'ಇಎಸ್ಐ ಆಸ್ಪತ್ರೆಗೆ ಭೇಟಿ ನೀಡದ ಸಂಸದರು, ಸಮಾರಂಭದಲ್ಲಿ ಹಾಜರ್'
ಮಂಗಳೂರು: 'ಒಂದು ಬಾರಿಯೂ ಇಎಸ್ಐ ಆಸ್ಪತ್ರೆಗೆ ಭೇಟಿ ನೀಡದ ಸಂಸದರು, ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ದುರಂತ' ಎಂದು ಅಖಿಲ ಭಾರತ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಸುದತ್ತ್ ಜೈನ್ ಶಿರ್ತಾಡಿ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕದ್ರಿ ಶಿವಭಾಗ್ನಲ್ಲಿ ಇರುವ ಇಎಸ್ಐ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಜಿಲ್ಲೆಯ ಶಾಸಕರಿಗೆ, ಸಂಸದರಿಗೆ ಕಳೆದ 5 ವರ್ಷಗಳಿಂದ ಮನವಿ ಸಲ್ಲಿಸಿದ್ದರೂ, ಜನರ ಸಮಸ್ಯೆಗೆ ಸ್ಪಂದಿಸುವ ಔದಾರ್ಯ ತೋರಲಿಲ್ಲ. ನವಭಾರತ್ ಸರ್ಕಲ್ನಲ್ಲಿ ಉಪಪ್ರಾದೇಶಿಕ ಕಚೇರಿಯನ್ನು ಸ್ಥಾಪಿಸಿ ಸಂಘನಿಕೇತನದಲ್ಲಿ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಿದ್ದು ಕಾರ್ಮಿಕರ ಕಣ್ಣಿಗೆ ಮಣ್ಣೆರಚುವ ಕೆಲಸದಂತಾಗಿದೆ. ಅಲ್ಲದೆ ಇದಕ್ಕೆ ಯಾವುದೇ ಕಾರ್ಮಿಕ ಸಂಘಗಳಿಗೆ, ಕಾರ್ಮಿಕರಿಗೆ ಆಹ್ವಾನ ನೀಡದಿರುವುದು ಕೂಡ ದೌರ್ಭಾಗ್ಯ ಎಂದರು.
ಉದ್ಘಾಟನೆಗೆಂದು ಆಗಮಿಸಿದ್ದ ರಾಜ್ಯ ಕಾರ್ಮಿಕ ಸಚಿವ ಜಿ. ಪರಮೇಶ್ವರ ನಾಯಕ್ ಹಾಗೂ ಕೇಂದ್ರ ಕಾರ್ಮಿಕ ಸಚಿವ ಕೋಡಿಕುನ್ನಿಲ್ ಸುರೇಶ್ ಅವರು ಇಎಸ್ಐ ಆಸ್ಪತ್ರೆಗೆ ಭೇಟಿ ನೀಡದಿರುವುದು ನಮ್ಮ ಶಾಸಕರ ಮತ್ತು ಸಂಸದರ ದೌರ್ಬಲ್ಯ.
ನೆಮ್ಮದಿ ಕೇಂದ್ರ ಸಿಬ್ಬಂದಿಗಳಿಗೆ 3 ತಿಂಗಳ ಸಂಬಳ ನೀಡಿಲ್ಲ: ನಾಡಕಚೇರಿಯ ನೆಮ್ಮದಿ ಕೇಂದ್ರದಲ್ಲಿ ದುಡಿಯುತ್ತಿದ್ದ ದ.ಕ. ಜಿಲ್ಲೆಯ 50 ಮಂದಿಗೆ ಇನ್ನೂ ಮೂರು ತಿಂಗಳ ವೇತನ ನೀಡದೆ ಅನ್ಯಾಯ ಮಾಡಲಾಗಿದೆ. ಈಗಾಗಲೇ ನೆಮ್ಮದಿ ಕೇಂದ್ರ ಮುಚ್ಚಿದ್ದು, 2013 ಮಾರ್ಚ್ಗೆ ಟೆಂಡರ್ ಪ್ರಕ್ರಿಯೆ ಕೂಡ ಮುಗಿದಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ವೇತನ ವಂಚಿತ ಸಿಬ್ಬಂದಿಗಳಿಗೆ ಪರಿಹಾರ ಒದಗಿಸುವಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.
ಗೋಷ್ಠಿಯಲ್ಲಿ ಮಹಿಳಾ ಕಾರ್ಮಿಕ ಮುಖ್ಯಸ್ಥೆ ಜಯಮ್ಮ, ರಾಜ್ಯ ಸಂಚಾಲಕ ದಯಾನಂದ ಶೆಟ್ಟಿ, ಉಳ್ಳಾಲ ವಲಯ ಅಧ್ಯಕ್ಷ ಎಚ್. ಇಸ್ಮಾಯಿಲ್ ಶಾಫಿ, ಮಂಗಳೂರು ನಗರ ಸಂಚಾಲಕ ಗ್ಲಾಡಿನ್ ಬೈಕಂಪಾಡಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

