ಆರ್ಎಸ್ಎಸ್ ಸಭಾಂಗಣದಲ್ಲಿ ಇಎಸ್ಐ ಕಾರ್ಯಕ್ರಮ!
ಮಂಗಳೂರು: ಸಂಘ ಪರಿವಾರದ ಆಡಳಿತದಲ್ಲಿರುವ ಸಂಘನಿಕೇತನದಲ್ಲಿ ಇಎಸ್ಐ ನಿಗಮ ಉಪಪ್ರಾದೇಶಿಕ ಕಚೇರಿ ಉದ್ಘಾಟನೆ ಸಮಾರಂಭ ನಡೆಸಿದ್ದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಶಾಸಕ ಜೆ.ಆರ್.ಲೋಬೊ ಗೈರು ಹಾಜರಾಗಿದ್ದಾರೆ!
ಆರ್ಎಸ್ಎಸ್ ಕಾರ್ಯಾಲಯವೂ ಆಗಿರುವ ಇಲ್ಲಿನ ಸಂಘನಿಕೇತನದ ಸುಂದರ ಸಭಾಂಗಣದಲ್ಲಿ ಗುರುವಾರ ಸಮಾರಂಭ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್ ಕೂಡಾ ಗೈರು ಹಾಜರಾಗಿದ್ದರು. ಸಂಘನಿಕೇತನದಲ್ಲಿ ಕೇಂದ್ರ ಸರ್ಕಾರದ ಕಾರ್ಯಕ್ರಮ ಇರಿಸಿದ ಬಗ್ಗೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಬೆಳಗ್ಗೆ ನಡೆದ ಕಾರ್ಯಕರ್ತರ ಸಭೆಯಲ್ಲಿ ಕೇಂದ್ರ ಕಾರ್ಮಿಕ ಸಚಿವ ಕೋಡಿಕುನ್ನಿಲ್ ಸುರೇಶ್ ಮತ್ತು ರಾಜ್ಯ ಕಾರ್ಮಿಕ ಸಚಿವ ಟಿ.ಪಿ.ಪರಮೇಶ್ವರ ನಾಯ್ಕ್ ಬಳಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು.
ಕೇಂದ್ರ ಸಚಿವರು, ಸಭಾಂಗಣ ಯಾರಿಗೆ ಸೇರಿದೆ ಎನ್ನುವುದು ನನಗೇ ಗೊತ್ತೇ ಇಲ್ಲ, ನಿಗಮ ಅಧಿಕಾರಿಗಳು ಆಯೋಜಿಸಿದ್ದು ಎಂದರು.
ಪರಮೇಶ್ವರ ನಾಯ್ಕ್ ಕೂಡಾ ತಾನು ಕೇವಲ ಅತಿಥಿಯಾಗಿ ಬಂದಿದ್ದೆ ಎಂದರು. ನಾಗಪುರ ಬಿಟ್ಟರೆ ಮಂಗಳೂರೇ ಬಿಜೆಪಿ ಪ್ರಯೋಗಾಲಯ. ಈ ರೀತಿ ಮಾಡುವುದು ಸರಿಯಲ್ಲ ಎಂದು ಕಾರ್ಯಕರ್ತರು ಆಕ್ಷೇಪಿಸಿದರು. ಇದು ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿದ್ದರಿಂದ ನಿಗಮ ಅಧಿಕಾರಿಗಳು ಲೋಕಸಭೆ ಸದಸ್ಯರ ಬಳಿ ಸಂಪರ್ಕಿಸಿರಬಹುದು. ಬಿಜೆಪಿ ಸಂಸದರಾದ್ದರಿಂದ ಸಂಘನಿಕೇತನದಲ್ಲಿ ಮಾಡುವಂತೆ ಸೂಚಿಸಿರಬಹುದು. ಕೇಂದ್ರ ಸಚಿವರೂ ಕೂಡಾ ಕೇರಳದವರು, ನಿಗಮ ಅಧಿಕಾರಿಗಳೂ ಕೂಡಾ ಈ ಊರಿನವರು ಅಲ್ಲ. ಹೀಗಾಗಿ ಗೊತ್ತಿಲ್ಲದೆ ಎಡವಟ್ಟು ನಡೆದಿರಬಹುದು ಎಂದು ತಮಗೆ ತಾವೇ ಸಮಾಧಾನ ಪಟ್ಟುಕೊಂಡರು.
ಈ ವಿಚಾರ 4 ದಿನ ಮೊದಲೇ ಗೊತ್ತಾಗಿದ್ದರೆ ಕಾರ್ಯಕ್ರಮ ಮುಂದೂಡಬಹುದಾಗಿತ್ತು. ಆದರೆ ಗೊತ್ತಾದಾಗ ಸಮಯ ಮೀರಿ ಹೋಗಿತ್ತು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಸಂಬಂಧ ಅಧಿಕಾರಿಗಳಿಗೆ ಪ್ರಶ್ನಿಸಬೇಕು ಎಂದು ಕಾರ್ಯಕರ್ತರು ಕೇಂದ್ರ ಸಚಿವರ ಬಳಿ ಭಿನ್ನವಿಸಿದರು.
'ನನಗೆ ಆಹ್ವಾನ ನೀಡಿಲ್ಲ ಹೀಗಾಗಿ ಕಾರ್ಯಕ್ರಮಕ್ಕೆ ನಾನು ಹೋಗುವುದಿಲ್ಲ ಎಂದು ರಮಾನಾಥ ರೈ ಹೇಳಿದರು. ನಿನ್ನೆ ರಾತ್ರಿಯಷ್ಟೇ ಕಾರ್ಯಕ್ರಮಕ್ಕೆ ಕರೆದಿದ್ದಾರೆ ಆದ್ದರಿಂದ ಹೋಗುವುದಿಲ್ಲ ಎಂದು ಶಾಸಕ ಜೆ.ಆರ್. ಲೋಬೊ ಹೇಳಿದರು. ಅಲ್ಲಿಗೆ ಚರ್ಚೆ ಮುಕ್ತಾಯವಾಯಿತು. ಆರೋಗ್ಯ ಸಚಿವಖಾದರ್ ಊರಲ್ಲಿ ಇರಲಿಲ್ಲ. ಹೀಗಾಗಿ ಹೇಳಿಕೆ ನೀಡುವ ಪ್ರಮೇಯ ಬರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

