ದಕ್ಷಿಣ ಕನ್ನಡ

ಇಂದು ಕಾರ್ಮಿಕರಿಗೆ ಮಾಹಿತಿ

Published On :

ಪುತ್ತೂರು: ತಾಲೂಕಿನ ಕುಂಬ್ರ ಕಟ್ಟಡ ಕಾರ್ಮಿಕರ ಸಂಘದ ಆಶ್ರಯದಲ್ಲಿ ಕಾರ್ಮಿಕರಿಗೆ ಸರ್ಕಾರಿ ಸೌಲಭ್ಯ, ನೋಂದಣಿ, ವಿಮಾ ಯೋಜನೆ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಮಾಹಿತಿ ಕಾರ್ಯಕ್ರಮ 28ರಂದು ಕುಂಬ್ರದ ನವೋದಯ ರೈತ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಘದ ಕಾನೂನು ಸಲಹೆಗಾರ ಕುಂಬ್ರ ದುರ್ಗಾಪ್ರಸಾದ್ ರೈ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ನೋಂದಣಿ ಬಗ್ಗೆ, ಕರ್ನಾಟಕ ರಾಜ್ಯ ವಾಣಿಜ್ಯ ಖಾಸಗಿ ವಾಹನ ಚಾಲಕರ ಅಪಘಾತ ಪರಿಹಾರ ವಿಮಾ ಯೋಜನೆಗಳ ಬಗ್ಗೆ ಹಾಗೂ ಹೊಸ ನಿವೃತ್ತಿ ಯೋಜನೆಯ ಬಗ್ಗೆ ಮಾಹಿತಿ ನೀಡಲಾಗುವುದು. ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸಲಿದ್ದಾರೆ. ಶಾಸಕಿ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ಹೇಳಿದರು. ಕುಂಬ್ರ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಪುರಂದರ ಶೆಟ್ಟಿ, ಕಾರ್ಯದರ್ಶಿ ದಿವಾಕರ ಆಚಾರ್ಯ, ಜತೆ ಕಾರ್ಯದರ್ಶಿ ದಯಾನಂದ ಕಾವು, ಸಲಹೆಗಾರ ನಾರಾಯಣ ಪೂಜಾರಿ ಇದ್ದರು.

ನಾಳೆ ಪ್ರತಿಭಟನೆ
ಮಂಗಳೂರು: ನೀರುಮಾರ್ಗ ಪರಿಸರದಲ್ಲಿ ಅಹಿತಕರ ಘಟನೆ ಖಂಡಿಸಿ ಹಿಂದು ಸಂರಕ್ಷಣೆ ಸಮಿತಿ ಅ.29ರಂದು ಬೃಹತ್ ಪ್ರತಿಭಟನೆ ನಡೆಯಲಿದೆ. ಬೈತುರ್ಲಿಯಿಂದ ನೀರುಮಾರ್ಗದವರೆಗೆ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಯಲಿದ್ದು 11 ಗಂಟೆಗೆ ನೀರುಮಾರ್ಗ ಜಂಕ್ಷನ್‌ನಲ್ಲಿ ಸಭೆ ಆಯೋಜಿಸಲಾಗಿದೆ. ಪರಿಸರದಲ್ಲಿ ಅಮಾಯಕ ಹಿಂದುಗಳ ಮೇಲೆ ದೌರ್ಜನ್ಯ ನಡೆದಿದೆ. ಇದನ್ನು ಖಂಡಿಸಿ ಜನಜಾಗೃತಿ ಮಾಡಿಸುವ ಹಿನ್ನೆಲೆಯಲ್ಲಿ ಸಭೆ ನಡೆಸಲಾಗುತ್ತಿದೆ ಎಂದು ನೀರುಮಾರ್ಗದ ನಿವಾಸಿಗಳು ತಿಳಿಸಿದ್ದಾರೆ.

ಹಾಳಾಗಿರುವ ರಸ್ತೆ: ಪುರಸಭೆ ನಿರ್ಲಕ್ಷ್ಯ
ಕಾರ್ಕಳ 9ನೇ ವಾರ್ಡ್‌ನ ಅನಂತ ಭಟ್ ರಸ್ತೆಯಲ್ಲಿ ಸಾಯಿಬಾಬಾ ಮಂದಿರಕ್ಕೆ ಹೋಗುವ ರಸ್ತೆಯು ಒಂದು ತಿಂಗಳಿನಿಂದ ಹಾಳಾಗಿದ್ದು, ನೂರಾರು ಮಂದಿಗೆ ತೊಂದರೆಯಾಗಿದೆ. ಪುರಸಭೆ ಮುಖ್ಯಾಧಿಕಾರಿ ಬಳಿ ಮನವಿ ಮಾಡಿಕೊಂಡರೂ ಪುರಸಭೆಯಲ್ಲಿ ಹಣ ಇಲ್ಲ ಎಂದು ಹೇಳುವುದರ ಮೂಲಕ ರಸ್ತೆಯ ಕೆಲಸ ಹಾಗೆಯೇ ಉಳಿದಿದೆ. ಈಗಾಗಲೇ ವಾರ್ಡ್‌ನ ಕೌನ್ಸಿಲರ್ ಬಳಿ ಕೇಳಿದಾಗ ಅವರು ಬಂದು ನೋಡಿ 'ಪುರಸಭೆಯಿಂದ ವ್ಯವಸ್ಥೆ ಮಾಡುತ್ತೇನೆ' ಎಂದು ಹೇಳಿ ಹೋದವರು ಇಷ್ಟರವರೆಗೂ ಯಾವುದೇ ವ್ಯವಸ್ಥೆ ಮಾಡಿಲ್ಲ. ಈಗ ಈ ರಸ್ತೆಯಲ್ಲಿ ಸಂಚರಿಸಲು ಅಸಾಧ್ಯವಾಗಿದೆ. ಜನತೆ ಸುಮಾರು 2 ಕಿ.ಮೀ. ಪೆರ್ವಾಜೆ ರಸ್ತೆಯಿಂದ ಸುತ್ತು ಹಾಕಿ ಬರುವ ಪರಿಸ್ಥಿತಿ ಉಂಟಾಗಿದೆ. ಈಗಾಗಲೇ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿ ಒಟ್ಟಿಗೆ ಇರುವಾಗ ಮನವಿ ಮಾಡಿರುವುದರಿಂದ ಇನ್ನಾದರೂ ಅದಷ್ಟೂ ಬೇಗ ರಸ್ತೆ ದುರಸ್ತಿ ಮಾಡುತ್ತೀರಿ ಎಂಬ ಭರವಸೆ ಇಟ್ಟುಕೊಂಡಿದ್ದೇನೆ.

'ಗ್ರೇಟರ್ ಮಂಗಳೂರು' ಅಗತ್ಯವೇ?
ಮಂಗಳೂರು ಮಹಾನಗರ ಪಾಲಿಕೆ ಆಸುಪಾಸು ನಗರದ ಸ್ಥಳೀಯ ಸಂಸ್ಥೆಗಳನ್ನು ಸೇರಿಸಿಕೊಂಡು(26 ಕಿ.ಮೀ. ದೂರದ ಮೂಲ್ಕಿ ಸಹಿತ)'ಗ್ರೇಟರ್ ಮಂಗಳೂರು' ವ್ಯವಸ್ಥೆಯ ಮಾತು ಕೇಳಿಬರುತ್ತಿದೆ. ಈಗ ನಿಜವಾಗಿಯೂ ಗ್ರೇಟರ್ ಮಂಗಳೂರು ಅವಶ್ಯವೇ? ಇದರಿಂದಾಗುವ ಲಾಭ-ನಷ್ಟದ ಲೆಕ್ಕಾಚಾರ ನಡೆದಿದೆಯೇ? ಯಾವ ಕಾರಣಕ್ಕೆ ನೂತನ ವ್ಯವಸ್ಥೆ? ವಿಸ್ತರಿತ ಪಾಲಿಕೆ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಆಡಳಿತ ನಿರ್ವಹಣೆ, ಮೂಲಸೌಕರ್ಯ ಒದಗಿಸಲು ಸಮರ್ಥವಾಗಿದೆಯೇ ಎಂಬುದನ್ನು ಕೂಲಂಕಷ ಅಧ್ಯಯನ ನಡೆಸಿದ ನಂತರವೇ ಈ ಬಗ್ಗೆ ನಿರ್ಧಾರ ಸೂಕ್ತವಲ್ಲವೇ? ಬೆಂಗಳೂರು ಆಸುಪಾಸಿನ ಇತರ ನಗರದ ಸ್ಥಳೀಯ ಸಂಸ್ಥೆಗಳನ್ನು ಸೇರ್ಪಡೆಗೊಳಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ರಚಿಸಲಾಯಿತು. ಆದರೆ ಆಡಳಿತ ನಿರ್ವಹಣೆಯಲ್ಲಿ ವಿಫಲತೆ ಕಂಡುಬಂದ ಕಾರಣ ಈಗ ಬಿಬಿಎಂಪಿಯನ್ನು 4 ವಿಭಾಗಗಳಾಗಿ ವಿಂಗಡಿಸಿ ವಿಕೇಂದ್ರೀಕರಣ ವ್ಯವಸ್ಥೆಯತ್ತ ಸರ್ಕಾರ ಪರಿಶೀಲನೆ ನಡೆಸುತ್ತಿರುವುದಾಗಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಗ್ರೇಟರ್ ಮಂಗಳೂರು ಪರಿಕಲ್ಪನೆ ಪ್ರಸ್ತುತವೇ? ಇದರಿಂದ ಗ್ರಾಮಾಂತರ ವಿದ್ಯಾರ್ಥಿಗಳಿಗೆ ನಷ್ಟವಾಗದೇ? ಸಿಇಟಿ ಮತ್ತಿತರ ಪರೀಕ್ಷೆ, ಸರ್ಕಾರಿ ಕೆಲಸಕ್ಕೆ ಗ್ರಾಮಾಂತರ ಕೋಟಾಕ್ಕೆ ಕತ್ತರಿ ಬೀಳುವುದಿಲ್ಲವೇ? ಆಸ್ತಿ ತೆರಿಗೆ ಹೆಚ್ಚಳವಾಗದೇ? ಪಾಲಿಕೆಯ ಗ್ರೇಡ್‌ನ್ನು 'ಬಿ' ಇಂದ 'ಸಿ'ಗೆ ಇಳಿಸಿದರೆ? ಆದ್ದರಿಂದ ಆಡಳಿತ ತಜ್ಞರು, ಆರ್ಥಿಕ ಪರಿಣತರು, ನಾಗರಿಕ ಸಂಘ ಸಂಸ್ಥೆಗಳ ಜತೆ ಸಮಾಲೋಚನೆ ನಡೆಸಬೇಕು. ಪಾಲಿಕೆ ವ್ಯಾಪ್ತಿಯ ನಾಗರಿಕರಿಗೆ ಎಲ್ಲ ಸೌಲಭ್ಯ ಕಲ್ಪಿಸಿದರೆ ಗ್ರೇಟರ್ ಮಂಗಳೂರು ಅಗತ್ಯವಿದೆಯೇ?

ತಾತ್ಕಾಲಿಕ ನೌಕಾ ಪೈಲೆಟ್,ಪರಿವೀಕ್ಷಕರ ನೇಮಕಾತಿ
ಮಂಗಳೂರು: ಮಂಗಳೂರು ಬಂದರಿನಲ್ಲಿ ನೌಕಾ ಪರಿವೀಕ್ಷಕರ ನೇಮಕಾತಿಗೆ ಆಗ್ರಹಿಸಿ ಹಳೆಮಂಗಳೂರು ಬಂದರು ಬಳಕೆದಾರರ ಸಂಘಟನೆಯು ಕಳೆದ ಒಂದು ತಿಂಗಳಿನಿಂದ ನಡೆಸಿದ ಪ್ರತಿಭಟನೆಗೆ ಸ್ಪಂದಿಸಿದ ಸರ್ಕಾರ ತಾತ್ಕಾಲಿಕ ನೌಕಾ ಪರಿವೀಕ್ಷಕರು ಮತ್ತು ಶಿಪ್ ಪೈಲೆಟ್ ನೇಮಕಾತಿಗೆ ಆದೇಶ ಹೊರಡಿಸಿದೆ. ಹೋರಾಟಕ್ಕೆ ಸ್ಪಂದಿಸಿದ ಬಂದರು ಇಲಾಖೆ ಸಚಿವರು, ಅಧಿಕಾರಿಗಳಿಗೆ ಸಂಘಟನೆ ಪರವಾಗಿ ಕೃತಜ್ಞತೆ ಎಂದು ಸಂಘಟನೆ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

28, 30ರಂದು ವಿದ್ಯುತ್ ಕಡಿತ
ಮಂಗಳೂರು: ಕುತ್ತಾರ್ ವ್ಯಾಪ್ತಿಯಲ್ಲಿ 28, 30 ರಂದು ವಿದ್ಯುತ್ ಕಡಿತಗೊಳ್ಳಲಿದೆ. ಕುತ್ತಾರಿನಲ್ಲಿ ರಸ್ತೆ ಅಗಲೀಕರಣ ಪ್ರಯುಕ್ತ ಟವರ್ ಸ್ಥಳಾಂತರ ಕಾಮಗಾರಿ ನಡೆಯಲಿದ್ದು, 28ರಂದು ಮಧ್ಯಾಹ್ನ 12 ರಿಂದ ಸಂಜೆ 5 ಗಂಟೆವರೆಗೆ ಮತ್ತು 30 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ತೊಕ್ಕೊಟ್ಟು, ಉಳ್ಳಾಲ, ಕುತ್ತಾರ್, ಸೋಮೇಶ್ವರ, ಕೋಟೆಕಾರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ ಎಂದು ಮೆಸ್ಕಾಂ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.