ದಕ್ಷಿಣ ಕನ್ನಡ

ಇವರು ಶಿಕ್ಷಕರಲ್ಲ, ಯಮದೂತರು!

Published On :

ಕುಶಾಲನಗರ: ಹಲವು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಕಾರ್ಯವೈಖರಿಗೆ ಹೆಸರುವಾಸಿಯಾದ ಬಸವನಹಳ್ಳಿ ಮೊರಾರ್ಜಿ ವಸತಿ ಶಾಲೆ ಇದೀಗ ಮಕ್ಕಳ ಮೇಲೆ ದೌರ್ಜನ್ಯ ನಡೆಸುವ ಕೇಂದ್ರವಾಗಿ ಪರಿವರ್ತನೆಯಾದ ಆರೋಪಕ್ಕೆ ತುತ್ತಾಗಿದೆ.
ಈ ಶಾಲೆಯ ಕೆಲವು ಶಿಕ್ಷಕರು ನೀಡುವ ತೀವ್ರ ಶಿಕ್ಷೆಗಳಿಂದ ವಿದ್ಯಾರ್ಥಿಗಳು ಭಯಭೀತರಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ವಸತಿ ಶಾಲೆಯ ಆರನೇ ತರಗತಿ ಮಕ್ಕಳಿಗೆ ಕೆಲವು ಶಿಕ್ಷಕರು ಮನಸೋ ಇಚ್ಛೆ ಥಳಿಸಿ ಆಸ್ಪತ್ರೆ ಸೇರುವಂತಹ ಪರಿಸ್ಥಿತಿ ಸೃಷ್ಟಿಸಿದ್ದಾರೆ.
ಕೈದಿಗಳಂತೆ ನೋಡುತ್ತಾರೆ: ಆರನೇ ತರಗತಿಯಲ್ಲಿ 70ಕ್ಕೂ ಅಧಿಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದು, ಅವರಿಗೆ ಇಲ್ಲಿನ ವಸತಿ ನಿಲಯದಲ್ಲಿ ತಂಗುವ ಸೌಲಭ್ಯ ಕಲ್ಪಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಈ ವಿದ್ಯಾರ್ಥಿಗಳನ್ನು ಶಾಲೆಯ ಓರ್ವ ಶಿಕ್ಷಕ ಹಾಗೂ ಇನ್ನೋರ್ವ ಶಿಕ್ಷಕ ಸೇರಿ ಕೈದಿಗಳಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಮಕ್ಕಳ ಪೋಷಕರು ದೂರಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಸುದ್ದಿಗಾರರೊಂದಿಗೆ ಮಕ್ಕಳು ತಮಗಾದ ನೋವನು ಬಿಚ್ಚಿಟ್ಟರು.
ಬೂಟುಗಾಲಲ್ಲಿ ಒದೆಯುತ್ತಾರೆ!: 'ಹೋಂವರ್ಕ್ ಮಾಡಿಲ್ಲ ಎಂದರೆ 200 ಬಸ್ಕಿ ಹೊಡೆಸುತ್ತಾರೆ. ತರಗತಿಯಲ್ಲಿ ಉತ್ತರ ಹೇಳದಿದ್ದರೆ ಮನಸೋ ಇಚ್ಛೆ ಹೊಡೆಯುತ್ತಾರೆ' ಎನ್ನುತ್ತಾಳೆ ವಿದ್ಯಾರ್ಥಿನಿ ಸುಶ್ಮಿತಾ. ದೌಭಾಗ್ಯವೆಂದರೆ, ಕ್ಲಾಸ್ ಲೀಡರ್ ಹೇಳಿದವರಿಗೆ 'ಮೇಡಂ' ಹೊಡೆಯುವುದು ಕಟ್ಟಿಟ್ಟ ಬುತ್ತಿಯಾಗಿದೆ ಎನ್ನುವುದು ಆರನೇ ತರಗತಿ ಸೇವಂತಿಯ ಅಳಲು. ಶಿಕ್ಷಕನೋರ್ವ ಮಕ್ಕಳನ್ನು ಬೂಟುಗಾಲಿನಿಂದ ಒದೆಯುತ್ತಿರುವುದಾಗಿಯೂ ಮಕ್ಕಳು ತಿಳಿಸಿದ್ದಾರೆ.
ಯಮರೂಪಿ ಶಿಕ್ಷಕರು: ಶಿಕ್ಷಕಿಯೊಬ್ಬರು ಈ ರೀತಿಯ ಶಿಕ್ಷೆ ನೀಡುವುದರಲ್ಲಿ ತಲ್ಲೀನರಾಗಿದ್ದಾರೆ ಎನ್ನುವುದು ಎಲ್ಲ ಮಕ್ಕಳ ಸಾಮೂಹಿಕ ಆರೋಪ.
 ಈಕೆ ಪ್ರತಿ ಶನಿವಾರ ಮನೆಗೆ ತೆರಳಿದರೆ, ಸೋಮವಾರ ಹಿಂತಿರುಗಿ ಬರುವತನಕ ಮಕ್ಕಳಿಗೆ ಒಂದು ರೀತಿಯ 'ರಿಲೀಫ್‌' ಸಿಕ್ಕಿದಂತಾಗುತ್ತದೆ ಎನ್ನುತ್ತಾರೆ ಬಹುತೇಕ ಮಕ್ಕಳು. ವಿದ್ಯಾರ್ಥಿಗಳನ್ನು ದಂಡಿಸುವ ಕಾಯಕದಲ್ಲಿ ತೊಡಗಿರುವ ಇನ್ನೋರ್ವ ಶಿಕ್ಷಕನನ್ನು ಕಂಡರೆ ಯಮರೂಪಿ ದರ್ಶನವಾದಂತಾಗುತ್ತದೆ ಎನ್ನುವುದು ಇನ್ನು ಕೆಲವು ವಿದ್ಯಾರ್ಥಿ ವಿದ್ಯಾರ್ಥಿನಿಯರ ಅಳಲು.
ಊದಿಕೊಂಡ ಮಕ್ಕಳ ಕೈ: ಪ್ರತಿ ಮಕ್ಕಳ ಎಡಗೈ, ಬಲಗೈ ಗಂಟು ಊದಿಕೊಂಡಿರುವುದು ಸ್ಥಳಕ್ಕೆ ತೆರಳಿದ ಸುದ್ದಿಗಾರರಿಗೆ ಕಂಡುಬಂತು.
 ತಮ್ಮ ನೋವನ್ನು ಬಿಚ್ಚಿಟ್ಟ ಮಕ್ಕಳು, 'ಚಿಕಿತ್ಸೆಗೆ ಕೂಡ ಈ ಶಿಕ್ಷಕರು ಅವಕಾಶ ಕಲ್ಪಿಸಿಲ್ಲ. ಅನಾರೋಗ್ಯ ಎಂದಲ್ಲಿ ಯಾವುದೋ ಮಾತ್ರೆ ನೀಡುತ್ತಾರೆ, ಇದರಿಂದ ಇನ್ನೂ ಆರೋಗ್ಯ ಹದಗೆಡುತ್ತಿದೆ' ಎಂದರು.
ಪೋಷಕರೊಂದಿಗೆ ಮಾತನಾಡಲೂ ಅಡ್ಡಿ: ತಮ್ಮ ಪೋಷಕರೊಂದಿಗೆ ವಾರಕ್ಕೊಮ್ಮೆ ಮಾತನಾಡಲು ವಸತಿ ಶಾಲೆಯ ಸಂಪರ್ಕ ವ್ಯವಸ್ಥೆಯನ್ನು ಕೂಡ ಕಲ್ಪಿಸುವಲ್ಲಿ ಅಡ್ಡಿಪಡಿಸುತ್ತಿರುವ ಬಗ್ಗೆಯೂ ಮಕ್ಕಳು ದೂರಿದ್ದಾರೆ. ಇತ್ತ ಪೋಷಕರು ತಮ್ಮ ಮಕ್ಕಳ ಕ್ಷೇಮ ಸಮಾಚಾರವನ್ನು ದೂರವಾಣಿ ಮೂಲಕ ವಿಚಾರಿಸಲು ಮುಂದಾದಾಗ ಈ ವಸತಿಶಾಲೆಯ ಪ್ರಮುಖರು 'ನಾಟ್ ರೀಚೆಬಲ್‌' ಆಗಿ, ಭಾನುವಾರ ಪೋಷಕರು ಶಾಲೆಗೆ ಲಗ್ಗೆ ಹಾಕಿದ ದೃಶ್ಯವೂ ಕಂಡುಬಂತು.
ಜಿಲ್ಲೆಯ ಕೆಲವೆಡೆಗಳಿಂದ ಇಲ್ಲಿಗೆ ವರ್ಗವಾಗಿ ಬಂದಿರುವ ವಿದ್ಯಾರ್ಥಿಗಳಿಗೆ ಶಿಕ್ಷೆಯ ಪ್ರಮಾಣ ಅಧಿಕ ಎನ್ನುತ್ತಾರೆ ಮಕ್ಕಳ ಪೋಷಕರಾದ ಬೆಟ್ಟಗೇರಿಯ ಹರಿಣಾಕ್ಷಿ.
ರಾಜ್ಯ ಸರ್ಕಾರ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕಲ್ಪಿಸಿರುವ ಯೋಜನೆಯೊಂದು ಕಳೆದ ಹಲವು ವರ್ಷಗಳಿಂದ ದಕ್ಷ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆಯಲ್ಲಿತ್ತು. ಇದೀಗ ಅದೇ ಕೇಂದ್ರ ದೌರ್ಜನ್ಯದ ಕೇಂದ್ರವಾಗಿ ಪರಿವರ್ತನೆಗೊಳ್ಳುತ್ತಿರುವ ಬಗ್ಗೆ ಸ್ಥಳೀಯ ಸಂಘ ಸಂಸ್ಥೆಯ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣ ಜಿಲ್ಲಾಡಳಿತ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.