್ನು ಮನ ಮುಟ್ಟುವಂತೆ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ ಎಂದು ನಾಗರಾಜ ಶೆಟ್ಟಿ ಹೇಳಿದರು.
ಮುಗಳಿ ಅವರ ಗದ್ಯಶೈಲಿ ವಿಶಿಷ್ಟವಾಗಿದ್ದು, ದೇಶಿ ಶೈಲಿಯ ಭಾಷಾ ಸೊಗಸಿನೊಂದಿಗೆ ಸಾಗುವ ಅವರ ಸಂಭಾಷಣೆಗಳು ಅನೇಕ ಕಡೆ ಕಾವ್ಯಾತ್ಮಕವಾಗಿಯೂ ಮೂಡಿ ಬಂದಿವೆ. ಶಬ್ದಗಳನ್ನು ಆಯ್ದು ಜೋಡಿಸುವ ಜಾಣ್ಮೆ ಹೊಂದಿದ್ದ ಅವರ ಬರಹಗಳ ಉದ್ದಕ್ಕೂ ಕಾಣುವ ಕನ್ನಡಪರ ಕಾಳಜಿಯು ಅಪೂರ್ವವಾದುದು. ಅವರ ಕಾದಂಬರಿಗಳಿಗೆ ವಿಮರ್ಶಕರಿಂದ ಸಿಗಬೇಕಾದ ಮನ್ನಣೆ ಸಿಗದೆ ಅನ್ಯಾಯವಾಗಿದ್ದರೂ, 20ನೇ ಶತಮಾನ ಕಂಡ ಮಹತ್ವದ ಸಾಹಿತಿಗಳಲ್ಲಿ ಡಾ.ರಂ.ಶ್ರೀ ಮುಗಳಿ ಅವರೂ ಒಬ್ಬರಾಗಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಗೌರವಿಸಲಾಯಿತು. ಕನ್ನಡ ಸಂಘದ ನಿರಂತರ ಪ್ರಾಯೋಜಕ ಸಿ.ಕೆ. ಪಡಿವಾಳ್ ಇದ್ದರು. ಬಾಬು ಶೆಟ್ಟಿ ನಾರಾವಿ ನಿರೂಪಿಸಿದರು. ಹಿರಿಯ ಸಾಹಿತಿ ಡಾ.ನಾ. ಮೊಗಸಾಲೆ ಸ್ವಾಗತಿಸಿದರು. ಸದಾನಂದ ನಾರಾವಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

