ದಕ್ಷಿಣ ಕನ್ನಡ

ಇಂದಿನಿಂದ ಕುಟುಂಬ ಸಮೀಕ್ಷೆ

Published On :

ಮಂಗಳೂರು: ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಪ್ರಯುಕ್ತ ದ.ಕ. ಜಿಲ್ಲಾ ಪಂಚಾಯ್ತಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 13 ರಿಂದ 17ರವರೆಗೆ 'ಕುಟುಂಬ ಸಮೀಕ್ಷೆ' ನಡೆಯಲಿದೆ ಎಂದು ಮಂಗಳೂರು ತಾಲೂಕು ತಹಸೀಲ್ದಾರ್ ಮೋಹನ್ ರಾವ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಶಾಲಾ ಸಮೀಕ್ಷೆ ಕಾರ್ಯ ಮುಗಿದಿದ್ದು, ಮಕ್ಕಳ ಜಾಡು ಹಿಡಿಯುವ ಸಲುವಾಗಿ ಕುಟುಂಬ ಸಮೀಕ್ಷೆ ನಡೆಸಲಾಗುತ್ತಿದೆ. ಶಾಲೆಗೆ ಸೇರದ ಮತ್ತು ಶಾಲೆ ಬಿಟ್ಟ ಮಕ್ಕಳನ್ನು ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ತರುವುದು ಸಮೀಕ್ಷೆಯ ಉದ್ದೇಶ ಎಂದರು.
ಮಂಗಳೂರು ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ ಮಾತನಾಡಿ, ಸಮೀಕ್ಷೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಆರೋಗ್ಯ ಸಹಾಯಕರು, ಆರಕ್ಷಕ ಇಲಾಖೆ, ಕಾರ್ಮಿಕ ಇಲಾಖೆ ಸಿಬ್ಬಂದಿ, ಸರ್ಕಾರೇತರ ಸಂಘ ಸಂಸ್ಥೆಗಳ ಸ್ವಯಂ ಸೇವಕರು, ಸ್ಥಳೀಯ ಸ್ತ್ರೀ ಸಂಘ, ಯುವಕ, ಯುವತಿ ಮಂಡಲದ ಸದಸ್ಯರು ಸೇರಿದಂತೆ ಒಟ್ಟು 1,230 ಸಮೀಕ್ಷಾದಾರರು ಪಾಲ್ಗೊಳ್ಳುವರು. ಪ್ರತಿ ಹತ್ತು ತಂಡಗಳಿಗೆ ಪ್ರೌಢಶಾಲೆ ಸಹಶಿಕ್ಷಕರು ಮೇಲ್ವಿಚಾರಕಾರಾಗಿ ಇರುತ್ತಾರೆ. 1 ರಿಂದ 10ನೇ ತರಗತಿವರೆಗಿನ ಸರ್ಕಾರಿ, ಅನುದಾನ ರಹಿತ ಎಲ್ಲ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳು ಹಾಗೂ 6 ರಿಂದ 16 ವರ್ಷದೊಳಗಿನ ಎಲ್ಲ ಮಕ್ಕಳ ಸಮೀಕ್ಷೆಗೆ ಒಳಪಡುತ್ತಾರೆ ಎಂದರು.
ಮಂಗಳೂರು ಉತ್ತರ ವಲಯ ಕ್ಷೇತ್ರ ಸಮನ್ವಯಾಧಿಕಾರಿ ಪೀತಾಂಬರ ಮಾತನಾಡಿ, ಸಮೀಕ್ಷೆಗಳು ಮುಗಿದ ನಂತರ ಬಸ್, ರೈಲ್ವೆ ನಿಲ್ದಾಣ, ಸಿಗ್ನಲ್‌ಗಳಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ ಮಕ್ಕಳನ್ನು ಸರ್ವೇ ಮಾಡಲಾಗುತ್ತದೆ. ಈ ವರ್ಷವೇ ಭಿಕ್ಷಾಟನೆಯಲ್ಲಿ ತೊಡಗಿದ್ದ 35 ವಲಸೆ ಮಕ್ಕಳನ್ನು ಪತ್ತೆಹಚ್ಚಿದ್ದು, ಬಾಲಭವನಕ್ಕೆ ಸೇರಿಸಲಾಗಿದೆ ಎಂದರು.
ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ರೋಹಿದಾಸ್, ಮಂಗಳೂರು ಉತ್ತರ ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವರಾಮ್ ತುಂಬೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.