ದಕ್ಷಿಣ ಕನ್ನಡ

ಕಾಳಿಕಾಂಬ ದೇವಸ್ಥಾನ ಖಾಸಗಿ ಸೊತ್ತು

Published On :

ಮಂಗಳೂರು: ರಥಬೀದಿ ಶ್ರೀ ಕಾಳಿಕಾಂಬ ವಿನಾಯಕ ದೇವಸ್ಥಾನವು ವಿಶ್ವಬ್ರಾಹ್ಮಣ ಸಮುದಾಯದ  8 ಪೇಟೆ ಕೂಡುವಿಳಿಕೆ ಹಾಗೂ ಹತ್ತು ಸಮಸ್ತರಿಗೆ ಸಂಬಂಧಿಸಿದ್ದಾಗಿದೆ. ಈ ಕ್ಷೇತ್ರ ಯಾವುದೇ ಕಾರಣಕ್ಕೂ ಧಾರ್ಮಿಕ ದತ್ತಿ ನಿಧಿ ಇಲಾಖೆಗೆ ವಶವಾಗದಂತೆ ತಡೆಗಟ್ಟಲು ಅರಣ್ಯ ಸಚಿವ ಬಿ. ರಮಾನಾಥ ರೈ ಅವರಿಗೆ ಕೂಡುವಳಿಕೆ ಮೊಕ್ತೇಸರರ ಒಕ್ಕೂಟ ಮಂಗಳವಾರ ಮನವಿ ಸಲ್ಲಿಸಿತು. ಈ ಸಂದರ್ಭ ಒಕ್ಕೂಟ ಸಂಚಾಲಕ ಸತೀಶ್ ಆಚಾರ್, ಸದಾಶಿವ ಆಚಾರ್, ಜಿ. ಗೋಪಾಲ ಆಚಾರ್, ನಾರಾಯಣ ಆಚಾರ್ ಹಾಜರಿದ್ದರು.
ಆದಿವಾಸಿಗಳ ಸಮಾವೇಶ
ಬೆಳ್ತಂಗಡಿ: ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಅರಣ್ಯ ವಾಸಿಗಳಿಗೆ ಹಕ್ಕು ಪತ್ರ ನೀಡುತ್ತೇವೆ ಎಂದು ನಂಬಿಸಲು ರಾಜಕೀಯದವರು ಹೊರಟಿದ್ದಾರೆ. ಈ ಬಗ್ಗೆ ಎಚ್ಚರದಿಂದಿರಬೇಕು ಎಂದು ಸಿಪಿಐಎಂನ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಎಸ್.ವೈ. ಗುರಶಾಂತ್ ಎಚ್ಚರಿಸಿದರು.
ಅವರು ಸೋಮವಾರ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಮತ್ತು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಆಶ್ರಯದಲ್ಲಿ ಇಲ್ಲಿನ ಅಂಬೇಡ್ಕರ್ ಸಭಾಭವನದಲ್ಲಿ ನಡೆದ ಬೆಳ್ತಂಗಡಿ ತಾಲೂಕು ಆದಿವಾಸಿ ಜನರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಅರಣ್ಯ ಹಕ್ಕು ಸಮಿತಿ ಮೂಲಕ ಅರ್ಜಿ ಕೊಟ್ಟವರಿಗೆ ಕೂಡಲೇ ಹಕ್ಕು ಪತ್ರ ನೀಡಬೇಕು. ಇಲ್ಲವಾದರೆ ರಾಜ್ಯ ಮಟ್ಟದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಸಮಾವೇಶದ ಅಧ್ಯಕ್ಷತೆಯನ್ನು ಆದಿವಾಸದ ಹಕ್ಕುಗಳ ಸಮನ್ವಯ ಸಮಿತಿ ಅಧ್ಯಕ್ಷ ವಸಂತ ನಡ ವಹಿಸಿದ್ದರು. ಬೆಳ್ತಂಗಡಿ ಸಿಪಿಐಎಂನ ಕಾರ್ಯದರ್ಶಿ ಶಿವಕುಮಾರ್ ಎಸ್.ಎಂ., ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಬಿ.ಎಂ. ಭಟ್, ಕರ್ನಾಟಕ ಪ್ರಾಂತ್ಯ ರೈತ ಸಂಘ ರಾಜ್ಯ ಸಮಿತಿ ಸದಸ್ಯ ಹರಿದಾಸ್ ಎಸ್.ಎಂ., ಇತರರು ಇದ್ದರು.
ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಕಾರ್ಯದರ್ಶಿ ವಿಠಲ ಮಲೆಕುಡಿಯ ಸ್ವಾಗತಿಸಿ, ವಂದಿಸಿದರು. ಸಂಚಾಲಕ ಶೇಖರ ಲಾಯಿಲ ಕಾರ್ಯಕ್ರಮ ನಿರ್ವಹಿಸಿದರು.
11ರಂದು ಸುಳ್ಯ ನ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ
ಸುಳ್ಯ: ಸುಳ್ಯ ನಗರ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ದಿನ ನಿಗದಿಯಾಗಿದ್ದು ಸೆ.11ರಂದು ಅಪರಾಹ್ನ ಚುನಾವಣೆ ನಡೆಯಲಿದೆ. ಸೆ.11ರಂದು ಮಧ್ಯಾಹ್ನ 2 ಗಂಟೆಗೆ ನಾಮಪತ್ರ ಸಲ್ಲಿಸಬೇಕು. ಸಂಜೆ 4 ಗಂಟೆಗೆ ಚುನಾವಣೆ ನಡೆಯಲಿದೆ. ತಹಸೀಲ್ದಾರ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುವರು.  ಸುಳ್ಯ ನ.ಪಂ. ಅಧ್ಯಕ್ಷತೆ ಸಾಮಾನ್ಯ ಸ್ಥಾನವಾಗಿದ್ದು, ಉಪಾಧ್ಯಕ್ಷತೆ ಪರಿಶಿಷ್ಟ ವರ್ಗಕ್ಕೆ ಮೀಸಲಾಗಿದೆ. ಪರಿಶಿಷ್ಟ ವರ್ಗದ ಏಕೈಕ ಸದಸ್ಯೆ ಮೀನಾಕ್ಷಿಯವರು ನ.ಪಂ.ನಲ್ಲಿದ್ದು ಅವರು ಉಪಾಧ್ಯಕ್ಷರಾಗುವುದು ಖಚಿತ. 18ರಲ್ಲಿ 12 ಸ್ಥಾನಗಳನ್ನು ಹೊಂದಿರುವ ಬಿಜೆಪಿಯಲ್ಲಿ ಅಧ್ಯಕ್ಷತೆಗೆ ಎನ್.ಎ. ರಾಮಚಂದ್ರ ಮತ್ತು ಪ್ರಕಾಶ್ ಹೆಗ್ಡೆಯವರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ನಿವೃತ್ತ ಶಿಕ್ಷಕರಿಂದಅರ್ಜಿ ಆಹ್ವಾನ
ಮಂಗಳೂರು: ದೇರಳಕಟ್ಟೆ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಶಿಕ್ಷಕರ ಹುದ್ದೆ ಖಾಲಿ ಇದ್ದು, ಶಿಕ್ಷಣ ಇಲಾಖೆಯಿಂದ ನಿವೃತ್ತಿ ಹೊಂದಿದ ಶಿಕ್ಷಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಶಿಕ್ಷಕರಾಗಿ ಪ್ರೌಢಶಾಲೆಯಲ್ಲಿ ಸೇವೆಯನ್ನು ಸಲ್ಲಿಸಿರುವ ಆಸಕ್ತ ಶಿಕ್ಷಕರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಮೊರಾರ್ಜಿ ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸಬಹುದು.
ನಾಳೆ ಉಪನ್ಯಾಸ
ಪುತ್ತೂರು: ಕನ್ನಡ ಪರಿಷತ್ ದ.ಕ. ಜಿಲ್ಲೆ, ಪುತ್ತೂರು ತಾಲೂಕು ಘಟಕ ಮತ್ತು ಪುತ್ತೂರು ಪೂರ್ವ ರೋಟರಿ ಕ್ಲಬ್ ಆಶ್ರಯದಲ್ಲಿ 'ಬಾಹ್ಯಾಕಾಶದಲ್ಲಿ ಭಾರತದ ಬೆರಗು' ವಿಶೇಷ ವಿಜ್ಞಾನ ಉಪಾನ್ಯಾಸ 5 ರಂದು ಸಂಜೆ ಇಲ್ಲಿನ ಮನಿಷಾ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಸಾಪ ಪುತ್ತೂರು ಘಟಕಾಧ್ಯಕ್ಷ ಡಾ. ವರದರಾಜ್‌ಚಂದ್ರಗಿರಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.