ದಕ್ಷಿಣ ಕನ್ನಡ

ಕುಳಾಯಿ ಮೀನುಗಾರಿಕಾ ಬಂದರು 3 ತಿಂಗಳಲ್ಲಿ ಶಿಲಾನ್ಯಾಸ

Published On :

ಮಂಗಳೂರು: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕುಳಾಯಿಯಲ್ಲಿ ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಕೇಂದ್ರ ಅನುಮೋದನೆಗೆ ಸಭೆ ನಡೆಸಲಾಗಿದೆ. ಒಟ್ಟು ರು. 165.60 ಕೋಟಿ ಮೊತ್ತದಲ್ಲಿ ಕೇಂದ್ರ ರು. 124.20 ಕೋಟಿ, ನವಮಂಗಳೂರು ಬಂದರು ರು. 33.12 ಕೋಟಿ ಹಾಗೂ ರಾಜ್ಯ ಸರ್ಕಾರ ರು. 8.28 ಕೋಟಿ ಅನುದಾನ ಒಳಗೊಂಡಿದೆ ಎಂದು ಶಾಸಕ ಬಿ.ಎ.ಮೊಯ್ದಿನ್ ಬಾವಾ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು ಎಂದರು.
ಈ ಯೋಜನೆಗೆ ಒಟ್ಟು 9.57 ಎಕರೆ ಜಾಗದ ಅಗತ್ಯವಿದೆ. ಸ್ಥಳದ ಸರ್ವೇ ಕಾರ್ಯ ನಡೆದಿದೆ. ಯಾವುದೇ ಮನೆ ಸ್ಥಳಾಂತರ ಮಾಡದೆ ಯೋಜನೆ ಅನುಷ್ಠಾನಗೊಳಿಸಲು ನ.8ರಂದು ನಡೆದ ನವಮಂಗಳೂರು ಬಂದರು ಅಧಿಕಾರಿಗಳು, ಮೀನುಗಾರಿಕಾ ಇಲಾಖೆ ನಿರ್ದೇಶಕರು, ಉಪನಿರ್ದೇಶಕರು ಹಾಗೂ ಯೋಜನಾ ನಿರ್ದೇಶಕರ ಸಭೆಯಲ್ಲಿ ಸಮ್ಮಿತಿಸಲಾಗಿದೆ. 3 ತಿಂಗಳಲ್ಲಿ ಭೂಮಿ ಪೂಜೆ ನೆರವೇರಲಿದೆ ಎಂದರು.
ಮೀನುಗಾರಿಕೆ ಇಲಾಖೆಯಿಂದ ಕುಳಾಯಿ ಹಾಗೂ ಮುಕ್ಕದಲ್ಲಿ 2 ನೆಟ್ ಮೆಂಡಿಂಗ್ ಶೆಡ್‌ಗೆ ತಲಾ ರು. 25 ಲಕ್ಷ ಅನುದಾನ ಒದಗಿಸಲಾಗಿದೆ. ಮೀನುಗಾರಿಕಾ ಮಹಿಳೆಯರ ಅನುಕೂಲಕ್ಕೆ ಒಂದು ಅಡುಗೆ ಕೋಣೆಯನ್ನು ಶಾಸಕರ ನಿಧಿಯಿಂದ ಮಹಾನಗರ ಪಾಲಿಕೆ ನಿರ್ಮಿಸಲಿದೆ.
ಮೀನುಗಾರಿಕಾ ಕೊಂಡಿ ರಸ್ತೆ ಪೈಕಿ 2013-14ನೇ ಸಾಲಿನಲ್ಲಿ ಸುರತ್ಕಲ್ ಗುಡ್ಡಕೊಪ್ಲ ಕಾಂಕ್ರಿಟೀಕರಣಕ್ಕೆ ರು. 25 ಲಕ್ಷ, ರಾಷ್ಟ್ರೀಯ ಹೆದ್ದಾರಿ 66 ಕಾಳಪ್ಪಯ್ಯದಿಂದ ಮಸೀದಿವರೆಗೆ ರಸ್ತೆ ಅಭಿವೃದ್ಧಿಗೆ ರು. 1 ಕೋಟಿ, ನಬಾರ್ಡ್ ಯೋಜನೆಯಲ್ಲಿ ಮುಕ್ಕ ಮಲ್ಲಿಮಾರ್‌ನಿಂದ ಚೇಳೈರು ಜಾರಂದಾಯ ದೈವಸ್ಥಾನವರೆಗೆ ರಸ್ತೆ ಸಂಪರ್ಕ ಹಾಗೂ ಸೇತುವೆ ರಚನೆಗೆ ರು. 1.50 ಕೋಟಿಗೆ ಪ್ರಸ್ತಾಪಿಸಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಪ್ರತಿ ಸದಸ್ಯರಿಗೆ ರು. 15 ಲಕ್ಷ ನೀಡಲು ಪಾಲಿಕೆ ಆಯುಕ್ತರ ಜತೆಗಿನ ಸಭೆಯಲ್ಲಿ ನಿರ್ಧರಿಸಲಾಗಿದೆ. ಸುರತ್ಕಲ್‌ನ ಆಯ್ದ ಪ್ರದೇಶದಲ್ಲಿ ರಸ್ತೆ ಕಾಂಕ್ರಿಟೀಕರಣ ಹಾಗೂ ಫುಟ್‌ಪಾತ್ ನಿರ್ಮಾಣ್ಕೆ ಮೂರನೇ ಹಂತದ ನೂರು ಕೋಟಿ ಅನುದಾನದಲ್ಲಿ ರು. 55 ಕೋಟಿ ಮೀಸಲಿಡಲಾಗಿದೆ. ಕೂಳೂರು, ಕಾವೂರುಗಳಲ್ಲಿ ತರಕಾರಿ ಹಾಗೂ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, ಸ್ಥಳ ಗುರುತಿಸಲಾಗಿದೆ.
ಅರ್ಕುಳ ಬಂಗ್ಲೆಗುಡ್ಡೆಯಲ್ಲಿ ಜನಪ್ರತಿನಿಧಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಕುರಿತು ಜಾಗೃತಿ ಮೂಡಿಸುವ ಹಾಗೂ ಪರಿಣಾಮಕಾರಿಯಾಗಿ ತರಬೇತಿ ನೀಡುವ ಸಲುವಾಗಿ ರಾಜ್ಯ ಮುಂಗಡ ಪತ್ರದಲ್ಲಿ ಅಬ್ದುಲ್ ನಜೀರ್‌ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರವನ್ನು ಸ್ಥಾಪಿಸಲು ಮುಖ್ಯಮಂತ್ರಿ ಸಮ್ಮತಿಸಿದ್ದಾರೆ ಎಂದರು.  
ಸುರತ್ಕಲ್ ರೇಲ್ವೆ ನಿಲ್ದಾಣ ಬಳಿ ಪ್ರಾದೇಶಿಕ ಸಾರಿಗೆ ಕೇಂದ್ರ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಕುಡ್ಸೆಂಪ್ ಯೋಜನೆಯಲ್ಲಿ ಸಿದ್ಧಗೊಳಿಸಿದ ಒಳಚರಂಡಿ ಯೋಜನೆ ಇನ್ನು ಒಂದು ತಿಂಗಳಲ್ಲಿ ಬಳಕೆಗೆ ತೆರವಾಗಲಿದೆ ಎಂದರು.
ಅದ್ಯಪಾಡಿ ಉಮಿಲೆ ರಸ್ತೆಗೆ ಸಿಆರ್‌ಎಫ್ ನಿಧಿಯಿಂದ ರು. 3 ಕೋಟಿ ಬಿಡುಗಡೆಯಾಗಿದೆ. ಸುರತ್ಕಲ್‌ನಲ್ಲಿ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ರು. 22.50 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೈಕಂಪಾಡಿ, ಪಣಂಬೂರು ಬಳಿ ಮೇಲ್ಸೇತುವೆ ನಿರ್ಮಿಸಲಾಗುವುದು. ಕುಳೈನಲ್ಲಿ ಸ್ಟೇಡಿಯಂ ರಚನೆಗೆ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ ವಶದಲ್ಲಿರುವ ಜಾಗವನ್ನು ಸ್ವಾಧೀನಪಡಿಸಲು ಸರ್ಕಾರದ ಜತೆ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.