ಪ್ರೀತಿಸಿ ಕೈಕೊಟ್ಟ ಪ್ರಿಯಕರನ ಮನೆ ಎದುರು ಧರಣಿ
ಸುಬ್ರಹ್ಮಣ್ಯ: ಕಳೆದ 7 ವರ್ಷಗಳಿಂದ ಪ್ರೀತಿಸಿ ಕೊನೆಗೆ ಕೈಕೊಟ್ಟ ಪ್ರಿಯಕರನ ಮನೆ ಮುಂದೆ ಯುವತಿಯೊಬ್ಬಳು ಧರಣಿ ಕುಳಿತದ್ದಲ್ಲದೆ ಆತನ ವಿರುದ್ಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಸುಬ್ರಹ್ಮಣ್ಯ ಸಮೀಪದ ಏನೆಕಲ್ಲು ನಿವಾಸಿ ನಿತೀನ್ ಎಂಬಾತನ ವಿರುದ್ಧ ಸುಬ್ರಹ್ಮಣ್ಯ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಕಡೇಶಿವಾಲಯದ ಪೆರ್ಲಾಪು ಎಂಬಲ್ಲಿನ ಯುವತಿ ಮತ್ತು ನಿತೀನ್ ಸುಳ್ಯದ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾಗ ಪ್ರೇಮಾಂಕುರವಾಗಿತ್ತು. ಅದರಂತೆ ಇವರಿಬ್ಬರು ಸುದೀರ್ಘ ಸಮಯ ಜೊತೆಗಿದ್ದರು. ಪ್ರೀತಿಯ ವಿಚಾರವನ್ನು ನಿತೀನ್ ತನ್ನ ಹೆತ್ತವರಲ್ಲಿ ಹೇಳಿಕೊಂಡಿದ್ದಾನೆ ಎನ್ನಲಾಗಿದ್ದು, ಆರ್ಥಿಕ ಸ್ಥಿತಿ ಮತ್ತು ಜಾತಿ ಬೇರೆ ಎಂಬ ಕಾರಣಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರಿಂದ ನಿತೀನ್ ಧನ್ಯಳನ್ನು ಮದುವೆಯಾಗಲು ಹಿಂದೇಟು ಹಾಕಿದ್ದಾನೆ ಎಂದು ತಿಳಿದುಬಂದಿದೆ.
ಈ ಯುವತಿ ಮದುವೆಯಾಗುವಂತೆ ನಿತೀನ್ಗೆ ಒತ್ತಡ ಹೇರಿದ್ದಾಳೆ. ಆದರೆ ಯುವಕ ನಿರಾಕರಿಸಿದ ಹಿನ್ನೆಲೆಯಲ್ಲಿ ಬೇಸತ್ತ ಯುವತಿ ಬುಧವಾರ ಪ್ರಿಯಕರ ನಿತೀನ್ ಮನೆ ಏನೆಕಲ್ಲಿಗೆ ಬಂದು ಆತನ ಹೆತ್ತವರಲ್ಲಿ ಪ್ರೀತಿಯ ವಿಚಾರವನ್ನು ಹೇಳಿಕೊಂಡಿದ್ದಾಳೆ. ಆದರೆ ನಿತೀನ್ ಮನೆಯವರು ಯಾವುದೇ ಪ್ರತಿಕ್ರಿಯೆ ನೀಡದೆ ಆಕೆಯನ್ನು ಹೊರಹೋಗುವಂತೆ ಗದರಿಸಿದ್ದಾರೆ. ಇದರಿಂದ ಮನನೊಂದ ಯುವತಿ ರಾತ್ರಿತನಕ ಪ್ರಿಯಕರನ ಮನೆ ಮುಂದೆಯೇ ಕುಳಿತಿದ್ದಳು. ರಾತ್ರಿಯೇ ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ದಾವಿಸಿ ಆಕೆ ನೀಡಿದ ದೂರಿನಂತೆ ಹುಡುಗನ ಮೇಲೆ ಕೇಸ್ ದಾಖಲಿಸಿದ್ದಾರೆ. ತನಗಾದ ಅನ್ಯಾಯದ ಬಗ್ಗೆ ಸುಳ್ಯ ವೃತ್ತ ನಿರೀಕ್ಷಕರಿಗೆ ಹಾಗೂ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ ಕೂಡ ದೂರು ನೀಡಿದ್ದಾಳೆ. ಈ ಮಧ್ಯೆ ನಿತೀನ್ ತನಗೆ ತಾಳಿಭಾಗ್ಯವನ್ನು ದೇವಸ್ಥಾನವೊಂದರಲ್ಲಿ ಕರುಣಿಸಿದ ಬಗ್ಗೆ ಆಕೆ ತಿಳಿಸಿದ್ದಾಳೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

