ದಕ್ಷಿಣ ಕನ್ನಡ

ಜೀವನದಲ್ಲಿ ಜಿಗುಪ್ಸೆ: ನೇಣು ಬಿಗಿದು ಆತ್ಮಹತ್ಯೆ

Published On :

ಮೂಲ್ಕಿ: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಎಸ್. ರಾವ್ ನಗರದ ಬಿಜಾಪುರ ಕಾಲೊನಿಯ ನಿವಾಸಿ 33 ವರ್ಷದ ಪೊನ್ನುರಪ್ಪ ಕಳೆದ ಕೆಲವು ಸಮಯಗಳಿಂದ ತನ್ನ ಎಡಕಾಲಿನ ಮೊಣಗಂಟಿನ ಮೇಲಿನ ಹಳೆ ಗಾಯದ ಬಗ್ಗೆ ಚಿಕಿತ್ಸೆ ಪಡೆಯುತ್ತಿದ್ದು ಗಾಯ ಉಲ್ಬಣಗೊಂಡು ವೇತನೆಯಿಂದ ಬಳಲುತ್ತಿದ್ದು ಜೀವನದಲ್ಲಿ ಜಿಗುಪ್ಸೆ ಹೊಂದಿ  ಇಂದು ಮಧ್ಯಾಹ್ನದ ಅವಧಿಯಲ್ಲಿ ಮನೆಯ ಪಕ್ಕಸು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಹನುಮಂತಪ್ಪ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಮೂಲ್ಕಿ ಪೊಲೀಸ್ ಠಾಣೆಯ ಕೆಮ್ರಾಲ್ ಗ್ರಾಮದ ಮುತ್ತೊಟ್ಟು ನಿವಾಸಿ ಪುಷ್ಪರವರ 17 ಹರೆಯದ ಮಗಳು ಕಾಲೇಜಿಗೆ ಹೋಗುತ್ತಿದ್ದು ಇಂದು  ಕಾಲೇಜಿಗೆ ಹೋಗುತ್ತಿದ್ದ ಅವಧಿಯಲ್ಲಿ ದಯಾನಂದ ಮತ್ತು ಹೊನ್ನಪ್ಪಎಂಬವರು ತಡೆದು ನಿಲ್ಲಿಸಿ ಮೈ ಮೇಲೆ ಕೈ ಹಾಕಿ ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ್ದು ಈ ಬಗ್ಗೆ ತಾಯಿಗೆ ತಿಳಿಸಿದ್ದು ಪುಷ್ಪರವರು ದಯಾನಂದ ಮತ್ತು ಹೊನ್ನಪ್ಪ ವಿರುದ್ಧ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಮೀನುಗಾರಿಕೆಗೆ ತೆರಳಿದ ವ್ಯಕ್ತಿ ಸಾವು
ಹಿರಿಯಡ್ಕ: ಇಲ್ಲಿನ ಬೆಳ್ಳಂಪಳ್ಳಿ ಗ್ರಾಮದ ಕುಕ್ಕಿಕಟ್ಟೆಯ ಹೊಸಮನೆಯ ವ್ಯಕ್ತಿಯೊಬ್ಬರು ಮೀನುಗಾರಿಕೆಗೆ ತೆರಳಿ ಅಸ್ವಸ್ಥರಾಗಿ ಮೃತಪಟ್ಟ ಘಟನೆ ಬುಧವಾರ ನಡೆದಿದೆ. ರಮೇಶ್ ಕುಂದರ್ (38) ಮೃತರು. ಅವರು ಮಲ್ಪೆಯಲ್ಲಿ ಬೋಟಿಗೆ ಮೀನುಗಾರಿಕೆ ಕೆಲಸಕ್ಕೆ ಹೋದವರು ಮಧ್ಯಾಹ್ನ 2.45ಕ್ಕೆ ಮಲ್ಪೆ ಬಂದರಿಗೆ ಹಿಂದಕ್ಕೆ ಬಂದಿದ್ದು, ಬರುವಾಗಲೇ ತೀವ್ರ ಅಸ್ವಸ್ಥರಾಗಿದ್ದರು, ತಕ್ಷಣ ಮನೆಗೆ ಬಂದು ಮನೆಯಲ್ಲಿ ನೀರು ಕುಡಿದ 10 ನಿಮಿಷಗಳ ನಂತರ ಮನೆಯ ಬಳಿ ಕುಸಿದು ಬಿದ್ದರು. ಅವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರಾತ್ರಿ 10.30ಕ್ಕೆ ದಾಖಲಿಸಲು ಕೊಂಡೊಯ್ಯುವಾಗ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.
ಮಹಿಳೆ ನಾಪತ್ತೆ: ದೂರು
ಉಡುಪಿ: ಇಲ್ಲಿನ ನಿಟ್ಟೂರು ಗ್ರಾಮದಲ್ಲಿರುವ ಸ್ತ್ರೀಸೇವಾನಿಕೇತನದಿಂದ ಮಹಿಳೆ ಕಾಣೆಯಾದ ಘಟನೆ ಬುಧವಾರ ನಡೆದಿದೆ. ಕಾಣೆಯಾದವರು ಅಂಜಲಿ ಸತ್ಯವಾನ್  ಖರಾಡೆ (29). ಮೂಲತಃ ಬೆಳಗಾವಿಯ ಸುಂಕೇರಿಯ ನಿವಾಸಿ, ಆಕೆ ಬುಧವಾರ ಸಂಜೆ 6.30ಕ್ಕೆ ಸಂಸ್ಥೆಯಿಂದ ಹೊರಗೆ ಹೋಗಿದ್ದು ಹಿಂದಕ್ಕೆ ಬಂದಿಲ್ಲ. ಆಕೆಯ ಎಡಗೈ ಮೇಲೆ ಗಾಯದ ಗುರುತು ಇದ್ದು, ಎಣ್ಣೆ ಕಪ್ಪು ಮೈಬಣ್ಣ ಹೊಂದಿರುತ್ತಾಳೆ. ಕನ್ನಡ, ಕೊಂಕಣಿ ಮತ್ತು ಮರಾಠಿ ಭಾಷೆ ಮಾತನಾಡುತ್ತಾಳೆ ಎಂದು ಸಂಸ್ಥೆ ಅಧೀಕ್ಷಕಿ ಕುಸುಮ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಗಾರಿ: ಇಬ್ಬರು ವಶಕ್ಕೆ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಆಲಂಕಾರು ಗ್ರಾಮದ ಶರವೂರು ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಕಡಬ ಪೊಲೀಸರು ದಾಳಿ ಮಾಡಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡ ಘಟನೆ ಗುರುವಾರ ನಡೆದಿದೆ. ಏಳು ಮಂದಿ ಪರಾರಿಯಾಗಿದ್ದಾರೆ. ಖಚಿತ ಮಾಹಿತಿ ಆಧಾರದಲ್ಲಿ ಪೊಲೀಸ್ ಅಧಿಕಾರಿ ಸಜಿತ್ ಕುಮಾರ್ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಜುಗಾರಿಗೆ ಬಳಸಲಾಗಿದ್ದ ರು. 250 ಹಾಗೂ 2 ಬೈಕ್ ಮತ್ತು 3 ಮೊಬೈಲ್‌ಗಳನ್ನು ವಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈನ್‌ಶಾಪ್‌ನಿಂದ ಕಳವು
ಉಪ್ಪಿನಂಗಡಿ: ಕಡಬ ಸಂತೆಕಟ್ಟೆ ಬಳಿ ಇರುವ ವೈನ್‌ಶಾಪ್‌ನಿಂದ ನಗದು ಹಾಗೂ ಮದ್ಯ ಬಾಟಲಿಗಳನ್ನು ಕಳವು ಮಾಡಲಾಗಿದೆ. ಪ್ರಶಾಂತ್ ವೈನ್ ಶಾಪ್‌ನ ಶಟರ್ ಮುರಿದು ಒಳನುಗ್ಗಿದ ಕಳ್ಳರು, ಅಂಗಡಿಯಲ್ಲಿದ್ದ ರು. 4 ಸಾವಿರ ನಗದು ಹಾಗೂ 6 ಬಾಟಲಿ ಮದ್ಯವನ್ನು ಕದ್ದೊಯ್ದಿದ್ದಾರೆ. ಗುರುವಾರ ಬೆಳಗ್ಗೆ ಅಂಗಡಿ ತೆರೆಯುವ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮನೆಗೆ ಆಕಸ್ಮಿಕ ಬೆಂಕಿ; 1 ಲಕ್ಷ ನಷ್ಟ
ಮೂಲ್ಕಿ: ಕಿನ್ನಿಗೋಳಿ ಸಮೀಪದ ಪದ್ಮನೂರಿನ ಮುನ್ನೊಟ್ಟುವಿನಲ್ಲಿ ನಾಗೇಶ್ ಕೋಟ್ಯಾನ್ ಮನೆಗೆ ಬುಧವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಮಾರು ರು. 1 ಲಕ್ಷ ನಷ್ಟ ಸಂಭವಿಸಿದೆ. ನಾಗೇಶ್ ಕೋಟ್ಯಾನ್ ವ್ಯಾಜ್ಯದ ನಿಮಿತ್ತ ಮೂಲ್ಕಿ ಪೊಲೀಸ್ ಠಾಣೆಯಲ್ಲಿದ್ದರು. ಮನೆಯಲ್ಲೂ ಯಾರೂ ಇರಲಿಲ್ಲ. ಈ ಸಂದರ್ಭ ಮನೆಗೆ ಬೆಂಕಿ ಹೊತ್ತಿಕೊಂಡಿರುವುದನ್ನು ನೋಡಿ ನೆರೆಮನೆಯವರು  ಮೂಲ್ಕಿ ಠಾಣೆಗೆ ತಿಳಿಸಿದ್ದಾರೆ. ಪೊಲೀಸರು ಅಗ್ನಿ ಶಾಮಕಕ್ಕೆ ಫೋನಾಯಿಸಿದ್ದು ಕೂಡಲೇ ಸ್ಥಳಕ್ಕಾಗಮಿಸಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಆದರೂ ಸುಮಾರು 1 ಲಕ್ಷದಷ್ಟು ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.