ದಕ್ಷಿಣ ಕನ್ನಡ

ಕಾರ್ಪ್ ಬ್ಯಾಂಕ್ ವಿಶೇಷ ಸಾಲ ಯೋಜನೆ

Published On :

ಮಂಗಳೂರು: ಹಬ್ಬ ಸೀಸನ್ ಸಲುವಾಗಿ ಕಾರ್ಪೊರೇಷನ್ ಬ್ಯಾಂಕ್ ವಿಶೇಷ ಸಾಲ ಯೋಜನೆ ಪ್ರಕಟಿಸಿದ್ದು, ಜನವರಿ ವರೆಗೆ ನಾಲ್ಕು ತಿಂಗಳು ಇದು ಚಾಲ್ತಿಯಲ್ಲಿರಲಿದೆ.
 ಕಾರ್ಪ್ ಹೋಮ್(ಗೃಹ ಸಾಲ)ಯೋಜನೆಯಲ್ಲಿ ಸಾಲದ ಬಡ್ಡಿದರವನ್ನು ಶೇ.0.50 ಕಡಿತಗೊಳಿಸಲಾಗಿದೆ. ರು. 50 ಲಕ್ಷ ವರೆಗೆ ಶೇ.10.25, ರು. 50 ಲಕ್ಷಕ್ಕಿಂತ ಜಾಸ್ತಿಗೆ ಶೇ.10.50, ರು. 25 ಲಕ್ಷ ಹಾಗೂ ರು. 25 ಲಕ್ಷ ಜಾಸ್ತಿ  ಮೊತ್ತಕ್ಕೆ ಶೇ.50ರ ವರೆಗೆ ರಿಯಾಯ್ತಿ ಸಿಗಲಿದೆ. ನಾಲ್ಕು ಚಕ್ರವಾಹನ ಸಾಲದಲ್ಲಿ ಶೇ.1 ಬಡ್ಡಿ ಕಡಿತಗೊಳಿಸಿದ್ದು, ರು. 50 ಲಕ್ಷ ವರೆಗೆ ಶೇ.10.65 ರಿಯಾಯ್ತಿ ಘೋಷಿಸಲಾಗಿದೆ. ಕಾರ್ಪ್ ಘರ್ ಸಂಸಾರ್ ನಲ್ಲಿ ಶೇ.1.75 ಬಡ್ಡಿ ಕಡಿಮೆ ಮಾಡಲಾಗಿದೆ. ಗೃಹ, ಕಿಚನ್, ಸೋಲಾರ್ ಪ್ಯಾನಲ್ಸ್, ವಾಟರ್ ಹೀಟರ್‌ಗಳಿಗೆ ಶೇ.12.25ರಿಂದ ಶೇ.10.50ರ ವರೆಗೆ ಬಡ್ಡಿದರ ಇಳಿಕೆಯಾಗಲಿದೆ. ವಾಹನ ವಿಮೆಗೆ ನ್ಯೂ ಇಂಡಿಯಾ ಇನ್ಸೂರೆನ್ಸ್ ಕಂಪನಿ ಜತೆ ವಿಶೇಷ ಆಫರ್ ನೀಡಲಿದೆ ಎಂದು ಬ್ಯಾಂಕಿನ ಪ್ರಕಟಣೆ ತಿಳಿಸಿದೆ.
ಪ್ರಾಂಶುಪಾಲೆಗೆ ಬೆದರಿಕೆಯೊಡ್ಡಿದ ವಿದ್ಯಾರ್ಥಿಗಳು!
ಬಂಟ್ವಾಳ: ಇಲ್ಲಿನ ಕಾಮಾಜೆ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಬ್ಬರು ಪ್ರಾಂಶುಪಾಲರಿಗೆ ಬೆದರಿಕೆಯೊಡ್ಡಿದ ಘಟನೆ ಬುಧವಾರ ನಡೆದಿದೆ. ವಿದ್ಯಾರ್ಥಿಗಳಾದ ಅಮಿತ್ ಹಾಗೂ ಹರ್ಷಮೋಹನ್ ಎಂಬವರು ಪ್ರಾಂಶುಪಾಲೆ ಲೈಲಾ ಮೇರಿ ಕೊಠಡಿಗೆ ನುಗ್ಗಿ ಬೆದರಿಕೆ ಒಡ್ಡಿದ್ದಾರೆಂದು ದೂರಲಾಗಿದೆ. ಈ ಬಗ್ಗೆ ಪ್ರಾಂಶುಪಾಲೆ ಲೈಲಾ ಮೇರಿ ಬಂಟ್ವಾಳ ನಗರ ಪೊಲೀಸರಿಗೆ ನೀಡಿದ ಮಾಹಿತಿಯಂತೆ ಪೊಲೀಸರು ಕಾಲೇಜಿಗೆ ಆಗಮಿಸಿ ವಿಚಾರಣೆ ನಡೆಸಿದರು. ಬಳಿಕ ಪ್ರಾಂಶುಪಾಲೆ ಲೈಲಾ ಮೇರಿ, ಬೆದರಿಕೆಯೊಡ್ಡಿದ ವಿದ್ಯಾರ್ಥಿಗಳು ತನ್ನ ಬಳಿ ಕ್ಷಮೆ ಕೋರಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸದಂತೆ ಪೊಲೀಸರಲ್ಲಿ ವಿನಂತಿಸಿದರು. ವಿದ್ಯಾರ್ಥಿಗಳಿಬ್ಬರನ್ನು ಸ್ಥಳಕ್ಕೆ ಕರೆಸಿ ಅವರಿಂದ ತಪ್ಪೊಪ್ಪಿಗೆ ಪತ್ರ ಬರೆಸಿ ಪ್ರಕರಣ ಇತ್ಯರ್ಥಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಸಿದ್ದರಾಮಯ್ಯ ಶೀಘ್ರ ಪದಚ್ಯುತಿ: ಡೀವಿ ಭವಿಷ್ಯ
ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪಕ್ಷದೊಳಗೆ ಎದ್ದಿರುವ ಭಿನ್ನಮತಕ್ಕೆ ಖುದ್ದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಪರಮೇಶ್ವರ್ ಅವರೇ ಎಣ್ಣೆ- ತುಪ್ಪ ಹೊಯ್ಯುತ್ತಿದ್ದಾರೆ. ಆದ್ದರಿಂದ ಸಿದ್ದರಾಮಯ್ಯ ಇನ್ನು ತುಂಬ ದಿನ ಮುಖ್ಯಮಂತ್ರಿಯಾಗಿ ಉಳಿಯೋದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಡಿ.ವಿ. ಸದಾನಂದ ಗೌಡ ಭವಿಷ್ಯ ನುಡಿದಿದ್ದಾರೆ.
 ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧ ಶಾಸಕರು ಪಕ್ಷದ ವರಿಷ್ಠರಿಗೆ ಪತ್ರ ಬರೆದಿರುವುದು ಬಹಳ ಹಳೆಯ ವಿಷಯ. ಯಾವಾಗ ಸಿದ್ದರಾಮಯ್ಯ, ಪರಮೇಶ್ವರ್ ಅವರನ್ನು ಅವರ ಸ್ವಂತ ಕ್ಷೇತ್ರದಲ್ಲಿ ಸೋಲಿಸಿದ್ದಾರೆ ಅಂತ ಗೊತ್ತಾಯಿತೋ ಆಗಲೇ ಈ ಭಿನ್ನಮತದ ಪತ್ರ ಸಿದ್ಧವಾಗಿತ್ತು, ಆಗ ಪತ್ರಕ್ಕೆ ಸಹಿ ಹಾಕಿರುದರು 21 ಶಾಸಕರು, ಈಗ ಪತ್ರ ಬರೆದರೆ 71 ಮಂದಿ ಶಾಸಕರು ಸಿದ್ದರಾಮಯ್ಯ ವಿರುದ್ಧ ಸಹಿ ಮಾಡಲು ಸಿದ್ಧರಿದ್ದಾರೆ ಎಂದು ಡಿವಿಎಸ್ ಹೇಳಿದರು.
ಸಿಎಂ ಸ್ಥಾನಕ್ಕೆ ಲಾಯಕ್ಕಿಲ್ಲ: ಕನಿಷ್ಠ ಶಾಸಕರೂ ಅಲ್ಲದ ಪರಮೇಶ್ವರ್ ಸರ್ಕಾರದ ಮೇಲೆ ಹತೋಟಿ ಸಾಧಿಸಲು ಮಾಡುತ್ತಿರುವ ಯತ್ನ, ಅದಕ್ಕಾಗಿ ಸಮನ್ವಯ ಸಮಿತಿ ರಚನೆ ಮಾಡಿರುವುದು, ಆ ಸಮಿತಿಗೆ ಡಿ.ಕೆ. ಶಿವಕುಮಾರ್ ಅವರನ್ನು ಸದಸ್ಯರನ್ನಾಗಿ ಮಾಡಿರುವುದು, ಇವೆಲ್ಲವೂ ಸಿದ್ದರಾಮಯ್ಯ ವಿರುದ್ಧ ಪರಮೇಶ್ವರ್ ಮಾಡುತ್ತಿರುವ ತಂತ್ರಗಳಾಗಿವೆ. ಸಿದ್ದರಾಮಯ್ಯ ಅವರ ತಲೆಗೆ ಏರಿರುವ ಅಹಂ, ಅವರ ಬಾಡಿ ಲ್ಯಾಂಗ್ವೇಜ್, ಅವರ ಮಾತು, ನಡವಳಿಕೆಗಳು ಖಂಡಿತವಾಗಿಯೂ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲಿಕ್ಕೆ ಲಾಯಕ್ಕಿಲ್ಲ. ಬಹುಶಃ ಅವರ ಜಾತಕ ಫಲ ಚೆನ್ನಾಗಿದೆ, ಆದ್ದರಿಂದ ಇದುವರೆಗೂ ಮುಖ್ಯಮಂತ್ರಿಯಾಗಿ ಅವರು ಮುಂದುವರಿದಿದ್ದಾರೆ. ಕೆಲವೇ ದಿನ ಕಾಯಿರಿ, ಅವರ ವಿರುದ್ಧ ಅಸಮಾಧಾನ ತಾರಕಕ್ಕೆ ಏರುತ್ತದೆ, ಸಿದ್ದರಾಮಯ್ಯ ಪದಚ್ಯುತರಾಗುತ್ತಾರೆ ಎಂದು ಡೀವಿ ಕುಟುಕಿದರು. ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧ್ಯಕ್ಷ ಉದಯಕುಮಾರ್ ಶೆಟ್ಟಿ, ಉಪಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.