ಪೇತ್ರಿ ಮಾದು ನಾಯ್ಕಗೆ ಸಕ್ಕಟ್ಟು ಲಕ್ಷ್ಮೀ ನಾರಾಯಣಯ್ಯ ಪ್ರಶಸ್ತಿ
ಕುಂದಾಪುರ: ಸೌಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ವತಿಯಿಂದ ನೀಡಲಾಗುವ ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ ಪ್ರಶಸ್ತಿಗೆ ಈ ಬಾರಿ ಯಕ್ಷಗಾನರಂಗದ ಹಿರಿಯ ಬಣ್ಣದ ವೇಷಧಾರಿ ಪೇತ್ರಿ ಮಾದು ನಾಯ್ಕ ಅವರನ್ನು ಆಯ್ಕೆ ಮಾಡಲಾಗಿದೆ. ನ.10ರಂದು ಪ್ರಶಸ್ತಿ ಪ್ರದಾನ ಸಮಾರಂಭ ದೇವಾಲಯದಲ್ಲಿ ನಡೆಯಲಿದೆ.
ಬಣ್ಣದ ವೇಷಗಳಿಲ್ಲದೇ ಬಡವಾಗಿದ್ದ ಬಡಗುತಿಟ್ಟಿಗೆ ತಮ್ಮ ಬಣ್ಣದ ವೇಷದಿಂದ ದೀರ್ಘಕಾಲ ಜೀವ ತುಂಬಿದ್ದ ಮಾದು ನಾಯ್ಕ ಅವರು ಸಕ್ಕಟ್ಟು ಅವರ ದೀರ್ಘಕಾಲದ ಒಡನಾಡಿಯಾಗಿದ್ದವರು.
ಉಡುಪಿ ತಾಲೂಕಿನ ಬ್ರಹ್ಮಾವರ ಸಮೀಪ ಪೇತ್ರಿ ಎಂಬಲ್ಲಿ ವಾಮನ ನಾಯ್ಕ್, ಮೈದಾ ಬಾಯಿ ದಂಪತಿ
ಪುತ್ರನಾಗಿ 1940ರಲ್ಲಿ ಜನಿಸಿದ ಮಾದು ನಾಯ್ಕರು 6ನೇ ತರಗತಿ ವಿದ್ಯಾಭ್ಯಾಸ ಮಾಡಿ, ಮಾವ ತಿಮ್ಮಪ್ಪ ನಾಯ್ಕರಿಂದ ಹೆಜ್ಜೆಗಾರಿಕೆ ಅಭ್ಯಾಸ ಮಾಡಿದರು. 14ನೇ ವಯಸ್ಸಿನಲ್ಲಿ ಮಾರಣಕಟ್ಟೆ ಮೇಳದಲ್ಲಿ ಗೆಜ್ಜೆ ಕಟ್ಟಿ, ಸುಮಾರು 30 ವರ್ಷ ಸಾಲಿಗ್ರಾಮ, ಪೆರ್ಡೂರು, ಮೂಲ್ಕಿ, ಅಮೃತೇಶ್ವರಿ ಮೇಳಗಳಲ್ಲಿ ತಿರುಗಾಟ ಮಾಡಿ 1963ರಿಂದ ಸತತ 12 ವರ್ಷ ಮಂದಾರ್ತಿ ಮೇಳದಲ್ಲಿ ಸೇವೆ ಸಲ್ಲಿಸಿದ್ದಾರೆ. 83ರಿಂದ ಉಡುಪಿಯ ಯಕ್ಷಗಾನ ಕೇಂದ್ರದ ಮೂಲಕ ಯಕ್ಷರಂಗದ ತಿರುಗಾಟ ನಡೆಸಿದರು.
ವಿಶೇಷವಾಗಿ ಹೊಸಪ್ರಸಂಗದ ಖಳ ಪಾತ್ರಗಳಿಗೆ ಜೀವತುಂಬಿದ ಇವರು ಮಂದಾರ್ತಿ ಮೇಳದಲ್ಲಿ ಅಭಿನಯಿಸುತಿದ್ದ ಶ್ರೀದೇವಿ ಬನಶಂಕರಿಯ ಚಮೂರನ ಪಾತ್ರ ಅಪಾರ ಜನಮನ್ನಣೆ ಗಳಿಸಿದೆ. ದೀರ್ಘಕಾಲ ಬಣ್ಣದ ವೇಷಧಾರಿಯಾಗಿ ಮೆರೆದ ಇವರ ಮೈರಾವಣ, ಕಾಲಜಂಘ, ತಾರಕಾಸುರ, ಹಿಡಿಂಬಾಸುರ, ಹಿಡಿಂಗೆ ಮುಂತಾದ ಪಾತ್ರಗಳು ಜನಮನ್ನಣೆ ಪಡಿದಿವೆ. ಹಾರಾಡಿ ಮಹಾಬಲ ಗಾಣಿಗರ ನಂತರ ಜೋಡಿಕೋರೆ ಮುಂಡಾಸನ್ನು ರಂಗದಲ್ಲಿ ಪ್ರದರ್ಶಿಸಿದ ಕೀರ್ತಿ ಮಾದು ನಾಯ್ಕ ಅವರಿಗೆ ಸಲ್ಲುತ್ತದೆ.
ಈಗಾಗಲೇ ಇವರಿಗೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ, ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಮಂದಾರ್ತಿ ಕ್ಷೇತ್ರ ಸನ್ಮಾನ, ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ, ಕು.ಶಿ. ಹರಿದಾಸ ಭಟ್ ಜಾನಪದ ಪ್ರಶಸ್ತಿ ಸಹಿತ ಹಲವಾರು ಸನ್ಮಾನಗಳು ಸಂದಿವೆ. ಬಣ್ಣದ ವೇಷದಲ್ಲಿ ಸಕ್ಕಟ್ಟಿನವರ ಉತ್ತರಾಧಿಕಾರಿಯಾಗಿದ್ದ ಮಾದು ನಾಯ್ಕರಿಗೆ ಸಕ್ಕಟ್ಟು ಪ್ರಶಸ್ತಿ ಅತ್ಯಂತ ಯೋಗ್ಯವಾಗಿಯೇ ಸಲ್ಲುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

