ಭೂಸ್ವಾಧೀನ ವಿರೋಧಿಸಿ ಸಮುದ್ರಕ್ಕಿಳಿದು ಪ್ರತಿಭಟನೆ
ಕಾರವಾರ: ಚತುಷ್ಪಥಕ್ಕೆ ಹೆಚ್ಚುವರಿ ಭೂಸ್ವಾಧೀನ ವಿರೋಧಿಸಿ ಹಾಗೂ ಬೈಪಾಸ್ ನಿರ್ಮಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ನೂರಾರು ಜನರು ಇಲ್ಲಿನ ಸಮುದ್ರದಲ್ಲಿ ನಿಂತು ಪ್ರತಿಭಟನೆ ನಡೆಸಿದರು.
ಭಾನುವಾರ ಮಧ್ಯಾಹ್ನ 3.30ರ ಸುಮಾರಿಗೆ ಇಲ್ಲಿನ ರವೀಂದ್ರನಾಥ ಟಾಗೋರ ಕಡಲತೀರದಲ್ಲಿ ಸಮುದ್ರಕ್ಕಿಳಿದ ಪ್ರತಿಭಟನಾಕಾರರು ಸುಮಾರು ಎರಡು ಗಂಟೆ ಕಾಲ ನೀರಿನಲ್ಲಿಯೇ ನಿಂತು ಪ್ರತಿಭಟಿಸಿದರು. ಬ್ಯಾನರ್, ಪೋಸ್ಟರ್ ಹಿಡಿದು ಹೆದ್ದಾರಿಗೆ ಹೆಚ್ಚುವರಿ ಭೂಮಿ ಸ್ವಾಧೀನ ಮಾಡಿಕೊಳ್ಳುವುದರ ವಿರುದ್ಧ ಹಾಗೂ ಬೈಪಾಸ್ ನಿರ್ಮಿಸುವಂತೆ ಆಗ್ರಹಿಸಿ ನಿರಂತರ ಘೋಷಣೆಗಳನ್ನು ಕೂಗಿದರು.
ಸಮುದ್ರಕ್ಕಿಳಿದ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿದರು. ಈ ಪ್ರತಿಭಟನೆಯಲ್ಲಿ ಮಹಿಳೆಯರೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಕೇಂದ್ರ ಸಚಿವರಿಗೂ ಮನವಿ: ಇದುವರೆಗೆ ಹೋರಾಟ ಸಮಿತಿ ರಾಷ್ಟ್ರೀಯ ಹೆದ್ದಾರಿಯಲ್ಲಿ, ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ನಡೆಸಿತ್ತು. ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ವ್ಯಕ್ತಪಡಿಸಿತ್ತು. ಕೇಂದ್ರ ಭೂ ಸಾರಿಗೆ ಸಚಿವ ಆಸ್ಕರ್ ಫರ್ನಾಂಡಿಸ್ ಅವರಿಗೂ ಮನವಿ ಸಲ್ಲಿಸಿತ್ತು. ಈಗ ಸಮುದ್ರದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಗಮನ ಸೆಳೆದಿದೆ.
ಬೈಪಾಸ್ ನಿರ್ಮಿಸಿ: ಈ ಸಂದರ್ಭದಲ್ಲಿ ನ್ಯಾಯವಾದಿ ಕೆ.ಆರ್. ದೇಸಾಯಿ ಮಾತನಾಡಿ, ಯಾವುದೇ ಕಾರಣಕ್ಕೂ ಹೆಚ್ಚುವರಿ ಭೂಸ್ವಾಧೀನಕ್ಕೆ ಮುಂದಾಗಬಾರದು. ಜನವಸತಿ ಇರುವ ಪ್ರದೇಶದಲ್ಲಿ ಬೈಪಾಸ್ ನಿರ್ಮಿಸುವ ಮೂಲಕ ಜನತೆ ನಿರಾಶ್ರಿತರಾಗುವುದನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದರು.
ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಮಾತನಾಡಿದರು. ಕಡಲಿನಲ್ಲಿ ನಡೆದ ಈ ವಿನೂತನ ಪ್ರತಿಭಟನೆ ವೀಕ್ಷಿಸಲು ಸಾಕಷ್ಟು ಜನರು ಸೇರಿದ್ದರು. ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿದ್ದರು, ಕರಾವಳಿ ಕಾವಲು ಪೊಲೀಸ್ ಪಡೆ ಬೋಟ್ಗಳೂ ಸಮುದ್ರ ತೀರದಲ್ಲಿ ಬಂದೋಬಸ್ತ್ನಲ್ಲಿ ಪಾಲ್ಗೊಂಡಿದ್ದವು. ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ, ನ್ಯಾಯವಾದಿ ಕೆ.ಆರ್. ದೇಸಾಯಿ, ಪ್ರಮುಖರಾದ ಮಾಧವ ನಾಯಕ, ಉಷಾ ರೇವಣಕರ, ಜಗದೀಶ ನಾಯ್ಕ, ಎಲಿಷಾ ಎಲಕಪಾಟಿ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

