ಜನಪ್ರತಿನಿಧಿಗಳಿಗೆ ಕೃಷಿ ಕಾಳಜಿ ಕೊರತೆ: ರಂಗನಾಥ್
ಪುತ್ತೂರು: ಜನಪ್ರತಿನಿಧಿಗಳಿಗೆ ಕೃಷಿ ಕಾಳಜಿಯಿಲ್ಲದಿರುವುದು ನಮ್ಮ ದೌರ್ಭಾಗ್ಯ. ಇಂದಿನ ಓಟ್ಬ್ಯಾಂಕ್ ರಾಜಕೀಯದ ಹಿನ್ನೆಲೆಯಲ್ಲಿ ಕೃಷಿಕರ ಉಳಿವಿಗಾಗಿ ಹಾಗೂ ನಮ್ಮ ನಿಲುವು ಸ್ಪಷ್ಟಪಡಿಸುವುದಕ್ಕಾಗಿ ಸಂಘಟನೆ ಅನಿವಾರ್ಯ ಎಂದು ಕರ್ನಾಟಕ ಪ್ರದೇಶ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ವೈ. ರಂಗನಾಥ್ ಅಭಿಪ್ರಾಯಪಟ್ಟಿದ್ದಾರೆ.
ಭಾನುವಾರ ಪುತ್ತೂರಿನ ತೆಂಕಿಲ ವಿವೇಕಾನಂದ ವಿದ್ಯಾಲಯದಲ್ಲಿ ನಡೆದ 'ಕೃಷಿ ಹಬ್ಬ-2013' ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೃಷಿ ಕ್ಷೇತ್ರ ಬೆಳೆಯಲಿಲ್ಲ: ಪ್ರಧಾನಿಗಳ ಚಿಂತನೆಯಿಂದ ದೇಶದಲ್ಲಿ ಕೈಗಾರಿಕೆಗಳು ಬೆಳೆಯಿತು, ಆದರೆ ಕೃಷಿ ಬೆಳೆಯಲಿಲ್ಲ. ನಮ್ಮ ಶಾಸಕರಿಗೂ ಕೃಷಿಯ ಬಗ್ಗೆ ಕಾಳಜಿಯಿಲ್ಲ ಎಂದ ಅವರು, ದ.ಕ. ಜಿಲ್ಲೆಯಲ್ಲಿ ಕೃಷಿಯ ಬಗ್ಗೆ ಅನೇಕರಿಗೆ ಆಸಕ್ತಿಯಿದೆ. ಆದರೆ ಅವರನ್ನು ಸಮರ್ಪಕವಾಗಿ ಸಂಘಟಿಸಬೇಕಾಗಿರುವ ಸಂಘಟನೆಯು ಕುಂಬಕರ್ಣ ನಿದ್ರೆಯಲ್ಲಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ನಿದ್ರಾವಸ್ಥೆಯಲ್ಲಿರುವ ಸಂಘವನ್ನು ಬಡಿದೆಬ್ಬಿಸುವ ಕೆಲಸ ಮಾಡಬೇಕಾಗಿದೆ ಎಂದರು.
ದಿಕ್ಸೂಚಿ ಭಾಷಣ ಮಾಡಿದ ಕರ್ನಾಟಕ ಸಾವಯವ ಕೃಷಿ ಮಿಷನ್ನ ನಿಕಟಪೂರ್ವ ಅಧ್ಯಕ್ಷ ಅ.ಶ್ರೀ. ಆನಂದ್, ಪ್ರಸ್ತುತ ಪೇಟೆಯು ಹಳ್ಳಿ ಉಳಿಸುವ ಕೆಲಸ ಮಾಡುತ್ತಿದ್ದು ಈ ವ್ಯವಸ್ಥೆ ಬದಲಾವಣೆಗೊಂಡು ಹಳ್ಳಿಯು ಪೇಟೆಯನ್ನು ಉಳಿಸುವ ಸ್ಥಿತಿ ನಿರ್ಮಾಣಗೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಆನಂದ್ ಕೃಷಿಕರೊಂದಿಗೆ ಸಂವಾದ ನಡೆಸಿದರು.
ಅಡಕೆ ಪತ್ರಿಕೆಯ ಪ್ರಕಾಶಕ ಫಾರ್ಮರ್ಸ್ ಟ್ರಸ್ಟ್ನ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಮಾತನಾಡಿ, ದೇಶಕ್ಕೆ ಕೃಷಿ ಯಾಕೆ ಬೇಕು ಎಷ್ಟು ಮಂದಿ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಬಗ್ಗೆ ನಿಗದಿಪಡಿಸಿಕೊಳ್ಳುವುದು ಉತ್ತಮ. ಅಮೆರಿಕಾದಲ್ಲಿ ಕೇವಲ ಒಂದೂವರೆ ಶೇಕಡ ಕೃಷಿಕರಿದ್ದಾರೆ, ಆದರೆ ಅವರಿಗೆ ಕೋಟ್ಯಂತರ ರುಪಾಯಿ ಸಬ್ಸಿಡಿ ಸಿಗುತ್ತಿದೆ. ನಮ್ಮಲ್ಲಿಯೂ ಕೃಷಿಕರ ಸಂಖ್ಯೆ ಕಡಿಮೆಯಿದ್ದಾಗ ಸಬ್ಸಿಡಿಗಳು ಹೆಚ್ಚಾಗಲು ಸಾಧ್ಯ ಎಂದರು.
ನಾಟಿ ವಿಷ ವೈದ್ಯ ಹಾಗೂ ಕೃಷಿಕ ಎಂ. ನಾರಾಯಣಪ್ಪ ಸಾಲಿಯಾನ್ ತೆಂಗಿನ ಹಿಂಗಾರ ಅರಳಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಭಾರತೀಯ ಕಿಸಾನ್ ಸಂಘದ ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯ ಬಿ.ಕೆ. ರಮೇಶ್ ಪ್ರಾಸ್ತಾವಿಕ ಮಾತನಾಡಿದರು. ಕೃಷಿ ಹಬ್ಬ ಸ್ವಾಗತ ಸಮಿತಿ ಗೌರವ ಅಧ್ಯಕ್ಷ ಮುಳಿಯ ಶ್ಯಾಮ ಭಟ್, ಅಧ್ಯಕ್ಷ ದೇರಣ್ಣ ಗೌಡ ಅಂಡತ್ತಡ್ಕ ಇದ್ದರು.
ವಿಚಾರ ಗೋಷ್ಠಿ: ಕೃಷಿ ಸಂಸ್ಕೃತಿಯ ಬಗ್ಗೆ ಅವಿನಾಶ್ ಕೊಡೆಂಕಿರಿ, ಕೃಷಿಯಲ್ಲಿ ಯುವಜನತೆ ವಿಚಾರದ ಕುರಿತು ಶಿವಸುಬ್ರಹ್ಮಣ್ಯ ಪೆಲತ್ತಡ್ಕ, ಆಹಾರ ಬೆಳೆಗಳ ಅನಿವಾರ್ಯತೆ ವಿಚಾರದಲ್ಲಿ ಎ.ಪಿ. ಸದಾಶಿವ ಮರಿಕೆ ಮತ್ತು ಕೃಷಿ ಕ್ಷೇತ್ರದ ಪ್ರಸ್ತುತ ಸವಾಲುಗಳು ವಿಷಯದ ಕುರಿತು ಪುಟ್ಟಸ್ವಾಮಿ ಬೆಂಗಳೂರು ವಿಚಾರ ಮಂಡಿಸಿದರು. ಸಭಾಂಗಣದ ಹೊರಭಾಗದಲ್ಲಿ ವಾಹನ ಮತ್ತು ಕೃಷಿ ಯಂತ್ರಮೇಳ ನಡೆಯಿತು.
ಕೃಷಿಕ ದಂಪತಿಗಳಿಗೆ ಸನ್ಮಾನ: ಕಾಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಜೀವನ ನಿರ್ವಹಿಸುತ್ತಿರುವ ಹಿರಿಯ ದಂಪತಿಗಳಿಗೆ ಸನ್ಮಾನ ಮಾಡಲಾಯತು. ಆರ್ಯಾಪು ಗ್ರಾಮ ಸಂಪ್ಯದ ಕೆ. ದಯಾನಂದ ಗೌಡ ಮತ್ತು ಪತ್ನಿ ಸೀತಾರತ್ನ, ಬೆಳ್ಳಾರೆ ಗ್ರಾಮದ ಶುಭಕರ ರೈ ಮತ್ತು ಪತ್ನಿ ಪ್ರಮೀಳಾ ರೈ, ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ತಾರನಾಥ ಗೌಡ ಮತ್ತು ಪತ್ನಿ ಗೀತಾ ಹಾಗೂ ಮಂಗಳೂರಿನ ಬಡಕೋಡಿ ನಿವಾಸಿ ಸತೀಶ ಪೂಜಾರಿ ಮತ್ತು ಅವರ ಪತ್ನಿ ಭಾರತೀಯವರಿಗೆ ಕಿಸಾನ್ ಸಂಘ ವತಿಯಿಂದ ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

