ಸೌಜನ್ಯಾ ಪ್ರಕರಣದ ಪ್ರತಿಭಟನೆ ವ್ಯಕ್ತಿ, ಸಂಸ್ಥೆ ವಿರುದ್ಧವಲ್ಲ'
ಬೆಳ್ತಂಗಡಿ: ಧರ್ಮಸ್ಥಳ ಪರಿಸರದಲ್ಲಿ ಕೆಲ ವರ್ಷಗಳಿಂದ ಅಸಹಜವಾಗಿ ಮೃತಪಟ್ಟ ಪದ್ಮಲತಾ, ಸೌಜನ್ಯಾ, ವೇದವಲ್ಲಿ ಹಾಗೂ ಅನಾಮಧೇಯರಾಗಿ ಜೀವಕಳೆದುಕೊಂಡ ನೂರಾರು ಮಂದಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಬೆಳ್ತಂಗಡಿ ತಾಲೂಕು ಕ್ರೀಡಾಂಗಣದಲ್ಲಿ ಪ್ರಜಾಪ್ರಭುತ್ವ ವೇದಿಕೆಯಡಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಯಿತು.
ಸೌಜನ್ಯಾಗೆ ನ್ಯಾಯ ಕೇಳಿ ನಡೆಸಿದ ಪ್ರತಿಭಟನೆಗೆ ಬೆಂಬಲ ಸೂಚಿಸಿ ಉಜಿರೆ, ಬೆಳ್ತಂಗಡಿ, ಗುರುವಾಯನಕೆರೆ, ಮಡಂತ್ಯಾರು, ಅಳದಂಗಡಿ, ನಾರಾವಿ ಸೇರಿದಂತೆ ತಾಲೂಕಿನಾದ್ಯಂತ ಅಂಗಡಿ ಮಾಲೀಕರು ತಮ್ಮ ವ್ಯವಹಾರಗಳನ್ನು ನಿಲ್ಲಿಸಿ ಸ್ಯಯಂಪ್ರೇರಿತ ಬಂದ್ ಆಚರಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಇದರಿಂದ ಬೆಳ್ತಂಗಡಿ ಹಾಗು ಸುತ್ತಮುತ್ತ ವಾಹನ ಸಂಚಾರಕ್ಕೆ ಸಂಪೂರ್ಣ ಅಡಚಣೆಯುಂಟಾಯಿತು.
ಪ್ರತಿಭಟನೆ ವ್ಯಕ್ತಿ, ಸಂಸ್ಥೆ ವಿರುದ್ಧವಲ್ಲ: ಸಭೆಯಲ್ಲಿ ಮಾತನಾಡಿದ ಕೇಮಾರು ಸಾಂದೀಪನಿ ಆಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ, ನಾವು ನಡೆಸುವ ಪ್ರತಿಭಟನೆ ಕಾನೂನು ರೀತಿ ಹೊರತು, ಯಾವುದೇ ವ್ಯಕ್ತಿ ಅಥವಾ ಧಾರ್ಮಿಕ ಸಂಸ್ಥೆಯ ವಿರುದ್ಧ ಅಲ್ಲ. ದೇವರು ಪ್ರೀತಿ ಮಾಡುವ ವಸ್ತುವೇ ಹೊರತು ಭಯ ಹುಟ್ಟಿಸುವ ಶಕ್ತಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರತಿಭಟನೆ ಸ್ವಾಭಾವಿಕ: ಸ್ವಾತಂತ್ರ್ಯ ಕಸಿದುಕೊಳ್ಳುವ ಶಕ್ತಿಗಳ ವಿರುದ್ಧ ಪ್ರತಿಭಟನೆ ಏಳುವುದು ಸ್ವಾಭಾವಿಕ. ಭಯ ಹುಟ್ಟಿಸಿ ಪ್ರತಿಭಟನೆಗಳನ್ನು ಮುಗಿಸಿ ಹಾಕಬಹುದೆಂದು ಭಾವಿಸಿದ್ದರೆ ಇನ್ನು ಅದು ಸಾಧ್ಯವಿಲ್ಲ. ಅತ್ಯಾಚಾರ ಅನಾಚಾರಗಳ ವಿರುದ್ಧ ಎಚ್ಚೆತ್ತ ಜನತೆ ಸದಾ ಪ್ರಶ್ನಿಸುತ್ತಾರೆ ಎಂದು ಹೇಳಿದರು.
ಸೌಜನ್ಯಾ ಪ್ರಕರಣದಲ್ಲಿ ನ್ಯಾಯ ಒದಗಿಸುವುದು ಸರಕಾರದ ಕರ್ತವ್ಯ. ಇದನ್ನು ನಿರ್ವಹಿಸದಿದ್ದರೆ ಜನ ಪ್ರಶ್ನಿಸುತ್ತಾರೆ ಎಂಬ ನೆನಪು ಜನಪ್ರತಿನಿಧಿಗಳಿಗಿರಲಿ ಎಂದು ಎಚ್ಚರಿಸಿದರು.
ಸಿಬಿಐ ತನಿಖೆ ಅಗತ್ಯ: ಸಾಮಾಜಿಕ ಹೋರಾಟಗಾರ, ವೇದಿಕೆ ಅಧ್ಯಕ್ಷ ಮಹೇಶ ಶೆಟ್ಟಿ ತಿಮರೋಡಿ ಮಾತನಾಡಿ, ಸೌಜನ್ಯಾ ಪ್ರಕರಣದ ತನಿಖೆಯನ್ನು ಸುಪ್ರೀಂಕೋರ್ಟ್ ಮೇಲುಸ್ತುವಾರಿಯಲ್ಲಿ ಸಿಬಿಐ ನಡೆಸುವಂತಾಗಬೇಕು. ಯಾಕೆಂದರೆ ರಾಜಕೀಯ ವ್ಯವಸ್ಥೆಯ ಮೇಲೆ ಜನ ನಂಬಿಕೆ ಕಳೆದುಕೊಂಡಿದ್ದಾರೆ ಎಂದರು.
ಪೊಲೀಸ್ ಇಲಾಖೆ ಹಾಗೂ ಸಿಐಡಿ ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದೆ. ಸಾಕ್ಷ್ಯ ನಾಶ ಮಾಡಿದ್ದೇ ಇವರ ಸಾಧನೆಯೇ ಹೊರತು ಇನ್ನೇನು ಸಾಧ್ಯವಾಗಿಲ್ಲ.
ಯಾರದೋ ಒತ್ತಡಕ್ಕೆ ಮಣಿದಂತೆ ಪೋಲಿಸ್ ಇಲಾಖೆ ವರ್ತಿಸುತ್ತಿದೆ. ಎಂತಹ ಪ್ರಭಾವಿಗಳ ಒತ್ತಡವೇ ಇರಲಿ, ಹಣ, ರಾಜಕೀಯ ಪ್ರಭಾವಗಳ ಬಳಕೆಯಾದರೂ ಜನಬೆಂಬಲದೊಂದಿಗೆ ನ್ಯಾಯ ಪಡೆದೇ ಸಿದ್ಧ. ಅದಕ್ಕಾಗಿ ಯಾವ ಹಂತದವರೆಗೂ ಹೋರಾಟ ನಡೆಸಲು ಸಿದ್ಧ ಎಂದರು.
ಹೋರಾಟ ದಮನ ಯತ್ನ: ಹೋರಾಟ ದಮನ ಮಾಡಲು ಪ್ರತಿಭಟನಾಕಾರರನ್ನು ಹೆದರಿಸುವಂತಹ ಪ್ರಯತ್ನ ನಡೆಯುತ್ತಿದೆ. ಆದರೆ ಇದೆಲ್ಲವನ್ನೂ ಮೀರಿ ತಾಲೂಕಿನ ಜನತೆ ನ್ಯಾಯಕ್ಕಾಗಿ ಒಂದಾಗಿದೆ. ಜನ ಯಾರ ಪರವಿದ್ದಾರೆಂದು ಹೋರಾಟದ ವಿರುದ್ಧ ಖಂಡನೆ ಮತ್ತು ಹೇಳಿಕೆ ಕೊಡುವವರು ಇನ್ನಾದರೂ ತಿಳಿದುಕೊಳ್ಳಲಿ ಎಂದು ತಿಮರೋಡಿ ಹೇಳಿದರು.
ನಾವು ಬುದ್ಧಿವಂತರೇ?: ಸಾಹಿತಿ ಅತ್ರಾಡಿ ಅಮೃತಾ ಶೆಟ್ಟಿ ಮಾತನಾಡಿ, ಬುದ್ಧಿವಂತರ ಜಿಲ್ಲೆ ಎಂದು ಹೇಳುವ ತುಳುನಾಡಿನಲ್ಲಿ ಓರ್ವ ಬಾಲಕಿಯ ಅತ್ಯಾಚಾರ ಕೊಲೆ ನಡೆದು ವರ್ಷ ಕಳೆದರೂ ಆರೋಪಿಗಳು ಪತ್ತೆಯಾಗಿಲ್ಲವೆಂದಾದರೆ ನಾವು ಹೇಗೆ ಬುದ್ದಿವಂತರಾಗಲು ಸಾಧ್ಯ? ಎಂದು ಪ್ರಶ್ನಿಸಿದರು.
'ಸಿಬಿಐ ತನಿಖೆ ಸಾಧ್ಯವಿಲ್ಲ' ಎಂದು ಗೃಹ ಸಚಿವರು ಹೇಳುತ್ತಿದ್ದಾರೆ. ಸಿಬಿಐ ತನಿಖೆಗೆ ಈ ಕ್ರೌರ್ಯ ಸಾಲದು ಎಂದು ಭಾವಿಸಿದ್ದಾರೆಯೇ ಎಂದರು.
ಮಾನವ ಹಕ್ಕುಗಳ ರಕ್ಷಣಾ ಮಿಶನ್ ರಾಷ್ಟೀಯ ಅಧ್ಯಕ್ಷ ಪ್ರಕಾಶ್ ಚೆನ್ನಿತ್ತಲ ಮಾತನಾಡಿ, ಈ ಪ್ರಕರಣವನ್ನು ಸುಪ್ರೀಂ ಕೋರ್ಟ್‌ಗೆ ಕೊಂಡೊಯ್ದು ಮೃತಳಿಗೆ ನ್ಯಾಯ ಒದಸಲು ಪ್ರಯತ್ನಿಸಲಾಗುವದು ಎಂದರು.
ಪಿಯುಸಿಎಲ್ ಅಧ್ಯಕ್ಷ ಪಿ.ಬಿ.ಡೇಸಾ, ಮಾನವ ಹಕ್ಕುಗಳ ರಕ್ಷಣಾ ಮಿಶನ್‌ನ ಉಪಾಧ್ಯಕ್ಷ ಮನ್ಸೂರ್ ಅಹಮದ್ ಬೆಂಗಳೂರು, ಸೌಜನ್ಯಾಳ ಹೆತ್ತವರಾದ ಚಂದಪ್ಪ ಗೌಡ, ಕುಸುಮಾವತಿ, ಸಾಮಾಜಿಕ ಹೋರಾಟಗಾರ ವಿಷ್ಣುಮೂರ್ತಿ ಭಟ್, ಡಾ.ಹರಳೆ ಇದ್ದರು.
ಆನಂದ್ ನಿರ್ವಹಿಸಿದರು. ಉಜಿರೆ ಗ್ರಾ.ಪಂ.ಸದಸ್ಯ ರವಿಕುಮಾರ್ ಬರಮೇಲು ಸ್ವಾಗತಿಸಿದರು. ಶ್ರೀನಿವಾಸ ಕಡಿರುದ್ಯಾವರ ಮನವಿ ವಾಚಿಸಿದರು. ಅನಿಲ್ ಕುಮಾರ್ ವಂದಿಸಿದರು.
ನನ್ನ ಪ್ರೀತಿಯ ಪತ್ನಿ ಶಿಕ್ಷಕಿಯಾಗಿದ್ದ ವೇದವಲ್ಲಿಯನ್ನು 34 ವರ್ಷಗಳ ಹಿಂದೆ ಪೆಟ್ರೋಲ್ ಸುರಿದು ಸುಟ್ಟು ಕೊಲೆ ಮಾಡಿ ನನ್ನನ್ನು ಆರೋಪಿಯೆಂದು ಬಿಂಬಿಸುವ ಪ್ರಯತ್ನ ಮಾಡಿದ್ದರು. ಅಂದು ನನ್ನೊಡನೆ ನ್ಯಾಯ ಕೇಳಲು ಯಾರೂ ಇರಲಿಲ್ಲ. ಪ್ರಕರಣದ ಬಗ್ಗೆ ಇಂದಿಗೂ ಶವಪರೀಕ್ಷಾ ವರದಿ, ಪ್ರಥಮ ಮಾಹಿತಿ ವರದಿಯನ್ನು ನಾನು ನೋಡಿಯೇ ಇಲ್ಲ.
ಡಾ. ಹರಳೆ (ವೇದವಲ್ಲಿ ಅವರ ಪತಿ)
ಅಂದು ಪದ್ಮಲತಾ ಪ್ರಕರಣ ನಡೆದಾಗ ನಾವು ನ್ಯಾಯ ಕೇಳುವ ಪ್ರಯತ್ನ ನಡೆಸುತ್ತಿದ್ದೆವು. ಆದರೆ ಅಂದು ನಮಗೆ ಬೆಂಬಲ ಸಿಕ್ಕಿರಲಿಲ್ಲ. ಆದರೆ ಇಂದು ಜನ ಎಚ್ಚೆತ್ತು ಕೊಂಡು ನ್ಯಾಯದ ಪರ ನಿಂತಿದ್ದಾರೆ. ಪದ್ಮಲತಾಳ ತಂದೆ ತನ್ನ 80ರ ಹರೆಯದಲ್ಲೂ ನ್ಯಾಯ ಸಿಗಬಹುದೆಂಬ ನಿರೀಕ್ಷೆಯಲ್ಲಿ ದಿನ ದೂಡುತ್ತಿದ್ದಾರೆ.
ವಿಷ್ಣುಮೂರ್ತಿ ಭಟ್, ಸಾಮಾಜಿಕ ಹೋರಾಟಗಾರ, ಸಿಪಿಐಎಂ ಮಾಜಿ ಮುಖಂಡ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

